ಇನ್ನೊಬ್ಬರ ಇತಿಹಾಸಕ್ಕೇಕೆ ಪ್ರಾಮುಖ್ಯ?
ಮುಂಬರುವ ವರ್ಷದಲ್ಲಿ ಕರ್ನಾಟಕದ ಶಿಕ್ಷಣದ ರಾಷ್ಟ್ರೀಕರಣದ ಬಗ್ಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ತಿಳಿಸಿರುವ ಬಗ್ಗೆ ವರದಿ ಮಾಡಲಾಗಿದೆ. ಮೊದಲನೆಯದಾಗಿ, ಈಗಿರುವ ಕಲಿಕಾ ವ್ಯವಸ್ಥೆಗೆ ಬದಲಾಗಿ ಹೊಸ ಪಠ್ಯ ಕ್ರಮ ತರಬೇಕಾದರೆ, ಇಲ್ಲಿನ ಶಿಕ್ಷಕರಿಗೆ ಆ ಕುರಿತ ಸೂಕ್ತ ತರಬೇತಿ ನೀಡಲಾಗಿದೆಯೇ ಎಂದು ತಿಳಿಯಬೇಕು. ಇಲ್ಲವಾದರೆ ಮಕ್ಕಳಿಗೆ ಕಲಿಸುವಲ್ಲಿ ತೊಡಕಾಗುವ ಸಾದ್ಯತೆ ಇರುತ್ತದೆ. ಎರಡನೆಯದಾಗಿ, ಇತಿಹಾಸದಂಥ ವಿಷಯಗಳಲ್ಲಿ ದೇಶದ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಆದ್ಯತೆ ಇರುತ್ತದೆ. ಈಗಿರುವ ಸಿಬಿಎಸ್ಸಿ ಆರನೇ ತರಗತಿಯ ಸಮಾಜ ವಿಜ್ಞಾನದ ಪಠ್ಯ ನೋಡಿದರೆ ಎರಡು-ಮೂರು ಪುಟಗಳಲ್ಲಿ ಕರ್ನಾಟಕದ ಎಲ್ಲಾ ಸಾಮ್ರಾಜ್ಯಗಳ (ಗಂಗ, ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ, ಮೈಸೂರು) ಇತಿಹಾಸವನ್ನು ಸೇರಿಸಿ ಇನ್ನೊಂದೆಡೆ ಅಭ್ಯಾಸದ ಹೆಸರಲ್ಲಿ ಒಂದು ಪುಟ ಪೂರ್ತಿಚೋಳರ ಬಗ್ಗೆ ಹೇಳಲಾಗಿದೆ. ಕನ್ನಡದ ಮಕ್ಕಳು ಯಾವ ನೆಲದ ಇತಿಹಾಸದ ಬಗ್ಗೆ ಆಳವಾಗಿ ತಿಳಿಯಬೇಕು? ಕನ್ನಡದ ಮಕ್ಕಳು ಹೆಮ್ಮೆ ಪದಬೇಕಾದ್ದು ಯಾರ ಬಗ್ಗೆ? ಮೂರನೆಯದಾಗಿ, ಇಲ್ಲಿ ಕುತೂಹಲ ತರುವ ವಿಷಯವೇನೆಂದರೆ ಇಡೀ ದೇಶದ ಎಲ್ಲಾ ರಾಜ್ಯಗಳ ಕಲಿಕೆ ಒಂದೇ ರೂಪದಲ್ಲಿರಬೇಕು ಎನ್ನುವ ಇಂಗಿತ. ಒಂದು ನಾಡಿನ ಕಲಿಕೆ ಅಲ್ಲಿನ ರಾಜ್ಯ ಸರ್ಕಾರದ ಹೊಣೆಯಾಗಬೇಕೇ ಹೊರತು ಎಲ್ಲವನ್ನೂ ಕೇಂದ್ರದ ಕಪಿಮುಷ್ಠಿಯಲ್ಲಿಡುವ ಹುನ್ನಾರ ಸಲ್ಲದು. ತುರ್ತು ಪರಿಸ್ಥಿತಿಯ ಲಾಬಿ ಮಾಡಿ ರಾಜ್ಯ ಪಟ್ಟಿಯಲ್ಲಿದ್ದ ಕಲಿಕೆಯನ್ನು ಜಂಟಿ ಪಟ್ಟಿಗೆ ವರ್ಗಾಯಿಸಿದ ನಿಲುವನ್ನು ಬದಲಾಯಿಸಿ ಮತ್ತೆ ರಾಜ್ಯ ಪಟ್ಟಿಗೆ ಸೇರುವಂತೆ ಮಾಡಬೇಕು. ಕರ್ನಾಟಕದ ಮಂದಿಯ ಕಲಿಕೆಯ ನಿರ್ಧಾರ ಕರ್ನಾಟಕದಲ್ಲಿಯೇ ಇರಬೇಕೆ ಹೊರತು ಸಾವಿರಾರು ಮೈಲಿ ದೂರದ ದೆಹಲಿಯಲ್ಲಲ್ಲ.
-ವಲ್ಲೀಶ ಕುಮಾರ್ ಎಸ್, ಬೆಂಗಳೂರು
ಕೋತಿರಾಮನನ್ನು ಗುರುತಿಸಿ
ಚಿತ್ರದುರ್ಗ ಮೂಲದ ಚಾರಣ ಸಾಹಸಿಗ ಕೋತಿ (ಜ್ಯೋತಿ-) ರಾಮ ತನ್ನ ಜೀವದ ಹಂಗು ತೊರೆದು ಸತತ ಮೂರು ದಿನ ಹರಸಾಹಸ ಪಟ್ಟು, ಮಳೆಗಾಲದ ಕೆಂಪು ನೀರಿನಿಂದ ಭೋರ್ಗರೆಯುವ ಜೋಗ ಜಲಪಾತದಿಂದ ಎರಡು ಶವಗಳನ್ನು ಎತ್ತಿದ್ದಾನೆ. ನಮ್ಮಂಥ ಸಾಮಾನ್ಯ ಜನರಿಗೆ ಜಲಪಾತದ-ಅದೂ ಮಳೆಗಾಲ ಜಲಪಾತದ-ಹತ್ತಿರ ಹೋಗಲೂ ಭಯವಾಗುತ್ತದೆ. ಅಂಥದ್ದರಲ್ಲಿ ಈ ಅಸಾಧ್ಯ ಮನುಷ್ಯನು ನರಕದರ್ಶನ ಮಾಡಿಸುವ, ಹೆಲ್ಮೆಟ್ ಹೋಳಾಗಿಸುವ, ಕಿವುಡಾಗಿಸುವ, ಕಾಲು ಜಾರಿಸುವ, ಉಸಿರುಗಟ್ಟಿಸುವ, ಅಪಾರ ಕೆಂಪು ಜಲರಾಶಿಯ ಮಧ್ಯೆಯೇ ಇಳಿದು ಸಾವಿನ ಹತ್ತಿರಕ್ಕೇ ಹೋಗಿ, ಜಯಶಾಲಿಯಾಗಿರುವುದು ನಮಗೆ ಕನಸು ಕಂಡಂತೆ ಭಾಸವಾಗುತ್ತಿದೆ. ತಮ್ಮ ಹೊಣೆ ತಪ್ಪಿಸಿಕೊಳ್ಳಲು ಮುಚ್ಚಳಿಕೆ ಬರೆಸಿಕೊಂಡ ಪೊಲೀಸರ ಕ್ರಮ ಅಮಾನವೀಯ ಮತ್ತು ನಾಚಿಕೆಗೇಡಿತನದ್ದು. ಪತ್ರಿಕಾ ಮಾಧ್ಯಮದವರು ಕಾರ್ಯಾಚರಣೆಯ ಮೂರು ದಿನ ಮಾತ್ರ ವರದಿ ಪ್ರಕಟಿಸಿ ಸುಮ್ಮನಾದರು. ರೆಡಿಯೋ, ಟಿ.ವಿ.ಯವರು ಇನ್ನೂ ಹೆಚ್ಚು ಅಲಕ್ಷ್ಯ ಮಾಡಿದರು. ಜೀವ ಹೋಗುವಂಥ ಸಾಹಸಕ್ಕೆ ಅವನು ಸಂಭಾವನೆಯನ್ನೂ ಪಡೆಯಲಿಲ್ಲ ನೋಡಿ! ಸಾಹಸದೊಂದಿಗೆ ಉದಾತತ್ತೆಯೂ ಸೇರಿದೆ. ಈತನೇನು ಶ್ರೀಮಂತನಲ್ಲ; ಬಂಡೆಯೇರಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ, ಮುಂದೆ ಸಾಹಸಿಯಾಗಿ, ಸಮಾಜಮುಖಿಯಾಗಿ, ಯುವ ಜನರಿಗೆ (ಅವನ ಕಡೆ ಲಕ್ಷ್ಯ ಕೊಟ್ಟವರಿಗೆ) ಆದರ್ಶಪ್ರಾಯನಾದ. ವಿದೇಶದಲ್ಲಾದರೆ ಇಷ್ಟು ಹೊತ್ತಿಗೆಲ್ಲಾ ಹೀರೋ ಆಗಿರುತ್ತಿದ್ದ. ನಮ್ಮಲ್ಲೋ? ನೂರಾರು ಕೋಟಿ ಗಳಿಸುತ್ತ, ಮೋಜು-ಮಸ್ತಿ ಐಷಾರಾಮಿ ಬದುಕು ನಡೆಸುವ ಸಮಾಜಕ್ಕೆ ಕಿಲುಬುಕಾಸು ಪ್ರಯೋಜನವಿಲ್ಲದ, ಕ್ರಿಕೆಟ್ ತಾರೆಯರೇ ಹೀರೋಗಳು! ನಮ್ಮ ಸಮಾಜ, ಸಂಘಟನೆಗಳು, ಸರ್ಕಾರ, ಮಾಧ್ಯಮಗಳು, ಯುವಜನರು, ಎಲ್ಲರೂ ಇನ್ನಾದರೂ ಎಚ್ಚೆತ್ತುಕೊಂಡು, ಈ ಅಪ್ಪಟ ದೇಸೀ ಪ್ರತಿಭೆಯನ್ನು ಗುರ್ತಿಸಬೇಕು, ಸನ್ಮಾನಿಸಬೇಕು, ಆರ್ಥಿಕ ಭದ್ರತೆ ಕೊಡಬೇಕು, ರಾಜ್ಯ/ರಾಷ್ಟ್ರ ಪ್ರಶಸ್ತಿಗಳನ್ನು, ಬಿರುದುಗಳನ್ನು ಕೊಡಬೇಕು. ದಾರಿ ತಪ್ಪುತ್ತಿರುವ ಹೆಚ್ಚೆಚ್ಚು ಯುವಜನರು ಈ ಮಾರ್ಗದತ್ತ ಆಕರ್ಷಿತರಾಗುವಂತೆ ಮಾಡಬೇಕು. ಉತ್ತಮ ವ್ಯಕ್ತಿ, ಮೌಲ್ಯಗಳನ್ನು ಎತ್ತಿ ಹಿಡಿಯುವುದು ಸಮಾಜಮುಖಿ ಪ್ರಗತಿ, ಏಳ್ಗೆ.
-ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

