ರಾಷ್ಟ್ರಧ್ವಜ ನೀತಿಸಂಹಿತೆ ಸರ್ವರಿಗೂ ತಿಳಿಯಲಿ
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಾನಿಕ ಸಂಸ್ಥೆಗಳ ಕಾರ್ಯಾಲಯಗಳ ಮೇಲೆ ರಾಷ್ಟ್ರಧ್ವಜಾರೋಹಣ ಪ್ರತಿ ನಿತ್ಯ ನಡೆಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಇದು ಸ್ವಾಗತಾರ್ಹ ವಿಷಯ. ಆದರೆ ಇದು ಅಷ್ಟೇ ಜವಾಬ್ದಾರಿ ಕಾರ್ಯ ಎಂಬುದನ್ನು ಮೊದಲು ಅರಿಯಬೇಕು. ರಾಷ್ಟ್ರಧ್ವಜದ ನೀತಿಸಂಹಿತೆಯನ್ನು ಅರಿಯದವರು ಸದರಿ ಧ್ವಜಾರೋಹಣ ಕಾರ್ಯವನ್ನು ಜಾಗರೂಕತೆಯಿಂದ, ಅಷ್ಟೇ ಆಸ್ಥೆಯಿಂದ ಮಾಡುವರೇ? ಮೊದಲು ಶಾಲಾ ಮಕ್ಕಳ ಪಠ್ಯಪುಸ್ತಕದ ರಕ್ಷಾಪುಟದ ಒಳಗಡೆ ರಾಷ್ಟ್ರಧ್ವಜ ನೀತಿ ಸಂಹಿತೆಯನ್ನು ವಿವರವಾಗಿ ತಿಳಿಸುವ ವ್ಯವಸ್ಥೆಯಾಗಬೇಕು. ಪ್ರತಿಯೊಂದು ದೃಶ್ಯ ಮಾಧ್ಯಮದವರು ರಾಷ್ಟ್ರಧ್ವಜ ನೀತಿ ಸಂಹಿತೆಯನ್ನು ಸ್ಥಾನಿಕ ಭಾಷೆಯಲ್ಲಿ ವಿವರವಾಗಿ ತಿಳಿಯಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು.
ಸ್ವಾತಂತ್ರ್ಯ ದಿನಾಚರಣೆಯಂದು ತಪ್ಪುಗಳು ಅನಂತವಾಗಿರುವುದು ಕಂಡು ಬರುತ್ತದೆ. ರಾಷ್ಟ್ರಧ್ವಜ ನೀತಿ ಸಂಹಿತೆ ತಿಳಿಯದೆ ಇರುವ ಕಾರಣ ಪ್ರಮಾದಗಳು ಜರುಗುತ್ತಲೇ ಇವೆ. ತಪ್ಪುಗಳನ್ನು ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮದ ಮುಖಾಂತರ ಬಹಿರಂಗಗೊಳಿಸುವುದಕ್ಕಿಂತ ಸ್ಥಾನಿಕವಾಗಿ ತಿಳಿವಳಿಕೆ ನೀಡುವ ಕೆಲಸವಾಗಬೇಕು. ರಾಷ್ಟ್ರಧ್ವಜದ ಕೆಳಗಡೆ ಯಾವುದೇ ವ್ಯಕ್ತಿಯ ಭಾವಚಿತ್ರ ಇಡುವುದಾಗಲಿ, ರಾಷ್ಟ್ರಧ್ವಜದ ಸಮಾನಾಂತರ ಬೇರೆ ಧ್ವಜ ಹಾರಾಡುವುದಾಗಲಿ, ನಿಗದಿತ ಸಮಯಕ್ಕೆ ಧ್ವಜ ಇಳಿಸುವುದಾಗಲಿ ಬಹಳಷ್ಟು ನಾಗರಿಕರಿಗೆ ತಿಳಿದಿರುವುದಿಲ್ಲ. ಸರ್ವರಿಗೂ ರಾಷ್ಟ್ರಧ್ವಜ ನೀತಿ ಸಂಹಿತೆ ಮನವರಿಕೆ ಮಾಡಿಕೊಡುವ ವ್ಯವಸ್ಥೆ ಮೊದಲು ಮಾಡಬೇಕು. ರಾಷ್ಟ್ರಪ್ರೇಮ ಸರ್ವರಲಿ ಸದಾ ಜಾಗೃತವಾಗಿರಬೇಕು, ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕು.
