ಮಕ್ಕಳ ಮಾರಾಟ ಜಾಲ ಭೇದಿಸುವುದೇ ಸವಾಲು
ಕನ್ನಡಪ್ರಭ ವಾರ್ತೆ, ಕಾರವಾರ, ಮಾ. 7
ಅಪಹರಣಕ್ಕೊಳಗಾಗಿ ಮಾರಾಟವಾಗಿದ್ದ ತುಮಕೂರಿನ ಪಾವಗಡದ ಮಗು ಬಿಂದುಸಾಗರನನ್ನು ಗುರುವಾರ ತಂದೆ ಮಂಜುನಾಥ ಅವರಿಗೆ ಮಕ್ಕಳ ಕಲ್ಯಾಣ ಸಮಿತಿ ಹಸ್ತಾಂತರಿಸಿತು. ಇನ್ನು ಮಕ್ಕಳ ಮಾರಾಟ ಜಾಲವನ್ನು ಭೇದಿಸುವ ಸವಾಲು ಪೊಲೀಸರ ಮುಂದಿದೆ.
ಗುರುವಾರ ಮಧ್ಯಾಹ್ನ ಮಕ್ಕಳ ಕಲ್ಯಾಣ ಸಮಿತಿ ಸಭೆ ಸೇರಿ ಮಾರಾಟವಾಗಿದ್ದ ಮಗುವಿನ ಪಾಲಕರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ಮಗುವನ್ನು ಹಸ್ತಾಂತರಿಸಿದರು. ಆಧಾರ್ ಕಾರ್ಡ್, ಶಾಲಾ ದಾಖಲಾತಿ, ಶಾಲಾ ಗುರುತಿನ ಪತ್ರ, ಪೊಲೀಸ್ ದೂರು ನೀಡಿದ್ದು ಸೇರಿದಂತೆ ಹಲವು ದಾಖಲೆಗಳ ಪ್ರತಿಯನ್ನು ಪಡೆದುಕೊಂಡು ಸಮಿತಿ ಮಗುವನ್ನು ನೀಡಿತು. ಮಗುವನ್ನು ಪಡೆಯುತ್ತಿದ್ದಂತೆ ತಂದೆಯ ಕಣ್ಣಾಲಿಗಳು ತುಂಬಿಬಂದವು. ಈ ನಡುವೆ ಮಕ್ಕಳ ಅಪಹರಣ ಹಾಗೂ ಮಾರಾಟ ಜಾಲದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಆ ಜಾಲವನ್ನು ಜಾಲಾಡಿ ಮಕ್ಕಳಿಗೆ ರಕ್ಷಣೆ ಕೊಡಿಸಬೇಕಾದ ಜವಾಬ್ದಾರಿ ಪೊಲೀಸರದ್ದಾಗಿದೆ.
ಕಾನೂನು ಕ್ರಮ ಕೈಗೊಳ್ಳಬೇಕಿದೆ: ಹೌದು. ತುಮಕೂರಿನಲ್ಲಿ 3-4 ಮಕ್ಕಳು ನಾಪತ್ತೆಯಾದ ಬಗ್ಗೆ ಈಗಾಗಲೆ ಪೊಲೀಸ್ ದೂರು ದಾಖಲಾಗಿದೆ. ತುಮಕೂರಿನಲ್ಲಿ ನಾಪತ್ತೆಯಾದ ಮಗು ಬಿಂದುಸಾಗರ ಉತ್ತರ ಕನ್ನಡದ ಅಂಕೋಲಾದಲ್ಲಿ ಒಂದೂವರೆ ತಿಂಗಳ ನಂತರ ಪತ್ತೆಯಾಗಿದ್ದಾನೆ. ತುಮಕೂರು ಹಾಗೂ ಉತ್ತರ ಕನ್ನಡದ ನಡುವೆ ಮಗುವಿನ ಅಪಹರಣ ಹಾಗೂ ಮಾರಾಟ ಜಾಲ ಸಕ್ರಿಯವಾಗಿರುವ ಬಗ್ಗೆ ಈ ಘಟನೆ ಬೆಳಕು ಚೆಲ್ಲಿದೆ. ಪೊಲೀಸರು ಈ ಎಳೆಯನ್ನು ಹಿಡಿದು ತನಿಖೆಯನ್ನು ಚುರುಕುಗೊಳಿಸಿದಲ್ಲಿ ಮಕ್ಕಳ ಅಪಹರಣ ಹಾಗೂ ಮಾರಾಟದ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲು ಸಾಧ್ಯ. ಜೊತೆಗೆ ಈ ಮಾರಾಟ ಜಾಲದ ಸದಸ್ಯರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಶಾಲಾ ಮಕ್ಕಳು ಏಕಾಂಗಿಯಾಗಿರುವ ಸಂದರ್ಭವನ್ನು ಉಪಯೋಗಿಸಿಕೊಂಡು ಅವರನ್ನು ಎಗರಿಸುವ ಜಾಲವೇ ಇದೆ. ಗುರುವಾರ ಪಾಲಕರಿಗೆ ಹಸ್ತಾಂತರಿಸಿದ ಬಿಂದುಸಾಗರ ಕೂಡ ಶಾಲೆಯ ಎದುರು ಏಕಾಂಗಿಯಾಗಿರುವ ಸಂದರ್ಭದಲ್ಲಿಯೇ ಎತ್ತಿಕೊಂಡು ಹೋಗಲಾಗಿತ್ತು. ತುಮಕೂರಿನಲ್ಲಿ ಅಪಹರಣ ಮಾಡಿದ ಮಗುವನ್ನು ಅಂಕೋಲಾಕ್ಕೆ ತಂದು ಕೇವಲ ರು. 5 ಸಾವಿರಕ್ಕೆ ಮಾರಾಟ ಮಾಡಿದ್ದರ ಸತ್ಯಾಸತ್ಯತೆಯನ್ನೂ ಪರಿಶೀಲಿಸಬೇಕಾಗಿದೆ.
ತನಿಖೆ ಪ್ರಾರಂಭವಾಗಿದೆ: ಪತ್ತೆಯಾದ ಮಗುವಿನ ಪಾಲಕರೊಂದಿಗೆ ಆಗಮಿಸಿದ ತುಮಕೂರಿನ ವೈಎನ್ ಹೊಸಕೋಟೆ ಪೊಲೀಸ್ ಠಾಣೆಯ ಎಎಸ್ಐ ಜಯಸಿಂಹರಾವ್ ಅವರನ್ನು ಕನ್ನಡಪ್ರಭ ಪ್ರಶ್ನಿಸಿದಾಗ, ತುಮಕೂರಿನಲ್ಲಿ ಇನ್ನೂ ಕೆಲ ಮಕ್ಕಳು ನಾಪತ್ತೆಯಾದ ಪ್ರಕರಣಗಳನ್ನು ಪತ್ತೆ ಹಚ್ಚಬೇಕಾಗಿದೆ. ಈ ಮಗು ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ. ಆದರೆ ಮಗು ಅಪಹರಣದ ಜಾಲದ ಬಗ್ಗೆ ನಾವು ಗಂಭೀರವಾಗಿ ತನಿಖೆಯನ್ನು ಸದ್ಯದಲ್ಲಿಯೇ ಆರಂಭಿಸಲಿದ್ದೇವೆ. ಈ ತನಿಖೆ ತುಮಕೂರಿನಿಂದ ಅಂಕೋಲಾ ತನಕವೂ ನಡೆಯಲಿದೆ. ಮಗುವನ್ನು ಕೊಂಡುಕೊಂಡಿರುವ ಮಹಿಳೆಯ ಸಹಕಾರ ಪಡೆದು ತನಿಖೆ ನಡೆಸಲಿದ್ದೇವೆ. ಕೇವಲ ರು. 5 ಸಾವಿರಕ್ಕೆ ಮಗು ಮಾರಾಟವಾಗಿರುವುದರಲ್ಲಿ ಸತ್ಯಾಂಶ ಇಲ್ಲ. ಏನಿಲ್ಲವೆಂದರೂ ರು. 30ರಿಂದ ರು. 40 ಸಾವಿರಕ್ಕೆ ಮಾರಾಟವಾಗಿರಬೇಕು. ಈ ಬಗ್ಗೆಯೂ ತನಿಖೆ ನಡೆಸಲಿದ್ದೇವೆ ಎಂದು ಹೇಳಿದರು. ಮಕ್ಕಳ ಅಪಹರಣ ಜಾಲ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕರುಳಕುಡಿಯನ್ನು ಕಳೆದುಕೊಂಡ ತಂದೆ ತಾಯಿಯ ದುಮ್ಮಾನವನ್ನು ದೂರಮಾಡಬೇಕಿದೆ.
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

