ಬೆಲೆಯೇರಿಕೆ ಗಾಯದ ಮೇಲೆ ಹೇಳಿಕೆಗಳ ಬರೆ
ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ನಮ್ಮ ಭಾರತ ದೇಶದ ಬಡತನವನ್ನು, ಅಪೌಷ್ಟಿಕತೆಯನ್ನು ತೊಲಗಿಸಿ, ದೇಶವನ್ನು ಅಭಿವೃದ್ಧಿಯ ಪಥದತ್ತ ಸಾಗಿಸುತ್ತಾರೆಂಬ ಆಶಾಭಾವನೆಯಿಂದ ನಮ್ಮ ಅಮೂಲ್ಯವಾದ ಮತವನ್ನು ದಾನ ಮಾಡುವುದರ ಮೂಲಕ ನಮ್ಮ ಪ್ರತಿನಿಧಿಗಳಾಗಿ ಆರಿಸಿ ಕಳಿಸಿದ ಮಾನ್ಯ ಸಚಿವರು, ಸಂಸದರು ಬಡತನದ ಬಗ್ಗೆ ಕೊಡುವ ವ್ಯಾಖ್ಯಾನಗಳು, ರು. 1, 5, 12ರಲ್ಲಿ ಹೊಟ್ಟೆ ತುಂಬಿಸಿಕೊಳ್ಳಬಹುದೆಂಬ ಬಾಲಿಶ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಓದಿ, ಕೇಳಿ, ಪ್ರಜೆಗಳು ಧನ್ಯರಾದರು. ಹೌದು, ಇವರೆಲ್ಲ ಯಾವ ಶತಮಾನದಲ್ಲಿ ಇದ್ದಾರೋ ತಿಳಿಯುತ್ತಿಲ್ಲ. ಒಂದು ಸಣ್ಣ ಚಹಾ ಅಂಗಡಿಯಲ್ಲಿ ಒಂದು ಕಪ್ ಚಹಾದ ಬೆಲೆ 3 ರೂ., ಅದಕ್ಕಿಂತ ಸ್ವಲ್ಪ ದೊಡ್ಡ ಅಂಗಡಿಯಲ್ಲಿ 4 ರೂ., ಒಂದು ಸಣ್ಣ ಹೋಟೆಲಿನಲ್ಲಿ ಒಂದು ಕಪ್ ಚಹಾದ ಬೆಲೆ 10 ರೂ. ಹೀಗಿರುವಾಗ ಅದು ಯಾವ ಹೋಟೆಲ್ ಇದೆಯೋ 1, 5, 12 ರೂಪಾಯಿಗಳಲ್ಲಿ ಹೊಟ್ಟೆ ತುಂಬಾ ಊಟ ನೀಡೋದು. ಇನ್ನು ಮನೆಯಲ್ಲಿ ಅಡುಗೆ ತಯಾರಿಸಿದರೂ ಅಷ್ಟೇ, ಖರ್ಚೆನು 1, 5, 12 ರೂಪಾಯಿಗಳಾಗುತ್ತದೆಯೇ? ಇವರೇನು 1 ರೂಪಾಯಿಗೆ 1 ಕೆ.ಜಿ. ಅಕ್ಕಿ ನೀಡುತ್ತಿರುವುದರಿಂದ ಅಕ್ಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದೆಂದು ಹೇಳಿದರೆ? ಇಂತಹ ಹೇಳಿಕೆಗಳನ್ನು ನೀಡಿದವರು ದೇಶಾದ್ಯಂತ ಖಾನಾವಳಿ, ಹೋಟೆಲ್ಗಳನ್ನು ಪ್ರಾರಂಭಿಸಿ 1, 5, 12 ರೂಪಾಯಿಗಳಿಗೆ ಹೊಟ್ಟೆ ತುಂಬಾ ಊಟ ನೀಡಿದರೆ ಸಾಧ್ಯವಾಗಬಹುದೇನೋ ಎಂಬುದು ಪ್ರಜೆಗಳ ಅಭಿಪ್ರಾಯ. ಸ್ವಾಮಿ, ದಯವಿಟ್ಟು