-ಶಿವಾನಂದ. ಈ, ರಬಕವಿ. ಬಾಗಲಕೋಟೆ
ಕಟ್ಟಡ ನಿರ್ಮಾಣ: ಸಡಿಲ ನಿಯಮವೇಕೆ?
ಜನರ ಆಶೋತ್ತರಗಳಿಗೆ ಅನುಸಾರವಾಗಿ ನಗರ, ಗ್ರಾಮೀಣ ಭಾಗದಲ್ಲಿ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಾ ಇವೆ. ಆದರೆ ಕಟ್ಟಡ ಕಟ್ಟುವ ಮುನ್ನ ಅನುಸರಿಸಬೇಕಾದ ನಿಯಮಗಳು, ಪ್ರಾಯೋಗಿಕ ಗುಣಮಟ್ಟ ತಪಾಸಣೆಯಂಥ ಪ್ರಾಥಮಿಕ ತನಿಖಾ ಚಟುವಟಿಕೆಗಳು ಮಾತ್ರ ಸರಿಯಾಗಿ ನಡೆಯದೇ ಇರುವುದು ಪದೇ ಪದೇ ರಾಜ್ಯಾದ್ಯಂತ ನಿರ್ಮಾಣ ಹಂತದ ಕಟ್ಟಡಗಳು ಆಗಾಗ ಕುಸಿಯೋದಕ್ಕೆ ಕಾರಣ ಆಗುತ್ತಿದೆ. ಇಂತಹದ್ದೇ ಸಡಿಲ ನಿಯಮ ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಸೋಮೇಶ್ವರ ನಗರದಲ್ಲಿ ಸಂಭವಿಸಿದ 5 ಹಂತದ ನಿರ್ಮಾಣ ಹಂತದ ಕಟ್ಟಡ ಕುಸಿತಕ್ಕೂ ಕಾರಣವಾಗಿದೆ.
ಆದರೂ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಇಂತಹ ಕಟ್ಟಡಗಳ ನಿರ್ಮಾಣಕ್ಕೆ ಏಕೆ ಅನುಮತಿ ನೀಡಬೇಕು? ಕೇವಲ ಮೇಲ್ನೋಟಕ್ಕೆ ಯೋಗ್ಯವೆಂದು ಪರಿಶೀಲಿಸಿ ಅನುಮತಿ ನೀಡುವ ಕ್ರಮ ಸರಿಯಲ್ಲ. ಕಟ್ಟಡ ನಿರ್ಮಾಣಕ್ಕೆ ಇಂತಿಷ್ಟು ಪ್ರಮಾಣದ ಸಾಮಗ್ರಿಗಳನ್ನು ಬಳಸಬೇಕು ಎಂಬ ಕಡ್ಡಾಯ ನಿಯಮ ಜಾರಿಗೆ ತಂದರೆ, ಸುಭದ್ರವಾದ ಕಟ್ಟಡ ನಿರ್ಮಾಣವಾಗಿ, ಇಂತಹ ಅವಘಡಗಳು ಮತ್ತೆ ಸಂಭವಿಸುವುದಿಲ್ಲ. ಜೊತೆಗೆ ನಿರ್ಮಾಣದ ಹಿಂದಿನ ಷಡ್ಯಂತ್ರಕ್ಕೆ, ನಿಯಮಬಾಹಿರ ನಿರ್ಮಾಣ ಅನುಮತಿಗೆ, ಹಾಗೆಯೇ ನಿರ್ಮಾಣದ ಪೂರ್ವದಲ್ಲಿಯೇ ಎಚ್ಚರಿಕೆ ವಹಿಸಿದರೇ ಖಂಡಿತ ಇಂತಹ ಅವಘಡಗಳನ್ನು ತಪ್ಪಿಸಬಹುದು. ಈ ಬಗ್ಗೆ ಇನ್ನಾದರೂ ಅಧಿಕಾರಿಗಳು, ತಂತ್ರಜ್ಞರು ಹಾಗೂ ಸರ್ಕಾರ ಗಮನ ಹರಿಸಬೇಕು.
-ವಸಂತ ಬಿ. ಈಶ್ವರಗೆರೆ, ಹಿರಿಯೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

