ವಾರಕ್ಕೆ ಒಂದೇ ಕಡತ ವಿಲೇ: ಬೇಕಾಗಿದೆ ಒಂದು ಯಜ್ಞ
ಸರ್ಕಾರದ ಕೆಲಸದಲ್ಲಿ ಗುಮಾಸ್ತರಿಂದ ಹಿಡಿದು ಕಾರ್ಯದರ್ಶಿ - ಮಂತ್ರಿಗಳ ಕರ್ತವ್ಯ ಕಾಲಕಾಲಕ್ಕೆ ತಮ್ಮ ಅವಗಾಹನೆಗೆ ಬರುವ ಕಡತಗಳ ವಿಲೇವಾರಿ ಮಾಡುವುದು. ಈ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೇ ಆದರೂ ವಿಳಂಬವಾದರೆ, ಬೇರೆ ಎಲ್ಲೋ ಒಂದು ಕಡೆ ಕೆಲಸವೇ ಸ್ಥಗಿತವಾಗುವ ಅಪಾಯವೂ ಇದ್ದಿದ್ದೇ.
ಆದ್ದರಿಂದಲೇ ಕಡತಗಳ ವಿಲೇವಾರಿಗೆ ಎಲ್ಲ ಸರ್ಕಾರಗಳೂ ಪ್ರಾಮುಖ್ಯವನ್ನು ನೀಡಿರುವುದು. ಹಲವಾರು ಬಾರಿ ರಾಜ್ಯ ಸರ್ಕಾರದಲ್ಲೇ ಕಡತಗಳ ವಿಲೇವಾರಿ ಆಂದೋಲನಗಳನ್ನು ನಡೆಸಲಾಗಿದೆ. ಇವುಗಳಲ್ಲಿ ಚರಿತ್ರಾರ್ಹವಾಗಿ ದಾಖಲೆಯಾಗಿರುವುದು ಗುಂಡೂರಾಯರ ಕಾಲದಲ್ಲಿ ನಡೆದ ವ್ಯವಸ್ಥಿತ ಕಡತ ಯಜ್ಞ.
ಆ ಸಮಯದಲ್ಲಿ ವಿಧಾನಸೌಧದಲ್ಲಿ ಸರ್ಕಾರಿ ನೌಕರರು - ಅಧಿಕಾರಿಗಳನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಕಾರ್ಯಾಲಯಗಳಲ್ಲಿ ಕಡತಗಳ ವಿಲೇವಾರಿ ಬಿಟ್ಟು ಬೇರೆ ಯಾವ ಕೆಲಸವೂ ನಡೆಯಲಿಲ್ಲ. ಆಗ ಯಾರಿಗೂ ರಜಾ ಕೊಡಲಿಲ್ಲ. ಆರಂಭದಲ್ಲಿ ಈ ಕಡತ ಯಜ್ಞವನ್ನು ಅನೇಕರು ಲೇವಡಿ ಮಾಡಿದರೂ, ಸಹಸ್ರ ಸಹಸ್ರ ಕಡತಗಳು ಆಗ ವಿಲೇವಾರಿಯಾಗಿದ್ದು ನಿಜ. ಆ ಪದ್ಧತಿಯನ್ನು ಅನಂತರ ಇತರ ಸರ್ಕಾರಗಳೂ ಅನುಕರಿಸಿದವು. ಈಗಲೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಡತಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬವನ್ನು ಗಮನಿಸಿ ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿಕೊಂಡಿದೆ. ಇದರ ವೈಶಿಷ್ಟ್ಯ ಎಂದರೆ, ಕಡತ ವಿಲೇವಾರಿ ಆಂದೋಲನ ಆರಂಭವಾಗುವುದು ಅತ್ಯುನ್ನತ ಮಟ್ಟದ ಅಧಿಕಾರಿಗಳಿಂದಲೇ. ಕಾರ್ಯದರ್ಶಿಗಳ ಕೆಲಸವನ್ನೇ ಮೊದಲು ಪರಿಶೀಲಿಸಲು ನಿರ್ಧರಿಸಲಾಗಿದೆ. ಯಾರ ಬಳಿಯಲ್ಲೂ ಅವರ ಅವಗಾಹನೆಗೆ ಬಂದ ಕಡತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಡತಗಳು ಉಳಿದಿರಬಾರದು. ಹಾಗೇನಾದರೂ ಉಳಿಸಿಕೊಂಡರೆ ಸೂಕ್ತ ಕ್ರಮಕ್ಕೆ ಸಿದ್ಧವಾಗಬೇಕು.
ಸಚಿವ ಸಂಪುಟದ ನಿರ್ಧಾರದ ಪ್ರಕಟಣೆಗೆ ಕಾಯಿದೆ ಮಂತ್ರಿ ಜಯಚಂದ್ರ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟವಾದ ಒಂದು ಆಶ್ಚರ್ಯದ ವಿಷಯವೆಂದರೆ, ಅನೇಕ ಸಂದರ್ಭಗಳಲ್ಲಿ ಕಾರ್ಯದರ್ಶಿಗಳು ವಾರಕ್ಕೆ ಒಂದು ಕಡತವನ್ನು ವಿಲೇವಾರಿ ಮಾಡುವುದು ಕಷ್ಟ ಎನ್ನುವುದು. ನಿಜ. ಕಾರ್ಯದರ್ಶಿಗಳಿಗೆ ಕಡತದ ವಿಲೇವಾರಿಯೇ ಅತಿ ಮುಖ್ಯವಾದ ಕೆಲಸವಲ್ಲ. ಪ್ರತಿನಿತ್ಯ ಹಲವಾರು ಸಭೆಗಳಿರುತ್ತವೆ. ಕೆಳಮಟ್ಟದ ಅಧಿಕಾರಿಗಳಿಗೆ ಸೂಚನೆಗಳನ್ನು ಕೊಡಬೇಕಾಗುತ್ತದೆ. ಸರ್ಕಾರದ ನಿರ್ಧಾರಗಳನ್ನು ಜಾರಿಗೆ ತರಲು ಕಾರ್ಯಕ್ರಮವನ್ನು ರೂಪಿಸಬೇಕು. ಕಾರ್ಯದರ್ಶಿಗಳದ್ದು ಬಿಡುವಿಲ್ಲದ ಕೆಲಸ. ಹಲವಾರು ಇಲಾಖೆಗಳ ಜವಾಬ್ದಾರಿ. ಅಂದರೆ ಹಲವು ಮಂತ್ರಿಗಳಿಗೆ ಉತ್ತರದಾಯಿತ್ವ.
