ಅಮರ್ತ್ಯ ಸೆನ್- ಮೋದಿ
ವಿಖ್ಯಾತ ಅರ್ಥಶಾಸ್ತ್ರ ಪಂಡಿತ ಹಾಗೂ ಸಾಮಾಜಿಕ ಹಿತರಕ್ಷಣೆಯ ಮುಂದಾಳು ಅಮರ್ತ್ಯ ಸೆನ್, ತಮಗೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಇಷ್ಟವಿಲ್ಲ ಎಂದು ಹೇಳಿದ್ದೇ ದೊಡ್ಡ ವಿವಾದಕ್ಕೆ ಸಿಕ್ಕಿಬಿದ್ದಿದೆ. ಭಾರತೀಯ ಜನತಾ ಪಾರ್ಟಿಯ ವಕ್ತಾರ ಹಾಗೂ ಪ್ರಸಿದ್ಧ ಪತ್ರಕರ್ತ ಚಂದನ ಮಿತ್ರ ಅವರಂತಹವರು ಅಮರ್ತ್ಯ ಸೆನ್ ಅವರಿಗೆ ನೀಡಿದ್ದ ಭಾರತ ರತ್ನ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಹೇಳಿರುವುದು ಅರ್ಥಹೀನ. ಸೆನ್ ಅವರ ಅಭಿಪ್ರಾಯವನ್ನು ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ಅವರಿಗೆ ಆ ಮಾತನ್ನು ಆಡುವ ಹಕ್ಕೇ ಇಲ್ಲವೆಂದು ಹೇಳುವುದು ಸರ್ವಾಧಿಕಾರದ ಧೋರಣೆ. ಬಿಜೆಪಿ, ಅಧಿಕೃತವಾಗಿ ಚಂದನ ಮಿತ್ರ ಅವರ ಅಭಿಪ್ರಾಯಕ್ಕೆ ಪಕ್ಷದ ಸಹಮತವಿಲ್ಲ ಎಂದು ಹೇಳಿರುವುದು ಪರಿಸ್ಥಿತಿಯನ್ನು ನಿಭಾಯಿಸಲು ಒಳ್ಳೆಯ ಸೂತ್ರ. ಅದೇ ರೀತಿ, ನರೇಂದ್ರ ಮೋದಿ ಅವರಿಗೆ ಅಮೆರಿಕದ ಭೇಟಿಗೆ ಅಗತ್ಯವಾದ 'ವೀಸಾ' (ಅನುಮತಿ ಪತ್ರ) ನೀಡಬಾರದೆಂದು ಹಲವಾರು ಭಾರತದ ಸಂಸದರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಪತ್ರ ಬರೆದಿರುವುದು ನಮ್ಮ ರಾಷ್ಟ್ರೀಯತೆಯ ಕಲ್ಪನೆಯನ್ನೇ ದ್ವೇಷಕ್ಕೆ ಒತ್ತೆ ಇಟ್ಟಂತೆ ಆಗುವಂತಹ ಕ್ರಿಯೆ. ಈಗ ಮೋದಿ ಅವರು ವೀಸಾಗೆ ಅರ್ಜಿ ಸಲ್ಲಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರಿಗೆ ವೀಸಾ ನೀಡಿಕೆ ಅಥವಾ ಅದರ ನಿರಾಕರಣೆ ಅಲ್ಲಿನ ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಇದರಲ್ಲಿ ಮೂರನೆಯವರ ಹಸ್ತಕ್ಷೇಪ ಹಾಗೂ ಹೇಳಿಕೆ ಅಪ್ಪಟ ಕಿಡಿಗೇಡಿತನದ ಕುಚೇಷ್ಟೆ. ನಮ್ಮ ಸಂಸದರು ಹಾಗೂ ಸಮಾಜದಲ್ಲಿ ಪ್ರತಿಷ್ಠೆ ಪಡೆದ ಜನ ಪ್ರಬುದ್ಧತೆಯನ್ನು ಗಳಿಸುವುದು ಯಾವಾಗ? ಸಾರ್ವಜನಿಕ ಜೀವನದಲ್ಲಿ ಇಂತಹ ಅಪ್ರಬುದ್ಧತೆಯ ಪ್ರದರ್ಶನ ಸಲ್ಲದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

