ಸಂಪಾದಕೀಯ

ಹೇಳಿಕೆ ಪೌರುಷ!

Published On :

ಯಡಿಯೂರಪ್ಪ ವಾಪಸಾದರೆ ಬಿಜೆಪಿ ಹೋಳು ಎಂಬ ವೀರಪ್ಪ ಮೊಯ್ಲಿ (ಕ.ಪ್ರ. 6/4) ವರದಿ ಓದಿ ಅಳುವುದೋ, ನಗುವುದೋ ನೀವೇ ಹೇಳಿ ಹಾಡು ನೆನಪಾಯಿತು. ಭ್ರಷ್ಟಾಚಾರದ ಆರೋಪ ಹೊತ್ತ ಯಡಿಯೂರಪ್ಪ ಒಂದೊಮ್ಮೆ ಬಿಜೆಪಿ ಸೇರಿದರೆ ಆ ಪಕ್ಷದ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರ ಸಿಕ್ಕಂತಾಗುತ್ತದೆ ಎಂದು ಮೊಯ್ಲಿ ಹೇಳುವಾಗ, ಈಗಷ್ಟೇ ಕೊನೆಗೊಂಡ ಜಾರ್ಖಂಡ್‌ದ ಜೆಎಂಎಂ ಪಕ್ಷದೊಂದಿಗಿನ ಕಾಂಗ್ರೆಸ್ ಮೈತ್ರಿ ನೆನಪಾಗಲಿಲ್ಲವೋ ಏನೋ? ಜೆಎಂಎಂ ಮುಖ್ಯಸ್ಥ ಶಿಬುಸೋರೆನ್ ವ್ಯಕ್ತಿತ್ವ, ಘನತೆ ಅರಿಯದವರಿಲ್ಲ. ಅವರ ಮೇಲಿನ ಅಪರಾಧಕ್ಕಾಗಿ ಅಧಿಕಾರವನ್ನು ತ್ಯಜಿಸಬೇಕಾಗಿ ಬಂದಿತ್ತು. ಜೈಲುವಾಸದ ಅನುಭವವನ್ನೂ ಪಡೆಯಬೇಕಾಗಿ ಬಂದಿತ್ತು. ಈಗ ಅವರಿಂದ ಮುನ್ನಡೆಸಲ್ಪಟ್ಟ ಪಕ್ಷದೊಂದಿಗೆ ಸಖ್ಯ ಬೆಳೆಸುತ್ತಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸಿನ ಬಗ್ಗೆ ಮೊಯ್ಲಿಯವರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದು ಬಿಜೆಪಿಗೂ ಪ್ರಬಲ ಅಸ್ತ್ರವಾಗಿ ನಿಲ್ಲಬಹುದಲ್ಲವೇ? ಈ ರೀತಿಯ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಬಲವನ್ನೂ ಕುಂಠಿತಗೊಳಿಸಬಹುದಲ್ಲವೇ? ತನ್ನ ಕಾಲಬುಡ ಆನೆ ಸತ್ತು ಬಿದ್ದಿದ್ದನ್ನು ನೋಡಿಕೊಳ್ಳುವ ಬದಲು ಇನ್ನೊಬ್ಬರ ಕಾಲ ಬುಡದಲ್ಲಿ ಬಿದ್ದಿರುವ ಇಲಿಯ ಬಗ್ಗೆ ಯಾಕೆ ಚಿಂತೆ? ಇನ್ನು, ಯಡಿಯೂರಪ್ಪನವರ ವಾಪಸಾತಿ ಕೇಂದ್ರದ ಎನ್‌ಡಿಎ ಮಾದರಿಯಲ್ಲಿ ರಾಜ್ಯ ಬಿಜೆಪಿಯೂ ಹೋಳಾಗಲಿದೆ ಎಂಬ ಪ್ರಬುದ್ಧತೆಯ ಮಾತಾಡುವಾಗ ಯುಪಿಎಯಿಂದ ತೃಣಮೂಲ ಕಾಂಗ್ರೆಸ್, ಡಿಎಂಕೆ, ಲೆಫ್ಟ್ ಹೊರಬಂದಾಗಲೂ ಅನ್ವಯಿಸುತ್ತಿರಲಿಲ್ಲವೇ? ಜೆಡಿಯು, ಎನ್‌ಡಿಎದಿಂದ ಹೊರಬಂದಾಗ ಆಗುವ ಪರಿಸ್ಥಿತಿ ಕಾಂಗ್ರೆಸ್‌ಗೂ ಆಗಲೇ ಬೇಕಲ್ಲ. ಅಷ್ಟಕ್ಕೂ ಮೊಯ್ಲಿಗೆ ಈ ರೀತಿ ಹೇಳಿಕೆ ಕೊಡುವ ಅವಶ್ಯಕತೆ ಇತ್ತೆ? ಬಹುಶಃ ಒಂದೊಮ್ಮೆ ಯಡಿಯೂರಪ್ಪ ಬಿಜೆಪಿಗೆ ವಾಪಸಾದಲ್ಲಿ ಬಿಜೆಪಿ ಇನ್ನೂ ಪ್ರಬಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಕುತ್ತು ಬಂದರೂ ಬಂದೀತೆಂಬ ಶಂಕೆಯೇ?
-ಶಂಕರನಾರಾಯಣ ಭಟ್, ಹೊನ್ನಾವರ
ನಾನು ಭೂಮಿಗೆ ಭಾರವಾಗಿ ನಿಂತಿರಲಿಲ್ಲ, ಆದರೂ...
ನಾನೊಂದು ಮರ. ನಿಮ್ಮ ತೋಟದಲ್ಲಿ, ಗದ್ದೆಯಲ್ಲಿ ಕಂಡುಬರುವ ಸಾಮಾನ್ಯ ಮರ ನಾನು. ಕುಟ್ಟ- ಪೋನ್ನಪೇಟೆ ರಸ್ತೆಯಂಚಿನಲ್ಲಿ ನನ್ನ ನೆಲೆ. ನನ್ನ ನೆರಳಿನಲ್ಲಿ ಯಾವ ಗುಡಿ- ಗೋಪುರಗಳಿಲ್ಲದಿರುವುದರಿಂದ ನನಗೆ ಯಾವ ವಿಐಪಿ ಸ್ಥಾನಮಾನವಿಲ್ಲ. ನನಗೆ ಯಾರು ಕೈ ಮುಗಿಯುವುದಿಲ್ಲ. ಯಾರು ನನ್ನ ಸುತ್ತ ಕಟ್ಟೆ ಕಟ್ಟಿಲ್ಲ. ಹಾಗಾಗಿ ನಾನು ಮಾಲೀಕನೇ ಇಲ್ಲದ ಅನಾಥ. ಆದರೂ, ನಾನೇನು ಭೂಮಿಗೆ ಬಾರವಾಗಿ ನಿಂತಿಲ್ಲ... ಕೊಂಬೆ ಚಾಚುವಷ್ಟರವರೆಗೆ ನೆರಳು ನೀಡಿದ್ದೇನೆ. ಡೀಸೆಲ್‌ನ ಹೊಗೆ ಕುಡಿದು ನಿಮಗೆಲ್ಲ ಪ್ರಾಣವಾಯು ನೀಡಿದ್ದೇನೆ. ಹತ್ತು ಹಲವು ಮಕ್ಕಳು ನನ್ನ ನೆರಳಲ್ಲಿ ಆಟವಾಡಿದ್ದಾರೆ. ಹತ್ತು ಹಲವು ಪಕ್ಷಿಗಳು, ಪ್ರಾಣಿಗಳು ನನ್ನಲ್ಲಿ ಗೂಡು ಕಟ್ಟಿವೆ, ಮರಿಮಾಡಿವೆ. ಪ್ರತಿ ವರುಷ ಸಾಕು ಸಾಕಾಗುವಷ್ಟು ಹಣ್ಣು ನೀಡಿದ್ದೇನೆ. ಆದರೆ, ಇದಕ್ಕೆಲ್ಲ ನಾನು ಲೆಕ್ಕವಿಟ್ಟಿಲ್ಲ. ಬಹುಶಃ ನಾನು ಮಾಡಿದ ತಪ್ಪು ಇದೇ ಇರಬೇಕು.  