ಇಂತಹ ಬಾಲಿಶ ಹೇಳಿಕೆಗಳನ್ನು ನೀಡಿ, ನಂತರ ನಾನು ಹೀಗೆ ಹೇಳಿಲ್ಲ, ನನ್ನ ಮಾತುಗಳನ್ನು ತಿರುಚಲಾಗಿದೆ, ಅದರರ್ಥ ಹಾಗಲ್ಲ, ಹೀಗೆ ಎಂದು ಹೇಳಿ ಅನಗತ್ಯ ವಿವಾದಗಳನ್ನು ಹುಟ್ಟು ಹಾಕುವುದನ್ನು ಬಿಟ್ಟು, ನಿಮ್ಮ ಆಲೋಚನೆ, ಮಾತುಗಳು, ಕಾರ್ಯಗಳು ನೀವು ಹೇಳಿದ ಹೇಳಿಕೆಗಳನ್ನೇ ನೈಜವಾಗುವಂತೆ ಮಾಡುವಲ್ಲಿ ಸಾಗಲಿ.
-ಅಂಬಮ್ಮ ಪ್ರತಾಪ್ಸಿಂಗ್, ಮಾನ್ವಿ
ಪದವಿ ಕಾಲೇಜುಗಳಿಗೆ ಸಿಇಟಿ ಮಾಡಿ
ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳಿಗೆ ಸಿ.ಇ.ಟಿ. ಮಾಡುವುದಾಗಿ ಹೇಳಿರುವುದು ಅತ್ಯಂತ ಸಂತೋಷದ ವಿಷಯ. ಈ ವಿಷಯ ಕೇಳಿ ಬಡ ನಿರುದ್ಯೋಗಿಗಳಿಗೆ (ಪ್ರತಿಭಾವಂತ) ಮರುಭೂಮಿಯಲ್ಲಿ ಓಯಸಿಸ್ ಕಂಡ ಹಾಗೆ ಆಗಿದೆ. ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರಾದ ದೇಶಪಾಂಡೆಯವರು ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯಬಾರದು. ಕಳೆದ ಬಾರಿ ಪದವಿ ಕಾಲೇಜುಗಳಿಗೆ ನಡೆದ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದು ಸೂರ್ಯನ ಬೆಳಕಿನಷ್ಟೇ ಸತ್ಯವಾಗಿದೆ. ಬಹುತೇಕ ಪ್ರಾಥಮಿಕ ಶಾಲಾ ಶಿಕ್ಷಕರಾಗುವುದಕ್ಕೂ ಯೋಗ್ಯತೆಯಿಲ್ಲದವರು ವಾಮಮಾರ್ಗದಲ್ಲಿ ಆಯ್ಕೆಯಾಗಿ ಸೇವೆ (?) ಮಾಡುತ್ತಿದ್ದಾರೆ. ಜನ ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವುದೇ ಭ್ರಷ್ಟಾಚಾರದ ವಿರುದ್ಧದ ವಿಚಾರದಿಂದ. ಈ ಹಿನ್ನೆಲೆಯಲ್ಲಿ ಮಾನ್ಯ ಘನ ಸರ್ಕಾರ ಸಂದರ್ಶನಕ್ಕೆ ಅವಕಾಶ ಇಲ್ಲದಂತೆ (ಸಂದರ್ಶನದ ಹಣೆಬರಹ ನಮಗೆ ಗೊತ್ತಿದೆ) ಪೂರ್ಣ ಪ್ರಮಾಣದಲ್ಲಿ ಸಿ.ಇ.ಟಿ. ಮಾಡಿ ಪದವಿ ಕಾಲೇಜುಗಳ ಉಪನ್ಯಾಸಕರನ್ನು ನೇಮಕ ಮಾಡಿ.
