ಆಮ್ ಆದ್ಮಿ ಸರ್ಕಾರ ರಚನೆ ನಿರ್ಧಾರದ ಸುತ್ತಮುತ್ತ
ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಬಹುಮತ ಗಳಿಸಲಿಕ್ಕೆ ಸಾಧ್ಯವಾಗದೇ ಹೋದರೂ, ಆಯಾಚಿತವಾಗಿ ಪ್ರಕಟವಾದ ಕಾಂಗ್ರೆಸ್ ಬೆಂಬಲವನ್ನು ನಂಬಿ ಸರ್ಕಾರ ರಚಿಸಲು ಮುಂದಾಗಿರುವ ಆಮ್ ಆದ್ಮಿ ಪಕ್ಷದ ನಾಯಕರ ನಿರ್ಧಾರವನ್ನು ಹಲವರು ಮೆಚ್ಚಿದರೆ, ಅನೇಕರು ಟೀಕಿಸಿದ್ದಾರೆ. ಖಂಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ, ಅರವಿಂದ ಕೇಜ್ರಿವಾಲ ಅವರು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮುನ್ನವೇ ಕಾಂಗ್ರೆಸ್ ನಾಯಕಿ ಶೀಲಾದೀಕ್ಷಿತ್ ತಮ್ಮ ಪಕ್ಷದ ಬೆಂಬಲ ಬೇಷರತ್ ಅಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ನಾಯಕರು, ಆಮ್ ಆದ್ಮಿ ಪಾರ್ಟಿ ಜನಕ್ಕೆ ದ್ರೋಹವೆಸಗಿದೆ ಎಂದು ಕಟುವಾದ ಪದಗಳನ್ನೇ ತನ್ನ ಟೀಕೆಯಲ್ಲಿ ಬಳಸಿದೆ. ಸದ್ಯಕ್ಕೆ ಆಮ್ ಆದ್ಮಿ ಪಕ್ಷದ ನಂಬರ್ ಟೂ ನಾಯಕ ಎಂದೇ ಪ್ರತಿಬಿಂಬಿತವಾಗಿರುವ ಸುಪ್ರೀಮ್ ಕೋರ್ಟ್ ವಕೀಲ ಪ್ರಶಾಂತ ಭೂಷಣ್ ಪಕ್ಷದ ಸರ್ಕಾರದ ಆಯಸ್ಸು ಆರು ತಿಂಗಳು ಎಂದು ಅಂದಾಜು ಮಾಡಿದರೆ, ಕಾಂಗ್ರೆಸ್ ನಾಯಕರ ನಿರ್ಧಾರವನ್ನು ಪ್ರತಿಭಟಿಸಿ ಆ ಪಕ್ಷದ ಕಾರ್ಯಕರ್ತರೇ ದೆಹಲಿಯಲ್ಲಿ ಪ್ರದರ್ಶನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಇನ್ನೊಬ್ಬ ನಾಯಕ ಯೋಗೇಂದ್ರ ಯಾದವ್ ಅವರು ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಸಂಗಾತಿ ಪಕ್ಷವೇನೂ ಅಲ್ಲ. ಒಂದೇ ದಿನದಲ್ಲಿ ಸರ್ಕಾರ ಉರುಳಿದರೂ ಉರುಳಬಹುದು ಎಂದು ಹೇಳಿದ್ದಾರೆ. