ಸಂಪಾದಕೀಯ

ಆಯೋಗದ ವೈಫಲ್ಯಕ್ಕೆ ಪಕ್ಷ ಹೊಣೆ!

Published On :

ಸರ್ಕಾರ ನಿಮ್ಮ ವರದಿಗೆ ಸ್ಪಂದಿಸದ ಕಾರಣಕ್ಕೆ ಅಧ್ಯಕ್ಷ ಸ್ಥಾನ ತೊರೆದಿದ್ದೀರಿ ಎನ್ನುವುದು ಕೇವಲ ನೆಪವಲ್ಲವೇ? ವರದಿ ನೀಡಲು ಎರಡು ವರ್ಷ ತೆಗೆದುಕೊಂಡ ಆಯೋಗವು ಕೇವಲ 2 ತಿಂಗಳೊಳಗೆ ಕ್ರಮ ನಿರೀಕ್ಷಿಸಬಹುದೇ?
ಮಂಡ್ಯ ರೈಲು ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾದ ಆಶಾ ಎಂಬ ಯುವತಿಯ ಪುನರ್ವಸತಿಗೆ ಕೆಲ ತಿಂಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದೆ. ರಾಜ್ಯ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಕೊಟ್ಟು ಸುಸ್ತಾದೆ. ಅಧ್ಯಕ್ಷ ಹುದ್ದೆಯಲ್ಲಿದ್ದುಕೊಂಡು ನತದೃಷ್ಟ ಯುವತಿಗೆ ಪುನರ್ವಸತಿ ಮಾಡಿಕೊಡಲು ಸಾಧ್ಯವಾಗಲಿಲ್ಲ ಎಂಬ ಬೇಸರವಾಯಿತು. ತಾವೇನು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರದ ಚುಕ್ಕಾಣಿ ಹಿಡಿದವರೇ ಕೈ ಚೆಲ್ಲಿದರೆ ಸಾಮಾನ್ಯರು ಏನು ಮಾಡಲು ಸಾಧ್ಯ? ಕೇವಲ ಮತ ಬ್ಯಾಂಕ್‌ಗಳಿಗಾಗಿ ಮಹಿಳೆಯರ ಮೇಲೆ ಪ್ರೀತಿ ತೋರಿಸಿದರೆ ಸಾಲದು. ಅನಾಥೆಯಾಗಿರುವ ಆಶಾಳನ್ನು ಇಂದು ಒಂದು ಎನ್‌ಜಿಒ ನೋಡಿಕೊಳ್ಳುತ್ತಿದೆ. ಇದಲ್ಲದೇ ಮಹಿಳೆಯರ ರಕ್ಷಣೆಗೆ ಸಂಬಂಧಿಸಿ ನಾನು ಕೊಟ್ಟ ವರದಿಯ ಬಗ್ಗೆ ಸರ್ಕಾರ ಯಾವುದೇ ಸಭೆಯನ್ನೂ ನಡೆಸದೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತು.

    ಕಳೆದ ನಾಲ್ಕೂವರೆ ವರ್ಷದಿಂದ ಶೋಭಾ ಕರಂದ್ಲಾಜೆ, ಎರಡು ವರ್ಷದಿಂದ ನೀವು ಸರ್ಕಾರದ ಭಾಗವಾಗಿದ್ದರೂ ಅಧಿಕಾರ ಬಿಡುವಾಗ ಸರ್ಕಾರದ ಮೇಲೆ ಗೂಬೆ ಕೂರಿಸಲು ಕಾರಣವೇನು? ಅಷ್ಟಕ್ಕೂ ಇಂತಹ ಪ್ರಕರಣಗಳು ಬಿಎಸ್‌ವೈ ಅಧಿಕಾರದಿಂದ ಇಳಿದ ಮೇಲೆಯೇ ಸಂಭವಿಸುತ್ತಿದೆಯೇ?
ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ಅವರ ನಿಲುವು ನನಗೆ ಸಂಬಂಧಿಸಿಲ್ಲ. ನೀವು ಅವರನ್ನೇ ಪ್ರಶ್ನಿಸಬೇಕು. ಆದರೆ ನಾನು ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿದೆ. ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಮಾಹಿತಿ ಕಲೆ ಹಾಕಿ, 2012ರ ಜನವರಿಯಲ್ಲಿಯೇ ಮಧ್ಯಂತರ ವರದಿ ನೀಡಿದೆ. ಇದಾದ ಬಳಿಕ ಡಿಸೆಂಬರ್‌ನಲ್ಲಿ ಅಂತಿಮ ವರದಿ ನೀಡಲಾಯಿತು. ಆದರೆ ಎರಡೂ ವರದಿ ಕುರಿತಂತೆ ಸರ್ಕಾರವು ಸಣ್ಣ ಪ್ರಮಾಣದ ಕೆಲಸವನ್ನೂ ಮಾಡಲಿಲ್ಲ. ಲೋಪಗಳ ವಿರುದ್ಧ ಸರ್ಕಾರ ಮೌನವಹಿಸಿತು. ನಾನು ಸರ್ಕಾರದ ಭಾಗವಾಗಿದ್ದ ಸಮಯದಲ್ಲಿನ ಎಲ್ಲ ಲೋಪಗಳನ್ನು ಗಮನಕ್ಕೆ ತಂದಿದ್ದೇನೆ. ಸ್ಪಂದನೆ ಸಿಗದಿದ್ದಕ್ಕೆ ಹೊರಹೊಗುತ್ತಿದ್ದೇನೆ. ಆಯೋಗವೆಂಬುದು ಹಲ್ಲು ಕಿತ್ತ ಹಾವಿನಂತೆ, ಅಸಮರ್ಥ ಅಧ್ಯಕ್ಷೆ ಎಂಬ ಆರೋಪವನ್ನು ನಾನು ಎದುರಿಸಬೇಕಾಯಿತು.