-ಗಿರೀಶ್ ಯರಗಟ್ಟಿಹಳ್ಳಿ, ದಾವಣಗೆರೆ
ತಪ್ಪು ಮಾಹಿತಿ, ತೊಂದರೆಗೆ ವಿಷಾದ
ಜುಲೈ 31ರ ಭಾವತೀರಯಾನ ಅಂಕಣದಲ್ಲಿ ಪ್ರಕಟವಾದ-'ಇದು ಗಂಡೊಂದು ಹೆಣ್ಣಾಗಿ ಬದಲಾದ ಗಜಲ್' ಬರಹದ ಕುರಿತು ಒಂದು ಸ್ಪಷ್ಟನೆ. ಲಭ್ಯವಿದ್ದ ಅಂತರ್ಜಾಲ ಮಾಹಿತಿಯ ಆಧಾರದ ಮೇಲೆ ಲೇಖನ ಸಿದ್ಧವಾಗಿದೆಯೇ ಹೊರತು ಅದು ಸಂದರ್ಶನ ಬರಹವಲ್ಲ. ಲೇಖನದಲ್ಲಿ -'ಬಿಡುಗಡೆಯಾಗುವ ಪ್ರತಿ 10 ಹಿಂದಿ ಸಿನೆಮಾಗಳಲ್ಲಿ 6ಕ್ಕೆ ಗಜಲ್ ಡಬ್ ಮಾಡುತ್ತಾರೆ. ಅವರನ್ನು ಉದ್ಯಮಿಯೊಬ್ಬರು ಸೊಸೆಯಾಗುವಂತೆ ಕೇಳಿದ್ದಾರೆ. ಹೀರೋಗಳು ಐ ಲವ್ ಯು ಅಂದಿದ್ದಾರೆ ಎಂಬ ಸಾಲುಗಳಿವೆ..." ಈ ಮಾತುಗಳಲ್ಲಿ ಸತ್ಯವಿಲ್ಲ. ಈ ಮಾತುಗಳಿಂದ ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನನ್ನ ಗಮನಕ್ಕೆ ಬಾರದಂತೆ ಲೇಖನ ಪ್ರಕಟವಾಗಿದೆ ಎಂದು ಗಜಲ್ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಬರಹದ ಒಟ್ಟು ಉದ್ದೇಶ ಅವರ ಹೋರಾಟದ ಬದುಕು ಮತ್ತು ಸಾಧನೆಯನ್ನು ಆಪ್ತ, ವಿಶಿಷ್ಟ ಮಾತುಗಳಲ್ಲಿ ಕಟ್ಟಿಕೊಡುವುದಾಗಿತ್ತೇ ವಿನಃ ಅವರಿಗೆ ಬೇಸರ ಉಂಟು ಮಾಡುವುದಾಗಲಿ, ಅವರ ಖಾಸಗಿತನಕ್ಕೆ ಧಕ್ಕೆ ತರುವುದಾಗಲಿ ಆಗಿರಲಿಲ್ಲ. ಗಜಲ್ ಅವರ ಸಾಧನೆ ಮತ್ತು ಬದುಕಿನ ಕುರಿತು ಹೆಮ್ಮೆ, ಗೌರವ ಮತ್ತು ಮೆಚ್ಚುಗೆ ಇದೆ. ಬರಹದಲ್ಲಿ ಆಕಸ್ಮಿಕವಾಗಿ ನುಸುಳಿರುವ ತಪ್ಪು ಮಾಹಿತಿಗೆ ಹಾಗೂ ಅದರಿಂದ ಗಜಲ್ ಅವರಿಗೆ ಆಗಿರುವ ತೊಂದರೆಗೆ ವಿಷಾದಿಸುತ್ತೇನೆ.
-ಮಣಿಕಾಂತ್ ಎ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

