ಸಿದ್ದವನಹಳ್ಳಿ ಕೃಷ್ಣಶರ್ಮರು ಆಧುನಿಕ ಕನ್ನಡ ಗದ್ಯದ ಆಚಾರ್ಯರಲ್ಲಿ ಒಬ್ಬರಾಗಿದ್ದಾರೆ. ಅವರದು ಸೇವೆ ಮತ್ತು ತ್ಯಾಗಮಯ ಬದುಕು. ಅವರ ಇಡೀ ಜೀವನ ರಾಷ್ಟ್ರಕ್ಕಾಗಿ, ನಾಡಿಗಾಗಿ, ನುಡಿಗಾಗಿ, ನಮ್ಮ ಜನತೆಯ ಕಲ್ಯಾಣಕ್ಕಾಗಿ ಮೀಸಲಾಗಿತ್ತು. ಅಪ್ರತಿಮ ದೇಶಭಕ್ತರಾಗಿದ್ದ ಶರ್ಮರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಸ್ವಾರ್ಥ ಭಾವನೆಯಿಂದ ಹೋರಾಡಿದವರು. ಗಾಂಧೀಜಿಯವರ ಅನುಯಾಯಿಗಳಾಗಿ ಸರಳ ಜೀವನ ನಡೆಸಿದ ಅವರು ತಾವು ಪಾಲ್ಗೊಂಡಕೆಲಸಗಳಿಗೆಲ್ಲ ಶುಭ್ರತೆಯನ್ನೂ, ಪಾವಿತ್ರ್ಯವನ್ನೂ ತರುತ್ತಿದ್ದರು. ಅವರು ಸದಸ್ಯರಾಗಿದ್ದ ಆಯ್ಕೆ ಸಮಿತಿಗಳಲ್ಲಿ ಕೆಲವು ಇಂಜಿನಿಯರಿಂಗ್ ಸೀಟುಗಳನ್ನು, ಸದಸ್ಯರಾದವರು ತಮಗೆ ಬೇಕಾದ ಹಾಗೆ ವಿಲೇವಾರಿ ಮಾಡಿಕೊಳ್ಳುವ ಅಧಿಕಾರ ಇತ್ತು. ಆದರೆ ಆ ಸೀಟುಗಳನ್ನೂ ಸಹ ವಿದ್ಯಾರ್ಥಿಯ ಪ್ರತಿಭೆಗೆ ಅನುಗುಣವಾಗಿಯೇ ಹಂಚಿಕೆಯಾಗಬೇಕೆಂದು ಹಠಹಿಡಿದು ಗೆದ್ದರು. ಆಯ್ಕೆ ಪ್ರಕಟವಾದ ಮರುದಿನವೇ ಅವರು ಸಮಿತಿಯಿಂದ ಹೊರಬಂದಿದ್ದರು.
ಸ್ವಾತಂತ್ರ್ಯ ಗಳಿಸಿದ ಮೇಲೆ ಅನೇಕ ಹೋರಾಟಗಾರರು ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ಪಡೆದರು. ಶರ್ಮರ ಜೊತೆ ಕಾರ್ಯಕರ್ತರಾಗಿದ್ದ ಅನೇಕರು ಉನ್ನತ ಸ್ಥಾನಗಳನ್ನೇರಿದರು. ಅವರಲ್ಲಿ ಒಬ್ಬರು ಬುರುಗಲು ರಾಮಕೃಷ್ಣರಾಯರು. ಅವರು ಮುಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೂ, ತದನಂತರ ರಾಜ್ಯಪಾಲರೂ ಆದರು. ಅವರು ಶರ್ಮರಿಗೆ ಯಾವುದಾದರೊಂದು ಹುದ್ದೆ ಸ್ವೀಕರಿಸುವಂತೆ ಪದೇ ಪದೇ ಆಹ್ವಾನಿಸುತ್ತಿದ್ದರು. ಒಮ್ಮೆ ವಾರ್ತಾ ಇಲಾಖೆಯ ನಿರ್ದೇಶಕರಾಗುವಂತೆ, ಮತ್ತೊಮ್ಮೆ ಶಿಕ್ಷಣ ಸಲಹೆಗಾರರಾಗಿ, ಇನ್ನೊಮ್ಮೆ ರಾಜ್ಯಸಭೆ ಸದಸ್ಯರಾಗುವಂತೆ, ಕೇರಳ ರಾಜ್ಯಪಾಲರ ಸಲಹೆಗಾರರಾಗಿರುವಂತೆ...ಹೀಗೆ ಅವಕಾಶಗಳು ಅವರನ್ನು ಹಿಂಡುಹಿಂಡಾಗಿ ಹುಡುಕಿಕೊಂಡುಬಂದರೂ ಸಹ ಅವರು ಅವುಗಳ ಆಕರ್ಷಣೆಗೆ ಬಲಿಯಾಗಲಿಲ್ಲ. ಅವುಗಳೆಲ್ಲವನ್ನೂ ಪ್ರಾಂಜಲ ಮನಸ್ಸಿನಿಂದ ನಿರಾಕರಿಸಿದರು. ರಾಮಕೃಷ್ಣರಾಯರ ಒತ್ತಾಯ ಜಾಸ್ತಿಯಾದಾಗ, 'ಅಪ್ಪಾ, ನಿನ್ನ ಮನೆಗೆ ಬಂದಾಗ ಒಳ್ಳೆ ಊಟ ಹಾಕು, ಅಷ್ಟೆ ಸಾಕು' ಎಂದು ಹೇಳಿದ್ದರು. ದೊಡ್ಡ ಇಂಗ್ಲಿಷ್ ಪತ್ರಿಕೆಯೊಂದು ತನ್ನ ಪತ್ರಿಕೆಗೆ ಸಂಪಾದಕರಾಗುವಂತೆ ಕೇಳಿಕೊಂಡಾಗಲೂ ಅದನ್ನು ನಯವಾಗಿ ತಿರಸ್ಕರಿಸಿದರು. ಕನ್ನಡ ಕಿಡಿಗಳು, ಕನ್ನಡದ ಸಮಸ್ಯೆ, ನಮ್ಮ ಹಿಂದೂಸ್ಥಾನ(ಅನುವಾದ), ಪರ್ಣಕುಟಿ, ವರ್ಧಾಯಾತ್ರೆ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಸರ್ಕಾರ ಕೊನೆಗಾಲದಲ್ಲಿ 250 ರು.ಗಳ ಮಾಸಾಶನ ನೀಡಿದಾಗಲೂ ಅದನ್ನು ಸ್ವೀಕರಿಸಲು ನಿರಾಕರಿಸಿದರು. 'ನಾನು ಮಾಡಿದ ಸ್ವಾತಂತ್ರಹೋರಾಟಕ್ಕೆ ಕೂಲಿ ಪಡೆಯಲೆ?' ಎಂಬ ನಿಲವು ಅವರದ್ದಾಗಿತ್ತು. ಕೊನೆಗೆ ಮಾಸ್ತಿಯವರೇ ಶರ್ಮರ ಮನವೊಲಿಸಿ ಒಪ್ಪಿಸಿದರು. ಇಂತಹ ನಿಸ್ವಾರ್ಥ ಸಮಾಜ ಸೇವಕರು ನಮಗೆ ಆದರ್ಶವಾಗಬೇಕು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