ಸಂಪಾದಕೀಯ

ಕಲ್ಲಿದ್ದಲು ಹಂಚಿಕೆ ತನಿಖೆ ಫೈಲುಗಳೇ ಕಳೆದು ಹೋಗಿವೆ

Published On :

ಸುಪ್ರೀಮ್ ಕೋರ್ಟಿನ ಆದೇಶದಂತೆ,  ಕಲ್ಲಿದ್ದಲ ಗಣಿಗಳ ಹಂಚಿಕೆಯ ವ್ಯವಹಾರದ ತನಿಖೆ ನಡೆಸುತ್ತಿರುವ ಸಿಬಿಐ ತನಿಖಾ ದಳಕ್ಕೆ ಸರ್ಕಾರ ದಾಖಲೆಗಳನ್ನೇ ಒದಗಿಸುತ್ತಿಲ್ಲವಾದ ಕಾರಣ ತನಿಖೆ ನಡೆಸುವುದೇ ಕಷ್ಟವಾಗಿದೆ ಎಂದು ನ್ಯಾಯಾಲಯಕ್ಕೆ ತನಿಖಾ ದಳದ ಮುಖ್ಯಸ್ಥರು ತಿಳಿಸಿದಾಗ ನ್ಯಾಯಪೀಠ ಸರ್ಕಾರಕ್ಕೆ ಸ್ಪಷ್ಟವಾದ ಆದೇಶ ನೀಡಿ ಎಲ್ಲ ಕಡತಗಳನ್ನು ಒದಗಿಸಲು ಹೇಳಿತ್ತು.
ಈಗ ಕಲ್ಲಿದ್ದಲ ಮಂತ್ರಿ ಶ್ರೀಪ್ರಕಾಶ್ ಜೈಸ್‌ವಾಲ್ ಅವರು 1993-2004ರ ಅವಧಿಯಲ್ಲಿ ನಡೆದ ವ್ಯವಹಾರದ ಫೈಲುಗಳು ಕಲ್ಲಿದ್ದಲ ಮಂತ್ರಾಲಯದಲ್ಲಿ ಕಳೆದು ಹೋಗಿವೆ ಎಂದು ತಿಳಿಸಿರುವುದು ಇಡೀ ಹಗರಣಕ್ಕೆ ಒಂದು ಹೊಸ ತಿರುವನ್ನೇ ನೀಡಿದೆ.
ಈ ವಿಚಾರದಲ್ಲಿ ಆಡಿಟರ್ ಜನರಲ್‌ರ ವರದಿಯಲ್ಲೂ ಪ್ರಸ್ತಾಪವಿಲ್ಲ. ಕೆಲವು ಖಾಸಗಿ ಪಾಲುದಾರ ಸಂಸ್ಥೆಗಳಲ್ಲಿ ಇದ್ದರೂ ಇರಬಹುದು. ಅಥವಾ ಉಕ್ಕು ಮಂತ್ರಾಲಯದಲ್ಲೂ ಸಿಕ್ಕರೂ ಸಿಗಬಹುದು ಎನ್ನುವ ರೀತಿಯ ಲಘುವಾದ ಮಾತುಗಳು ಈಗೀಗ ಹೊರಬೀಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ.
ಸಾವಿರಾರು ಕೋಟಿ ರುಪಾಯಿಗಳ ಮೌಲ್ಯದ ವ್ಯವಹಾರ ಕುರಿತಂತೆ ಖಾಸಗಿ ಕಂಪೆನಿಗಳು, ಕಲ್ಲಿದ್ದಲ ಮಂತ್ರಾಲಯ, ಕೋಲಿಂಡಿಯಾ ಲಿಮಿಟೆಡ್, ಉಕ್ಕು ಮಂತ್ರಾಲಯ ಹಾಗೂ ಪ್ರಧಾನಿ ಕಾರ್ಯಾಲಯದವರೆಗೂ ಈ ವೇಳೆಗೆ ಹಲವಾರು ಕಾಗದ- ಪತ್ರಗಳ ಪರಸ್ಪರ ವಿನಿಮಯವಾಗಿರಬೇಕು.
