ಹಾಲು ಅದೆಷ್ಟು 'ಅಮೃತ' ವಾಗಿ ಉಳಿದಿದೆ?
ಹಾಲು ಒಂದು ಉತ್ಕೃಷ್ಟ ಆಹಾರ. ಮಗುವಿಗೆ ತಾಯಿಯ ಹಾಲಿನ ನಂತರ (ಬದಲಿಗೆ) ನೀಡುವ ಅಮೃತ ಸಮಾನವಾದದ್ದು. ಹಸುವಿನ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹೀಗೆ ಹಾಲಿನ ಹಲವು ಉತ್ಪನ್ನಗಳನ್ನು ನಾವು ಬಳಸುತ್ತೇವೆ. ಬೆಣ್ಣೆ, ತುಪ್ಪದಿಂದ ತಯಾರಿಸಿದ ಖಾದ್ಯಗಳು, ಭಕ್ಷ್ಯಗಳು ರುಚಿಕರ ಹಾಗೂ ಆರೋಗ್ಯಕರ. ಕಾಫಿ-ಟೀಗಂತೂ ಗಟ್ಟಿಹಾಲೇ ಬೇಕು. ರೋಗಿಗಳಿಗೆ, ವೃದ್ಧರಿಗೆ ಮತ್ತು ಮಕ್ಕಳಿಗೆ ವೈದ್ಯರು ಹೇಳಿದ್ದೂ ಅದೇ...
ಹತ್ತಾರು ವರ್ಷಗಳ ಹಿಂದಿನ ಹಳ್ಳಿಯ ಚಿತ್ರಣವನ್ನು ಊಹಿಸಿಕೊಳ್ಳಿ. ದೇಶೀ ತಳಿಯ ಹಸುಗಳು ಕಾಡು-ಗುಡ್ಡ-ಬಯಲು ತಿರುಗಿ ಹತ್ತಾರು ಬಗೆ ಸೊಪ್ಪು-ಸದೆ ತಿಂದು, ಬಾಯಾರಿದಾಗ ಕಾಡಿನ ನಡುವೆ ಹರಿಯುವ ಶುದ್ಧ ಜಲ ಕುಡಿದು ಬರುತ್ತಿದ್ದವು. ಮನೆಯಲ್ಲೂ ಅಷ್ಟೇ. ಹಸುಗಳು ಮುಕ್ಕೋಟಿ ದೇವರ ಪ್ರತಿರೂಪ ಎಂಬ ಭಾವನೆಯಿಂದ ಎಂಜಲು-ಮುಸುರೆ ನೀಡುತ್ತಿರಲಿಲ್ಲ. ಅಕ್ಕಿ ತೊಳೆದ ನೀರು, ಹಿಂಡಿ, ಹುಲ್ಲು: ಕಾಯಿಲೆ-ಕಸಾಲೆಗೆ ಮನೆಯಲ್ಲೇ ಅರೆದ ನಾರು-ಬೇರಿನ ಔಷಧ! ಅವು ನೀಡುತ್ತಿದ್ದ ತಾಜಾ ಹಾಲು ಒಂದು ರೀತಿಯ ಸುವಾಸನೆ ಇರುತ್ತಿತ್ತು. ಕಾಯಿಸಿ ಕುಡಿಯಲಿಕ್ಕೆ ಸಕ್ಕರೆಯೂ ಬೇಕಿರಲಿಲ್ಲ. ಹಲವಾರು ಔಷಧೀಯ ಸಸ್ಯಗಳನ್ನು ಅರಗಿಸಿಕೊಂಡ ಆ ಹಾಲು ಆರೋಗ್ಯಕರ, ರುಚಿಕರ, ಮಕ್ಕಳಂತೂ ಯಾವ ತಕರಾರು ಇಲ್ಲದೇ ಕುಡಿಯುತ್ತಿದ್ದರು... ಇಂದು 'ನಗರೀಕರಣ'ದ ಪ್ರಭಾವ ಹೆಚ್ಚಿದೆ. ಹಳ್ಳಿಯಲ್ಲಿ ಹಸು ಸಾಕುವುದು ದುಸ್ತರವಾಗುತ್ತಿದೆ. ಕಾಡುಗಳು ಮಾಯವಾಗಿ ತನ್ನ ಬುಡದಲ್ಲಿ ಗರಿಕೆಹುಲ್ಲೂ ಬೆಳೆಯಲು ಬಿಡದ ನೀಲಗಿರಿ, ಅಕೇಶಿಯಾ ಪ್ಲಾಂಟೇಶನ್ಗಳಿಂದಾಗಿ 'ಆಧುನಿಕ ಹೈನುಗಾರಿಕೆ' ಹಳ್ಳಿ-ಹಳ್ಳಿಗೂ ತನ್ನ ಕಬಂಧ ಬಾಹುವನ್ನು ವ್ಯಾಪಿಸಿದೆ. ಏನಕೇನ... ಹಾಲು ಜಾಸ್ತಿ ಹಿಂಡಬೇಕು ಎಂಬುದೊಂದೇ ಗುರಿಯಿಂದಾಗಿ ಹಸುಗಳು ಈಗ "ದೇವರ ಪ್ರತಿರೂಪ" ವಾಗಿ ಉಳಿದಿಲ್ಲ. ಬದಲಿಗೆ ಹಾಕಿದ ಹುಲ್ಲು-ಹಿಂಡಿಗೆ ಅನುಗುಣವಾಗಿ ಹಾಲನ್ನು ಉತ್ಪಾದಿಸುವ ಒಂದು ಜೀವಂತ ಯಂತ್ರ ಅಷ್ಟೇ!
ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಮನೆಬಾಗಿಲಿಗೆ ಬಂದು ಬೀಳುವ ಹಾಲು ಎಂಬ ಬಿಳಿದ್ರವ ಉತ್ಪತ್ತಿಯಾಗುತ್ತಿರುವುದಾದರೂ ಹೇಗೆ? ಹಸುವಿನ ನೈಸರ್ಗಿಕ ಲೈಂಗಿಕ ಆಸಕ್ತಿಯನ್ನು ಹತ್ತಿಕ್ಕಿ, ಕೃತಕ ರಾಸಾಯನಿಕಗಳಿಂದ ಬೆದೆ ಬರಿಸುವುದು. ಎಂದೋ ಸಂಗ್ರಹಿಸಿದ ವೀರ್ಯದಿಂದ ಗರ್ಭಧಾರಣೆಗೊಳಿಸುವಲ್ಲಿ ಶುರುವಾಗುತ್ತದೆ. ಮಾನವನ ಕರಾಳತನ! ಕೊಬ್ಬಿ ಬೆಳೆಯಲು ರಾಸಾಯನಿಕಗಳು, ಹಾಲು ಹೆಚ್ಚಾಗಲು ಯೂರಿಯಾ ಮಿಶ್ರಣಗೊಂಡ ಹುಲ್ಲು, ಬಿಸಿಲು ಕಾಣದೇ, ಕೊಟ್ಟಿಗೆಯಲ್ಲೇ ನಿಂತು ಓಡಾಟವಿಲ್ಲದೇ ಬೊಜ್ಜು ದೇಹ ಬೆಳೆಸಿಕೊಂಡ ರಾಸಾಯನಿಕಗಳ ಮೂಟೆಯಾಗುತ್ತದೆ. ಹಸುಗಳು ನೀಡುವ ಹಾಲಿನಲ್ಲಿರುವ ಪ್ರೊಟೀನು, ಕೊಬ್ಬು ಇವುಗಳ ಶೇಖಡವಾರು, ಅಳತೆಗೆ ಸಿಗಬಹುದು. ಆದರೆ ಅದರಲ್ಲಿ ಇರಬಹುದಾದ ಈಸ್ಟೋಜನ್, ಡಿಡಿಟಿ ಹಾಗೂ ಇತರೆ ರಾಸಾಯನಿಕಗಳು...? ಪರೀಕ್ಷಿಸುವವರಾರು? ಪ್ರಕೃತಿ ಸಹಜ ಹಸುಗಳು ನೀಡುವ ಹಾಲಿನ ರುಚಿ ಸುವಾಸನೆ ಔಷಧೀಯ ಗುಣ ಅಳೆಯುವ 'ಮೀಟರ್: ನಮ್ಮಲ್ಲಿದೆಯೇ? ನಾವು-ನೀವು ಅನಿವಾರ್ಯವಾಗಿ ಬಳಸುತ್ತಿರುವ ಹಾಲು ಅದೆಷ್ಟು ಅಮೃತವಾಗಿ ಉಳಿದಿದೆ? ಇದು ಚಿಂತಿಸಬೇಕಾದ ವಿಚಾರ ಅಲ್ಲವೇ?
- ನವಿಲೂರು ಪ್ರಕಾಶ್, ನಂಜನಗೂಡು
ಸಾಧಕರಿಗೆ ಸ್ಫೂರ್ತಿಯಾದ ಬಳ್ಳಾರಿಯ ಪೋರ
ಬಳ್ಳಾರಿಯ ಕುಡಿ ಕೆ. ನಿರ್ಮಲಪ್ಪ ಬರಿಗಾಲಲ್ಲಿ ಓಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಷಯವನ್ನು ಓದಿ, ಸಂತೋಷದೊಂದಿಗೆ ಅಚ್ಚರಿಯಾಗಿತ್ತು. ಈಗ ಇಂಥ ಸಾಧಕನ ಸಾಧನೆಯನ್ನು ಗುರ್ತಿಸಿ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನೆರವು ನೀಡಿದ ಸಾರ್ವಜನಿಕರಿಗೆ ಹಾಗೂ ಜಿಲ್ಲಾಧಿಕಾರಿಗೆ ತುಂಬು ಧನ್ಯವಾದಗಳು. ಕೆ. ನಿರ್ಮಲಪ್ಪ ತಮ್ಮ ಸಾಧನೆಯಿಂದ ಅನೇಕ ಎಲೆಮರೆಕಾಯಿ ಸಾಧಕರಿಗೆ ಸ್ಫೂರ್ತಿಯಾಗಿದ್ದಾರೆ.
- ರಿಹಾನ ಬಾನು, ಮದ್ದಡ್ಕ ಹೌಸ್, ಉಜಿರೆ, ಬೆಳ್ತಂಗಡಿ ತಾ.
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

