ಸಂಪಾದಕೀಯ

ಅತಾರ್ಕಿಕ ಹೇಳಿಕೆ

Published On :

ಮಡೆಸ್ನಾನದ ಬಗ್ಗೆ ಪ್ರೊಫೆಸರ್ ಸಿದ್ಧರಾಮಯ್ಯನವರ ಹೇಳಿಕೆಗೆ (ಡಿಸೆಂಬರ್ 7 ರ ಪತ್ರಿಕೆ) ನನ್ನ ಪ್ರತಿಕ್ರಿಯೆ. ಮೊದಲಿಗೆ ಈ ಮಡೆಸ್ನಾನದ ಪದ್ಧತಿಯನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಅದೇ ರೀತಿ ಪ್ರೊಫೆಸರ್ ಸಿದ್ಧರಾಮಯ್ಯ ಅವರು ನೀಡಿರುವ ಮೌಢ್ಯ ಹಾಗೂ ಅತಾರ್ಕಿಕ ಹೇಳಿಕೆಯನ್ನು ಖಂಡಿಸಬೇಕು. ಊಟ ಮಾಡಿದ ಮೇಲೆ ಎಂಜಲೆಗಳನ್ನು ಅಲ್ಲೇ ಬಿಟ್ಟು ಬರುವ ಭಕ್ತರು ಅಮೇಧ್ಯ ತಿನ್ನುವವರು ಎಂದು ಈ ಪ್ರೊಫೆಸರ್ ಹೇಳಿಕೆ ನೀಡಿದ್ದಾರೆ. ದೇವಸ್ಥಾನದಲ್ಲಿ ಪ್ರಸಾದ ಎಂಬ ಭಾವನೆಯಿಂದ ಭಕ್ತರು ಅಲ್ಲಿ ಊಟ ಮಾಡುತ್ತಾರೆ ಹೊರತು ಬೇರೆಯವರು ತಮ್ಮ ಎಂಜಲೆಗಳ ಮೇಲೆ ಮಡೆ ಸ್ನಾನ ಮಾಡಲಿ ಎಂಬ ದೃಷ್ಟಿಯಿಂದಲ್ಲ. ಮೂಢರು ಆ ಕೆಲಸ ಮಾಡಿದರೆ ಊಟ ಮಾಡುವ ಮುಗ್ಧರನ್ನು ದೂಷಿಸುವುದೇಕೆ? ಸಿದ್ಧರಾಮಯ್ಯನವರ ಈ ಅತಾರ್ಕಿಕ ನಿಲುವನ್ನು ಅವರ ಮೌಢ್ಯ ಎಂದು ಭಾವಿಸಿ ಮನ್ನಿಸಬಹುದಾದರೂ ಅಮೇಧ್ಯ ತಿನ್ನುವವರು ಎಂಬ ಅವಾಚ್ಯ  ಹಾಗೂ ಕೀಳುಮಟ್ಟದ ಅವರ ಹೇಳಿಕೆ ಅತ್ಯಂತ ಖಂಡನೀಯ. ಇಂತಹ ಪ್ರೊಫೆಸರ್‌ಗೆ ಒಂದು ಪ್ರಶ್ನೆ. ಇವರು ಹೋಟೆಲ್‌ನಲ್ಲಿ ಊಟ ಮಾಡಿದ ನಂತರ ತಮ್ಮ ಎಂಜಲೆಯನ್ನು ಅಲ್ಲೇ ಬಿಟ್ಟು ಬಂದರೆ ಇವರೂ ಅಮೇಧ್ಯ ತಿನ್ನುವವರು ಎಂದು ಹೇಳೋಣವೆ? ಹೋಟೆಲ್‌ನಲ್ಲಿ  ಎಂಜಲೆಗಳನ್ನು ಸರಿಯಾದ ರೀತಿಯಲ್ಲಿ ವಿಸರ್ಜನೆ ಮಾಡುವುದು ಹೇಗೆ ವ್ಯವಸ್ಥಾಪಕರ ಹೊಣೆಯೋ ಹಾಗೇ ದೇವಸ್ಥಾನದಲ್ಲಿ ಮಡೆಸ್ನಾನಕ್ಕೆ ಎಡೆಗೊಡದಂತೆ ವಿಸರ್ಜಿಸುವುದು ದೇವಸ್ಥಾನದ ವ್ಯವಸ್ಥಾಪಕರ ಹೊಣೆ. ಇದನ್ನು ತಿಳಿಯದೆ ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮುಗ್ಧರನ್ನು ಅವಾಚ್ಯ ಶಬ್ದಗಳಿಂದ ಬಡಬಡಿಸುವುದು ಪ್ರೊಫೆಸರ್ ಎಂಬ ಗೌರವ ಸ್ಥಾನಕ್ಕೆ ಕುಂದು ತರುತ್ತದೆ.
-ಜಗನ್ನಾಥ್ ಜೆ. ಪ್ರಭಾತ್

