ಅನಿಬೆಸೆಂಟ್ ಓದಿಸಿದ ಹುಡುಗ ಯಾರು?

Updated on: 

ಅನಿಬೆಸೆಂಟ್ ಲಂಡನ್ನಿನಲ್ಲಿ ಜನಿಸಿದ ಐರಿಷ್ ಮಹಿಳೆ. ಅದ್ಭುತ ವಾಗ್ಮಿ ಮತ್ತು ಬರಹಗಾರರಾಗಿದ್ದ ಅವರು ಭಾರತಕ್ಕೆ 1893ಕ್ಕೆ ಬಂದು ಇಲ್ಲಿನ ಥಿಯಾಸಫಿಕಲ್ ಸೊಸೈಟಿಯ ಸದಸ್ಯರಾದರು. ನಂತರ ಅದರ ಅಧ್ಯಕ್ಷರಾದರು. ಸಾಮಾಜಿಕ ಕಾರ್ಯಕರ್ತೆಯಾಗಿ ಭಾರತೀಯರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೆಂಬಲಿಸಿದರು. ನಂತರ ಅವರು ಭಾರತೀಯ ಕಾಂಗ್ರೆಸ್ ಸೇರಿ, ಲೋಕಮಾನ್ಯ ಬಾಲಗಂಗಾಧರ ತಿಲಕರೊಡಗೂಡಿ ಹೋಂ ರೂಲ್ ಲೀಗ್ ಸ್ಥ್ಥಾಪಿಸಿ ಚಳುವಳಿಯಲ್ಲಿ ಸಕ್ರಿಯ ಪಾತ್ರವಹಿಸಿದರು. ವೇದಗಳನ್ನೂ ಅಭ್ಯಾಸ ಮಾಡಿದ್ದರು. ಅವುಗಳನ್ನವರು ಭಾರತದ ತತ್ವಶಾಸ್ತ್ರದ ಶಿಖರಗಳು ಎಂದು ನಂಬಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದಕ್ಕೆ ಕೆಲವು ಬಾರಿ ಸೆರೆಮನೆವಾಸವನ್ನೂ ಅನುಭವಿಸಿದ್ದರು. ಬನಾರಸ್‌ನಲ್ಲಿ ಸೆಂಟ್ರಲ್ ಹಿಂದು ಕಾಲೇಜನ್ನು ಸ್ಥಾಪಿಸಿದರು.
1905ರಲ್ಲೊಮ್ಮೆ ಅವರು ಮದ್ರಾಸಿನ ರಸ್ತೆಯೊಂದರಲ್ಲಿ ಹೋಗುತ್ತಿದ್ದಾಗ ತಮಗಿಂತ ಸ್ವಲ್ಪ ದೂರದಲ್ಲಿ ನಡೆಯುತ್ತಿದ್ದ ಬಾಲಕನ ಹತ್ತಿರ ಓಡಿಹೋಗಿ, ಅವನ ಕೈಹಿಡಿದರು. ಆದರೆ ಆ ಬಾಲಕ ಹೆದರಿ ಕೊಸರಿಕೊಂಡು, ಅವರಿಂದ ತಪ್ಪಿಸಿಕೊಂಡು ಓಡಿಹೋದ. ಕೊನೆಗೂ ಅವನು ಅವರಿಗೆ ಸಿಕ್ಕಾಗ ಜನ ಸೇರಿದರು. ಅವನನ್ನು ಹಿಡಿದ ಕಾರಣ ಕೇಳಿದರು. ಅದಕ್ಕೆ ಬೆಸೆಂಟ್ ಹೇಳಿದರು. ಈ ಹುಡುಗನ ಶಿರೋಭಾಗದಲ್ಲಿ ನಾನು ಬೆಳಕಿನ ಪ್ರಭಾವಳಿ ಕಂಡೆ. ಇವನೊಬ್ಬ ಅದ್ಭುತ ಬಾಲಕನಿರಬೇಕು. ಇವನಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಪ್ರತಿಭಾಶಾಲಿಯಾಗುತ್ತಾನೆ. ಆದ್ದರಿಂದ ಇವನು ನನಗೆ ಬೇಕು ಎಂದರು. ಕೊನೆಗೆ ಅನಿಬೆಸೆಂಟರನ್ನು ಆ ಹುಡುಗನ ತಂದೆಯ ಬಳಿ ಕರೆದೊಯ್ಯಲಾಯಿತು. ಅವರೊಬ್ಬ ನಿವೃತ್ತ ತಹಸೀಲ್ದಾರರಾಗಿದ್ದು ತುಂಬಾ ಬಡತನದಲ್ಲಿದ್ದರು. ಮನೆಯಲ್ಲಿ ಇನ್ನೂ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ತಾಯಿಯಿಲ್ಲದ ಬಾಲಕನನ್ನು ವಿಚಾರಿಸುವವರೇ ಇರಲಿಲ್ಲ. ಹರುಕುಬಟ್ಟೆ, ಮಾಸಿದ ಮೈ ಹೊತ್ತ ಬಾಲಕ ನೆಲೆಯಿಲ್ಲದೆ ಓಡಾಡುತ್ತಿದ್ದ.  ಆತನನ್ನು ಕಳಿಸಿಕೊಡಲು ಅನುಮತಿ ದೊರೆತ ಕೂಡಲೇ ಆ ಬಾಲಕನನ್ನು ಕರೆದೊಯ್ದು ಮೊದಲು ಶುಭ್ರವಾಗಿ ಸ್ನಾನಮಾಡಿಸಿ, ಹೊಸ ಬಟ್ಟೆ ಕೊಡಿಸಿದರು. ಅವನ ಕಂಗಳಲ್ಲಿ ಕಂಡ ಅಪೂರ್ವಕಾಂತಿ ಅನಿಬೆಸೆಂಟರನ್ನು ಬೆರಗುಗೊಳಿಸಿತು. ನಂತರ ಅವನನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದಿಸಿದರು. ಆ ಬಾಲಕನೇ ಜೆ.ಕೆ.ಎಂದು ಪ್ರಸಿದ್ಧರಾದ, ವಿಶ್ವಗುರು ಎಂದೇ ಖ್ಯಾತರಾದ, ಪ್ರಸಿದ್ಧ ಚಿಂತಕ ಜಿಡ್ಡು ಕೃಷ್ಣಮೂರ್ತಿ. ಮುಂದೆ ಥಿಯಾಸಫಿಕಲ್ ಸೊಸೈಟಿಯಲ್ಲಿ ಗುರುತಿಸಿಕೊಂಡ ಅವರು, ಕೊನೆಯವರೆಗೂ ಅನಿಬೆಸೆಂಟರಿಗೆ ತಾಯಿ ಸ್ಥಾನವನ್ನು ನೀಡಿದ್ದರು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com