ಸಂಪಾದಕೀಯ

ಕಾರ್ಪೊರೇಟ್ ವಲಯದ ಸಾಮಾಜಿಕ ಹೊಣೆಗಾರಿಕೆ

Published On :

ಈಗ ಜಾರಿಯಲ್ಲಿರುವ ಕಂಪೆನಿಗಳ ಕಾಯಿದೆ 1956ರಲ್ಲಿ ಸಿದ್ಧವಾಗಿದ್ದು. ಆಗಿಂದ್ದಾಗ್ಗೆ ಬದಲಾದ ರಾಜಕೀಯ ಆರ್ಥಿಕ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ, ಆ ಕಾಯಿದೆಯನ್ನು 25 ಬಾರಿ ಬದಲಾಯಿಸಿದ್ದರೂ, ಆಧುನಿಕ, ಉದಾರವಾದಿ ಮುಕ್ತ ವಾತಾವರಣಕ್ಕೆ ಅದು ಹೊಂದಿಕೊಂಡಿರಲಿಲ್ಲ. ಸಮಾಜವಾದದ ಗುಂಗು 1956ರ ಕಾಯಿದೆಯಲ್ಲಿ ಬಲವಾಗಿತ್ತು.
ಈಗಿನ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ, ಕಂಪೆನಿಗಳ ಕಾಯಿದೆಯನ್ನು ಬದಲಾಯಿಸಿ ಆರ್ಥಿಕ ವ್ಯವಸ್ಥೆಯಲ್ಲಿ ಕಂಡು ಬಂದಿರುವ ಮಾರ್ಪಾಟುಗಳನ್ನು ಅದರಲ್ಲಿ ಅಳವಡಿಸಲು ಸರ್ಕಾರ ಒಂದು ವಿಧೇಯಕವನ್ನು 2008 ರಲ್ಲೇ ಮಂಡಿಸಿದ್ದರೂ, ಲೋಕಸಭೆಯಲ್ಲಿ ಅದಕ್ಕೆ ಅನುಮತಿ ಸಿಕ್ಕಿದ್ದು 2012ರ ಡಿಸೆಂಬರ್‌ನಲ್ಲಿ. ಮಾಜಿ ವಿತ್ತಮಂತ್ರಿ ಹಾಗೂ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಈ ವಿಧೇಯಕವನ್ನು ಹೆಚ್ಚು ಉದ್ಯಮ ಸ್ನೇಹಿಯನ್ನಾಗಿ ಮಾಡಲು ಭಗೀರಥ ಪ್ರಯತ್ನವನ್ನೇ ನಡೆಸಿದ್ದರು. ಸರ್ಕಾರ ಅವರ ಹಲವಾರು ಸಲಹೆಗಳನ್ನು ಒಪ್ಪಿತ್ತು.
ಗುರುವಾರ ರಾಜ್ಯಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾದಾಗ ಒಂದು ಹೊಸ ಕಾಯಿದೆಯೇ ರಚನೆಯಾದಂತೆ ಆಗಿರುವುದು, ಆರ್ಥಿಕ ಬೆಳವಣಿಗೆಗೆ ಹಾಗೂ ಸಾಮಾನ್ಯ ಜನರ ಹಕ್ಕುಗಳನ್ನು ರಕ್ಷಿಸಲು ಅಗತ್ಯವಾದ ವಾತಾವರಣವನ್ನು ನಿರ್ಮಿಸುವುದೆನ್ನುವ ವಿಶ್ವಾಸ ಸಂಬಂಧಪಟ್ಟವರಲ್ಲಿ ಇದೆ.
ಮೂಲ ಕಾಯಿದೆಯ 800 ವಿಧಿಗಳನ್ನು 470ಕ್ಕೆ ಕುಗ್ಗಿಸಿ, ಕಂಪೆನಿಗಳ ಉನ್ನತಮಟ್ಟದ ಆಡಳಿತದ ಸುಧಾರಣೆ, ಸ್ವತಂತ್ರ ನಿರ್ದೇಶಕರ ಸ್ಥಾನ-ಮಾನ ಹಾಗೂ ಲಿಂಗ ಸಮಾನತೆಯ ಸಾಧನೆಯತ್ತ ಇಟ್ಟಿರುವ ದಿಟ್ಟ ಹೆಜ್ಜೆಯ್ನು ಉದ್ಯಮಿಗಳು, ಆಡಿಟರ್‌ಗಳು ಹಾಗೂ ಗ್ರಾಹಕರು ಸರಿಯಾಗಿ ಬಳಸಿಕೊಂಡರೆ, ಕಂಪೆನಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮೂಡುವುದರ ಜತೆಯಲ್ಲೇ ಅಲ್ಪಮತದ ಷೇರುದಾರರ ಹಕ್ಕನ್ನು ರಕ್ಷಿಸಿದಂತೆ ಆಗುತ್ತದೆ.
