ರಾಮನವಮಿ ಸಂಗೀತಕ್ಕೆ ಅನುಮತಿ ನೀಡಿ
ಶಿಕ್ಷಣ ಇಲಾಖೆಯ ಆಯುಕ್ತರು ಒಂದು ಆದೇಶ ಹೊರಡಿಸಿ ಶಾಲಾ ಮೈದಾನಗಳನ್ನು ಬೇರೆ ಯಾವುದೇ ಕೆಲಸಕ್ಕೆ ಸಾರ್ವಜನಿಕರು ಉಪಯೋಗ ಮಾಡಬಾರದು ಎಂದಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅನೇಕ ಕಡೆ ವಿಶಾಲವಾದ ಶಾಲೆಗಳ ಮೈದಾನವನ್ನು ಸಂತೆಗೋಸ್ಕರ, ರಾಜಕೀಯ ಸಭೆಗಳು, ಧರಣಿ, ಪ್ರತಿಭಟನೆ ಮತ್ತು ಧಾರ್ಮಿಕ ಕೆಲಸಗಳಿಗೋಸ್ಕರ ಕೂಡ ಉಪಯೋಗ ಮಾಡುತ್ತಾರೆ. ಇದು ಒಂದು ಹಿತಕರವಾದ ವಾಡಿಕೆ ಅಲ್ಲ. ಮೈದಾನಗಳನ್ನು ಉಪಯೋಗ ಮಾಡಿದ ನಂತರ ಚೊಕ್ಕಟ ಮಾಡುವುದಿಲ್ಲ. ಅನೇಕ ಸಲ ಹೊಡೆದಾಟಗಳಾಗುತ್ತವೆ. ಶಾಲೆ ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಹೋಗುತ್ತವೆ. ಆದ್ದರಿಂದ ಈ ನಿಷೇಧವನ್ನು ಎಲ್ಲರೂ ಸ್ವಾಗತಿಸಬೇಕು. ಆದರೆ ಒಂದೆರಡು ಅಪರೂಪವಾದ ಅಪವಾದಗಳಿರಬಹುದು. ಬೆಂಗಳೂರು ನಗರದ ಕೋಟೆಯ ಶಾಲೆಯ ಆವರಣದಲ್ಲಿ ಸುಮಾರು 75 ವರ್ಷಗಳಿಂದ ರಾಮನವಮಿ ಸಮಯದಲ್ಲಿ ಸಂಗೀತವನ್ನು ಏರ್ಪಡಿಸಿರುತ್ತಾರೆ. ಸಂಗೀತ ಕ್ಷೇತ್ರದಲ್ಲಿ ಹೆಸರಾಂತರಾದವರು ತಮ್ಮ ಪ್ರತಿಭೆಯಿಂದ ಜನರ ಮನಸ್ಸಿಗೆ ಅತ್ಯಂತ ಹೆಚ್ಚಿನ ಸಂತಸವನ್ನು ಕೊಡುತ್ತಾರೆ. ನಾನೂ ಸಹ ಅನೇಕ ಸಲ ಬಹು ಇಂಪಾದ ಮಧುರ ಹಾಡುಗಳನ್ನು ಕೇಳಿ ಸಂತೋಷಪಟ್ಟಿದ್ದೇನೆ. ಪರ್ವೀನ್ ಸುಲ್ತಾನ್ರವರು ಅನೇಕ ಸಲ ಈ ರಾಮನವಮಿ ಸಂಗೀತ ಮೇಳದಲ್ಲಿ ಭಾಗವಹಿಸಿ ಜನರ ಮನಸ್ಸನ್ನು ಸೂರೆಗೊಂಡಿದ್ದಾರೆ. ರಾಮನವಮಿ ಸಮಯದಲ್ಲಿ ಯಾವ ಜಾತಿ ಅಥವಾ ಮತದ ನಿರ್ಬಂಧಗಳಿಲ್ಲ. ಸಂಗೀತಕ್ಕೂ ಜಾತಿ ಮತವಿಲ್ಲ. ಎಲ್ಲಾ ಧರ್ಮದ ಜನರನ್ನು ಒಂದುಗೂಡಿಸುವ ಶಕ್ತಿ ಈ ಸಂಗೀತದಲ್ಲಿದೆ. ಶಿಕ್ಷಣ ಆಯುಕ್ತರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಕೋಟೆಯ ಆವರಣದಲ್ಲಿ ಇರುವ ಶಾಲೆಯ ಮೈದಾನವನ್ನು ವರ್ಷಕ್ಕೆ ಒಮ್ಮೆ ರಾಮನವಮಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕೊಡಬೇಕು. ಮಿಕ್ಕ ಎಲ್ಲಾ ಕಾರ್ಯಕ್ರಮಗಳನ್ನು, ಅದರಲ್ಲೂ ರಾಜಕೀಯ ಕಾರ್ಯಕ್ರಮಗಳನ್ನು ನಿಷೇಧಿಸಬೇಕು.