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ಸನ್ನು ಕಟುವಾಗಿ ಟೀಕಿಸಿತ್ತು. ಭ್ರಷ್ಟಾಚಾರದ ಪ್ರಕರಣಗಳನ್ನು ತತ್ಕ್ಷಣದಲ್ಲೇ ತನಿಖೆಗೆ ಒಳಪಡಿಸಲಾಗುವುದು ಎಂದೂ ಹೇಳಿತ್ತು. ಆದರೂ ಕಾಂಗ್ರೆಸ್ ಕೇಜ್ರಿವಾಲ ಮುಖ್ಯಮಂತ್ರಿಯಾಗಬಹುದಾದ ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧ ಎಂದು ಪ್ರಕಟಿಸಿದ್ದೇಕೆ ಎನ್ನುವುದು ನಿಗೂಢವಾದ ವಿಚಾರವೇ. ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲು ಸಿದ್ಧವೆಂದು ಪ್ರಕಟಿಸಿದ್ದಕ್ಕಿಂತ ಹೆಚ್ಚಾಗಿ ಪಕ್ಷ ಆ ನಿರ್ಧಾರಕ್ಕೆ ಬಂದ ಮಾರ್ಗ ಮುಖ್ಯ ಎನ್ನುವುದನ್ನು ಗಮನಿಸಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಇಂತಹ ಪ್ರಮುಖವಾದ ನಿರ್ಧಾರವನ್ನು ಇಬ್ಬರು- ಮೂವರು ಅಥವಾ ಕೆಲವೇ ನಾಯಕರು ಕೋಣೆಯಲ್ಲಿ ಕೂತು ತೆಗೆದುಕೊಳ್ಳುವ ಸಂಸ್ಕೃತಿಗೆ ಪ್ರತಿಯಾಗಿ ಆಮ್ ಆದ್ಮಿ ಪಾರ್ಟಿ ನಿರ್ಧಾರವನ್ನು ಜನಮತ ಗಣನೆಯ ಮೂಲಕ ಜನರಿಗೇ ಬಿಟ್ಟಿದ್ದು, ಪಕ್ಷವೇ ವಿಶಿಷ್ಟವಾದ ರೀತಿಯಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ವ್ಯವಸ್ಥೆ ಮಾಡಿದ್ದು, ರಾಜಕೀಯ ಜೀವನದಲ್ಲಿ ಜನರನ್ನೇ ಕೇಂದ್ರವನ್ನಾಗಿ ಮಾಡುವ ಪ್ರಯತ್ನ. ಅಭಿನಂದನೆಗೆ ಅರ್ಹ. ಚುನಾವಣೆಯ ಅನಂತರ ದೆಹಲಿಯಲ್ಲಿ, ದೇಶದ ಇತರ ಕಡೆಗಳಲ್ಲಿ ಅನೇಕ ಬೌದ್ಧಿಕ ನಾಯಕರು, ಸರ್ಕಾರ ರಚಿಸುವ ಅವಕಾಶವನ್ನು ಬಿಡಬಾರದು ಎಂದು ಸಲಹೆ ನೀಡಿದ್ದು ನಿಜ. ಆಗಲೇ ಪಕ್ಷ ಜನಮತ ಪಡೆಯಲು ಮೊಹಲ್ಲಾಗಳಿಗೆ ತೆರಳಿದ್ದು. ಈ ಪದ್ಧತಿಯನ್ನು ಜನಪ್ರತಿನಿಧಿಗಳ ಮೂಲಕ ನಿರ್ಧಾರಗಳನ್ನು ಕೈಗೊಳ್ಳುವ ಜನತಂತ್ರದ ಮಾದರಿಯನ್ನೇ ನಂಬಿರುವವರು, ಜನತಂತ್ರ ಎಂದರೆ ಗುಂಪುಗಳ ಜಾತ್ರೆಯ ಅಭಿಪ್ರಾಯದಂತೆ ನಡೆಯುವ ವ್ಯವಸ್ಥೆ ಅಲ್ಲ ಎಂದು ಟೀಕಿಸಿ, ಲೇವಡಿ ಮಾಡಲೂ ಬಹುದು. ಒಂದು ಪಕ್ಷ ತಾನಾಗಿಯೇ ಜನಾಭಿಪ್ರಾಯ ಸಂಗ್ರಹಕ್ಕೆ ಹೊರಟಾಗ, ಅದರ ನಾಯಕರು ತಮ್ಮ ಅಭಿಪ್ರಾಯವೇ ಜನಾಭಿಪ್ರಾಯ ಸಂಗ್ರಹದ ಸಮಯದಲ್ಲೂ ಪ್ರಕಟವಾಯಿತು ಎಂದು ಹೇಳುವುದಕ್ಕೂ ಅವಕಾಶವಿದೆ.