ಕುಟ್ಟ- ಪೊನ್ನಪೇಟೆ ರಸ್ತೆ ಅಗಲೀಕರಣದ ನೆಪದಲ್ಲಿ ನನಗೆ ಕೊಡಲಿ ಪ್ರಯೋಗ ಮಾಡಲಾಯಿತು. ಯಾವ ಧಾರ್ಮಿಕ ನೆಲೆಯಿಲ್ಲಿದೆ, ಅನಾಥನಾದ ನನ್ನ ಬಗ್ಗೆ ಯಾರೂ ಮಮಕಾರ ತೋರಲ್ಲಿಲ್ಲ. ನನ್ನಿಂದ ನೆರಳು ಮತ್ತು ಪ್ರಾಣವಾಯು ಪಡೆದವರು ಕೂಡ. ಹೀಗೆ ಬೇಕಾಬಿಟ್ಟಿ ಕಡಿದ ಮೇಲೆ ದಿಮ್ಮಿಗಳನೆಲ್ಲ ಯಾರ್ಯಾರೋ ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಿದ್ದಾರೆ. ಕೊಂಬೆ ರೆಂಬೆಗಳೆಲ್ಲವು ಈಗಾಗಲೇ ಉರುವಲಾಗಿ ಯಾರದೋ ಮನೆ ಬೆಳಗಿಸಿದೆ. ಅಳಿದುಳಿದ ಭಾಗ ಕೊಳೆತು ಹೋಗುವ ದಿನವೂ ದೂರವಿಲ್ಲ. ಇದೆಲ್ಲವೂ ನನಗೆ ಅಷ್ಟಾಗಿ ಕಾಡಿಲ್ಲ... ಆದರೆ, ನಾನು ಹೀಗೆ ಚೂರು- ಚೂರಾಗುತ್ತಿರುವಾಗ ನನ್ನಿಂದ ಲಾಭ ಪಡೆದವರಾದರೂ ಚಕಾರ ಎತ್ತಲ್ಲಿಲ್ಲ ಎಂಬುದೇ ನನ್ನ ಕೊನೆ ಕೊರಗು. ಆದರೆ, ಇದಕ್ಕೆಲ್ಲ ಕೊಡಗಿನ ಜನ ಬೆಲೆ ತೆರುವ ದಿನ ದೂರವಿಲ್ಲ. ಉತ್ತರಾಖಂಡದಲ್ಲಿ ನಡೆದ ನಿಸರ್ಗ ನಿರ್ಮಿತ ಮಹಾಪ್ರಳಯ ಎದುರಾಗುವ ಸಾಧ್ಯತೆಯೂ ಇಲ್ಲದಿಲ್ಲ. ವಿದ್ಯೆ, ಬುದ್ಧಿಯಲ್ಲಿ ಇತರರಿಗೆ ಮಾದರಿಯಾದ ಕೊಡಗಿನ ಜನರು ಹೀಗಾಗಿರುವುದೇ ನನಗೆ ಆಶ್ಚರ್ಯ.
- ಕೆ.ಎಂ. ಚಿಣ್ಣಪ್ಪ, ನಿವೃತ ವಲಯ ಅರಣ್ಯಾಧಿಕಾರಿ,ಕಾಕೂರು, ಶ್ರೀಮಂಗಲ, ದಕ್ಷಿಣ ಕೊಡಗು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.