ದೇವರು ಎಲ್ಲ ಬಾಗಿಲುಗಳನ್ನೂ ಮುಚ್ಚಿದರೂ ಸಹ ಕಿಟಕಿಯನ್ನು ತೆರೆದಿರುತ್ತಾನೆ. ಮುಚ್ಚಿದ ಬಾಗಿಲನ್ನು ತೆರೆಯುವ ಪ್ರಯತ್ನ ಮಾಡುವುದರ ಬದಲಾಗಿ, ಕಿಟಕಿಯಿಂದ ಬರುವ ತಂಗಾಳಿಯನ್ನು ಬರಮಾಡಿಕೊಳ್ಳಬೇಕು. ಇದು ಅಲೆಕ್ಸಿಸ ಲಿಯಾನ್ರಿಗೆ ಸರಿಯಾಗಿ ಒಪ್ಪುತ್ತದೆ. ಇವರ್ಯಾರೋ ವಿದೇಶದವರಲ್ಲ. ನಮ್ಮವರೇ. ತ್ರಿವೇಂದ್ರಂನ ಈ ಪ್ರತಿಭೆ ಬಿ.ಟೆಕ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿ, 'ಕೃತಕ ಬುದ್ಧಿವಂತಿಕೆ' ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಚೆನ್ನೈನಲ್ಲಿ ಟಾಟಾ ಕನ್ಸಲ್ಟೆನ್ಸಿಯಲ್ಲಿ ಸೇವೆಗೆ ಸೇರಿದರು. 1993ರಲ್ಲಿ ತಮ್ಮ ಭಾವಿಪತ್ನಿಯನ್ನು ಭೇಟಿಮಾಡಲು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಎರಡೂ ಕಾಲುಗಳನ್ನೂ ಕಳೆದುಕೊಂಡರು. ಮದುವೆ ಮುರಿದು ಬಿತ್ತು. ಆದರೂ ಟಿಸಿಎಸ್ ಅವರ ಕೈಬಿಡಲಿಲ್ಲ. ಮತ್ತೆ ಕೆಲಸಕ್ಕೆ ಸೇರಿದ ಅಲೆಕ್ ಯೋಚಿಸಲು ಪ್ರಾರಂಭಿಸಿದರು. ಕಳೆದುಕೊಂಡಿದ್ದನ್ನು ಬಿಟ್ಟು ತಮ್ಮಲ್ಲಿರುವ ಪ್ರತಿಭೆಯನ್ನುಪಯೋಗಿಸಿ ಏನಾದರೂ ಸಾಧನೆಮಾಡಬೇಕು. ದೇಶದಲ್ಲಿ ಆಗ ಬೆಲೆಬಾಳುವ ವಿದೇಶಿ ಕಂಪ್ಯೂಟರ್ ಪುಸ್ತಕಗಳು ಮಾತ್ರ ದೊರೆಯುತ್ತಿದ್ದವು. ಆಗ ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆ ಏಕೆ ಪುಸ್ತಕಗಳನ್ನು ಬರೆಯಬಾರದು ಎನ್ನಿಸಿ ಬರೆದ ಮೊದಲ ಪುಸ್ತಕ 'ಕಸ್ಟಮರ್ ಇನ್ಫರ್ಮೇಶನ್ ಕಂಟ್ರೋಲ್ ಸಿಸ್ಟಂ' ಅದನ್ನು ಪ್ರಕಟಿಸಲು ದೆಹಲಿಯ ಪುಸ್ತಕ್ ಮಹಲ್‌ನವರು ಮುಂದೆ ಬಂದರು. 280 ಪುಟಗಳ ಈ ಪುಸ್ತಕ ಸಾವಿರಾರು ಸಂಖ್ಯೆಯಲ್ಲಿ ಖರ್ಚಾಗಿ ಹೆಸರು ತಂದುಕೊಟ್ಟಾಗ ಅವರಿಗೆ ತಮ್ಮ ಶ್ರಮ ಸಾರ್ಥಕ ಎನ್ನಿಸಿತು. ನಂತರ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವೆಲ್ಲ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಖರ್ಚಾಗಿವೆ. 'ಇಂಟರ್‌ನೆಟ್ ಫಾರ್ ಎವೆರಿ ಒನ್' ಪುಸ್ತಕವಂತೂ ಮಾರಾಟದಲ್ಲಿ ದಾಖಲೆ ಮಾಡಿದೆ. ಇದುವರೆಗೆ ಅದರ ಒಂದು ಲಕ್ಷ ಪ್ರತಿಗಳು ವಿಶ್ವಾದ್ಯಂತ ಮಾರಾಟವಾಗಿದ್ದು ಇಂದಿಗೂ ಪ್ರತಿವರ್ಷ ಎರಡೂವರೆ ಸಾವಿರದಷ್ಟು ಪ್ರತಿಗಳಿಗೆ ಬೇಡಿಕೆ ಬರುತ್ತಿದೆ. ಇದು ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನೂ, ಹಣವನ್ನೂ ತಂದುಕೊಟ್ಟಿದೆ. ಅನೇಕರು ಅಲೆಕ್ಸಿಸ್ ಅವರ ಹೆಸರು ಕೇಳಿ ವಿದೇಶೀಯರು ಎಂದೇ ಭಾವಿಸಿದ್ದಾರೆ! ಭಾರತದ ಪ್ರಸಿದ್ಧ ಪ್ರಕಟನಾ ಸಂಸ್ಥೆಯಾದ ಟಾಟಾ ಮೆಕ್‌ಗ್ರಾಹಿಲ್ ಸಂಸ್ಥೆಯು ಅಲೆಕ್ಸ್‌ರ ಹದಿನೈದು ಪುಸ್ತಕಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಎರಡು ಪುಸ್ತಕಗಳು ಚೀನೀ ಭಾಷೆಗೂ ತರ್ಜುಮೆಯಾಗಿ ಜನಪ್ರಿಯತೆ ಜೊತೆಗೆ ಹಣವನ್ನೂ ತಂದುಕೊಟ್ಟಿವೆ. ಇದೀಗ ಪೂರ್ಣಪ್ರಮಾಣದ ಲೇಖಕರಾಗಿ ಹೆಸರು ಗಳಿಸಿರುವ ಅವರು, ಇಂದಿಗೂ ಗಾಲಿ ಕುರ್ಚಿಯಲ್ಲಿ ಕುಳಿತು ಕುಟುಂಬದ ಬತ್ತದ ಗದ್ದೆಗಳಿಗೆ ಹೋಗಿ ಅಲ್ಲಿ ಹಕ್ಕಿಗಳನ್ನು ಮತ್ತು ಮೊಲಗಳು ಓಡಾಡುವುದನ್ನು ವೀಕ್ಷಿಸುತ್ತಾರೆ. ಅವರು ಯಾವಾಗಲೂ ಹೇಳುವುದು ಹೀಗೆ: 'ನನಗೆ ಅಪಘಾತವಾಗದಿದ್ದರೆ ಬಹುಶಃ ನಾನು ಪುಸ್ತಕಗಳನ್ನು ಬರೆಯುತ್ತಿರಲಿಲ್ಲ!' ಜೀವನದಲ್ಲಿ ನಿರಾಶರಾದವರಿಗೆ ಇದೊಂದು ಪಾಠವಾಗಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