ವಿಳಂಬ ಧೋರಣೆ ಖಂಡನೀಯ
ಭಾನುವಾರ ಡಿಸೆಂಬರ್ 8ರಂದು ಸಂಪಾದಕರ ಸರದಿಯಲ್ಲಿ ಪ್ರಕಟವಾದ ಶ್ರೀ ಪ್ರದೀಪ ಮಾಲ್ಗುಡಿಯವರ ವಿಚಾರಗಳನ್ನು ನಾನು ಸಮರ್ಥಿಸುತ್ತೇನೆ. ಇಂದಿನ ಸರ್ಕಾರ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ನೇಮಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಸಾಂಸ್ಕೃತಿಕ ಕ್ಷೇತ್ರ ರಾಜಕಾರಣದಿಂದ ಮುಕ್ತವಾಗಿರಬೇಕು. ಅಲ್ಲಿ ರಾಜಕಾರಣ ಬೇಡ. ಅರ್ಹರಿಗೆ, ಸಮರ್ಥರಿಗೆ ಸ್ಥಾನಮಾನ ನೀಡಲಿ, ಅನುಭವವಿರುವವರಿಗೆ ನೇಮಿಸಲಿ. ಆದರೆ ಯುವಕರಿಗೆ ಪ್ರಾಶಸ್ತ್ಯ ನೀಡಲಿ. ನೇಮಕಾತಿಗಳು ಪಕ್ಷಾತೀತವಾಗಿರಲಿ, "ಜಸ್ಟೀಸ್ ಡಿಲೈಡ್ ಈಸ್ ಜಸ್ಟೀಸ್ ಡಿನೈಡ್" ಎನ್ನುವ ಹಾಗೆ ವಿಳಂಬ ನೀತಿಯಿಂದ ನ್ಯಾಯ ದಕ್ಕಲಾರದು. ನೇಮಕಾತಿ ಮಾಡುವಾಗ ಎಲ್ಲ ಜಿಲ್ಲೆಗಳಿಗೆ ಸಮಾನ ಪ್ರಾತಿನಿಧ್ಯವಿರಲಿ; ಸಾಮಾಜಿಕ ನ್ಯಾಯವೂ ಇರಲಿ. ಸಾಂಸ್ಕೃತಿಕ ಸಂಘಟನೆಗಳಿಗೆ ಅನುದಾನ ನೀಡುವಾಗ ಸಮಾನತೆ ಇರಲಿ. ಬೆಂಗಳೂರು ಕೇಂದ್ರಿತ ಸಂಘ- ಸಂಸ್ಥೆಗಳಿಗೆ ಅಧಿಕ ಮನ್ನಣೆ ನೀಡಿ. ಉತ್ತರ ಕರ್ನಾಟಕದವರೆಂದು ಅಲಕ್ಷಿಸುವುದು ಬೇಡ. ವಿವಿಧ ಪ್ರಾಧಿಕಾರಗಳಿಗೆ ಹಾಗೂ ಅಕಾಡೆಮಿಗಳಿಗೆ ನೇಮಕಾತಿ ನೇರವಾಗಿರಲಿ. ಸಾಮಾನ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕದ ಒಬ್ಬಿಬ್ಬರು ಗಣ್ಯ ಸಾಹಿತಿಗಳು ಹಾಗೇನೇ ದಕ್ಷಿಣ ಕರ್ನಾಟಕ ಅದರಲ್ಲೂ ಬೆಂಗಳೂರಿನಲ್ಲಿ ನೆಲೆ ನಿಂತು ಆಳುವ ಸರ್ಕಾರಗಳಿಗೆ ತೀರ ಹತ್ತಿರವಾಗಿರುವ ಸಾಹಿತಿಗಳು ಸೂಚಿಸುವ ಹೆಸರುಗಳನ್ನೇ ಅಕಾಡೆಮಿಗಳಿಗೆ ಆಯ್ಕೆ ಮಾಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಒಳವ್ಯವಸ್ಥೆ ಬದಲಾಗಬೇಕೆಂದು ಸಾಮಾನ್ಯ ಸಾಹಿತಿಗಳು ಬಯಸುತ್ತಾರೆ. ಹಾಗೆಯೇ ರಂಗಾಸಕ್ತರ ಬಯಕೆಯೆಂದರೆ ಪ್ರತಿ ಜಿಲ್ಲೆಗೆ ರಂಗಾಯಣಗಳು ಸ್ಥಾಪನೆಗೊಳ್ಳಬೇಕು. ಬೆಳಗಾವಿ ಜಿಲ್ಲೆಗೆ ಮೊದಲು ಬರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೀತಿ-ನಿಯಮಗಳು ಪಾರದರ್ಶಕವಾಗಿ ಅನುಷ್ಠಾನಗೊಳ್ಳಬೇಕು. ಈ ಇಲಾಖೆಗೆ ಸಾಹಿತ್ಯ-ಸಂಸ್ಕೃತಿಗಳಲ್ಲಿ ಆಸಕ್ತಿ ಇದ್ದ ಅಧಿಕಾರಿಗಳು