ಷೇರು ಬಜಾರಿನ ಪಟ್ಟಿಯಲ್ಲಿ ಸೇರಿಕೊಳ್ಳುವ ಸಂಸ್ಥೆಗಳ ನಿರ್ದೇಶಕರಲ್ಲಿ ಮೂವರಲ್ಲಿ ಒಬ್ಬರು ಸ್ವತಂತ್ರ ಸದಸ್ಯರಾಗಿರಬೇಕು. ಅಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ಇರಲೇ ಬೇಕೆನ್ನುವ ನಿಯಮದಿಂದ ಲಿಂಗ ಸಮಾನತೆ ಕಾಯಿದೆ ಪಾಲನೆಗೆ ಕಟ್ಟುನಿಟ್ಟಿನ ವ್ಯವಸ್ಥೆಯನ್ನೇ ರೂಪಿಸಿದಂತೆ ಆಗಿದೆ. ಸ್ವತಂತ್ರ ನಿರ್ದೇಶಕರು ಹತ್ತು ವರ್ಷಗಳ ಮಿತಿಗೆ ಒಳಪಟ್ಟಿರುತ್ತಾರೆ.
ಕಂಪೆನಿಗಳ ಲೆಕ್ಕಪತ್ರಗಳನ್ನಿಡುವ ಕ್ರಮ ಹಾಗೂ ಕಾಯಿದೆಯ ವಿಧಿನಿಯಮಗಳಂತೆಯೇ ಎಲ್ಲ ವಿವರಗಳನ್ನೂ ಸಿದ್ಧಪಡಿಸಬೇಕೆನ್ನುವ ನಿಯಮದ ಪಾಲನೆಗೆ ರಾಷ್ಟ್ರೀಯ ವಿತ್ತೀಯ ವರದಿಯ ಪ್ರಾಧಿಕಾರ ಸಂಸ್ಥೆಯ ಕಲ್ಪನೆಯನ್ನು ಜಾರಿಗೆ ತರಲಾಗುವುದು.
ಬಂಡವಾಳ ಹೂಡಿಕೆಯ ವಿಚಾರದಲ್ಲಿ, ಪಾರದರ್ಶಕತೆಯ ವಿಚಾರದಲ್ಲಿ ಹಲವಾರು ಸಂಪೂರ್ಣ ನಿಯಮಗಳು ಈಗ ಸರಳವಾಗಿವೆ. ಇದರಿಂದ ಕಂಪೆನಿಗಳಿಗೂ ಅನುಕೂಲ, ಕಂಪೆನಿಗಳ ಕೆಲಸವನ್ನು ತಿಳಿಯುವ ಆಸಕ್ತಿ ಇರುವ ಷೇರುದಾರರಿಗೂ ಅನುಕೂಲ.
ಅಮೆರಿಕದಲ್ಲಿ ಜಾರಿಯಲ್ಲಿರುವಂತೆ ಒಂದು ನಿರ್ದಿಷ್ಟ ಜನವರ್ಗದ ಪರವಾಗಿ, ಅಂತಹ ವರ್ಗಗಳ ಹಿತಕ್ಕೆ ಧಕ್ಕೆ ಬಂದಾಗ ನ್ಯಾಯಾಲಯಗಳಿಂದ ನ್ಯಾಯ ಪಡೆಯಲು ಮೊಕದ್ದಮೆ ಹೂಡಲೂ ಅವಕಾಶವನ್ನು ಕಲ್ಪಿಸಲಾಗಿದೆ. ಒಂದು ರೀತಿಯಲ್ಲಿ ಇದು ಕಾರ್ಪೊರೇಟ್ ವಲಯದಲ್ಲಿ ಜನತಂತ್ರದ ಮೂಲಭೂತ ಸಿದ್ಧಾಂತದ ವಿಧಿನಿಯಮಗಳನ್ನು ಅಳವಡಿಸಿದಂತೆಯೇ ಆಗಿದೆ. ಕಂಪೆನಿಗಳ ಆಡಳಿತ ವರ್ಗಕ್ಕೆ ನಿಯಂತ್ರಣ ವ್ಯವಸ್ಥೆಯ ಲಗಾಮು ಹಾಕುವ ಪ್ರಯತ್ನ ಇದು.
ಕಾರ್ಪೊರೇಟ್ ವಲಯದ ಸಾಮಾಜಿಕ ಹೊಣೆಗಾರಿಕೆಯ ಕಲ್ಪನೆ ಹೊಸದೇನೂ ಅಲ್ಲ. 1955ರಲ್ಲೇ ಈ ವಿಚಾರದಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಒಂದು ಸಮ್ಮೇಳನವೇ ನಡೆದಿತ್ತು. ಆದರೆ ಆ ಕಲ್ಪನೆಗೆ ಕಾಯಿದೆಯಲ್ಲೇ ನೆಲೆಯನ್ನು ಒದಗಿಸುವ ಕೆಲಸ ಈಗ ಆಗಿದೆ. ಲಾಭದ ಒಂದಂಶವನ್ನು ಸಾಮಾಜಿಕ ಉದ್ದೇಶಗಳಿಗಾಗಿ ಮೀಸಲಾಗಿಡುವುದು ಕಾಯಿದೆಯ ಒಂದು ಅಂಗವಾಗಿದೆ.
ಸಹಜವಾಗಿಯೇ ಇಂತಹ ಕಾಯಿದೆ ರಚನೆಗೆ ದೀರ್ಘಕಾಲ ಕಾದಿದ್ದ ಉದ್ಯಮಪತಿಗಳ ಪ್ರಾತಿನಿಧಿಕ ಸಂಸ್ಥೆಗಳು ಕಾಯಿದೆಯ ಬದಲಾವಣೆಯನ್ನು ಸ್ವಾಗತಿಸಿರುವುದು ಒಳ್ಳೆಯದೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.