ಆದರೂ ಕಡತಗಳ ವಿಲೇವಾರಿ ಆಗಲೇಬೇಕು. ಅದಕ್ಕೆ ಕಾಲವನ್ನು ಒದಗಿಸಿಕೊಳ್ಳಲೇಬೇಕು. ಅನೇಕ ಸಂದರ್ಭಗಳಲ್ಲಿ ಮಂತ್ರಿಗಳು ಕಡತಗಳನ್ನು ತರಿಸಿಕೊಂಡು ಅವರ ಕಾರ್ಯಾಲಯದಲ್ಲೇ ಅದನ್ನು ಉಳಸಿಕೊಂಡಿರುತ್ತಾರೆ. ಮಂತ್ರಿಗಳು ವಿಧಾನಸೌಧಕ್ಕೆ ಬರುವುದೇ ಅಪರೂಪವಾಗಿರುವಾಗ, ಕಡತಗಳೇ ವಿಧಾನಸೌಧದಿಂದ ಮಂತ್ರಿಗಳ ಮನೆಗೆ, ಮನೆಯಿಂದ ವಿಧಾನಸೌಧಕ್ಕೆ ಓಡಾಡಬೇಕಾಗುತ್ತದೆ. ಇದೆಲ್ಲಕ್ಕೂ ಮೂಲ ಕಾರಣ ಸರ್ಕಾರದ ಆಡಳಿತದಲ್ಲಿ ಶಿಸ್ತಿನ ಅಭಾವವೇ. ಸರ್ಕಾರಿ ನೌಕರರಿಗೆ ಕೆಲಸ ಮಾಡುವುದು ತಮ್ಮ ಕರ್ತವ್ಯ ಎನ್ನುವ ಭಾವನೆ ಮೂಡಿಸುವಂತಹ ವಾತಾವರಣವನ್ನು ನಿರ್ಮಿಸಬೇಕು. ಶೇಕಡಾ ಐವತ್ತರಷ್ಟು ಕಡತಗಳನ್ನು ವಿಲೇವಾರಿ ಮಾಡುವುದು ನಿಜವಾಗಲೂ ಕಷ್ಟವಾಗದು. ಆದರೆ ಅದಕ್ಕೆ ಕಡತಗಳ ವಿಲೇವಾರಿಯ ನಿಯಮಗಳೂ ಸರಳವಾಗಬೇಕು. ಒಂದೇ ಕಡತವನ್ನು ಮೂರು - ನಾಲ್ಕು ಹಂತಗಳಲ್ಲಿ ಪರಿಶೀಲಿಸುವುದು ಈಗಿನ ಪದ್ಧತಿ. ಇಲ್ಲಿ ಪ್ರಾಯಶಃ ಕ್ಷಿಪ್ರ ವಿಲೇವಾರಿಗೆ ಸಹಕಾರಿಯಾಗುವ ರೀತಿಯಲ್ಲಿ ಬದಲಾವಣೆ ಆಗಬೇಕೇನೋ. ಸರ್ಕಾರಿ ಕೆಲಸದಲ್ಲಿ ಈಗ ಆಧುನೀಕರಣ, ಕಂಪ್ಯೂಟರೀಕರಣ ಒಂದು ಮಂತ್ರವೇ ಆಗಿಬಿಟ್ಟಿದೆ. ಎಲ್ಲ ಕಡೆ ಆನ್ಲೈನ್ ವ್ಯವಹಾರವೇ ಪ್ರಸ್ತಾಪವಾಗುತ್ತಿರುವ ವಿಷಯ. ಹೆಚ್ಚು ಕಡಿಮೆ ಎಲ್ಲ ಕಾರ್ಯಾಲಯಗಳಲ್ಲೂ ಈಗ ಕಂಪ್ಯೂಟರ್ಗಳು ಪ್ರತಿಷ್ಠಾಪನೆಯಾಗಿವೆ. ಆದರೆ ಅನೇಕ ಕಂಪ್ಯೂಟರ್ಗಳು ಬೇಕಾದಾಗ "ಓಪನ್ ಆಗುವುದಿಲ್ಲ". ಇದು ಹೊಸ ದೂರು. ಸಿದ್ದರಾಮಯ್ಯ ಸರ್ಕಾರ ಕಡತಗಳ ವಿಲೇವಾರಿ ಆಂದೋಲನವನ್ನು ಮೇಲಿನಿಂದಲೇ ಆರಂಭಿಸಿರುವುದು ನಿಜಕ್ಕೂ ಒಂದು ಸ್ವಾಗತಾರ್ಹವಾದ ಪ್ರಯತ್ನ. ಅದನ್ನು ಯಶಸ್ವಿಗೊಳಿಸುವುದು ಉನ್ನತ ಮಟ್ಟದ ಅಧಿಕಾರಿಗಳಿಗೆ - ಮಂತ್ರಿಗಳಿಗೆ ಸೇರಿದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