ಬರಬೇಕು. "ದಿನ ಜಾಂದೆ-ಪಗಾರ ಅಂದೆ" ಎನ್ನುವ ಅಧಿಕಾರಿಗಳು ಬೇಡ. ಪತ್ರ ಬರೆದವರಿಗೆ ಉತ್ತರಿಸುವ ಕನಿಷ್ಠ ಸೌಜನ್ಯವಾದರೂ ಇರುವ ಅಧಿಕಾರಿಗಳನ್ನು ಜನ ಬಯಸುತ್ತಾರೆ. ಕೊನೆಯದಾಗಿ ಒಂದು ಮಾತು. ಈ ಕನ್ನಡ ಮತ್ತು ಸಂಸ್ಕೃತಿ ಇಲಾಖೆ -ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತನ್ನ ಕಾರ್ಯಾಲಯ ವರ್ಗಾಯಿಸಿ ಕಾರ್ಯನಿರ್ವಹಿಸಬೇಕು. ಗಡಿಭಾಗದ ಸಂಘ, ಸಂಸ್ಥೆಗಳಿಗೆ ಹಾಗೂ ಗಡಿ ಹೊರಗಿದ್ದು ಕನ್ನಡಕ್ಕಾಗಿ -ಕನ್ನಡ ಸಂಸ್ಕೃತಿಗಾಗಿ ಶ್ರಮಿಸುವ ಸಂಘಟನೆಗಳಿಗೆ ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಅನುದಾನ ನೀಡಿ ಕನ್ನಡ ಸಂಸ್ಕೃತಿಯನ್ನು ರಕ್ಷಿಸಬೇಕು. ಅದಕ್ಕೂ ಮೊದಲು ವಿಳಂಬ ಮಾಡದೆ ಅಕಾಡೆಮಿಗಳಿಗೆ -ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ಸದಸ್ಯರನ್ನು ನೇಮಕ ಮಾಡಲಿ. ಆದರೆ ಇವು ರಾಜಕೀಯ ನೇಮಕಾತಿಗಳಾಗದಿರಲಿ.
- ಪ್ರಾ. ಬಿ.ಎಸ್. ಗವಿಮಠ, ಬೆಳಗಾವಿ
ಡ್ಯಾಂ ನೋಡುಗರಿಗೆ ಹಣ ಬೇಕು!
ಐತಿಹಾಸಿಕ ಚಿತ್ರದುರ್ಗ ಕೋಟೆ ನೋಡಲು ಬರುವ ರಾಜ್ಯದ ಬಹುತೇಕ ಪ್ರವಾಸಿಗರು ಹಿರಿಯೂರು ತಾಲೂಕಿನ ಮಾರಿಕಣಿವೆ ಡ್ಯಾಂ ನೋಡಲು ಲಗ್ಗೆ ಇಡುತ್ತಾರೆ. ಈಗಂತೂ ಡಿಸೆಂಬರ್ ಶಾಲಾ ಮಕ್ಕಳ ಪ್ರವಾಸದ ತಿಂಗಳು, ಈ ತಿಂಗಳು ಇಲಾಖೆಯಿಂದ ಅನುಮತಿಯಿರುತ್ತದೆ. ಆದರೆ ಡ್ಯಾಂ ನೋಡಲು ಬಂದ ಶಾಲಾ ಪ್ರವಾಸದವರಿಂದ 200-300 ಬೇನಾಮಿಯಾಗಿ ಆದೇಶವಿಲ್ಲದಿದ್ದರೂ ಅಲ್ಲಿನ ಸಿಬ್ಬಂದಿಯ 'ಡಿ' ದರ್ಜೆ ನೌಕರರು ಹಣ ಕೀಳುತ್ತಾರೆ. ಹಣ ಕೊಡದಿದ್ದರೆ ಗೇಟ್ ಬಿಚ್ಚೋಲ್ಲ ಅಂತಾರೆ. ಪ್ರಶ್ನೆ ಮಾಡಿದವರಿಗೆ ರಿಯಾಯಿತಿ-ಪ್ರಶ್ನೆ ಮಾಡದೆ ಬೇಗನೇ ಹೋಗುವ ಆತುರವಿರುವ ಅಮಾಯಕರು ನೀಡಿ ಹೋಗುತ್ತಿರುತ್ತಾರೆ. ಇದನ್ನು ನೋಡಿ ನೋಡಿ ಸಣ್ಣ ನೀರಾವರಿ ಇಲಾಖೆ ಮೌನ ವಹಿಸಿರುವುದು ಅನುಮಾನಕ್ಕೆ ಎಡೆಯಾಗಿದೆ. ಇವರದು ಯಾರ ಕುಮ್ಮಕ್ಕೋ ಗೊತ್ತಿಲ್ಲ! ಸರ್ಕಾರಿ ಆದೇಶವಿಲ್ಲದಿದ್ದಾಗ ಪ್ರವಾಸಿಗರಿಂದ ಹಣ ಕೀಳುವುದು ತಪ್ಪಲ್ಲವೇ? ಇದರತ್ತ ಗಮನ ಹರಿಸಿ ಯಾರೇ?
-ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

