ಸಂಪಾದಕೀಯ

ನರೇಂದ್ರ ಮೋದಿ ಯಶಸ್ಸು ಬಿಜೆಪಿಯ ತೊಳಲಾಟ

Published On :

ಇನ್ನು ಹನ್ನೊಂದು ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಪ್ರಧಾನಿ ಪೀಠದ ಅಭ್ಯರ್ಥಿಯ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರವನ್ನು ಪ್ರಕಟಿಸುವಂತಿಲ್ಲ. ಅದಕ್ಕೆ ರಾಷ್ಟ್ರೀಯ ಜನತಾಂತ್ರಿಕ ಕೂಟದ ಇತರ ಪಕ್ಷಗಳ ಜತೆ ಸಮಾಲೋಚನೆ ಅಗತ್ಯ. ಇನ್ನೂ ಆ ಚರ್ಚೆ ಆರಂಭವಾಗಿಲ್ಲ.
ಆದ್ದರಿಂದಲೇ ಪ್ರಧಾನಿ ಪೀಠದ ಅಭ್ಯರ್ಥಿಯ ವಿಚಾರ ಗೋವಾದಲ್ಲಿ ಶುಕ್ರವಾರ ಆರಂಭವಾಗುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಅಧಿವೇಶನದಲ್ಲಿ ಅಧಿಕೃತವಾಗಿ ಪ್ರಸ್ತಾಪವಾಗುವುದು ಅಸಂಭವ.
ಆದರೆ ಬುಧವಾರ ಪ್ರಕಟವಾದ ಗುಜರಾತ್ ವಿಧಾನ ಸಭೆಯ ಆರು ಸ್ಥಾನಗಳ ಮರು ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಗೆದ್ದಿರುವುದರಿಂದ, ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎದೆಯನ್ನು ಉಬ್ಬಿಸಿಕೊಂಡೇ ಗೋವಾದಲ್ಲಿ ಹಾಜರಾಗುತ್ತಾರೆ. ಈ ಸಮಯದಲ್ಲೇ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದು ಪ್ರಮುಖವಾದ ಸ್ಥಾನ ಸಿಗಲೇಬೇಕೆನ್ನುವ ಒತ್ತಾಯವನ್ನು ತಿರಸ್ಕರಿಸುವುದು ಈಗ ಸಾಧ್ಯವಾಗಲಾರದು. ಬಿಜೆಪಿಯ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರ ಹೆಸರನ್ನೇ ಚುನಾವಣೆಯ ಪ್ರಚಾರ ಸಮರದ ಕಾಲದಲ್ಲಿ ಮುಂದಿಡಬೇಕೆನ್ನುವ ಒತ್ತಾಯವನ್ನು ಮುಂದಕ್ಕೆ ಹಾಕುವ ಒಂದು ತಂತ್ರ ಎಂದರೆ ನರೇಂದ್ರ ಮೋದಿ ಅವರನ್ನು ಪಕ್ಷದ ಚುನಾವಣೆ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡುವುದು. ಆ ಸ್ವಾತಂತ್ರ್ಯ ಬಿಜೆಪಿಗೆ ಇದ್ದೇ ಇದೆ.
ಆದರೆ ಪಕ್ಷದಲ್ಲಿ ನರೇಂದ್ರ ಮೋದಿ ಅವರಿಗೆ ಆ ಸ್ಥಾನವನ್ನು ಈಗಲೇ ಕೊಡುವುದಕ್ಕೆ ಕೆಲವು ನಾಯಕರ ವಿರೋಧವಿರುವುದನ್ನು ಗಮನಿಸಿ, ಹಲವು ಪ್ರಮುಖರು ಎರಡು ಚುನಾವಣೆ ಪ್ರಚಾರ ಸಮಿತಿಯನ್ನು ರಚಿಸಬೇಕೆಂದೂ ಒಂದು ಸದ್ಯದಲ್ಲೇ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನ ಸಭೆ ಚುನಾವಣೆ ಪ್ರಚಾರ ಸಮರದ ಹೊಣೆಯನ್ನೂ, ಇನ್ನೊಂದು ಲೋಕಸಭೆ ಚುನಾವಣೆ ಪ್ರಚಾರದ ಹೊಣೆಯನ್ನು ಹೊರಬಹುದೆನ್ನುವ ಸೂತ್ರವನ್ನು