ಇದೇನು ಸಭ್ಯತೆ? ಇದೇನು ಸಂಸ್ಕೃತಿ?
ಟಿ.ವಿ. ಚಾನೆಲ್ಲುಗಳಲ್ಲಿ ಇತ್ತೀಚಿನ ಅನೇಕ ಮನೋರಂಜನೆ ಆಧಾರಿತ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು ಅದರಲ್ಲಿ ನೃತ್ಯ ಸಂಬಂಧಿ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿವೆ. ಈ ನೃತ್ಯ ಪ್ರಧಾನ ಕಾರ್ಯಕ್ರಮಗಳಲ್ಲಿ ಮಕ್ಕಳ ಪ್ರತಿಭೆಗೆ ಹೇರಳವಾದ ಅವಕಾಶ ದೊರಕುತ್ತಿದ್ದು ಇಲ್ಲಿ ಪ್ರಸ್ತುತಪಡಿಸುವ ನೃತ್ಯಗಳಲ್ಲಿ ವೈವಿಧ್ಯತೆಯೂ ಹೇರಳವಾಗಿರುತ್ತದೆ. ಈ ನೃತ್ಯ ಕಾರ್ಯಕ್ರಮಗಳು ಸೀಜನ್ ಕಾರ್ಯಕ್ರಮಗಳಾಗಿದ್ದು ಪ್ರತಿಯೊಂದು ಎಪಿಸೋಡಿನಲ್ಲಿ ಒಂದೊಂದು ಥೀಮನ್ನು ನೃತ್ಯಪಟುಗಳಿಗೆ ಒದಗಿಸಿರುತ್ತಾರೆ. ಇವುಗಳಲ್ಲಿ ರೋಮ್ಯಾಂಟಿಕ್ ಸಾಂಗ್ಸ್ ಮತ್ತು ಐಟಂಸಾಂಗ್ಸ್ ಎಂಬ ವಿಭಾಗಗಳನ್ನು ಅಳವಡಿಸುತ್ತಿದ್ದಾರೆ. ದುಃಖದ ಸಂಗತಿಯೆಂದರೆ ಜನಪ್ರಿಯತೆ ಮತ್ತು ಸ್ಪರ್ಧೆಯ ಹೆಸರಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುವವರು ವಿಶೇಷವಾಗಿ ಬಾಲಿಕೆಯರು, ಮಹಿಳೆಯರು ತೀರ ಅಶ್ಲೀಲವೆನ್ನುವಂತ ಕಾಸ್ಟ್ಯೂಮ್ಗಳಲ್ಲಿ ಮಿಂಚುತ್ತಿರುವರು. ಸಭ್ಯತೆಯ ಗಡಿ ದಾಟುತ್ತಿರುವ ಇಂತಹವರ ವಸ್ತ್ರವಿನ್ಯಾಸಗಳಲ್ಲಿ ಕೆಲವೊಮ್ಮೆ ಒಳಉಡುಪು ಕಾಣುವಷ್ಟರ ಮಟ್ಟಿಗೆ ಅಸಹ್ಯತೆ ಮೂಡಿಸುತ್ತದೆ. ಇನ್ನೂ ದುರಂತವೆಂದರೆ ಈ ರೀತಿಯ ರೋಮ್ಯಾಂಟಿಕ್ ಹಾಡುಗಳ ಸಂದರ್ಭದಲ್ಲಿ ಈ ನೃತ್ಯ ಜೋಡಿಗಳು ತೀರ ಆಕ್ಷೇಪಾರ್ಹವಾದ ಭಂಗಿಗಳಲ್ಲಿ ನೃತ್ಯ ಪ್ರಸ್ತುತ ಪಡಿಸುತ್ತಿದ್ದಾರೆ. ಈ ರೀತಿಯ ಅಭಾಸಗಳು ಪ್ರಾದೇಶಿಕ ಭಾಷೆಗಳ ಚಾನೆಲ್ಲುಗಳಿಗಿಂತ ಹಿಂದಿ ಚಾನೆಲ್ಲುಗಳಲ್ಲಿ ಹೆಚ್ಚು ಖುಲ್ಲಂಖುಲ್ಲವಾಗಿ ನಡೆಯುತ್ತಿದೆ. ಒಂದೆಡೆ ದೇಶದಲ್ಲೆಲ್ಲಾ ಅವ್ಯಾಹತವಾಗಿ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಮಹಿಳೆ ತನ್ನನ್ನೂ ತಾನು ಭೋಗದ ವಸ್ತುವಿನಂತೆ ಅಂಗಾಂಗ ಪ್ರದರ್ಶನಕ್ಕೆ ತೆರೆದುಕೊಂಡಿರುವುದೂ ನಿಜಕ್ಕೂ ದುರಂತದ ವಿಚಾರ. ಭಾರತೀಯ ಪರಂಪರೆ ಮತ್ತು ಮಹಿಳಾ ಸಮಾಜಕ್ಕೆ ಸವಾಲಾಗಿರುವ ಈ ಬೆಳವಣಿಗೆಯನ್ನು ಇಡೀ ಸಮಾಜ ಮೂಕಪ್ರೇಕ್ಷಕನಾಗಿ ಮುಗಂ ಆಗಿ ನೋಡುತ್ತಿರುವುದು ಮಹಾಭಾರತದ ದ್ರೌಪದಿ ವಸ್ತ್ರಾಪಹರಣಕ್ಕೆ ಹೋಲಿಸಬಹುದಾಗಿದೆ. ಧಾರಾವಾಹಿಗಳಲ್ಲಿ ಬರುವ ಅನೈತಿಕ ಸಂಬಂಧ, ಮನೆಗಳಲ್ಲಿ ಮದ್ಯಪಾನ ಮತ್ತು ಬಿಗ್ಬಾಸ್ನಂತಹ ಕಾರ್ಯಕ್ರಮಗಳ ಮುಖಾಂತರ ಗಂಡು ಹೆಣ್ಣುಗಳ ಮುಕ್ತಮಿಲನ ನೋಡುತ್ತಿದ್ದಾರೆ. ನಮ್ಮದು ಇದೇನು ಸಭ್ಯತೆ? ಇದೇನ ಸಂಸ್ಕೃತಿಯೆನಿಸುತ್ತಿದೆ.
-ಶ್ರವಣಕುಮಾರ್ (ಬೆಳ್ಳಿಮನೆ), ಗಂಗಾವತಿ
ವೃತ್ತಿಶಿಕ್ಷಣದ ದಾರಿ
2006ರಲ್ಲೇ ಹೊರಬಂದ ಕರ್ಣಾಟಕ ವೃತ್ತಿಪರ ಶಿಕ್ಷಣ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆ ರಾಜಕೀಯ ದುರುದ್ದೇಶದಿಂದ ಇಂದಿನವರೆಗೂ ಜಾರಿಗೆ ಬಾರದಿದ್ದುದನ್ನು ಈಗಿನ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ವ್ಯಾಪಾರಿ ದುರುದ್ದೇಶದಿಂದ ನಡೆಸುತ್ತಿರುವ ಅನೇಕ ವೃತ್ತಿಪರ ಶಿಕ್ಷಣ ಕಾಲೇಜುಗಳಲ್ಲಿ ಸಮರ್ಪಕ ಪ್ರಯೋಗ ಶಾಲೆಗಳ, ಶಿಕ್ಷಕರ ಕೊರತೆ ಇದ್ದು ಉತ್ತಮ ಶಿಕ್ಷಣ ನೀಡಲು ಅರ್ಹತೆ ಇಲ್ಲದಿರುವುದು ಎಲ್ಲರಿಗೂ ತಿಳಿದ ವಿಷಯ. ವೇದಿಕೆಯ ಮೇಲೆ ಉತ್ತಮ ಶಿಕ್ಷಣದ ಅವಶ್ಯಕತೆಯ ಬಗ್ಗೆ ರಾಜಕಾರಣಿಗಳು ಭಾಷಣ ಮಾಡುತ್ತಲೇ ಬಂದಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನೀತಿಯಂತೆ ಕಳಪೆ ಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜುಗಳೂ ಏಕರೀತಿಯ ಹೆಚ್ಚಿನ ಶುಲ್ಕ ವಸೂಲು ಮಾಡುತ್ತಿವೆ. ಇಂತಹ ಕಾಲೇಜುಗಳಲ್ಲಿ ಹಿಂದುಳಿದ ಪ್ರದೇಶ, ಹಳ್ಳಿಗಳಿಂದ ಬಂದ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿರುತ್ತಾರೆ. ಹೊಸ ಕಾಯ್ದೆಯಡಿಯಲ್ಲಿ ಅಂತಹ ಸಂಸ್ಥೆಗಳಿಗೆ ಶಿಕ್ಷಣ ಶುಲ್ಕ ಕಡಿಮೆಯಾದಲ್ಲಿ ಬಡವಿದ್ಯಾರ್ಥಿಗಳಿಗೇ ಅನುಕೂಲ. ಏಕೆಂದರೆ ಒಳ್ಳೆಯ ಶಿಕ್ಷಣ ಕೊಡದಿದ್ದರೂ ಹೆಚ್ಚಿನ ಶುಲ್ಕ ಪಾವತಿಸುತ್ತಾರೆ. ಈ ನೀತಿಯಿಂದ ಕೆಳಮಟ್ಟದ ಕಾಲೇಜುಗಳು ಮೇಲ್ದರ್ಜೆಗೆ ಪ್ರಯತ್ನ ಪಡಬೇಕಾಗುತ್ತದೆ. ಇಂದಿನ ವೃತ್ತಿ ಶಿಕ್ಷಣ ವ್ಯವಸ್ಥೆಯಲ್ಲಿ ಹಿತಾಸಕ್ತಿ ರಾಜಕಾರಣಿಗಳ ಒತ್ತಡ ಹೆಚ್ಚಾಗಿದ್ದು ಅದನ್ನು ಮಾನ್ಯ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿವಾರಿಸಲಾಗುವುದು ಎಂದು ತಿಳಿಸಿರುವುದರಲ್ಲಿ ಅವರ ನಿರ್ಧಾರ ಕಾರ್ಯಗತ ಮಾಡಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ಸರ್ಕಾರ ಹೆಚ್ಚು ಕಾಲೇಜುಗಳನ್ನು ಸ್ವತಃ ತೆರೆದರೆ ಒತ್ತಡ ಕಡಿಮೆಯಾಗುತ್ತದೆ. ಹಿಂದೆ ಭರವಸೆ ನೀಡಿರುವಂತೆ ಚಾಮರಾಜನಗರ, ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜು, ಮೈಸೂರಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಕಡೆ ಹೆಚ್ಚಿನ ಗಮನ ಹರಿಸಿ, ಉತ್ತಮ ದರ್ಜೆಯಲ್ಲಿ ಉತ್ತೀರ್ಣಗೊಂಡು ಉತ್ತಮ ವೃತ್ತಿಪರ ಶಿಕ್ಷಣ ಕಾಲೇಜಿನಲ್ಲಿ ಸೇರ್ಪಡೆಯಾಗಲು ಪ್ರಯತ್ನಿಸಿ ರಾಜಕೀಯ ಹಿತಾಸಕ್ತಿಗಳ ಆಮಿಷಕ್ಕೆ ಒಳಗಾಗದಿರುವುದು ಒಳಿತು.
-ಡಾ. ಬಿ.ಜೆ. ರಂಗನಾಥ್
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

