ಅಫ್ಜಲ್ ನೇಣಿನ ಅನಂತರ
"ಭಾರತೀಯ ಸಂಸತ್ತಿನ ಮೇಲೆ ನಡೆದ ಸಶಸ್ತ್ರ ದಾಳಿಯ ರೂವಾರಿ" ಅಫ್ಜಲ್ ಗುರು ನ್ಯಾಯಾಲಯದಿಂದ ನೇಣು ಶಿಕ್ಷೆಗೆ ಗುರಿಯಾದ ಹಲವು ವರ್ಷಗಳ ಅನಂತರ, ಗಲ್ಲುಗಂಬವನ್ನೇರಿದ್ದು ಕಾಯಿದೆಯ ವ್ಯಾಖ್ಯಾನಕ್ಕಿಂತ ಹೆಚ್ಚಾಗಿ ರಾಜಕೀಯ ವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಆ ದಾಳಿಯ ಪ್ರಕರಣ ನಡೆದಿದ್ದೇ ಹಾಗೆ. ಅಲ್ಲಿ ಭಯೋತ್ಪಾದನೆಯೇ ಮುಖ್ಯವಾದ ಉದ್ದೇಶ ಹಾಗೂ ಅದಕ್ಕೆ ರಾಜಕೀಯ ಕಾರಣಗಳೂ ಇದ್ದವು ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ.
ಪ್ರಸ್ತುತ ವಿವಾದದ ತಿರುಳು, ಅಫ್ಜಲ್ ಗುರು ಆ ಪ್ರಮಾಣದ ಘಟನೆಯನ್ನು ಯೋಜನಾಬದ್ಧವಾಗಿ ರೂಪಿಸಿ, ಸ್ವಂತವಾಗಿ ಗುಂಡು ಹಾರಿಸದೇ ಇದ್ದರೂ, ಹಲವರ ಹತ್ಯೆಗೆ ಕಾರಣನಾದನೆ ಎನ್ನುವ ಪ್ರಶ್ನೆ ಮುಖ್ಯವಲ್ಲ. ಈಗ ಬಲವಾಗಿ ಕೇಳಿಬರುತ್ತಿರುವ ಹಾಗೂ ಪ್ರಕಟವಾಗುತ್ತಿರುವ ವಿಷಯ ಈ ಪ್ರಕರಣದಲ್ಲಿ ಇತರ ಆರೋಪಿಗಳೆಲ್ಲ ನೇಣು ಶಿಕ್ಷೆಯನ್ನು ತಪ್ಪಿಸಿಕೊಂಡು, ಒಬ್ಬ ಮಾತ್ರ ಆ ಶಿಕ್ಷೆಗೆ ಬಲಿಯಾಗುವ ಸಂದರ್ಭದಲ್ಲಿ ನಡೆದ ವಿಚಾರಣೆ ನ್ಯಾಯವಾಗಿತ್ತೆ? ಕಾಯಿದೆಯ ವಿಧಿ ನಿಯಮಗಳಿಗೆ ಅನುಗುಣವಾಗಿತ್ತೇ ಎನ್ನುವುದೇ ಮುಖ್ಯವಾದಂತೆ ಕಂಡುಬರುತ್ತಿದೆ. ಅದು ಸಹಜ ಕೂಡಾ.
ಅಫ್ಜಲ್ ಗುರು ಹಾಗೂ ಅವರ ಕುಟುಂಬಕ್ಕೆ ಇದ್ದ ಹಾಗೂ ಈಗಲೂ ಕುಟುಂಬಕ್ಕೆ ಇರುವ ಹಲವು ಹಕ್ಕುಗಳನ್ನು (ವಕೀಲರ ನೇಮಕ, ದಾಖಲೆಗಳ ಪರಿಶೀಲನೆಗೆ ಅವಕಾಶ, ಕೊನೆಗೆ ಮರಣದಂಡನೆಗೆ ಗುರಿಯಾದ ವ್ಯಕ್ತಿಯ ಕೊನೆಯ ಆಸೆಯನ್ನು ತಿಳಿಯುವ ಹಕ್ಕು) ನಿರಾಕರಿಸಲಾಯಿತೆನ್ನುವುದು ಹಲವರ ವಾದ.
ಇದೆಲ್ಲವೂ ಕಳೆದ ಹಲವಾರು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಮುಕ್ತ ಚರ್ಚೆಗೆ ಗ್ರಾಸವನ್ನು ಒದಗಿಸಿದೆ. ಇಲ್ಲಿ ಚರ್ಚೆ ಮುಕ್ತವಾಗಿದ್ದರೂ ಅದರಲ್ಲಿ ಪಾಲುಗೊಂಡಿರುವವರ ಚಿಂತನೆ ಎಷ್ಟು ಮುಕ್ತ ಎನ್ನುವುದೂ ಪ್ರಸ್ತುತವಾಗುತ್ತದೆ.
ಅಫ್ಜಲ್ ಗುರು ನೇಣುಗಂಬವನ್ನೇರಿದ್ದು ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ. ಸೋಮವಾರದ ಅನೇಕ ರಾಷ್ಟ್ರೀಯ ಅಂಕಣಕಾರರಿಗೆ, ಬೇಕಾದಷ್ಟು ಕಾಲಾವಕಾಶ ಸಿಕ್ಕಿತ್ತು. ಟಿ.ವಿ. ವಾಹಿನಿಗಳಂತೂ ಶನಿವಾರದ ಬೆಳಿಗ್ಗೆಯಿಂದಲೇ ವೀಕ್ಷಕರ ಮನಸ್ಸಿನ ಮೇಲೆ ದಾಳಿ ನಡೆಸುವುದನ್ನು ಆರಂಭಿಸಿದ್ದವು.
ಇದು ಬೌದ್ಧಿಕ ಮಟ್ಟದ ವಿವಾದ. ಆದರೆ ಕಾಶ್ಮೀರದಲ್ಲಿ ಹಾಗೂ ಇತರ ಕೆಲವು ಕಡೆಗಳಲ್ಲಿ ಅಫ್ಜಲ್ ಗುರು ನೇಣುಗಂಬವನ್ನೇರಿದ್ದು ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸುವ ಶಕ್ತಿ ಇರುವಂತಹ ಘಟನೆ. ಆ ಮಾತನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರೇ ಆತಂಕದ ಧ್ವನಿಯಲ್ಲಿ ಹೇಳಿದ್ದಾರೆ.
ಆ ಆತಂಕಕ್ಕೆ ವಿಧಿಸಿದ ಶಿಕ್ಷೆ ಕಾರಣವಲ್ಲದೇ ಇರಬಹುದು. ಆದರೆ ಅದನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ರೀತಿ- ನೀತಿ.
ಅಫ್ಜಲ್ ಗುರುವನ್ನು ಇನ್ನೂ ಯಾಕೆ ನೇಣು ಹಾಕಿಲ್ಲ, ಇದರಲ್ಲಿ ರಾಜಕೀಯ ಪಿತೂರಿ ಇದೆ ಎನ್ನುವ ಒಂದು ಜನವರ್ಗದ ಆರೋಪ ಗಟ್ಟಿಯಾದ ಧ್ವನಿಯಲ್ಲಿ ಕೇಳಿ ಬರುತ್ತಿರುವಂತೆಯೇ, ಎಲ್ಲಿ ಅದು ಚುನಾವಣೆ ರಾಜಕೀಯವನ್ನು ಪ್ರವೇಶಿಸುವುದೋ ಎನ್ನುವ ಭೀತಿಯೂ ಆಳುವ ಕೂಟವನ್ನು ಕಾಡಿರಬೇಕು. ಕಾಶ್ಮೀರದ ಮುಖ್ಯಮಂತ್ರಿಯೂ ಆಳುವ ಕೂಟದವರೇ ಎನ್ನುವುದನ್ನು ಮರೆಯಬಾರದು.
ವರ್ಷಗಟ್ಟಲೆ ಮೌನವಾಗಿದ್ದ ಗೃಹ ಮಂತ್ರಾಲಯ ಇದ್ದಕ್ಕಿದ್ದಂತೆ ಎಚ್ಚರಗೊಂಡು, ಅಫ್ಜಲ್ ಗುರು ಅವರ ದಯಾಭಿಕ್ಷೆಯ ಮನವಿಯನ್ನು ನಿರಾಕರಿಸುವಂತೆ ರಾಷ್ಟ್ರಪತಿಗೆ ಶಿಫಾರ್ಸು ಮಾಡುವುದು, ಅದನ್ನು ರಾಷ್ಟ್ರಪತಿ ಎರಡೇ ದಿನಗಳಲ್ಲಿ ಪೂರೈಸುವುದರ ಹಿಂದೆ ರಾಜಕೀಯವಿರಲೇಬೇಕೆನ್ನುವ ಭಾವನೆ ಬಹುಜನರಲ್ಲಿದೆ. ರಾಷ್ಟ್ರಪತಿಯ ಅಂಕಿತದ ಮುದ್ರೆ ಸಿಕ್ಕಿದ ಅನಂತರ, ರಹಸ್ಯವಾಗಿ ನೇಣು ಶಿಕ್ಷೆಯನ್ನು ಜಾರಿಗೆ ತಂದು ಶವವನ್ನೂ ತಿಹಾರ ಜೈಲಿನಲ್ಲೇ ವಿಲೇವಾರಿ ಮಾಡಿದ ಅನಂತರವೇ ಸುದ್ದಿಯ ಬಿಡುಗಡೆಯಾಗಿದ್ದನ್ನು ಕಂಡರೆ ಇದರಲ್ಲಿ ರಾಜಕೀಯ ಇದ್ದೇ ಇದೆ ಎಂದು ಯಾರಾದರೂ ಹೇಳಿಯಾರು.
