ದೊಡ್ಡವರ ದೊಡ್ಡ ಜಗಳ
ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ, ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಹಾಗೂ ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ, ವಿಖ್ಯಾತ ವಕೀಲ ಅರುಣ ಜೇಟ್ಲಿ ನಡುವೆ ಈಗ ನಡೆದಿರುವ ವಾದ- ವಿವಾದ ತನ್ನ ಗರ್ಭದಲ್ಲಿ ಒಂದು ಗಂಭೀರ ಸಮಸ್ಯೆಯನ್ನು ಅಡಗಿಸಿಕೊಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ನ್ಯಾಯಮೂರ್ತಿಗಳ ವಿಚಾರದಲ್ಲಿ, ನಮ್ಮ ಮುಗ್ಧ ಜನ, ತುಂಬಾ ಗೌರವ- ವಿಶ್ವಾಸವನ್ನು ಹೊಂದಿರುವುದು ನಿಜ. ಅವರು ನಿವೃತ್ತರಾದ ಅನಂತರವೂ ಅದೇ ಸಂಪ್ರದಾಯ ಪಾಲನೆಯಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅದರಲ್ಲೂ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳೆಂದರೆ ಜನರಿಗೆ ಈಗಲೂ ಅಪಾರ ಗೌರವವಿದೆ.
ಮಾರ್ಕಂಡೇಯ ಕಾಟ್ಜು, ಈಗ ಅರೆನ್ಯಾಯ ಸಂಸ್ಥೆಯ ಅಧಿಕಾರ ಹೊಂದಿರುವ ಸಂವಿಧಾನಾತ್ಮಕ ಸ್ವಾಯತ್ತ ಸಂಸ್ಥೆಯ (ಪತ್ರಿಕಾ ಮಂಡಳಿ) ಅಧ್ಯಕ್ಷರು. ಜನ ಅವರಿಂದ ನಿಷ್ಪಕ್ಷಪಾತವಾದ ಹಾಗೂ ಗಂಭೀರವಾದ ವರ್ತನೆಯನ್ನು ಅಪೇಕ್ಷಿಸುತ್ತಾರೆ. ಈಚಿನ ಕೆಲವು ದಿನಗಳಲ್ಲಿ ಕಾಟ್ಜು ಅವರು ಬಿಹಾರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ಗುಜರಾತ್ ರಾಜ್ಯದಲ್ಲಿ ನರೇಂದ್ರ ಮೋದಿಯ ಸಾಧನೆ ಮಹತ್ವದ್ದೇನೂ ಅಲ್ಲ ಎಂದೂ ಹೇಳಿದ್ದರು. ಪಶ್ಚಿಮ ಬಂಗಾಳ ಸರ್ಕಾರದ ವರ್ತನೆಯನ್ನು ಖಂಡಿಸಿದ್ದರು. ಹಿಂದೂ ಪತ್ರಿಕೆಗೆ ಬರೆದ ಒಂದು ಲೇಖನದಲ್ಲಿ ಗುಜರಾತ್ ರಾಜ್ಯದ ಪ್ರಸ್ತಾಪ ಸಾಕಷ್ಟಿದೆ. ಅದು ನರೇಂದ್ರ ಮೋದಿ ತೇಜೋವಧೆ. ಹೀಗಾಗಿ ಕಾಟ್ಜು ಕಾಂಗ್ರೆಸ್ ವಿರೋಧಿ ಶಕ್ತಿಗಳ ವಿರುದ್ಧ ಟೀಕಾಕಾರರಾಗಿ ಪರಿವರ್ತನೆಯಾಗಿ ಬಿಟ್ಟಿದ್ದಾರೇನೋ ಎನ್ನುವ ಪ್ರಶ್ನೆ ಅನೇಕರಲ್ಲಿ ಉದ್ಭವವಾಗಿದ್ದು ಸಹಜ.
