ಸಂಪಾದಕೀಯ

'ಮತಾಧೀಶ'ನಿಗಿಂತ ಮಠಾಧೀಶರಿಗೇ ಒಲವು

Published On :

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಂಡಿಸಿದ ಮುಂಗಡ ಪತ್ರದಲ್ಲಿ ಮತಾಧೀಶನಿಗಿಂತ ಮಠಾಧೀಶರ ಬಗ್ಗೆ ಹೆಚ್ಚು ಒಲವು ತೋರಲಾಗಿದೆ. ಮುಖ್ಯಮಂತ್ರಿಗಳು 43 ಹೊಸ ತಾಲೂಕು ರಚನೆ ಬಗ್ಗೆ ಘೋಷಣೆ, ಅಂಗವಿಕಲರ, ವಿಧವಾ ವೇತನ ಹೆಚ್ಚಳ, ಭಾಗ್ಯಲಕ್ಷ್ಮೀ ಯೋಜನೆಗೆ ಹೆಚ್ಚುವರಿ ಹಣ, ಅನೇಕ ರಿಯಾಯ್ತಿಗಳ ಮೂಲಕ ಘೋಷಿಸಿದ ಬಜೆಟ್ ಸ್ವಾಗತಾರ್ಹ. ಆದರೆ 100 ಕೋಟಿಗೂ ಅಧಿಕ ಅನುದಾನ ಮಠ ಮಾನ್ಯಗಳಿಗೆ ನೀಡಿದ್ದು, ಜನಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.
     ಹಿಂದೆ ಯಾವ ಸರ್ಕಾರದಲ್ಲಿಯೂ ಮಠಗಳು ರಾಜಕೀಯದಲ್ಲಿ ಇಷ್ಟೊಂದು ಸಕ್ರಿಯವಾಗಿದ್ದಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ಮಠಗಳು ಮಠಾಧೀಶರು ಆವಶ್ಯಕತೆಗಿಂತ ಹೆಚ್ಚು ಸಕ್ರಿಯವಾಗಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ನಿತ್ಯ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಯಾರಾದರೂ ಒಬ್ಬ ಮಠಾಧೀಶರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಹೋದಲ್ಲೆಲ್ಲಾ ಮಠಗಳಿಗೆ ಕೋಟಿಗಟ್ಟಲೇ ಹಣ ಮಂಜೂರು ಮಾಡುತ್ತಿದ್ದರು. ಇದರಿಂದ ಸಹಜವಾಗಿ ಅವರು ಪೀಠಾಧಿಪತಿಗಳಿಗೆ ಹತ್ತಿರವಾಗುತ್ತಾ ಬಂದರು. ಇದರಿಂದಾಗಿಯೇ ಜರ್ನಾದನ ರೆಡ್ಡಿಯವರು ಸುಮಾರು 40-50 ಭಿನ್ನ ಶಾಸಕರನ್ನು ಕರೆದುಕೊಂಡು ಯಡಿಯೂರಪ್ಪನವರ ವಿರುದ್ಧ ಬಂಡಾಯ ಸಾರಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಮಠಾಧೀಶರು ಬೀದಿಗಿಳಿದು ಯಡಿಯೂರಪ್ಪನವರ ಪರ ಹೋರಾಟ ಮಾಡಿದ್ದರು. ಒಬ್ಬಿಬ್ಬ ವಿಚಾರವಂತ ಮಠಾಧೀಶರು ಮಾತ್ರ ಈ ಕ್ರಮವನ್ನು ಖಂಡಿಸಿದ್ದರು. ಇತ್ತೀಚೆಗೆ ಜಗದೀಶ ಶೆಟ್ಟರ್ ಅವರ ಸರ್ಕಾರ ಶಾಸಕರ ರಾಜೀನಾಮೆಯಿಂದಾಗಿ ಡೋಲಾಯಮಾನ ಸ್ಥಿತಿ ತಲುಪಿದಾಗ 50ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೆಂಬಲ ನೀಡಿದ್ದಲ್ಲದೆ ಬಜೆಟ್‌ನಲ್ಲಿ ಮಠಗಳಿಗೆ ಅನುದಾನ ನೀಡಲು ಕೋರಿದ್ದಕ್ಕಾಗಿ ಅವರ ಋಣ ತೀರಿಸಲು ಇದೀಗ ಶೆಟ್ಟರ್ ಅವರು ಕೋಟಿಗಟ್ಟಲೇ ಹಣವನ್ನು ಮಠಗಳಿಗೆ ನೀಡಿದ್ದಾರೆ. ಯಡಿಯೂರಪ್ಪನವರಿಗೆ ಶೆಟ್ಟರ್ ಸರ್ಕಾರ ಕೆಡವದಂತೆ ಮಠಾಧೀಶರು ತಾಕೀತು ಮಾಡಿದ್ದರು. ಆದರೆ ಮಠಗಳಿಗೆ ನೀಡುವ ಹಣ ಮುಖ್ಯಮಂತ್ರಿಗಳ ಸ್ವಂತದ್ದಲ್ಲ. ಬಿಜೆಪಿ ಪಕ್ಷದ್ದೂ ಅಲ್ಲ. ಅದು ಜನಸಾಮಾನ್ಯರ ತೆರಿಗೆ ಹಣ. ಅನುದಾನ ಪಡೆದುಕೊಂಡ ಮಠಗಳು ನೂರಾರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿ ಹೊಂದಿವೆ. ಅಷ್ಟೇ ಅಲ್ಲ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಮಠದ ಆಸ್ತಿಯನ್ನು ಪುಕ್ಕಟೆ ನೀಡಿದೆ. ಈ ಕ್ರಮವನ್ನು ವಿರೋಧಿಸಿದರೆ ಅಂಥವರಿಗೆ ನಿರ್ದಿಷ್ಟ ಜಾತಿ ವಿರೋಧಿ ಎಂದು ಹಣೆಪಟ್ಟಿ ಕಟ್ಟುವರು.
      ಇದೇ ಮಠಾಧೀಶರು ಹಿಂದೆ ದಿ. ನಿಜಲಿಂಗಪ್ಪನವರ ರಾಜಕೀಯ ಕಷ್ಟ ಕಾಲದಲ್ಲಿ ಸೊಲ್ಲೆತ್ತಲಿಲ್ಲ. ದಿ. ವೀರೇಂದ್ರ ಪಾಟೀಲರ ಸರ್ಕಾರ ಪತನಗೊಂಡಾಗ ಯಾರೂ ಅವರ ಪರವಾಗಿ ನಿಲ್ಲಲಿಲ್ಲ. 1989-90ರಲ್ಲಿ ಮುಖ್ಯಮಂತ್ರಿ ಪದವಿಯಿಂದ ಪದಚ್ಯುತಿಗೊಂಡಾಗ ಯಾರೂ ಬೆಂಬಲಿಸಲಿಲ್ಲ. ದಿ. ಎಸ್.ಆರ್. ಬೊಮ್ಮಾಯಿಯವರು ಅಧಿಕಾರ ಕಳೆದುಕೊಂಡಾಗ ಎಲ್ಲರೂ ತಮ್ಮ ಪಾಡಿಗೆ ತಾವಿದ್ದರು. ಮುಖ್ಯಮಂತ್ರಿಗಳಾಗಿದ್ದ ದಿ. ಜೆ.ಹೆಚ್. ಪಟೇಲರನ್ನು ದೇವೇಗೌಡರು ಕಾಡಿದಾಗ ಪಟೇಲರ ಪರವಾಗಿ ಯಾರೂ ಹೇಳಿಕೆ ನೀಡಲಿಲ್ಲ. ಅವತ್ತು ಯಾರಿಗೂ ಧರ್ಮದ ಬಗ್ಗೆ ಕಲ್ಪನೆ ಬಾರದ್ದು ಈಗ ಯಡಿಯೂರಪ್ಪ, ಜಗದೀಶ ಶೆಟ್ಟರ್ ಬಗ್ಗೆ ಅನುಕಂಪ ಕಾರಣ ಅವರು ನೀಡುವ ಅನುದಾನ. ದಿ. ನಿಜಲಿಂಗಪ್ಪ, ದಿ. ವೀರೇಂದ್ರ ಪಾಟೀಲ ಇವರೆಲ್ಲಾ ಪ್ರಾಮಾಣಿಕ ರಾಜಕಾರಣಿಗಳಾಗಿದ್ದು ಮಠಾಧೀಶರನ್ನು ಓಲೈಸಲು ಯಾರೂ ಮಠಗಳಿಗೆ ದುಡ್ಡು ಕೊಡಲಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ಯಾವುದೇ ವಿವೇಚನೆ ಇಲ್ಲದೆ ನೀಡುವ ಮುಖ್ಯಮಂತ್ರಿಗಳಿಗೆ ಪ್ರಗತಿಪರ ಚಿಂತಕ ಮಠಾಧೀಶರು ತಿಳಿಹೇಳಬೇಕು. ಭಕ್ತರಿಂದ ಸಾಕಷ್ಟು ವಂತಿಗೆ, ಸಹಾಯ ಪಡೆಯುವ ಅಪಾರ ಆಸ್ತಿಪಾಸ್ತಿ ಹೊಂದಿರುವ ಮಠಗಳು ಈ ಅನುದಾನ ತಿರಸ್ಕರಿಸಿ ಮಾದರಿಯಾಗಬೇಕು.
-ವೇದವ್ಯಾಸ ಕೌಜಲಗಿ, ಹುಬ್ಬಳ್ಳಿ

-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.