ಸಂಪಾದಕೀಯ

ಹೊಸ ವರ್ಷಾಚರಣೆ ಹಾದಿ ತಪ್ಪುತ್ತಿದೆ

Published On :

ಡಿಸೆಂಬರ್ 31-ಎಲ್ಲರೂ ಸಂಭ್ರಮಿಸಲು ಹೇಳಿ ಮಾಡಿದಂತಹ ದಿನ. ಹಳ್ಳಿ ಪಟ್ಟಣಗಳೆನ್ನದೆ ಎಲ್ಲರೂ ಹೊಸ ವರ್ಷದ ಆಗಮನವನ್ನು ವಿಶ್ವದಾದ್ಯಂತ ಸಡಗರದಿಂದ ಆಚರಿಸುತ್ತಾರೆ. ಟಿ.ವಿ. ಮಾಧ್ಯಮಗಳು ಬಂದ ನಂತರ ಈ ಉತ್ಸಾಹ ಇಮ್ಮಡಿಗೊಂಡಿದೆ. ಈ ಸಂಭ್ರಮದ ನಡುವೆಯೂ ಬೇಸರದ ಸಂಗತಿಯೆಂದರೆ ಈ ಹೊಸ ವರ್ಷಾಚರಣೆಯ ಹೆಸರಿನಲ್ಲಿ ನಮ್ಮ ಯುವಕರು ಕುಡಿತ, ಮೋಜು, ಮಸ್ತಿಯ ಹೆಸರಿನಲ್ಲಿ ಹಾದಿ ತಪ್ಪುತ್ತಿರುವುದು. ಗಂಡು ಹೆಣ್ಣು ಭೇದವೆನ್ನದೆ ರಾತ್ರಿಯೆಲ್ಲಾ ಕುಡಿದ ಅಮಲಿನಲ್ಲಿ ಬಾರು, ರೆಸ್ಟೋರೆಂಟ್ಗಳಲ್ಲಿ ಕುಣಿದು ಕುಪ್ಪಳಿಸುತ್ತಿರುವುದು. ಇದು ನಿಸ್ಸಂಕೋಚವಾಗಿ ಅನೈತಿಕತೆಗೆ ದಾರಿ ಮಾಡಿ ಕೊಡುತ್ತಿದೆ. ವರ್ಷವಿಡೀ ನಮ್ಮ ಮಕ್ಕಳಿಗೆ ಉತ್ತಮ ಜೀವನದ ನೈತಿಕ ಪಾಠ ಹೇಳುವ ನಾವು ಅಂದು ಹೊಳೆಯಲ್ಲಿ ಹೋಮ ಮಾಡಿದಂತೆ ಕುಡಿತದ ಚಟಕ್ಕೆ ಅವರಿಗೆ ಅನುವು ಮಾಡಿಕೊಡುವುದು ತರವೆ? ಪಾಲಕರೂ ಇಂತಹ ಚಟುವಟಿಕೆಯಲ್ಲಿ ತೊಡಗುವುದು ಸರಿಯೇ? ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕರವೆಂದ ಮೇಲೆ ಇಂತಹವುಗಳನ್ನು ಟಿವಿಗಳಲ್ಲಿ ವೈಭವೀಕರಿಸುವುದು ಯೋಗ್ಯವೆ? ಇದರ ಬಗ್ಗೆ ನಿರ್ಬಂಧ ಏಕೆ ಹೇರಬಾರದು? ಅದರಂತೆ ಮೌಢ್ಯ ಮೂಢನಂಬಿಕೆಗಳ ಬಗ್ಗೆ ಬೊಬ್ಬೆಯಿಡುವ ತಥಾಕಥಿತ ಪ್ರಗತಿಪರರು, ಮಠ ಕಿಲಾಡಿಗಳು ಇದರ ಬಗ್ಗೆ ಧ್ವನಿಯೆತ್ತಬಾರದೇಕೆ? ಈ ನಿಟ್ಟಿನಲ್ಲಿ ನೋಡಿದಾಗ ಭಾರತೀಯ ಪರಂಪರೆಯ ಹೊಸ ವರ್ಷದ ಯುಗಾದಿ ಹಬ್ಬ ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ ಎಷ್ಟೋ ವಾಸಿ. ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿರುವಾಗ ಇಂತಹ ಆಚರಣೆಯ ಬಗ್ಗೆ ಹಿರಿಯರು, ಕಿರಿಯರೆಲ್ಲಾ ಈ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲಿ. ಹಾಗೆ ನಮ್ಮ ಮಕ್ಕಳು ಅಡ್ಡ ಹಾದಿ ಹಿಡಿಯದಂತೆ ಅಂದು ಎಚ್ಚರಿಕೆ ವಹಿಸಲಿ.
-ಗಂಗಾವತಿ  ಶ್ರವಣಕುಮಾರ್ ರಾಯ್ಕರ್