ಸಾರ್ವಜನಿಕ ವಿವಾದಗಳು ಹಾಗೂ ಸಂಗತಿಗಳನ್ನು ಕುರಿತು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿರುವ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳು ಅನೇಕರಿದ್ದಾರೆ. ಅವರಲ್ಲಿ ಕೆಲವರು ರಾಜಕೀಯ ರಂಗವನ್ನು ಪ್ರವೇಶಿಸಿ ಸಕ್ರಿಯವಾಗಿ ಸರ್ಕಾರವನ್ನು ಟೀಕಿಸಿದ್ದೂ ಉಂಟು. ವಿ.ಆರ್. ಕೃಷ್ಣಯ್ಯರ್, ಸದಾನಂದ ಹೆಗ್ಡೆ, ಚಿನ್ನಪ್ಪರೆಡ್ಡಿ ಅವರು ಹಲವಾರು ವಿಷಯಗಳಲ್ಲಿ ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ. ಆಗ ಯಾರ ಆಕ್ಷೇಪವೂ ಇರಲಿಲ್ಲ. ಆಗ ಅವರ್ಯಾರೂ ಯಾವುದೇ ಸಂವಿಧಾನಾತ್ಮಕ ಸ್ವಾಯತ್ತ ಮಂಡಳಿಗಳ ಮುಖ್ಯಸ್ಥರಾಗಿರಲಿಲ್ಲ. ಆದ್ದರಿಂದಲೇ ಅವರ ಅಭಿಪ್ರಾಯಗಳು ವಿವಾದಗಳನ್ನು ಸೃಷ್ಟಿಸಿರಲಿಲ್ಲ.
ಆದರೆ ಮಾರ್ಕಂಡೇಯ ಕಾಟ್ಜು, ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ, ನರೇಂದ್ರ ಮೋದಿ, ಬಿಹಾರ ಸರ್ಕಾರವನ್ನು ಟೀಕಿಸಿದ್ದು ಎಷ್ಟು ಸರಿ? ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ಅವರ ಮುಂದೆ ಈ ವಿಷಯದಲ್ಲಿ ದೂರು, ಅರ್ಜಿಗಳು ಬಂದಿದ್ದವೇ ಎನ್ನುವ ಪ್ರಶ್ನೆ ತೀರ ಸಹಜ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ ಜೇಟ್ಲಿ ಸಕ್ರಿಯ ರಾಜಕಾರಣಿ. ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರು. ಸಹಜವಾಗಿಯೇ ಕಾಟ್ಜು ಅವರ ಹೇಳಿಕೆಗಳಿಂದ ಕೆರಳಿ ಅವರು ಒಂದು ಸುದೀರ್ಘ ಹೇಳಿಕೆಯನ್ನೇ ಪ್ರಕಟಿಸಿ, ಕಾಟ್ಜು ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಒತ್ತಾಯ ಪಡಿಸಿದ್ದಾರೆ.
ಕಾಟ್ಜು ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ತಾವು ಹಿಂದೆ ಕಾಂಗ್ರೆಸ್ ಸರ್ಕಾರಗಳನ್ನು ಟೀಕಿಸಿದ್ದೂ ಉಂಟು ಎಂದಿದ್ದಾರೆ. ಇಲ್ಲಿ ಪ್ರಸ್ತಾಪವಾಗುತ್ತಿರುವುದು ಪತ್ರಿಕಾ ಮಂಡಳಿಯ ತೀರ್ಪುಗಳಲ್ಲ. ಬಹಿರಂಗ ಭಾಷಣ, ಹೇಳಿಕೆಗಳದ್ದು. ಅದರಲ್ಲೂ ಕಾಟ್ಜು, ಅರುಣ ಜೇಟ್ಲಿ ಅವರು ರಾಜಕೀಯದಿಂದಲೇ ನಿವೃತ್ತರಾಗಬೇಕೆಂದು ಹೇಳಿರುವುದನ್ನು ಯಾರೂ ಮೆಚ್ಚುವಂತಿಲ್ಲ. ಈಗ ಈ ವಿವಾದ ಕಾಂಗ್ರೆಸ್- ಬಿಜೆಪಿ ನಡುವಣ ರಾಜಕೀಯ ಜಟಾಪಟಿಗೆ ವೇದಿಕೆಯನ್ನು ಸೃಷ್ಟಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಿವೃತ್ತ ನ್ಯಾಯಮೂರ್ತಿಗಳನ್ನು ಮಂಡಳಿ, ಸಮಿತಿ, ಆಯೋಗಗಳಿಗೆ ನೇಮಿಸುವ ಪ್ರವೃತ್ತಿ ಎಷ್ಟು ಸರಿ ಎನ್ನುವ ವಿವಾದ ಹಳೆಯದು. ಕಾಟ್ಜು - ಜೇಟ್ಲಿ ವಿವಾದ ಸ್ವಾಯತ್ತ ಸಂಸ್ಥೆಗಳ ಅಧ್ಯಕ್ಷರ ವರ್ತನೆ ಕುರಿತ ವಿವಾದ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದ್ದರೂ, ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಸಂಯಮವನ್ನು ಪ್ರದರ್ಶಿಸುವ ಅಗತ್ಯವಿದೆ. ಅದಕ್ಕೆ ಕಾನೂನು ರಚಿಸುವುದು ಅಸಾಧ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