ತಮಿಳುನಾಡು ಮಾದರಿಯ ಉಳಿತಾಯ
ಇತ್ತೀಚಿನ ನನ್ನ ತಮಿಳುನಾಡು ಪ್ರವಾಸದಲ್ಲಿ ಕಂಡುಕೊಂಡ ಉತ್ತಮ ವಿಚಾರವಿದು. ಸರಿಸುಮಾರು 250 ಕೋಟಿ ರೂ.ಗಳ ಯೋಜನೆಗೆ ಸಂಬಂಧಿಸಿದ ಉದ್ಘಾಟನೆ ಶಿಲಾನ್ಯಾಸಗಳನ್ನು ಸರಳವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಲಾಯ್ತು. ಪ್ಲೈಓವರ್, ಸೇತುವೆ, ಹೈವೇ, ಸರ್ಕಾರಿ ಬಂಗ್ಲೆಗಳ ಶುಭಾರಂಭದಲ್ಲಿ ಈ ಮೂಲಕ ಉಳಿತಾಯ ಸಾಧಿಸಲಾಯ್ತು. ಮಂತ್ರಿ ಮತ್ತವರ ಅಧಿಕಾರಿಗಳ ಪ್ರಯಾಣ ಭತ್ತ್ಯೆ ಊಟೋಪಚಾರ-ಪ್ರಚಾರ-ಭದ್ರತೆ ವೆಚ್ಚಗಳನ್ನೆಲ್ಲ ನಿವಾರಿಸಿ ಸರ್ಕಾರದ ಬೊಕ್ಕಸವನ್ನು ರಕ್ಷಿಸಲಾಗಿದೆ. ಇಂತಹ ಉಳಿತಾಯ ಮಾರ್ಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುವುದು ಯೋಗ್ಯವಲ್ಲವೇ?
-ಎನ್.ಡಿ. ಕಾರಂತ, ಮೈಸೂರು

ಉತ್ತಮ ನಡೆ
ಪ್ರತಿಪಕ್ಷ ಹಾಗೂ ವಿರೋಧಪಕ್ಷ ಇವೆರಡೂ ಆಡಳಿತ ಪಕ್ಷದೊಂದಿಗೆ ಸದಾ ಜಗಳ, ವಿವಾದಕ್ಕೆಳೆಯುವುದು ಪೇಚಿಗೆ ಸಿಲುಕಿಸುವುದು, ತೀವ್ರ ಮುಖಭಂಗ ಉಂಟು ಮಾಡುವುದು ಸಹಜ ಪ್ರವೃತ್ತಿ. ಇಂದಿಗೂ ಜನ ಇದೇ ಪದ್ಧತಿ ಎಂದು ತಿಳಿದಿದ್ದಾರೆ.ಆದರೆ, ಹೆಚ್.ಡಿ. ಕುಮಾರಸ್ವಾಮಿಯವರ ಇತ್ತೀಚಿನ ನಡೆ ಮಾದರಿಯೂ ಹೌದು, ಮೃದುಧೋರಣೆಯೂ ಹೌದು. ಸಾಮರಸ್ಯದ ನಡೆ ಜನತೆಯ ಕಲ್ಯಾಣಕ್ಕೆ ಮುನ್ನುಡಿ ಇದ್ದಂತೆ. ಈ ದಿಸೆಯಲ್ಲಿ ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಲೇಬೇಕು.
-ಪವನಕುಮಾರ ಕೆ.ವಿ. ಬಳ್ಳಾರಿ.

ಆಯುರ್ವೇದ ಪರೀಕ್ಷೆ ಫಲಿತಾಂಶ ಬೇಕು
ಮೊದಲ ವರ್ಷದ ಆಯುರ್ವೇದ ಪದವಿ ಪರೀಕ್ಷೆಗಳು ಸಪ್ಟೆಂಬರ್ ತಿಂಗಳಲ್ಲಿ ನಡೆದಿದ್ದು ಈಗ ಡಿಸೆಂಬರ್ 2013 ತಿಂಗಳು ಪ್ರಾರಂಭವಾದರೂ ಅವುಗಳ ಫಲಿತಾಂಶ ಪ್ರಕಟಿಸಿಲ್ಲ. ರಾಜೀವ್ ಗಾಂಧಿ ಆರೋಗ್ಯ ವಿ.ವಿದ್ಯಾಲಯದಿಂದ ಹೀಗೆ ಪರೀಕ್ಷೆ ಫಲಿತಾಂಶ ಪ್ರಕಟಣೆಯ ವಿಳಂಬವಾದರೆ, ಮುಂದಿನ ವರ್ಷದ ಕೋರ್ಸ್ (2ನೇ ಬಿಎಎಂಎಸ್) ಪ್ರಾರಂಭವಾಗುವುದು ಯಾವಾಗ ಎಂದು ಕುಲಸಚಿವರನ್ನು ಕೇಳುತ್ತೇವೆ. ಮುಂದಿನ ವರ್ಷ ಪಠ್ಯಕ್ರಮಕ್ಕೆ ತೀವ್ರ ಅಡಚಣೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಓದಲೂ ತೊಂದರೆಯಾಗುತ್ತಿವೆ. ಹೀಗಾಗಿ ಶೀಘ್ರವೇ ಫಲಿತಾಂಶ ಪ್ರಕಟಿಸಲು ಮಾನ್ಯ ರಾಜ್ಯಪಾಲರು ಆಗ್ರಹಿಸಬೇಕಾಗಿ ವಿದ್ಯಾರ್ಥಿಗಳ ಪರವಾಗಿ ವಿನಂತಿ.
-ಎಸ್. ಪದ್ಮನಾಭನ್, ಪಂಕಜಾನಾಥನ್


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.