ಮುಂದಿಟ್ಟಿದ್ದಾರೆ. ಇದು ಸ್ಪಷ್ಟವಾಗಿ ಮೋದಿ ಅವರ ಹೆಸರನ್ನು ಹಿಂದಕ್ಕೆ ಹಾಕುವ ಪ್ರಯತ್ನ. ವಾಸ್ತವದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯ ಅಧಿವೇಶನದಂತಹ ಬೃಹತ್ ಸಮಾವೇಶದಲ್ಲಿ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಚರ್ಚೆ ನಡೆದರೆ, ಗೊಂದಲಕ್ಕೆ ಆಹ್ವಾನ ನೀಡಿದಂತೆಯೇ ಆದೀತು ಎನ್ನುವ ಭೀತಿಯೂ ಕೆಲವರಲ್ಲಿದೆ. ಇಂತಹ ಸೂಕ್ಷ್ಮ ವಿಚಾರಗಳ ಚರ್ಚೆ ಹಾಗೂ ಇತ್ಯರ್ಥಕ್ಕೆ ಪಕ್ಷದ ಸಂಸದೀಯ ಮಂಡಳಿಯೇ ಸೂಕ್ತ ವೇದಿಕೆ.
ಹಿಂದೆ ಗೋವಾದ ಸಭೆಯಲ್ಲಿ ನರೇಂದ್ರ ಮೋದಿ ವಿರುದ್ಧದ ಕ್ರಮವನ್ನು ಯಶಸ್ವಿಯಾಗಿ ತಡೆಗಟ್ಟಿದ ಆಡ್ವಾಣಿ ಅವರೇ ಈಗ ನರೇಂದ್ರ ಮೋದಿಯ ವಿರುದ್ಧ ನಿಂತಿರುವುದು. ಪಕ್ಷದಲ್ಲಿ ಮೋದಿ ಅವರ ಪ್ರಾಮುಖ್ಯವನ್ನು ತಗ್ಗಿಸಲು ಪ್ರಯತ್ನಿಸಿರುವುದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ಅದು ಆ ಪಕ್ಷಕ್ಕೆ ಬಿಟ್ಟ ನಿರ್ಧಾರ.
ಗೋವಾದ ರಾಷ್ಟ್ರೀಯ ಕಾರ್ಯಕಾರಿಣಿಯ ಅಧಿವೇಶನದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹಲವಾರು ವಿಚಾರಗಳಲ್ಲಿ ಪಕ್ಷದ ನಿರ್ದಿಷ್ಟ ನಿಲವನ್ನು ರೂಪಿಸುವ ಹಾಗೂ ಪ್ರತಿಪಾದಿಸುವ ಕೆಲಸ ಆಗಬೇಕಾಗಿದೆ. ಆ ವಿಚಾರಗಳಲ್ಲಿ ಸ್ಪಷ್ಟತೆ ಮೂಡದೇ ಹೋದರೆ ನಾಯಕತ್ವದ ವಿಚಾರ ನಿಜವಾಗಲೂ ಗೌಣವಾಗುತ್ತದೆ.
ನರೇಂದ್ರ ಮೋದಿ ಅವರು ಆರು ವಿಧಾನ ಸಭೆ ಕ್ಷೇತ್ರಗಳ ಮರು ಚುನಾವಣೆಯಲ್ಲಿ ಗೆದ್ದ ಸಮಯದಲ್ಲೇ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ ಲಾಲೂ ಪ್ರಸಾದ ಯಾದವ್‌ರ ರಾಷ್ಟ್ರೀಯ ಜನತಾದಳದ ಅಭ್ಯರ್ಥಿಯ ವಿರುದ್ಧ ಮಹಾರಾಜ್ ಗಂಜ್ ಲೋಕಸಭೆ ಕ್ಷೇತ್ರದಲ್ಲಿ ಸೋತಿರುವುದು. ಉತ್ತರ ಪ್ರದೇಶದ ವಿಧಾನ ಸಭೆ ಕ್ಷೇತ್ರದ ಮರು ಚುನಾವಣೆಯಲ್ಲಿ ಕಾಂಗ್ರೆಸ್- ಬಿಜೆಪಿಗಳು ಮೂರು- ನಾಲ್ಕನೇ ಸ್ಥಾನಗಳಿಗೆ ಇಳಿದಿರುವುದು ಗಮನಾರ್ಹ. ಉತ್ತರ ಪ್ರದೇಶ- ಬಿಹಾರ ರಾಜ್ಯಗಳಲ್ಲಿ ಬಿಜೆಪಿ ಹಾಗೂ ರಾಷ್ಟ್ರೀಯ ಜನತಾಂತ್ರಿಕ ಕೂಟದ ಶಕ್ತಿ ಹೆಚ್ಚದೇ ಹೋದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೂಟ ಅಧಿಕಾರ ಗಳಿಸುವುದು ಕಡುಕಷ್ಟ. ಅದನ್ನು ಗೋವಾದಲ್ಲಿ ಸೇರಿರುವ ನಾಯಕರು ಗಮನಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.