ಅರಣ್ಯ ಇಲಾಖೆಯ ದಡ್ಡತನ
ಅರಣ್ಯ ಇಲಾಖೆಯಲ್ಲಿ ರೈತರು ತುಂಬಾ ವರ್ಷಗಳಿಂದ ಅಡಿಕೆ, ತೆಂಗು, ಕಾಫಿ, ಟೀ, ವಗೈರೆ ಬೆಳೆಗಳನ್ನು ಬೆಳೆದಿರುವುದು ಸಹಜವಾಗಿರುತ್ತದೆ. ರೈತನೇನು ಮೋಸಗಾರನಾಗಲಿ, ಜಮೀನಿನ ವಂಚಕನಾಗಲಿ ಆಗಿರುವುದಿಲ್ಲ. ಅವರು ಅರಣ್ಯ ಭೂಮಿಯಲ್ಲಿ ಅನೇಕ ವರ್ಷಗಳು ತಮ್ಮ ಶ್ರಮದಿಂದ ಬೆಳೆದಿರುವ ಧೃವ ಬೆಳೆಗಳಾದ ಅಡಿಕೆ, ತೆಂಗು, ಕಾಫಿ, ಟೀ, ಹಲಸು ಇತ್ಯಾದಿಗಳನ್ನು ಅರಣ್ಯ ಇಲಾಖೆಯವರು ನಾಶಪಡಿಸುತ್ತಿರುವುದು ಅರಣ್ಯ ಇಲಾಖೆಯವರ ಮತ್ತು ಸರ್ಕಾರದ ದೇಶದ ಸಂಪತ್ತು ನಷ್ಟಕ್ಕೆ ಕಾರಣವೇ ಹೊರತು ನಾಶಪಡಿಸುವ ಉದ್ದೇಶ ಯಾವುದೇ ಅನುಕೂಲವಾಗಿರುವುದಿಲ್ಲ. ರೈತರು ಬೆಳೆದಿರುವ ಬೆಳೆಗೆ ಸರ್ಕಾರಕ್ಕೂ, ದೇಶಕ್ಕೂ ಆದಾಯವನ್ನು ತರುತ್ತದೆಯೇ ವಿನಃ ಯಾವುದೇ ತೊಂದರೆ ಇರುವುದಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಎಲ್ಲಾ ಪಕ್ಷದ ರಾಜಕಾರಣಿಗಳು ನೀಡುತ್ತಿರುವ ಆಶ್ವಾಸನೆಗಳು ಮತ್ತು ಅರಣ್ಯ ಇಲಾಖೆಯವರು ಅರಣ್ಯ ಭೂಮಿಯ ಗಡಿಯನ್ನು ಗುರ್ತಿಸಿ ಬೌಂಡರಿ ನಿರ್ಮಿಸದೇ ಇರುವುದು ಮತ್ತು ಅರಣ್ಯ ಭೂಮಿಯಲ್ಲಿ ಯಾವುದೇ ಮರ ಗಿಡಗಳನ್ನು ಬೆಳೆಸದೆ ಖಾಲಿ ಬಿಟ್ಟು ಅರಣ್ಯ ಭೂಮಿ ಯಾವುದು ಎಂದು ಗುರ್ತಿಲ್ಲದೇ ಇರುವುದು.
ರೈತನಿಗೆ ಪ್ರತಿಪಕ್ಷಗಳು ಒತ್ತುವರಿ ಮಾಡಿದ ಭೂಮಿಯನ್ನು ಅವರವರಿಗೆ ಮಂಜೂರು ಮಾಡುವುದಾಗಿ ಚುನಾವಣೆ ಕಾಲದಲ್ಲಿ ಪೂರ್ಣ ವಿಶ್ವಾಸವನ್ನು ನೀಡುವುದರಿಂದ ರೈತರು ಬೀಳು ಬಿದ್ದಿರುವ ಭೂಮಿಯಲ್ಲಿ ದೇಶದ ಸಂಪತ್ತಿಗೂ ಸರ್ಕಾರಕ್ಕೆ ಆದಾಯ ತರುವಂತಹ ಧೃವ ಬೆಳೆಯನ್ನು ಬೆಳೆಯುತ್ತಿದ್ದಾರೆ. ವಿನಾ ಕಾರಣ ಅರಣ್ಯ ಇಲಾಖೆಯವರು ಇದನ್ನು ನಾಶಪಡಿಸುತ್ತಿರುವುದು ದುರದೃಷ್ಟಕರ. ಸರ್ಕಾರವಾಗಲೀ, ಲೋಕಸಭಾ ಸದಸ್ಯರಾಗಲೀ, ವಿಧಾನಸಭಾ ಸದಸ್ಯರಾಗಲೀ ಈ ಬಗ್ಗೆ ಪರಿಶೀಲಿಸಿ ರೈತರ ಒತ್ತುವರಿ ಅರಣ್ಯ ಭೂಮಿಯನ್ನು ಅವರವರಿಗೆ ಮಂಜೂರು ಮಾಡಿ ಭಾರತದಲ್ಲಿಯೂ ಮತ್ತು ಕರ್ನಾಟಕದಲ್ಲಿಯೂ ಲಕ್ಷಾಂತರ ಹೆಕ್ಟೇರ್ ಬರಡು ಭೂಮಿಯಾಗಿ ಖಾಲಿ ಇರುವ ಸರ್ವೇ ನಂಬರುಗಳನ್ನು ಗುರ್ತಿಸಿ, ಅವುಗಳನ್ನು ಅರಣ್ಯಭೂಮಿಯನ್ನಾಗಿ ಪರಿವರ್ತಿಸಿದರೆ, ರೈತರು ಬೆಳೆದಿರುವ ಬೆಳೆಗೆ ತಕ್ಕ ಫಲವೂ ಖಾಲಿ ಬಿದ್ದಿರುವ ಭೂಮಿಯಲ್ಲಿ ಅರಣ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಿಕೊಂಡರೆ ರೈತನಿಗೂ ಅನುಕೂಲ ಸರ್ಕಾರಕ್ಕೂ ಆದಾಯ.
-ಬೋರಂಗಯ್ಯ, ಮಾದಿಗೊಂಡನಹಳ್ಳಿ



ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.