    ನೀವು ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗುತ್ತಿದ್ದೀರಿ ಎಂಬ ಸುದ್ದಿಯಿದೆ?
ಹೌದು. ಗುಂಪು ರಾಜಕೀಯದಲ್ಲಿ ನಿರತವಾಗಿರುವ ಪಕ್ಷ ವ್ಯವಸ್ಥೆಯಿಂದ ಹೇಸಿಗೆಯಾಗಿದೆ. ಕೆಜೆಪಿ-ಬಿಜೆಪಿ ಎಂಬ ರಾಜಕೀಯಕ್ಕಿಂತ ರಾಷ್ಟ್ರೀಯ ಚಿಂತನೆಗಳ ಮೂಲಕ ಸಂಘಟನೆಯ ಕಾರ್ಯಕರ್ತೆಯಾಗಿ ನಾನಿದ್ದೆ. ಬಿಎಸ್‌ವೈ ಅವರ ನೆರಳಲ್ಲೇ ರಾಜಕೀಯಕ್ಕೂ ಬಂದೆ. ಈಗ ಕೆಜೆಪಿಯಿಂದ ಆಹ್ವಾನ ಬಂದಿದೆ, ಯಾವುದೇ ಅಧಿಕಾರದ ನಿರೀಕ್ಷೆಯಿಲ್ಲದೇ ಹೋಗುತ್ತಿದ್ದೇನೆ. ಆದರೆ ಮಹಿಳೆಯರಿಗೆ ಗೌರವ ಅಥವಾ ರಕ್ಷಣೆ ಸಿಗದಿದ್ದರೆ ನಾನು ಎಲ್ಲಿಯೂ ಇರುವುದಿಲ್ಲ. ರಾಜಕೀಯ ನನಗೆ ಮುಖ್ಯವಲ್ಲ. ನನಗೆ ವಕೀಲಿ ವೃತ್ತಿಯಿದೆ. ಮಹಿಳೆಯ ರಕ್ಷಣೆಗೆ ಸಂಬಂಧಿಸಿದ ವಿಷಯದಲ್ಲಿ ಎಂದಿಗೂ ರಾಜಿಯಿಲ್ಲ.

