ಬುದ್ಧಿಜೀವಿಗಳು ಒಪ್ಪಲೊಲ್ಲದ ವಾಸ್ತವ
ಅರುಣ್ ಶೌರಿಯವರ ವಿಶೇಷ ಲೇಖನ 'ಬೋಧಗಯಾ ದಾಳಿಯ ಬೇರುಗಳು ಇರುವುದಾದರೂ ಎಲ್ಲಿ?" (ಕನ್ನಡಪ್ರಭ, ಜುಲೈ 10, 2013), ಕರೋಠ ಐತಿಹಾಸಿಕ ಸತ್ಯದ ಮೇಲೆ ಬೆಳಕು ಚೆಲ್ಲಿದೆ. ಆದರೆ ಆ ಬೆಳಕಿನಲ್ಲಿ ಗೋಚರಿಸುವ ನಗ್ನಸತ್ಯವನ್ನು ನೋಡಲು ನಮ್ಮ ಜಾತ್ಯತೀತವಾದಿಗಳೆಂಬ ವಿಚಿತ್ರ ಮಂದಿ ಸಿದ್ಧರಿಲ್ಲ. ಮುಸ್ಲಿಮರನ್ನು 'ಮತಬ್ಯಾಂಕ್' ಎಂದು ಪರಿಗಣಿಸಿರುವ ನಮ್ಮ ರಾಜಕಾರಣಿಗಳು ಉಗ್ರರ ಉಪಟಳದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲಾರರು. ತೋರಿಕೆಗಾಗಿ ಖಂಡಿಸಿ ಸುಮ್ಮನಾಗುತ್ತಾರೆ. ಈ ಢೋಂಗಿ ಜಾತ್ಯತೀತ ರಾಜಕಾರಣಿಗಳ ಹಿಂದೆ ಬಿದ್ದಿರುವ ಬುದ್ಧಿಜೀವಿಗಳೆಂಬ ಭ್ರಮೆಯಲ್ಲಿರುವ ಹುಸಿ ಜಾತ್ಯತೀತವಾದಿಗಳಿಗೆ ಸತ್ಯವನ್ನು ನುಡಿದರೆ 'ಕೋಮುವಾದಿ'ಯೆಂಬ ಹಣೆಪಟ್ಟಿ ಅಂಟಿಸಲಾಗುತ್ತದೆಯೆಂಬ ಭಯ, ಹಿಂಜರಿಕೆ. ಹೀಗೆ ಈ ಎರಡು ವರ್ಗಗಳ ಕಪಿಮುಷ್ಟಿಯಲ್ಲಿ ಸಿಲುಕಿರುವ ಭಾರತದ ಮೂಲಧರ್ಮಗಳಾದ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳು ಆಕ್ರಮಣಗಳಿಗೊಳಗಾಗುತ್ತಿವೆ. ಅಲ್ಪಸಂಖ್ಯಾತರ ಪರ, ಜಾತ್ಯತೀತವಾದಿ ಎನಿಸಿಕೊಳ್ಳುವ ಭರದಲ್ಲಿ ನಮ್ಮ ಸುಶಿಕ್ಷಿತರು ಹಾಗೂ ಇತಿಹಾಸಕಾರರು ಇಸ್ಲಾಮಿಕ್ ಮೂಲಭೂತವಾದ, ಜಿಹಾದ್ ದಾಳಿಗಳು, ಇತಿಹಾಸದಲ್ಲಿ ಅದರಿಂದಾಗುವ, ಈಗ ಆಗುತ್ತಿರುವ ಪ್ರಾಣಹಾನಿ, ಮಾನವಹಕ್ಕುಗಳ ಉಲ್ಲಂಘನೆಗಳನ್ನು ಉದ್ದೇಶಪೂರ್ವಕವಾಗಿಯೇ ಮರೆ ಮಾಚುತ್ತಿದ್ದಾರೆ.
