ಸಂಪಾದಕೀಯ

ನಗರ ವಾಹನ ದಟ್ಟಣೆ ವಿಶೇಷ ಶುಲ್ಕ ಸಲಹೆ

Published On :

ಸುಧಾರಿತ, ನಿಯಂತ್ರಣ ಮುಕ್ತ ಎನ್ನಬಹುದಾದ, ಆರ್ಥಿಕ ವ್ಯವಸ್ಥೆಯ ಎರಡು ದಶಕಗಳ ಅನಂತರ ದೇಶದ ಎಲ್ಲ ನಗರಗಳಲ್ಲೂ ವಾಹನಗಳ ದಟ್ಟಣೆ ವಿಪರೀತವಾಗಿ, ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾಗಿರುವುದು ನಿಜ.
ಮಹಾನಗರಗಳ ಕೇಂದ್ರ ಸ್ಥಾನ ಹಾಗೂ ವಾಣಿಜ್ಯ ಸಂಕೀರ್ಣಗಳ ಸಮೀಪದಲ್ಲಿ, ಆಯಕಟ್ಟಿನ ಸಮಯದಲ್ಲಿ, ವಾಹನಗಳು ನಿಲ್ಲವುದೂ ಕಷ್ಟ- ಚಲಿಸುವುದೂ ಕಷ್ಟ ಎನ್ನುವ ಸ್ಥಿತಿ ಇದೆ ಎಂದು ಕೇಂದ್ರ ಸರ್ಕಾರದ ಒಂದು ಅಧ್ಯಯನ ವರದಿ ತಿಳಿಸಿದೆ.
ಎಲ್ಲ ನಗರಗಳಲ್ಲೂ ಈ ಸಮಸ್ಯೆ ಇದ್ದರೂ, ಬೆಂಗಳೂರಿನ ವೈಶಿಷ್ಟ್ಯವೆಂದರೆ ಪ್ರತಿ ಸಹಸ್ರ ಜನಸಂಖ್ಯೆಯ ಲೆಕ್ಕದಲ್ಲಿ ವಾಹನಗಳ ಸಂಖ್ಯೆಯನ್ನು ಹೋಲಿಸಿದರೆ, ದೇಶದಲ್ಲಿ ನಮ್ಮ ಊರೇ ನಂಬರ್ ಒನ್. ವಿಪರೀತ ವಾಹನ ದಟ್ಟಣೆಗೆ ಹೆಸರುವಾಸಿ. ಇಂತಹ ಅವ್ಯವಸ್ಥೆಯ ಪರಿಣಾಮವಾಗಿ ಆಗುವ ನಷ್ಟದ ಅಂದಾಜುಗಳೂ ಪ್ರಕಟವಾಗಿವೆ. ಆದರೆ ಸಮಸ್ಯೆಗೆ ಪರಿಹಾರವೇನು? ಆ ಪ್ರಶ್ನೆಗೆ ಸಮಗ್ರ ಸ್ವರೂಪದ ಉತ್ತರ ಸಿಗಲಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಗರ ಅಭಿವೃದ್ಧಿ ಮಂತ್ರಾಲಯ ಎಲ್ಲ ರಾಜ್ಯ ಸರ್ಕಾರಗಳಿಗೂ ಕಳುಹಿಸಿರುವ ಸುತ್ತೋಲೆಯಲ್ಲಿ ನಗರಗಳಲ್ಲಿ ವಾಹನಗಳ ದಟ್ಟಣೆಯನ್ನು ತಡೆಗಟ್ಟಲು ನಗರ ಕೇಂದ್ರದ ಹಾಗೂ ಇತರ ಮುಖ್ಯ ಪ್ರದೇಶಗಳಿಗೆ ಪ್ರವೇಶಿಸುವ ವಾಹನಗಳಿಂದ ವಿಶೇಷ ಶುಲ್ಕ ವಸೂಲು ಮಾಡುವ ಸಲಹೆಯನ್ನು ಮುಂದಿಟ್ಟಿದೆ. ಈ ಶುಲ್ಕ ನಿರ್ದಿಷ್ಟ ಅವಧಿಗೆ ಸಂಬಂಧಿಸಿದ್ದು. ಅದೇ ರೀತಿ ಬಡಾವಣೆಗಳಲ್ಲಿ, ಹೆಚ್ಚು ಕಡಿಮೆ ಶಾಶ್ವತವೆನ್ನುವ ರೀತಿಯಲ್ಲಿ ಕಾರುಗಳನ್ನು ನಿಲ್ಲಿಸಿ, ರಸ್ತೆಯನ್ನೇ ಕಿರಿದನ್ನಾಗಿ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬಹುದೆನ್ನುವ ಸಲಹೆಯೂ ಇದೆ.