   ಕಳೆದ ಆರೂವರೆ ವರ್ಷದ ಅವಧಿಯ ಸರ್ಕಾರದಲ್ಲಿ ಯಡಿಯೂರಪ್ಪ ಅವರು ನೇರವಾಗಿ 5 ವರ್ಷಗಳ ಕಾಲ ಭಾಗಿಯಾಗಿದ್ದರು. ಆಯೋಗದ ವೈಫಲ್ಯಕ್ಕೆ ಅವರೂ ಕಾರಣರಲ್ಲವೇ?
ಪ್ರಮಿಳಾ ನೇಸರ್ಗಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೂ ಅಧಿಕಾರ ಸ್ವೀಕರಿಸಲಿಲ್ಲ. ನಾನು 2011ರಲ್ಲಿ ಅಧ್ಯಕ್ಷ ಗಾದಿಗೆ ಬಂದೆ. ಆ ಬಳಿಕದ ಬಜೆಟ್‌ನಲ್ಲಿ ಮೊದಲ ಬಾರಿಗೆ ಆಯೋಗಕ್ಕಾಗಿಯೇ ಯಡಿಯೂರಪ್ಪನವರು 5 ಕೋಟಿ ಅನುದಾನ ನೀಡಿದರು. ನಂತರದ ಬಜೆಟ್ ರೂಪಿಸುವಾಗ ಆಯೋಗವನ್ನು ಕನಿಷ್ಠ ಸೌಜನ್ಯಕ್ಕೂ ಸಂಪರ್ಕಿಸಲಿಲ್ಲ. ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಲಿಲ್ಲ. ಕೇವಲ ಭತ್ಯೆಗಾಗಿ ಮಂಜುಳಾ ಅವರು ಅಧ್ಯಕ್ಷ ಗಾದಿಯಲ್ಲಿರುವುದು ಬೇಡ. ಆಯೋಗದ ವೈಫಲ್ಯಕ್ಕೆ ಅವರೊಬ್ಬರೇ ಕಾರಣರಾಗುವುದಿಲ್ಲ. ಪಕ್ಷದ ಸಂಪೂರ್ಣ ವ್ಯವಸ್ಥೆ ಅದಕ್ಕೆ ಜವಾಬ್ದಾರಿ ಹೊರಬೇಕಾಗುತ್ತದೆ. ಇದಲ್ಲದೇ ಬಿಎಸ್‌ವೈ ಅಧಿಕಾರದಲ್ಲಿದ್ದಾಗ ಆಯೋಗಕ್ಕೆ ಸಂಬಂಧಿಸಿ ಯಾವುದೇ ಬೇಡಿಕೆ ಸರ್ಕಾರದ ಮುಂದಿರಲಿಲ್ಲ. ಪ್ರಮಿಳಾ ನೇಸರ್ಗಿ ಅವರು ಅಧಿಕಾರದಲ್ಲಿದ್ದ 8 ತಿಂಗಳ ಕಾಲ ಯಾವುದೇ ಬೇಡಿಕೆಗೆ ಸಲ್ಲಿಸಿದಂತಿಲ್ಲ. ನಾವು ಸಲ್ಲಿಸುವ ಬೇಡಿಕೆಗಳಿಗೆ ಬಿಎಸ್‌ವೈ ಅವರು ಬೆಲೆ ಕೊಡ್ತಿದ್ರು.

 ಲೋಪ ಬಂದಾಗ ಪಕ್ಷ, ಅಭಿವೃದ್ಧಿ ವಿಚಾರ ಬಂದಾಗ ಯಡಿಯೂರಪ್ಪ ಎಂಬ ದ್ವಂದ್ವವೇಕೆ?
ಪಕ್ಷದಲ್ಲಿನ ಮಹಿಳಾ ಮುಖಂಡರು ಅಥವಾ ಕಾರ್ಯಕರ್ತರನ್ನು ಹುಡುಕುವುದು ಪಕ್ಷಕ್ಕೆ ಬಿಟ್ಟ ವಿಚಾರ. ಹಿಂದೊಮ್ಮೆ ಬಿಜೆಪಿ ಸರ್ಕಾರದ ಸಚಿವರೊಂದಿಗೆ ಮಾತನಾಡಿದಾಗ ಇಂತಹ ಉತ್ತರ ಬಂದಿತ್ತು. 'ಅವರ ಗುಂಪಿನಿಂದ ಶಿಫಾರಸಾದ ವ್ಯಕ್ತಿಗಳನ್ನು ನೇಮಿಸಲಾಗಿದೆ, ನಮ್ಮ ಗುಂಪಿನಿಂದ ಕೆಲವರನ್ನು ನೇಮಿಸಲಾಗಿದೆ. ಉಳಿದ ಸ್ಥಾನಗಳಿಗೆ ಯಾರೂ ಶಿಫಾರಸು ಮಾಡಲಿಲ್ಲ' ಎಂದರು. ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಳ್ಳದವರಿಗೆ ಯಾವುದೇ ಸ್ಥಾನಮಾನಗಳು ದೊರಕಲಿಲ್ಲ. ಆದ್ದರಿಂದ ಲೋಪಕ್ಕೆ ಪಕ್ಷವೇ ಹೊಣೆಯಾಗುತ್ತದೆ.