ಆದರೆ ಒಂದು ರಾಜಕೀಯ ಪಕ್ಷ ಸರ್ಕಾರದ ರಚನೆಯಂತಹ ಪ್ರಮುಖ ವಿಚಾರದಲ್ಲಿ ತನ್ನಲ್ಲೇ ಗೊಂದಲವಿದ್ದಾಗ, ನೇರವಾಗಿ ಜನಸಮುದಾಯಗಳ ಬಳಿಗೇ ಹೋಗುವ ಮಾರ್ಗವೂ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದು ಸಾಮಾನ್ಯವಾದ ವಿಚಾರವಲ್ಲ. ಅದಕ್ಕೆ ಭವಿಷ್ಯದ ರಾಜಕೀಯ ಸ್ವರೂಪವನ್ನೇ ಬದಲಾಯಿಸುವ ಶಕ್ತಿ ಮೂಡಿ ಬಂದರೂ ಬರಬಹುದು. ಇತರ ಅಲ್ಪಮತೀಯ ಪಕ್ಷಗಳಿಗೆ ಅಥವಾ ಕೂಟಗಳಿಗೆ ಸರ್ಕಾರ ರಚಿಸಲು ಬೆಂಬಲ ಕೊಡುವುದು ಕಾಂಗ್ರೆಸ್ಸಿಗೇನೂ ಹೊಸದಲ್ಲ. 1950 ರ ದಶಕದಲ್ಲೇ ತೀರ ಅಲ್ಪಮತೀಯ ಪಕ್ಷವಾಗಿದ್ದ ಪಟ್ಟಂಥಾನುಪಿಳ್ಳೆ ಸರ್ಕಾರಕ್ಕೆ ಕೇರಳದಲ್ಲಿ ಕಾಂಗ್ರೆಸ್ ಬೆಂಬಲ ನೀಡಿತ್ತು. ಆ ಸರ್ಕಾರವನ್ನು ಕೆಲವೇ ತಿಂಗಳಲ್ಲಿ ಪತನಗೊಳಿಸಿದ್ದೂ ಕಾಂಗ್ರೆಸ್ಸೇ. ಕೇಂದ್ರದಲ್ಲೂ ಕಾಂಗ್ರೆಸ್, ತನ್ನದೇ ಆದ ಉದ್ದೇಶದಿಂದ ಚರಣಸಿಂಗ್, ಚಂದ್ರಶೇಖರ್, ದೇವೇಗೌಡರು, ಇಂದರ್ ಗುಜ್ರಾಲ್ ಸರ್ಕಾರಗಳಿಗೆ (ಎಲ್ಲವೂ ಅಲ್ಪ ಮತೀಯ ಕೂಟಗಳೇ) ಬೆಂಬಲ ನೀಡಿ, ಅನಂತರ ಉರುಳಿಸಿದ ಉದಾಹರಣೆಗಳಿರುವಾಗ, ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಬೆಂಬಲವನ್ನು ಶಾಶ್ವತವೆಂದೇನೂ ಭಾವಿಸಿಲ್ಲ. ಆದರೂ ಸರ್ಕಾರವನ್ನು ರಚಿಸಲು ಸಿದ್ಧವೆನ್ನುವ ನಿರ್ಧಾರದ ಪ್ರಕಟಣೆಯ ಹಿಂದೆ, ರಾಜಕೀಯ ವ್ಯವಸ್ಥೆಯಲ್ಲಿ ಈಗ ಪಾಲು ಬೇಡುತ್ತಿರುವ ಹೊಸ ಜನವರ್ಗಗಳ (ಅದೇ ಮೂರನೆಯ ಶಕ್ತಿ) ನಿಜವಾದ ಅಸ್ತಿತ್ವವನ್ನು ಪ್ರದರ್ಶಿಸುವ ಪ್ರಯತ್ನ ಅದು. ಆ ದೃಷ್ಟಿಯಿಂದ ನಿರ್ಧಾರ ಸ್ವಾಗತಾರ್ಹ. ಆದರೆ ಅದರ ಭವಿಷ್ಯ ಅನಿಶ್ಚಿತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