ಈಗ ಈ ಸುತ್ತೋಲೆಯನ್ನು ಯಾರೂ ಆದೇಶವೆಂದು ಪರಿಗಣಿಸಬೇಕಾಗಿಲ್ಲ ಎನ್ನುವುದು ನಿಜ. ಆದರೆ ಜನ ನಿಬಿಡ ಪ್ರದೇಶಗಳಲ್ಲಿ ಇಕ್ಕೆಡೆಗಳಲ್ಲೂ ಪುಟ್‌ಪಾತ್‌ಗಳಲ್ಲಿ ಕಾರು ಹಾಗೂ ಇತರ ವಾಹನಗಳನ್ನು ನಿಲ್ಲಿಸುವುದು,ಅಲ್ಲಿನ ಅಂಗಡಿಗಳ ಮಾಲೀಕರ ತಂತ್ರ. ಇಂತಹ ತಂತ್ರಗಳಿಂದಲಾದರೂ ಜನರಿಗೆ ಮುಕ್ತಿಯನ್ನು ಒದಗಿಸುವ ದೃಷ್ಟಿಯಿಂದ, ದೇಶದಲ್ಲಿ ಮುಕ್ತ ರೀತಿಯ ಚಿಂತನೆಗೆ ಅವಕಾಶ ಮಾಡಿಕೊಡುವ ಪ್ರಯತ್ನ ಈ ಸುತ್ತೋಲೆ. ಆ ದೃಷ್ಟಿಯಿಂದ ಅದು ಸ್ವಾಗತಾರ್ಹ, "ಶಾಶ್ವತ ಪಾರ್ಕಿಂಗ್‌" ಹಕ್ಕು ಯಾರಿಗೂ ಇಲ್ಲ.
ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳನ್ನು ಕೊಳ್ಳುವವರು ಅಧಿಕ ತೆರಿಗೆ ಹಾಗೂ ಶುಲ್ಕವನ್ನು ಕಟ್ಟಬೇಕೆನ್ನುವ ಸಲಹೆಯೂ ಪರಿಶೀಲನಾರ್ಹ. ನಿಜ. ಜನರ ಜೀವನ ಮಟ್ಟ ಸುಧಾರಿಸಿದಂತೆ, ಇಂತಹ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಆಟೊಮೊಬೈಲ್ ಉದ್ಯಮದ ಪ್ರಗತಿಯ ಜತೆಯಲ್ಲೇ ಬ್ಯಾಂಕ್‌ಗಳು ಕಾರು ಕೊಳ್ಳುವ ಅರ್ಹ ಗ್ರಾಹಕರಿಗೆ ಸಾಲ ಕೊಡುವ ಪ್ರವೃತ್ತಿಯೂ ಗಟ್ಟಿಯಾಗುತ್ತಿದೆ. ಆದರೆ ಕಾರು ಕೊಳ್ಳುವವರು, ಅದನ್ನು ಎಲ್ಲಿ ನಿಲ್ಲಿಸುತ್ತಾರೆ ಎಂದು ಯಾರೂ ಕೇಳುವುದಿಲ್ಲ.
ಆಪಾರ್ಟ್‌ಮೆಂಟ್‌ಗಳಲ್ಲಿ ಕಾರುಗಳನ್ನು ನಿಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಆದರೆ ಈಗ ನಗರಗಳಲ್ಲಿ ನಿರ್ಮಾಣವಾಗುವ ಮನೆಗಳಲ್ಲಿ ಗ್ಯಾರೇಜ್ ಕಟ್ಟಿಸುವುದು ಅಪರೂಪ. ಹಳೆಯ ಮನೆಗಳ ದುರಸ್ತಿ ಮಾಡಿದಾಗ, ಹಿಂದೆ ಇದ್ದ ಗ್ಯಾರೇಜುಗಳು ಮಾಯವಾಗಿರುತ್ತವೆ. ಕಾರು ರಸ್ತೆಯಲ್ಲೇ ನಿಲ್ಲಬೇಕು. ನಿಜ. ಈ ಸಮಸ್ಯೆಗೆ ಅಧಿಕ ಶುಲ್ಕವನ್ನು ವಿಧಿಸುವುದೇ ಏಕಮಾತ್ರ ಪರಿಹಾರವಲ್ಲ. ಈ ವಿಚಾರದಲ್ಲಿ ಚಿಂತನೆ ಅಗತ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.