  ಕೆಜೆಪಿ ಪಕ್ಷದಲ್ಲಿರುವ ಅಥವಾ ಬರಲು ತಯಾರಿರುವ ಕೆಲ ನಾಯಕರ ಮೇಲೆ ಮಹಿಳಾ ದೌರ್ಜನ್ಯದ ಆರೋಪಗಳಿವೆ. ಅಂತಹ ಪಕ್ಷದಿಂದ ಮಹಿಳೆಯರಿಗೆ ನ್ಯಾಯ ದೊರಕುತ್ತದೆಯೇ?
ಮಹಿಳೆ ಹಾಗೂ ಶೋಷಿತ ವರ್ಗದವವರ ಬಗ್ಗೆ ಅಪಾರ ಗೌರವ ಹೊಂದಿರುವ ಯಡಿಯೂರಪ್ಪ ಅವರ ಮೇಲೆ ನನಗೆ ವಿಶ್ವಾಸವಿದೆ. ಮಹಿಳೆಯರ ರಕ್ಷಣೆಗೆ ಕೆಜೆಪಿಯಿಂದ ಸೂಕ್ತ ಸ್ಪಂದನೆ ಸಿಗುತ್ತದೆ ಎಂಬ ಭರವಸೆಯಿದೆ. ನೀವು ಪ್ರಸ್ತಾಪಿಸಿರುವ ಆರೋಪಿತ ನಾಯಕರ ವಿರುದ್ಧ ನ್ಯಾಯಾಲಯದಲ್ಲಿರುವ ಪ್ರಕರಣ ಸಾಬೀತಾದರೆ ಖಂಡಿತ ನಾನು ವಿರೋಧಿಸುತ್ತೇನೆ. ಒಬ್ಬ ವ್ಯಕ್ತಿಯ ವಿಷಯವನ್ನು ಪಕ್ಷ ವ್ಯವಸ್ಥೆಗೆ ಸೇರಿಸುವುದು ಸೂಕ್ತವಲ್ಲ. ಅವರು ಕೇವಲ ಪಕ್ಷದ ಭಾಗವಾಗಿರುತ್ತಾರಷ್ಟೆ.