ಈ ಪ್ರಕರಣ ಕುರಿತಂತೆ ಕಾಶ್ಮೀರದಲ್ಲಿ ಪ್ರಕಟವಾಗುವ ಪ್ರತಿಕ್ರಿಯೆಗೂ, ಇತರ ಕಡೆಗಳಲ್ಲಿ ಪ್ರಕಟವಾಗುವ ಪ್ರತಿಕ್ರಿಯೆಗೂ ವ್ಯತ್ಯಾಸ ಇದ್ದೇ ಇದೆ. ಅದೇ ಆತಂಕದ ವಿಚಾರ. ಸಾಲದ್ದಕ್ಕೆ ಭಾರತದ ಆ ಭಾಗದಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಇತರ ಕಡೆಗಳಲ್ಲಿ ಕೆಲವು ಶಕ್ತಿಗಳು, ವ್ಯಕ್ತಿಗಳು ಸುದ್ದಿಯನ್ನು ಸ್ವಾಗತಿಸಿದ್ದಾರೆ. ಅನಿವಾರ್ಯವಾಗಿ, ಕಾಯಿದೆ ಪಾಲನೆ ವ್ಯವಸ್ಥೆ ಒಬ್ಬ ವ್ಯಕ್ತಿಯ ಜೀವವನ್ನು ಹೊಸಕಿ ಹಾಕುವುದು ಸ್ವಾಗತಕ್ಕೆ ಅರ್ಹವಾದ ವಿಚಾರವಲ್ಲ. ಕಾಯಿದೆ ಪಾಲನೆ ವ್ಯವಸ್ಥೆ ಮಾಡಲೇಬೇಕಾದ ಕರ್ತವ್ಯವನ್ನು ನಿರ್ವಹಿಸಿದೆ ಎಂದಷ್ಟೇ ಹೇಳಬಹುದು.
ಈಗ ಮತ್ತೆ ಮತ್ತೆ ಹಿಂದೆ ಪ್ರಕಟವಾದ ಸಂದರ್ಶನಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಮಾಧ್ಯಮ ಪ್ರಪಂಚದ ದೃಷ್ಟಿಯಿಂದ ಅನಿವಾರ್ಯ ನಿಜ. ಆದರೆ ಅಂತಹ ಕ್ರಿಯೆಯಿಂದ ಮತ್ತೊಮ್ಮೆ ಜನರ ಭಾವನೆಗಳು ಕೆರಳಿ ವಿಪರೀತಕ್ಕೆ ಹೋಗಬಾರದು.
ಈ ಪ್ರಕರಣದಲ್ಲಿ ಅನೇಕರು ಸುಪ್ರೀಮ್ ಕೋರ್ಟಿನ ತೀರ್ಪನ್ನು ಪ್ರಶ್ನಿಸಿದ್ದಾರೆ. ಆ ಹಕ್ಕು ಅವರಿಗೆ ಇದೆ. ಆದರೆ ಅದಕ್ಕೆ ಅವರು ಸೂಕ್ತ ವೇದಿಕೆಯನ್ನು ಆರಿಸಿಕೊಳ್ಳಬೇಕು. ಈಗ ಜಾರಿಗೆ ಬಂದಿರುವ ಶಿಕ್ಷೆಯನ್ನಂತೂ ಹಿಂದಕ್ಕೆ ಪಡೆಯುವುದು ಸಾಧ್ಯವಿಲ್ಲ. ಒಂದಲ್ಲ ಒಂದು ಹಂತದಲ್ಲಿ ನ್ಯಾಯಾಂಗದ ಅಂತಿಮ ತೀರ್ಪನ್ನು ಒಪ್ಪಿಕೊಳ್ಳಲೇ ಬೇಕು. ಶಾಂತಿ- ಸುವ್ಯವಸ್ಥೆಯ ಪಾಲನೆಯ ಕರ್ತವ್ಯ ಗೃಹ ಮಂತ್ರಾಲಯದ್ದೇ. ಅದರಲ್ಲಿ ಚ್ಯುತಿ ಬರಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

