ಜೆಪಿಸಿ ಕರಡು ವರದಿ ಸಮರಕ್ಕೆ ಆಹ್ವಾನ
ಸೋಮವಾರದಿಂದ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಕಂತು ಆರಂಭವಾಗಲಿದೆ. ಹಲವು ಪ್ರಮುಖ ಸುಧಾರಣೆ ಕ್ರಮಗಳ ಜಾರಿಗೆ ಅಗತ್ಯವಾದ ಕಾಯಿದೆ ಬದಲಾವಣೆಗೆ ಆಳುವ ಕೂಟಕ್ಕೆ ಪ್ರತಿಪಕ್ಷಗಳ ಸಹಕಾರ ಬೇಕು. ಅದನ್ನು ಪಡೆಯುವ ಪ್ರಯತ್ನವೂ ನಡೆದಿದೆ.
ಆದರೆ, ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆಯ - 2ಜಿ ಟೆಲಿಕಾಮ್ - ಹಗರಣ ಕುರಿತಂತೆ ತನಿಖೆ ನಡೆಸಿದ ಉಭಯ ಸದನಗಳ ಸಂಯುಕ್ತ ಸಮಿತಿ (ಜೆಪಿಸಿ) ಸಿದ್ಧಪಡಿಸಿರುವ ಕರಡು ವರದಿಯನ್ನು ಕಳ್ಳ ದಾರಿಯಲ್ಲಿ ಕೆಲವು ಪತ್ರಿಕೆಗಳಿಗೆ ಗುರುವಾರವೇ ಸಿಗುವಂತೆ ಮಾಡಿದ್ದರಿಂದ ಸಂಸದೀಯ ಕಾರ್ಯಕಲಾಪ ನಡೆಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ಪ್ರಕಟಿತ ವರದಿಗಳಂತೆ, ಸಮಿತಿಯ ಕರಡು ವರದಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ವಿತ್ತಮಂತ್ರಿ ಚಿದಂಬರಮ್ ಅವರ ಮೇಲಿದ್ದ ಎಲ್ಲ ಆರೋಪಗಳನ್ನೂ ತಿರಸ್ಕರಿಸಿ ಹಗರಣದ ಎಲ್ಲ ಹೊಣೆಯನ್ನು ಡಿಎಂಕೆ ಮಾಜಿ ಟೆಲಿಕಾಮ್ ಸಚಿವ ಎ. ರಾಜಾ ಅವರ ತಲೆಗೇ ಕಟ್ಟುವ ಪ್ರಯತ್ನ ನಡೆದಿದೆ.
ಸಹಜವಾಗಿಯೇ ಇದು ಪ್ರತಿಪಕ್ಷಗಳನ್ನು, ಪ್ರಧಾನವಾಗಿ ಡಿ.ಎಂ.ಕೆ., ಕಮ್ಯುನಿಸ್ಟರು ಹಾಗೂ ಬಿಜೆಪಿ ನಾಯಕರನ್ನು ಕೆರಳಿಸಿರುವುದು ಶುಕ್ರವಾರವೇ ಪ್ರಕಟವಾಗಿದೆ.
ಕಾಂಗ್ರೆಸ್ ಬಹುಮತವಿರುವ ಸಂಸದೀಯ ಸಮಿತಿಯಿಂದ ಇನ್ನೆಂತಹ ವರದಿಯನ್ನು ನಿರೀಕ್ಷಿಸುವುದು ಸಾಧ್ಯವೆಂದು ಪ್ರಶ್ನಿಸಿರುವ ಬಿಜೆಪಿ ನಾಯಕರು ವರದಿಗೆ ತಮ್ಮ ಭಿನ್ನಮತವನ್ನು ಒಂದು ಅಧಿಕೃತ ಟಿಪ್ಪಣಿಯ ಸ್ವರೂಪದಲ್ಲೇ ಲಗತ್ತಿಸುವ ಚಿಂತನೆ ನಡೆಸಿದ್ದಾರೆ. ಡಿಎಂಕೆಯ ಪ್ರತಿಕ್ರಿಯೆ ಉಗ್ರ ಸ್ವರೂಪದಲ್ಲೇ ಇದೆ.
ಮಾಜಿ ಸಚಿವ ಎ. ರಾಜಾ ಅವರಿಗೆ ಸಮಿತಿಯ ಮುಂದೆ ಹಾಜರಾಗಿ ಅವರ ಅಭಿಪ್ರಾಯವನ್ನು ಪ್ರಕಟಿಸುವ ಅವಕಾಶವೂ ಇಲ್ಲದೇ ಹೋಗಿದ್ದರಿಂದ ಅವರು ಒಂದು ಸುದೀರ್ಘ (ಏಳುನೂರು ಪುಟಗಳ) ವಿವರಣೆಯನ್ನೇ ನೀಡುವುದಾಗಿ ಹೇಳಿ, ತಾವು ಕೈಗೊಂಡ ಎಲ್ಲ ನಿರ್ಧಾರಗಳನ್ನೂ ಪ್ರಧಾನಿಯ ಜತೆ ಮಾತುಕತೆ ನಡೆಸಿ, ಅವರಿಗೆ ವಿಷಯವನ್ನು ತಿಳಿಸಿದ ಅನಂತರವೇ ಕೈಗೊಂಡಿದ್ದು ಎಂದು ಸಾರಿ ಸಾರಿ ಹೇಳಿದ್ದಾರೆ.