                                                                                                                                                                   ಪಕ್ಷ ಅಥವಾ ಅಧಿಕಾರ ತೊರೆಯುವಾಗ ಲೋಪಗಳು ಕಾಣುತ್ತವೆ. ಆದರೆ ಅಧಿಕಾರದಲ್ಲಿದ್ದಾಗ ನಿಮ್ಮದೇ ಪಕ್ಷದ ಹಾಲಪ್ಪ ಪ್ರಕರಣ, ರೇಣುಕಾಚಾರ್ಯರ ವಿವಾದ, ನೀಲಿ ಚಿತ್ರ ವೀಕ್ಷಣೆ ಹಾಗೂ ನಿತ್ಯಾನಂದನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೌನವಹಿಸಿದ್ದೇಕೆ?
ನಾನು ಅಧ್ಯಕ್ಷಳಾಗುವ ವೇಳೆಗೆ ರೇಣುಕಾಚಾರ್ಯ ಪ್ರಕರಣದಲ್ಲಿ ಪರಸ್ಪರ ರಾಜಿಯಾಗಿತ್ತು. ಆದರೆ ಆ ವಿಚಾರಕ್ಕೆ ಸಂಬಂಧಿಸಿ ರೇಣುಕಾಚಾರ್ಯರ ಬಗ್ಗೆ ಈಗಲೂ ವಿರೋಧವಿದೆ. ಇನ್ನು ಹಾಲಪ್ಪ ಪ್ರಕರಣ ಕೋರ್ಟ್‌ನಲ್ಲಿದೆ. ಕೋರ್ಟ್‌ನ ಯಾವುದೇ ಆದೇಶಕ್ಕೂ ನಾನು ಗೌರವಿಸುತ್ತೇನೆ. ನಿತ್ಯಾನಂದನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾದಾಗ ಸ್ವಾಗತಿಸಿದ್ದೇನೆ. ಅಷ್ಟಕ್ಕೂ ಇವೆಲ್ಲ ಪ್ರಕರಣಗಳು ಸಾಮಾನ್ಯ ಮಹಿಳೆಗೆ ಸಂಬಂಧಿಸಿದ್ದಲ್ಲ. ವಿದ್ಯಾವಂತ ಹಾಗೂ ಎಲ್ಲ ತಿಳಿದಿರುವ ಮಹಿಳೆಯರು ಮಾಡಿದ ತಪ್ಪಿನಿಂದ ಆಗಿರುವಂತದ್ದು. ಆದಾಗ್ಯೂ ಅಚಾತುರ್ಯಗಳನ್ನು ನಾನು ವಿರೋಧಿಸಿದ್ದೇನೆ. ಆದರೆ ಸಾಮಾನ್ಯ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ತಿರುಗಾಡಿ ಸರ್ಕಾರಕ್ಕೆ ವರದಿ ನೀಡಿದ್ದೇನೆ. ಸರ್ಕಾರದ ವ್ಯವಸ್ಥೆಯೂ ಸಾಮಾನ್ಯರ ಪರವಾಗಿರಬೇಕು ಎನ್ನುವುದು ನನ್ನ ವಾದ. ಅದಕ್ಕೆ ಚ್ಯುತಿಯಾಗದಂತೆ ನಾನು ಕಾರ್ಯನಿರ್ವಹಿಸಿದ್ದೇನೆ.
                                                                                                                                                                  ಬಿಎಸ್‌ವೈ ಅಧಿಕಾರದಲ್ಲಿದ್ದಾಗ, ನಂತರದ ದಿನಗಳಲ್ಲಿ ಶೋಭಾ ಕರಂದ್ಲಾಜೆ ಬಿಟ್ಟು ಉಳಿದ ಮಹಿಳೆಯರಿಗೆ ಸರ್ಕಾರದ ಜವಾಬ್ದಾರಿಯುತ ಹುದ್ದೆಗಳು ಸಿಗಲಿಲ್ಲ. ಇದಕ್ಕೆ ಕಾರಣವೇನು?
ಕಾರ್ಯಕರ್ತರಿಂದ ಬೆಳೆದ ಪಕ್ಷದಲ್ಲಿಂದು ಕಾರ್ಯಕರ್ತರಿಗೆ ಬೆಲೆಯಿಲ್ಲದಂತಾಗಿದೆ. ಪಕ್ಷವನ್ನು ಕಟ್ಟಿದ ನಿಷ್ಠಾವಂತರು ಹಾಗೂ ಸಮರ್ಥರಿಗೆ ಪಕ್ಷದಲ್ಲಿ ಗೌರವವಿಲ್ಲ. ಬಿಜೆಪಿಯಲ್ಲಿ ಮಹಿಳೆಯರ ಹೆಸರಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲೂ ಮಹಿಳೆಗೆ ಸ್ಥಾನವಿರುವುದಿಲ್ಲ. ಪುರುಷ ನಾಯಕರೇ ಮಹಿಳಾ ವೇಷಧಾರಣೆ ಮಾಡಿರುತ್ತಾರೆ. ಮತ್ತೆ ಕಳೆದ ವಾರ ನಡೆದ 'ಅಭಯ' ಗಸ್ತು ವಾಹನದ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಗೃಹಮಂತ್ರಿ, ಪೊಲೀಸ್ ಮಹಾನಿರ್ದೇಶಕ ಹಾಗೂ ಆಯುಕ್ತರ ಹೆಂಡತಿಯರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಆದರೆ ಮಹಿಳೆಯರಿಗಾಗಿ ಶ್ರಮಿಸಿದ ಯಾವುದೇ ಮಹಿಳಾ ಸಂಘಟನೆಗಳಿಗೆ ಆಹ್ವಾನವಿರಲಿಲ್ಲ. ಆಯೋಗದ ಅಧ್ಯಕ್ಷೆಯಾಗಿದ್ದ ನನ್ನನ್ನೂ ಕರೆದಿರಲಿಲ್ಲ. ಖಾಸಗೀಕರಣ ವಿರೋಧಿಸುತ್ತಿದ್ದ, ಕುಟುಂಬ ರಾಜಕಾರಣ ಟೀಕಿಸುತ್ತಿದ್ದ ಪಕ್ಷವು ಇಂದು ಅರ್ಧಾಂಗಿಗಳ ರಾಜಕೀಯಕ್ಕೆ ಮಣೆ ಹಾಕುತ್ತಿದೆ. ಪಕ್ಷದಲ್ಲಿ ಮಾತ್ರ ಮಹಿಳೆಗೆ ಸೂಕ್ತ ಸ್ಥಾನಮಾತ್ರ ನೀಡುತ್ತಿಲ್ಲ.

- ರಾಜೀವ ಹೆಗಡೆ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.