ಪೂರ್ಣಯ್ಯನವರು ಹೈದರಾಲಿ, ಟಿಪ್ಪು ಸುಲ್ತಾನರ ಸಚಿವ ಸಂಪುಟದಲ್ಲಿದ್ದ ಏಕೈಕ ಸಚಿವರಾಗಿದ್ದರು. ಟಿಪ್ಪುವಿನ ಅಂತ್ಯದ ನಂತರ ಮೈಸೂರು ಅರಸರ ದಿವಾನರಾಗಿದ್ದರು. ಹೈದರಾಲಿ ಮರಣಿಸಿದಾಗ ಅದನ್ನು ಟಿಪ್ಪು ಯುದ್ಧದಿಂದ ಬರುವವರೆಗೂ ರಹಸ್ಯವಾಗಿಟ್ಟು ರಾಜ್ಯವನ್ನು ಟಿಪ್ಪುವಿಗೆ ವಹಿಸಿಕೊಟ್ಟ ಸ್ವಾಮಿನಿಷ್ಠರಾಗಿದ್ದರು. ಚಾಮರಾಜನಗರ ಜಿಲ್ಲೆಯ ಯಳಂದೂರು ದಿವಾನ್ ಪೂರ್ಣಯ್ಯನವರ ಜನ್ಮ ಸ್ಥಳ. ಅಲ್ಲಿ ಅವರು ಹುಟ್ಟಿಬೆಳೆದ ಒಂದು ಹಳೇಕಾಲದ ಬಂಗಲೆ ಇದೆ. 1807ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ಪೂರ್ಣಯ್ಯನವರ ಸ್ವಾಮಿ ನಿಷ್ಠೆಯನ್ನು ಮೆಚ್ಚಿ ಯಳಂದೂರು ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ಅವರಿಗೆ ಜಹಗೀರಾಗಿ ನೀಡಿದ್ದರು.
ಕೆಲಕಾಲ ಪೂರ್ಣಯ್ಯನವರ ಬಂಗಲೆ ತಾಲ್ಲೂಕು ಕಚೇರಿಗಾಗಿ ಬಳಕೆಯಾಗುತ್ತಿತ್ತು. ನಂತರ ಹೊಸ ಕಟ್ಟಡ ಕಟ್ಟಿದ ಮೇಲೆ ಅದಕ್ಕೆ ಬೀಗಬಿತ್ತು. ಅದರಲ್ಲಿ ದಿವಾನ್ ಪೂರ್ಣಯ್ಯನವರ ಐಶ್ವರ್ಯವಿರುವುದಾಗಿಯೂ, ಅದನ್ನು ಸದಾ ಒಂದು ನಾಗರ ಹಾವು ಕಾಯುತ್ತಿರುವುದಾಗಿಯೂ ಜನ ನಂಬಿದ್ದರಿಂದ ಯಾರೂ ಆ ಕಟ್ಟಡದ ಕಡೆ ಹೋಗುತ್ತಿರಲಿಲ್ಲ. 1987ರಲ್ಲಿ ತಾಹಸೀನ್ ಅಹಮದ್ ಎಂಬುವವರು ಯಳಂದೂರಿಗೆ ತಹಸೀಲ್ದಾರರಾಗಿ ಆಗಮಿಸಿದಾಗ ಅವರಿಗೆ ಹಳೆಯ ಕಡತವೊಂದು ಬೇಕಾಯಿತು. ಅದು ಒಂದು ಕಾಲದಲ್ಲಿ ತಾಲೂಕು ಕಚೇರಿಯಾಗಿದ್ದ ಪೂರ್ಣಯ್ಯನವರ ಬಂಗಲೆಯಲ್ಲಿರುವುದಾಗಿ ತಿಳಿಯಿತು. ಅದರ ಬೀಗ ತುಕ್ಕು ಹಿಡಿದಿತ್ತು. ಧೈರ್ಯಮಾಡಿ ಅದರೊಳಗೆ ಪ್ರವೇಶಿಸಿದ ತಹಶೀಲ್ದಾರರಿಗೆ ಅಲ್ಲಿ ಆಶ್ಚರ್ಯ ಕಾದಿತ್ತು. ಅಲ್ಲಿದ್ದ ಕೆಲವು ಕಬ್ಬಿಣದ ಪೆಟ್ಟಿಗೆಗಳನ್ನು ಪರೀಕ್ಷಿಸಿದಾಗ ಒಂದರಲ್ಲಿ ಅಮೂಲ್ಯವಾದ ಚಿನ್ನ ಮತ್ತು ವಜ್ರದ ಒಡವೆಗಳನ್ನು ಇನ್ನೊಂದರಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ಹಳೆಯ ಚಿನ್ನದ ನಾಣ್ಯಗಳೂ, ಅಪೂರ್ವವಾದ ದಾಖಲೆಗಳೂ ಸಿಕ್ಕವು. ಅವುಗಳನ್ನೆಲ್ಲಾ ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಯಿತು. ಸೌಜನ್ಯಕ್ಕಾದರೂ ಅಧಿಕಾರಿಗಳು ತಹಶೀಲ್ದಾರರಿಗೆ ಕೃತಜ್ಞತೆ ಅರ್ಪಿಸಲಿಲ್ಲ. ಆಗ ಕೆಲವು ಸಮಾಜದ ಗಣ್ಯರು ಇಂತಹ ಅಮೂಲ್ಯವಾದ ಸಂಪತ್ತನ್ನು ಸರ್ಕಾರಕ್ಕೆ ಪ್ರಾಮಾಣಿಕವಾಗಿ ನೀಡಿದ್ದಕ್ಕಾಗಿ ತಹಸೀಲ್ದಾರರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಶಿಫಾರಸು ಮಾಡಿದಾಗ, ಸರ್ಕಾರದಿಂದ ತಹಸೀಲ್ದಾರರಿಗೆ ಪ್ರಶಸ್ತಿಯ ಬದಲು ನೋಟಿಸ್ ಬಂತು! ಅದರಲ್ಲಿ 'ಇಷ್ಟು ವರ್ಷಗಳಿಂದ ಈ ಬಂಗಲೆಯ ಬಾಗಿಲನ್ನು ಏಕೆ ತೆಗೆಯಲಿಲ್ಲ?' ಎಂದು ವಿವರಣೆ ಕೇಳಲಾಗಿತ್ತು. ಪಾಪ ಕೇವಲ ಎರಡು ತಿಂಗಳ ಹಿಂದೆ ಬಂದ ತಹಸೀಲ್ದಾರರು ಅದಕ್ಕೆ ಏನೆಂದು ಉತ್ತರಿಸಿ ಯಾರು? ಇಷ್ಟೊಂದು ಅಪಾರವಾದ ಸಂಪತ್ತನ್ನು ಸರ್ಕಾರಕ್ಕೆ ವಹಿಸಿಕೊಟ್ಟ ತಹಸೀಲ್ದಾರರು ಅದಕ್ಕೆ ಬೇಸರಿಸದೆ, ಅದು ತನ್ನ ಕರ್ತವ್ಯದ ಒಂದು ಭಾಗ ಎಂದು ತಿಳಿದು ಸಮಾಧಾನ ಪಟ್ಟುಕೊಂಡರು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