ಸಮಿತಿಯ ಕರಡು ವರದಿಯಲ್ಲಿ ಮಾಜಿ ಸಚಿವ ಎ. ರಾಜಾ ಪ್ರಧಾನಿಯನ್ನು ತಪ್ಪು ದಾರಿಗೆ ಎಳೆದಿದ್ದರು ಎನ್ನುವ ಅರ್ಥಬರುವ ವಾಕ್ಯವಿರುವುದನ್ನು, ಎ. ರಾಜಾ ಹಾಗೂ ಡಿ.ಎಂ.ಕೆ. ನಾಯಕ ಕರುಣಾನಿಧಿ ಕಟುವಾಗಿ ಖಂಡಿಸಿದ್ದಾರೆ. 'ಒಬ್ಬ ಮಂತ್ರಿ ಪ್ರಧಾನಿಯನ್ನು ತಪ್ಪುದಾರಿಗೆ ಎಳೆಯುವುದು ಸಾಧ್ಯವೇ ಇಲ್ಲ. ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಇರುವ ಎಲ್ಲ ಕಡತಗಳೂ ಇಲಾಖೆಯ ಅಧಿಕಾರಿಗಳಿಗೂ ಲಭ್ಯವಾಗಿತ್ತು. ಪ್ರಧಾನಿ ಕಾರ್ಯಾಲಯದಲ್ಲೂ ಇತ್ತು' ಎನ್ನುವುದನ್ನೂ ರಾಜಾ ಬಲವಾಗಿಯೇ ಪ್ರಸ್ತಾಪಿಸಿದ್ದಾರೆ. ಈಗಾಗಲೇ ಪ್ರಕಟವಾಗಿರುವ ಹಲವು ಅಧ್ಯಯನ ಆಧರಿತ ಲೇಖನಗಳಲ್ಲಿ ಹಲವು ಸ್ವತಂತ್ರ ಪಂಡಿತರು ಪ್ರಧಾನಿಗೆ 2-ಜಿ ಟೆಲಿಕಾಮ್ ಹಗರಣದ ವಿವರಗಳ ಪರಿಚಯವಿರಲಿಲ್ಲವೆಂದರೆ ನಂಬುವುದು ಕಷ್ಟ, ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಪಾಲಿಗೆ ಸರ್ಕಾರವನ್ನು ಸದನದಲ್ಲೇ ಹೈರಾಣ ಮಾಡಲು ಇದೊಂದು ಒಳ್ಳೆಯ ಅವಕಾಶ. ಇದೇ ವಿವಾದ ಕುರಿತಂತೆ ಪಕ್ಷದ ಹಿರಿಯ ನಾಯಕ ಹಾಗೂ ಸಾರ್ವಜನಿಕ (ಸರ್ಕಾರಿ) ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷ ಮುರಳಿ ಮನೋಹರ ಜೋಷಿ, ಮಾಜಿ ವಿತ್ತಮಂತ್ರಿ ಯಶವಂತ ಸಿನ್ಹಾ ಅವರ ಜತೆಯಲ್ಲಿ ಸೇರಿ ಸಾಕಷ್ಟು ಸೂಕ್ಷ್ಮವಾದ ವಿವರಗಳನ್ನು ಸಂಗ್ರಹಿಸಿರುವುದು ರಹಸ್ಯವೇನೂ ಅಲ್ಲ.
ಈ ಪ್ರಕರಣದಲ್ಲಿ ಸರ್ಕಾರಕ್ಕೆ 1.76 ಲಕ್ಷ ಕೋಟಿ ರುಪಾಯಿಗಳ ನಷ್ಟವಾಗಿರಬಹುದೆಂದು ಆಡಿಟರ್ ಜನರಲ್ರ ವರದಿ ಹೇಳಿದ್ದರಿಂದ ವಿದೇಶಗಳಲ್ಲಿ ದೇಶದ ಮರ್ಯಾದೆ ಹೋಗಿದೆ ಎಂದೂ ವರದಿ ಹೇಳಿದೆ. ಆದರೆ ಆಡಿಟರ್ ಜನರಲ್ ವರದಿಯಲ್ಲಿ ಇರುವುದು ಅದೊಂದೇ ಅಂಕಿ ಅಲ್ಲ. ಇನ್ನೂ ಎರಡು ಅಂಕಿಗಳಿವೆ. ಈಗ ಸರ್ಕಾರ ಎಡವಿದರೆ ಸಂಸತ್ತಿನ ಅಧಿವೇಶನ ನಡೆಸುವುದೇ ಕಷ್ಟವಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

