ಸಂಪಾದಕೀಯ

ಯಡಿಯೂರಪ್ಪ ನಿರ್ಧಾರ

Published On :

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲದ ಬೇರುಗಳು ಯಡಿಯೂರಪ್ಪ ಅವರ ಸಾರ್ವಜನಿಕ ಜೀವನವನ್ನು ರೂಪಿಸಿದ್ದು, ಅದನ್ನು ಕೊಡವಿಕೊಳ್ಳುವ ಬಯಕೆ ಅವರಲ್ಲಿ ಒಂದು ಕಾಲದಲ್ಲಿ ಮೂಡಿದ್ದರೂ, ಈಗ ಸ್ಫುಟವಾಗಿ, ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಅವರು ಭಾರತೀಯ ಜನತಾ ಪಾರ್ಟಿಯಲ್ಲೇ ತಮ್ಮ ಭವಿಷ್ಯವನ್ನು ಕಂಡುಕೊಳ್ಳುವ ನಿರ್ಧಾರವನ್ನು ಅವರ ತವರೂರಾದ ಶಿಕಾರಿ ಪುರದಲ್ಲೇ ಪ್ರಕಟಿಸಿದ್ದು ಸೂಕ್ತವಾಗಿಯೇ ಇದೆ.   2011-13 ರ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ, ಯಡಿಯೂರಪ್ಪ ಅವರ ವಿರುದ್ಧ ಪ್ರಕಟವಾದ ಆರೋಪಗಳ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕತ್ವವೇ ಅವರಿಗೆ ಸರ್ಕಾರದಿಂದ ದೂರವಿರಲು ಸೂಚನೆ ನೀಡಿದ್ದು ನಿಜ. ಆ ಸಮಯದಲ್ಲಿ ವರಿಷ್ಠರ ಪರವಾಗಿ ಬೆಂಗಳೂರಿಗೆ ಬಂದಿದ್ದ ಪಕ್ಷದ ಹಿರಿಯ ನಾಯಕ ರಾಜನಾಥ್ಸಿಂಗ್ ಅವರೇ ಈಗ ಪಕ್ಷದ ಅಧ್ಯಕ್ಷರಾಗಿ ಯಡಿಯೂರಪ್ಪ ಅವರನ್ನು ಅಧಿಕೃತವಾಗಿ ಸಂಕ್ರಮಣ ಮುಗಿದ ಅನಂತರ ಪಕ್ಷಕ್ಕೆ ಬರಮಾಡಿಕೊಳ್ಳಬೇಕಾದಂತಹ ರಾಜಕೀಯ, ಆ ಪಕ್ಷಕ್ಕೆ ಹಾಗೂ ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಸಮರ ಪ್ರಣಯದಲ್ಲಿ ಏನು ಮಾಡಿದರೂ ಸರಿ ಎನ್ನುವ ನುಡಿಗಟ್ಟಿಗೆ ರಾಜಕೀಯವನ್ನೂ ಸೇರಿಸಿ ಅನೇಕರು ಆಗಿಂದ್ದಾಗ್ಗೆ ಆ ಸಂದರ್ಭಕ್ಕೆ ತಕ್ಕಂತೆ ಭಾಷ್ಯ ಬರೆದು ಅದನ್ನು ರಾಜಕೀಯವಾಗಿ ಸಮರ್ಥಿಸಿಕೊಂಡಿರುವುದೂ ಉಂಟು.
   ಯಡಿಯೂರಪ್ಪ ಅವರು ಹಿಂದೆ ಮೊದಲ ಬಾರಿಗೆ ಬಿಜೆಪಿಯ ಕರ್ನಾಟಕ ಸಮಿತಿಯ ಅಧ್ಯಕ್ಷರಾದಾಗಲೇ, ರೈತಪರ ಹೋರಾಟ, ಜನಪರ ಹೋರಾಟ, ಸಂಕಲ್ಪ ಯಾತ್ರೆಗಳ ಮೂಲಕ ಪಕ್ಷ ಜನ ಸಮುದಾಯಗಳ ಪಕ್ಷವೆನ್ನುವ ಸ್ವರೂಪವನ್ನು ತಂದು ಕೊಟ್ಟಿದ್ದು. ಅನಂತರದ ದಿನಗಳಲ್ಲಿ ಯಡಿಯೂರಪ್ಪ ಅವರ ರಾಜಕೀಯದ ಸೋಲು ಗೆಲುವುಗಳಲ್ಲಿ ಪಕ್ಷ ತನ್ನ ಸೋಲು-ಗೆಲುವನ್ನು ಗುರ್ತಿಸಿಕೊಂಡಿತ್ತು. ಹೀಗಾಗಿ ಯಡಿಯೂರಪ್ಪ ಪಕ್ಷವನ್ನು ಈಗ ಮತ್ತೆ ಸೇರುವ ಬಯಕೆಯನ್ನು ಬಹಿರಂಗಗೊಳಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