- ಪ್ರೊ. ಡಾ. ಮುಮ್ತಾಜ್ ಅಲಿಖಾನ್, ಬೆಂಗಳೂರು
ಮುಂದಿನ ದಾರಿ ಕಾಣದಾಗಿದೆ
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. 2004ರ ನಂತರ ಸೇವೆಗೆ ಸೇರಿದವರ ನೇಮಕಾತಿ ಪ್ರಾಧಿಕಾರ ಜಿಲ್ಲಾ ಉಪನಿರ್ದೇಶಕರಾಗಿದ್ದು, ಅಂತಹ ಶಿಕ್ಷಕರು ಅಂತರ್ ಜಿಲ್ಲಾ ವರ್ಗಾವಣೆಯನ್ನು ತಮ್ಮ ಸೇವಾವಧಿಯಲ್ಲಿ ಕೇವಲ ಒಮ್ಮೆ ಮಾತ್ರ ಪಡೆಯಲು ಅರ್ಹರು ಎಂಬ ನಿಯಮ ರೂಪಿಸಿರುತ್ತಾರೆ. ಮದುವೆ ಅಥವಾ ಇನ್ನಿತರೆ ವೈಯಕ್ತಿಕ ಕಾರಣಗಳಿಂದ ಒಮ್ಮೆ ವರ್ಗಾವಣೆ ಪಡೆದಿದ್ದರೆ, ಪುನಃ ಅಂತರ್ ಜಿಲ್ಲಾ ವರ್ಗಾವಣೆ ಪಡೆಯುವುದು ಅವರ ಸೇವಾವಧಿಯಲ್ಲೇ ಅಸಾಧ್ಯ. ಕಾರಣಾಂತರಗಳಿಂದ ಪುನಃ ವರ್ಗಾವಣೆ ಅನಿವಾರ್ಯವಾದ ನನ್ನಂತಹವರಿಗೆ ಮುಂದಿನ ದಾರಿ ಕಾಣದಾಗಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ, ಅಂತರ್ ಜಿಲ್ಲಾ ವರ್ಗಾವಣೆಯು ಕೇವಲ 1ರಷ್ಟಿದ್ದು, ದಂಪತಿ ಪ್ರಕರಣ ಅಥವಾ ಅತೀ ಹೆಚ್ಚು ಸೇವಾ ಹಿರಿತನ ಹೊಂದಿರುವವರಿಗೆ ಮಾತ್ರ ಸಿಗುತ್ತದೆ. ಅದೂ ಕೇವಲ 2 ಅಥವಾ 3 ಜನರಿಗೆ ಮಾತ್ರ. ದಂಪತಿಗಳು ಸರ್ಕಾರಿ ನೌಕರರಾಗಿದ್ದರೆ ಅವರಿಗೆ ಪ್ರಥಮ ಪ್ರಾಶಸ್ತ್ಯ ದೊರೆಯುತ್ತದೆ. ಹಾಗಾದರೆ ಸೇವಾ ಹಿರಿತನ ಇದ್ದೂ ಅವಿವಾಹಿತರಾಗಿದ್ದರೆ, ಅಥವಾ ಸರ್ಕಾರಿ ನೌಕರರಲ್ಲದ ಪತಿ ಅಥವಾ ಪತ್ನಿ ಇದ್ದರೆ, ಅವರಿಗೆ ವರ್ಗಾವಣೆ ಕನಸು ಮಾತ್ರವೇ? ಸರ್ಕಾರದ ಪ್ರಕಾರ ಇವರಿಗೆ ಯಾವುದೇ ಸಾಂಸಾರಿಕ ಸಮಸ್ಯೆಗಳೇ ಇರುವುದಿಲ್ಲವೇ? ಆದ್ದರಿಂದ ಸರ್ಕಾರ ಹಾಗೂ ಮಾನ್ಯ ಶಿಕ್ಷಣ ಮಂತ್ರಿಗಳಲ್ಲಿ ನನ್ನ ಮನವಿ ಏನೆಂದರೆ, ದಯವಿಟ್ಟು ಅಂತರ್ ಜಿಲ್ಲಾ ವರ್ಗಾವಣೆಗೆ ಮಿತಿಗಳನ್ನು ಹೇರಬೇಡಿ. ಏಕೆಂದರೆ ಎಲ್ಲಾ ಶಿಕ್ಷಕರೂ ಕರ್ನಾಟಕ ಸರ್ಕಾರದ ನೌಕರರೇ ಆಗಿರುವುದರಿಂದ ಜಿಲ್ಲೆ, ವಿಭಾಗ ಎಂದು ವಿಭಜಿಸಬೇಡಿ. ಅಲ್ಲದೇ ಪ್ರೌಢಶಾಲಾ ಶಿಕ್ಷಕರನ್ನು ವಿಷಯವಾರು ವಿಂಗಡಿಸಿ ಈ ಮಿತಿಗಳನ್ನು ಅನ್ವಯಿಸಿ. ನಮ್ಮ ಜೀವಿತದ ಹೆಚ್ಚಿನ ಭಾಗ ಹಾಗೂ ದಿನದ ಹೆಚ್ಚಿನ ಸಮಯವನ್ನು ಶಾಲೆಯಲ್ಲೇ ಕಳೆದು, ನಿಮ್ಮ ಮಕ್ಕಳ ಭವಿಷ್ಯ ರೂಪಿಸಲು ಬದ್ಧರಾಗಿರುವ ನಮ್ಮ ವರ್ತಮಾನವನ್ನು ದಯವಿಟ್ಟು ಸಹನೀಯಗೊಳಿಸಿ.
-ವರ್ಗಾವಣೆಗೆ ಕಾಯುತ್ತಿರುವ ನೊಂದ ಶಿಕ್ಷಕರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