'ಇತಿಹಾಸ ತಿರುಚುವಿಕೆ'ಯ ಘನ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಓಲೈಕೆ ರಾಜಕೀಯಕ್ಕೆ ಮುನ್ನುಡಿ ಬರೆದವರೇ ಮಹಾತ್ಮ ಗಾಂಧಿ. ಅವರೆಲ್ಲರೂ ಮುಸ್ಲಿಂ ಮೂಲಭೂತವಾದವನ್ನು ಖಂಡಿಸಲಿಲ್ಲ, ವಿರೋಧಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಒಂದು ಹಂತದಲ್ಲಿ ಮತಾಂಧರಾದ ಮಲಬಾರಿನ ಮೊಪ್ಲಾದಂಗೆ ದಂಗೆಕೋರರನ್ನು ಸಮರ್ಥಿಸಿಕೊಂಡ ಗಾಂಧೀಜಿ, ದೇಶಕ್ಕಾಗಿ ಪ್ರಾಣವನ್ನೇ ಬಲಿ ಕೊಟ್ಟ ಭಗತ್ಸಿಂಗ್ ಮತ್ತು ಸಂಗಡಿಗರ ಪರ ಒಂದು ಮಾತೂ ಆಡಲಿಲ್ಲ. ಮತಾಂಧರಾಗಿದ್ದ ಆಲಿ ಸಹೋದರರನ್ನು ಬೆಂಬಲಿಸಿದ ಗಾಂಧೀಜಿ, ನಿಜವಾದ ಜಾತ್ಯತೀತ ವ್ಯಕ್ತಿಯಾಗಿದ್ದ ಮಹಮದ್ ಅಲಿ ಜಿನ್ನಾರನ್ನು ವಿರೋಧಿಸುತ್ತಾ ಬಂದರು. ಸ್ವಾತಂತ್ರ್ಯಾನಂತರವೂ ನಮ್ಮನ್ನಾಳಿದ ನಾಯಕರು ಮುಸ್ಲಿಂ ಓಲೈಕೆ ರಾಜಕೀಯವನ್ನು ಜಾತ್ಯತೀತತೆ ಎಂದು ಬಿಂಬಿಸಿದರು. ಇವರಿಗೆ ಬೆಂಬಲವಾಗಿ ವಂದಿ ಮಾಗಧರಂತೆ ನಮ್ಮ ಬುದ್ಧಿಜೀವಿಗಳು ಹಾಗೂ ವಿಚಾರವಾದಿಗಳು ನಿಂತರು. ಇಲ್ಲಿನ ಮೂಲಧರ್ಮಗಳಾದ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಅನುಯಾಯಿಗಳ ಮೇಲೆ ನೂರಾರು ವರ್ಷಗಳ ಕಾಲ ನಡೆದ ಪೈಶಾಚಿಕ ದಾಳಿಗಳು, ಮಾರಣಾಂತಿಕ ಹಲ್ಲೆಗಳು, ಮಾನವ ಹಕ್ಕು ಉಲ್ಲಂಘನೆಗಳು ಗೌಣವಾದವು.
ವಿಶ್ವಕ್ಕೆ ಅಹಿಂಸೆ-ಶಾಂತಿ ಮಂತ್ರವನ್ನು ಸಾರಿದ ಬೌದ್ಧಧರ್ಮದ ಅಳಿವಿಗೆ ಇಸ್ಲಾಮಿನ ದಾಳಿಯೇ ಕಾರಣ ಎನ್ನುವುದು ಐತಿಹಾಸಿಕ ಸತ್ಯ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂದರೆ ಅಘಘಾನಿಸ್ತಾನ, ಪಾಕಿಸ್ತಾನ, ಬಂಗ್ಲಾದೇಶ ಹಾಗೂ ನಮ್ಮ ಕಾಶ್ಮೀರ. ಇಸ್ಲಾಂ ಪೂರ್ವದಲ್ಲಿ ಈ ಪ್ರದೇಶಗಳಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದರು. ಇಸ್ಲಾಮಿನ ಉಗ್ರವಾದ, ಬೌದ್ಧಧರ್ಮ ಸಂಸ್ಕೃತಿಯನ್ನು ಇತಿಹಾಸದುದ್ದಕ್ಕೂ ಅಳಿಸಿ ಹಾಕಲು ಪ್ರಯತ್ನಿಸುತ್ತಾ ಬಂದಿದೆ.
ಮುಸ್ಲಿಂ ಓಲೈಕೆಯ ಅಬ್ಬರದಲ್ಲಿ ಬೌದ್ಧರಿಗಾದ ಅನ್ಯಾಯ, ಹಿಂಸೆಗಳನ್ನು ನಮ್ಮ ಜಾತ್ಯತೀತ ಇತಿಹಾಸಕಾರರು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದರು.
ಆದರೆ ಅರುಣ್ಶೌರಿಯವರು ಉಲ್ಲೇಖಿಸಿರುವಂತೆ ಡಾ. ಬಿ.ಆರ್. ಅಂಬೇಡ್ಕರ್ರವರು ಯಾವುದೇ ಪೂರ್ವಗ್ರಹಪೀಡಿತ ಭಾವನೆಯಿಲ್ಲದೆ ರಾಗ-ದ್ವೇಷಗಳಿಂದ ಮುಕ್ತರಾಗಿ ಸತ್ಯವನ್ನು ವಿಶ್ಲೇಷಿಸಿದ್ದಾರೆ. ಅವರು ವಾಸ್ತವಿಕತೆಯನ್ನು ಅರ್ಥಮಾಡಿಕೊಂಡಿದ್ದರು. ಆದರೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ ನೆಹರೂರವರಿಗೆ ಅಂಬೇಡ್ಕರ್ರವರ ವಾಸ್ತವಿಕ ಚಿಂತನೆಗಳು ಬೇಕಾಗಿರಲಿಲ್ಲ.
-ಚಿರಪ್ರಭ, ನಂಜನಗೂಡು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