ಸಚಿವ ಶ್ರೀಪ್ರಕಾಶ್ ಜೈಸ್‌ವಾಲ್ ಅವರ ಪ್ರಕಾರ ಎಲ್ಲ ಫೈಲುಗಳೂ ಕಳೆದು ಹೋಗಿಲ್ಲ. ಸುಮಾರು ಎಂಟು-ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಫೈಲುಗಳು ಸಿಗುತ್ತಿಲ್ಲ ಅಷ್ಟೇ. ಸರ್ಕಾರ ಫೈಲುಗಳು ಕಳೆದು ಹೋಗಿರುವ ಪ್ರಕರಣದ ತನಿಖೆಗೆ ಕಲ್ಲಿದ್ದಲು ಮಂತ್ರಾಲಯದ ಅಡಿಷನಲ್ ಕಾರ್ಯದರ್ಶಿಯ ನೇತೃತ್ವದಲ್ಲಿ ಒಂದು ತನಿಖಾ ಸಮಿತಿಯನ್ನು ನೇಮಿಸಿ, ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಹೇಳಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ.
ಇತರ ಎಲ್ಲಾ ಕಡತಗಳು ಸ್ಪಷ್ಟವಾಗಿದ್ದು ಆರಿಸದ ಎಂಟು-ಹತ್ತು ಅಥವಾ ಹೆಚ್ಚಿನ ಫೈಲುಗಳೇ ಕಳೆದು ಹೋಗಿವೆ ಎಂದು ಸಚಿವರೇ ಒಪ್ಪಿಕೊಂಡ ಅನಂತರ, ತನಿಖೆ ವಿಳಂಬವಾಗುವುದಂತೂ ಖಚಿತ. ಅದಕ್ಕೆ ಕಾರಣ ಈ ಅವ್ಯವಹಾರದಲ್ಲಿ ಯಾವುದೋ ಉನ್ನತ ಮೂಲದ ಶಕ್ತಿಗೂ ಪ್ರವೇಶವಾಗಿದೆ ಎಂದಾಯಿತು.
ಸರ್ಕಾರದಲ್ಲಿ ಕಡತಗಳ ಸೃಷ್ಟಿ ಹಾಗೂ ಕಾಗದ ಪತ್ರಗಳ ಚಲನೆಗೆ ನಿರ್ದಿಷ್ಟವಾದ ವಿಧಿ-ನಿಯಮಗಳಿವೆ. ಒಂದು ಕಾಗದದ ಒಂದೇ ಪ್ರತಿಯನ್ನು ಯಾರೂ ಸೃಷ್ಟಿಸುವುದಿಲ್ಲ. ಕಡತದಲ್ಲಿರುವ ಎಲ್ಲ ಮುಖ್ಯ ಕಾಗದ-ಪತ್ರಗಳು ಹಲವಾರು ಇಲಾಖೆಗಳ ಅಧಿಕಾರಿಗಳ ಕಡತಗಳಲ್ಲೂ ಇರಲಿಕ್ಕೆ ಬೇಕು. ಎಲ್ಲ ಕಡೆ ಪ್ರಯತ್ನಿಸಿದರೆ ಕಡತಗಳನ್ನು ಪುನಹ ಸೃಷ್ಟಿಸಬಹುದು.
ಕಲ್ಲಿದ್ದಲ ಹಗರಣದ ಕೆಲವು ವಿವರಗಳು ಬೆಳಕಿಗೆ ಬಂದು, ಸಾರ್ವಜನಿಕ ಹಿತರಕ್ಷಣಾ ಮನವಿಗಳು ಸುಪ್ರೀಮ್ ಕೋರ್ಟನ್ನು ತಲುಪಿ ತಿಂಗಳುಗಳೇ ಕಳೆದಿವೆ.
ಅಂತಹ ಒಂದು ಪ್ರಕರಣದ ಸುದ್ದಿ ತಿಳಿದಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು- ನೌಕರರು ಆ ಕಾಗದ ಪತ್ರಗಳನ್ನು ಹುಡುಕಿ ಅದರಲ್ಲೇನಿದೆ ಎನ್ನುವುದನ್ನು ತಿಳಿದು, ಎಲ್ಲ ದಾಖಲೆಗಳನ್ನು ಭದ್ರಪಡಿಸಬೇಕು. ಅದು ನಿಯಮ.
ಆದರೆ ಈ ಹಗರಣದ ತನಿಖೆ ಆರಂಭವಾಗಿ (ಸಿಬಿಐ ತನಿಖೆಯೂ ಸೇರಿದಂತೆ) ಹಲವು ತಿಂಗಳಾದರೂ ಸಂಬಂಧಿಸಿದ ಮಂತ್ರಾಲಯದ ಮಂತ್ರಿ ಇಲಾಖೆಯ ಮಟ್ಟದಲ್ಲಿ ನಡೆದಿರುವ ತನಿಖೆಯ ವಿಚಾರವನ್ನು ಈಗಷ್ಟೇ ನಡೆದಿರಬಹುದಾದ ಘಟನೆ ಎನ್ನುವಂತೆ ಪ್ರಸ್ತಾಪಿಸುತ್ತಿರುವುದು ಸರಿಯಲ್ಲ.