   ಯಡಿಯೂರಪ್ಪ ಒಬ್ಬರೇ ಬಿಜೆಪಿಗೆ ಬರುತ್ತಿಲ್ಲ. ಕರ್ನಾಟಕ ಜನತಾ ಪಾರ್ಟಿಯ ಅವರ ಬಹುತೇಕ ಸಂಗಾತಿಗಳು, ಅಭಿಮಾನಿಗಳು, ಬೆಂಬಲಿಗರು ಬಿಜೆಪಿಗೆ ಬರುವುದರಿಂದ ಚುನಾವಣೆಯ ದೃಷ್ಟಿಯಿಂದ ಪಕ್ಷಕ್ಕೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ.  ಪ್ರಕಟಿತ ವರದಿಗಳಂತೆ ಕರ್ನಾಟಕ ಜನತಾ ಪಕ್ಷದ ಆರು ಮಂದಿ ವಿಧಾನ ಸಭೆ ಸದಸ್ಯರಲ್ಲಿ ನಾಲ್ವರು ಬಿಜೆಪಿಗೆ ಬಂದರೆ, ವಿಧಾನಸಭೆಯಲ್ಲಿ ಬಿಜೆಪಿ ಕಳೆದುಕೊಂಡಿದ್ದ ಮಾನ್ಯತೆ ಪಡೆದ ಅಧಿಕೃತ ವಿರೋಧ ಪಕ್ಷದ ಸ್ಥಾನ-ಮಾನ ಸಿಗುವುದಂತೂ ಖಚಿತ.  ಈ ಬೆಳವಣಿಗೆಯಿಂದ ರಾಜಕೀಯವಾಗಿ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು, ಜಾತ್ಯತೀತ ಜನತಾದಳ ಆ ಸ್ಥಾನ-ಮಾನವನ್ನು ಕಳೆದುಕೊಳ್ಳುವುದೂ ಸಹಜ.
   ಅಷ್ಟರಿಂದಲೇ ಲೋಕಸಭೆ ಚುನಾವಣೆಯ ಮೇಲೆ ದೊಡ್ಡ ರೀತಿಯ ಪರಿಣಾಮವಾಗದೇ ಇರಬಹುದು. ಆದರೆ ಯಡಿಯೂರಪ್ಪ ಅವರು ಪಕ್ಷಕ್ಕೆ ಬಂದ ಅನಂತರ, ಇದುವರೆಗೆ ಬಿಜೆಪಿ ಕಾರ್ಯಕರ್ತರನ್ನು ಕಾಡಿದ್ದ ಅನಾಥ ಪ್ರಜ್ಞೆ ಹಾಗೂ ಹತಾಶ ಮನೋಧರ್ಮ ಮಾಯವಾಗಿ, ಅವರು ಜನ ಸಮುದಾಯಗಳ ಮಧ್ಯೆ ಹೋಗಿ ಕೆಲಸ ಮಾಡುವ ಉತ್ಸಾಹವನ್ನು ಪ್ರದರ್ಶಿಸುವುದೂ ಸಹಜವೇ.  ಹೀಗಾಗಿ ಯಡಿಯೂರಪ್ಪ ಅವರ ಬಿಜೆಪಿಯ ಮರು ಪ್ರವೇಶ, ವರ್ಷದ ಹಿಂದೆ ಕಂಡುಬಂದಿದ್ದ ರಾಜಕೀಯ ಪರಿಸ್ಥಿತಿಯನ್ನೂ ಬದಲಾಯಿಸಲಿದೆ ಎನ್ನುವ ಕಾರ್ಯಕರ್ತರ ಮಾತಿನಲ್ಲಿ ಅನುಭವ ಆಧರಿತ ಹುರುಳಿದೆ. ಚುನಾವಣೆಯಲ್ಲಿ ಅಂತಿಮವಾಗಿ ಮತದಾರರೇ ಅವರ ನಿರ್ಣಯವನ್ನು ಕೊಡಬೇಕು. ಆದರೆ ದೇಶದಲ್ಲಿ, ರಾಜ್ಯದಲ್ಲಿ ಮತದಾರರ ಒಲವಿನ ಸುಳಿವನ್ನು ನೀಡಬಲ್ಲ ಚುನಾವಣೆ ಸಮೀಕ್ಷೆಗಳ ಫಲಿತಾಂಶ ಪ್ರಕಟವಾದಾಗಲೇ ಜನರಿಗೆ ಹೊಸದಾಗಿ ರೂಪಗೊಂಡ ರಾಜಕೀಯ ವಾತಾವರಣದ ಸೂಚನೆ ಸಿಗುವುದು. ಯಡಿಯೂರಪ್ಪ ಅವರ ಈ ನಿರ್ಧಾರದಿಂದ ರಾಜ್ಯದ ರಾಜಕೀಯ ಮತ್ತೆ ಅದರ ತ್ರಿಕೋಣ ಸ್ಪರ್ಧೆಯ ಲಕ್ಷಣವನ್ನು ಪಡೆದುಕೊಳ್ಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.