ಹಣ ದುರುಪಯೋಗ ನಿಲ್ಲಲಿ
ಬಜೆಟ್ ಎಂದರೆ ಒಂದು ವರ್ಷದ ಅವಧಿಯ ಪೂರ್ವಭಾವಿಯಾದ ಆರ್ಥಿಕ ಯೋಜನೆಯಾಗಿದ್ದು, ಇದರ ಮೇಲೆ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಆದರೆ ಕೊನೆಗೊಂಡ ಬಜೆಟ್ ಮಂಡನೆಯು ಮಳೆಯನ್ನು ಅವಲಂಬಿಸಿ ಬೀಜ ಬಿತ್ತಿದ ರೈತನ ಸ್ಥಿತಿಯಂತಾಗಿತ್ತು. ಯಾಕೆಂದರೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆಯಲ್ಲೇನಾದರೂ ಕಡಿತವಾಗುವುದೆಂಬ ನಿರೀಕ್ಷೆಯಿಂದ ಇದ್ದ ಜನಸಾಮಾನ್ಯರಿಗೆ ಹಾಲಿನ ದರದ ಏರಿಕೆಯಿಂದಾಗಿಯೇ ನಿರಾಸೆ ಮೂಡಿತು. ಇದರ ಜೊತೆಗೆ ಮಠ ಹಾಗೂ ಸಂಘ ಸಂಸ್ಥೆಗಳಿಗೆ ಕೋಟಿ ಕೋಟಿ ಹಣ ಅನುದಾನ ನೀಡಿದ್ದು ಅಚ್ಚರಿ ಹಾಗೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು. ಇದು ಮುಂದಿನ ಚುನಾವಣಾ ಸಿದ್ಧತೆಗಾಗಿನ ಗಿಮಿಕ್ ಎಂಬುದು ಯಾರಿಗಾದರೂ ತಿಳಿಯುತ್ತದೆ.
ನೂರಾರು ವರ್ಷಗಳ ಇತಿಹಾಸವಿರುವ ಮಠ ಸಂಸ್ಕೃತಿ, ಜೊತೆಗೆ ಮಠಾಧೀಶರುಗಳ ತತ್ವ ಆದರ್ಶಗಳು ಸಮಾಜದ ಆದರ್ಶಗಳಾಗಿರುವುದನ್ನು ಹಿಂದೆ ಕಾಣಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೆ ಇದ್ದಂತಹ ಯಾವುದೇ ತತ್ವ ಆದರ್ಶಗಳು ಕಾಣುತ್ತಿಲ್ಲ. ಆದರೆ ಎಲ್ಲರೂ ಕೆಟ್ಟವರು ಎಂದು ಹೇಳುತ್ತಿಲ್ಲ, ಒಳ್ಳೆಯವರೂ ಇರುತ್ತಾರೆ. ಆದರೆ ಮಠಾಧೀಶರುಗಳೆಲ್ಲರೂ ಸಹ ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಮೂಲಕ ಅನುದಾನ ಪಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸಮಂಜಸ ಎನ್ನುವ ಪ್ರಶ್ನೆ ಕೇಳಿಕೊಳ್ಳಬೇಕಿದೆ.
ಇದಕ್ಕೆ ನಾವೇ ಆಯ್ಕೆ ಮಾಡಿದಂತಹ ಜನಪ್ರತಿನಿಧಿಗಳು ಪ್ರೋತ್ಸಾಹದಾಯಕವಾಗಿ ಕೋಟಿ ಕೋಟಿ ರುಪಾಯಿ ಅನುದಾನ ನೀಡುತ್ತಿದ್ದಾರೆ. ಜನಸಾಮಾನ್ಯರ ತೆರಿಗೆ ಹಣವನ್ನು ಈ ರೀತಿಯಲ್ಲಿ ದುರುಪಯೋಗ ಮಾಡುತ್ತಿರುವುದು ಎಷ್ಟು ಸರಿ?
- ಮಧುದೇವರಾಜ್.ಕೆ., ಹಾಸನ
ಪಕ್ಷಾಂತರಿಗಳಿಗೆ ಪಾಠ ಕಲಿಸಬೇಕು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾದಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರಿಗಳ ವಲಸೆ ಕಾರ್ಯ ಚುರುಕುಗೊಂಡಿದೆ. ಅಧಿಕಾರ ಹಾಗೂ ಸೂಕ್ತ ಸ್ಥಾನಮಾನ ಕೊಡಲು ನಿರಾಕರಿಸಿದ ಪಕ್ಷಗಳನ್ನು ಕೈಬಿಟ್ಟು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬೇರೆ ಬೇರೆ ಪಕ್ಷಗಳತ್ತ ಹೆಜ್ಜೆ ಇಡುವ ಲಜ್ಜೆಗೆಟ್ಟ ರಾಜಕಾರಣಿಗಳ ಈ ವರ್ತನೆ ಖಂಡನಾರ್ಹವಾದದ್ದು. ಒಂದು ಪಕ್ಷವನ್ನು ಸೇರಿದ ಮೇಲೆ ಆ ಪಕ್ಷದ ತತ್ವ ಸಿದ್ಧಾಂತಗಳಿಗೆ ನಿಷ್ಠರಾಗಿದ್ದುಕೊಂಡು ಜನಸೇವೆ ಮಾಡುವುದು ಪ್ರತಿಯೊಬ್ಬ ರಾಜಕಾರಣಿಯ ಆದ್ಯ ಕರ್ತವ್ಯ. ಆದರೆ ಸೇರಿದ ಪಕ್ಷದಿಂದ ಹೆಸರು, ಅಧಿಕಾರ ಎಲ್ಲವನ್ನೂ ಅನುಭವಿಸಿ ಚುನಾವಣಾ ಸಮಯದಲ್ಲಿ ಈ ರೀತಿಯ ಗೋಸುಂಬೆ ವರ್ತನೆಯನ್ನು ತೊರ್ಪಡಿಸುವುದು ಎಷ್ಟು ಸರಿ? ಜನಸೇವೆ ಮಾಡುವ ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗಿರಬೇಕೇ ಹೊರತು, ತಮ್ಮಗಳ ಈ ರೀತಿಯ ದಿಕ್ಕುತಪ್ಪಿದ ವರ್ತನೆಗಳಿಂದ ಜನರನ್ನು ಹಾದಿ ತಪ್ಪಿಸುವುದು ತರವಲ್ಲ. ಇಂತಹ ರಾಜಕಾರಣಿಗಳ ಬಗ್ಗೆ ಮತದಾರ ಎಚ್ಚರದಿಂದಿದ್ದು ಚುನಾವಣಾ ಸಮಯದಲ್ಲಿ ಸರಿಯಾದ ಬುದ್ಧಿ ಕಲಿಸಬೇಕು.
- ಹರಳಹಳ್ಳಿಪುಟ್ಟರಾಜು, ಪಾಂಡವಪುರ.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