ಕಲ್ಲಿದ್ದಲ ಗಣಿಗಳ ಹಂಚಿಕೆಯ ಹಗರಣಕ್ಕೆ ಹಲವಾರು ಮುಖಗಳಿವೆ. ಅದರಲ್ಲಿ ಒಂದು ಪ್ರಮುಖವಾದ ಮುಖ ಎಂದರೆ ಖಾಸಗಿ ಹಾಗೂ ಸರ್ಕಾರಿ ಕಂಪನಿಗಳ ಸಂಯುಕ್ತ ಕಾರ್ಯಾಚರಣೆಯ ಸ್ವರೂಪದ್ದೂ ಒಂದು. ಇಂತಹ ಸಂಯುಕ್ತ ಕಂಪೆನಿಗಳಿಗೆ ಆದ್ಯತೆಯ ಆಧಾರದ ಮೇಲೆ ಗಣಿಗಳನ್ನು ಹಂಚಲಾಗಿತ್ತು.
ಅದರ ಉದ್ದೇಶ ಉಕ್ಕು ಕಾರ್ಖಾನೆಗಳಿಗೆ ಅಗತ್ಯವಾದ ಕಲ್ಲಿದ್ದಲು ಹಾಗೂ ವಿದ್ಯುತ್ ಪೂರೈಕೆ. ಈಗಿನ ಪ್ರಾಥಮಿಕ ಹಂತದ ತನಿಖೆಯಲ್ಲೇ ಗೊತ್ತಾಗಿರುವ ವಿಚಾರ ಎಂದರೆ ಸಂಯುಕ್ತ ಕಂಪೆನಿಗಳಲ್ಲಿ ಖಾಸಗಿ ಪಾಲುದಾರರಿಗೇ ಹೆಚ್ಚಿನ ಷೇರುಗಳನ್ನು ಕೊಟ್ಟಿರುವುದರಿಂದ, ಕಂಪೆನಿಗಳ ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆ ಎನ್ನುವುದು.
ಈಗಾಗಲೇ ಸಿಬಿಐ, ಭ್ರಷ್ಟಾಚಾರ  ವಿರುದ್ಧದ ಕಾಯಿದೆಯ ವಿಧಿನಿಯಮಗಳಂತೆ ಉದ್ಯಮಿ ನವೀನ ಜಿಂದಾಲ್ ಹಾಗೂ ಮಾಜಿ ಸಚಿವ ದಾಸರಿ ನಾರಾಯಣರಾವ್ ಅವರ ವಿರುದ್ಧ ಮೊಕ್ಕದ್ದಮೆಗಳನ್ನು ದಾಖಲು ಮಾಡಿಕೊಂಡಿದೆ. 1993-2004ರ ಅವಧಿಯಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು ಎನ್ನುವುದು ಮುಖ್ಯವಲ್ಲ. 2004ರ ಅನಂತರ ಅಧಿಕಾರಕ್ಕೆ ಬಂದ ಸರ್ಕಾರದಲ್ಲೂ ಹಳೆಯ ನೀತಿಯೇ ಮುಂದುವರಿದಿದ್ದೂ ಗಮನಾರ್ಹ.ಈಗಿನ ಕಂಪ್ಯೂಟರ್ ಯುಗದಲ್ಲೂ ಸರ್ಕಾರಿ ಕಾರ್ಯಾಲ ಯಗಳ ಕೆಲಸದಲ್ಲಿ ಕಂಪ್ಯೂಟರ್‌ಗಳು ವ್ಯಾಪಕವಾಗಿ ಬಳಸಲಾಗುತ್ತಿದ್ದರೂ, ಫೈಲುಗಳು ಕಳೆದುಹೋಗಿವೆ ಎನ್ನುವ ಸಬೂಬನ್ನು ಸರ್ಕಾರದ ಪ್ರತಿನಿಧಿಗಳು ಮುಂದೊಡ್ಡುತ್ತಿರುವುದು ಸರಿಸಾಟಿ ಇಲ್ಲದ ಭಂಡತನವಷ್ಟೇ. ಈ ಪಿಡುಗಿಗೆ ಸರ್ಕಾರದ ಪ್ರಮುಖರು ಪರಿಹಾರವನ್ನು ಹುಡುಕಲೇಬೇಕು. ಅವರಿಗಿನ್ನು ಹೆಚ್ಚು ಕಾಲ ಉಳಿದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.