ಬಿಜೆಪಿಯ ಗಂಭೀರ ಮೌನ ಆಡ್ವಾಣಿ ತಿರುಗೇಟು
ಭಾರತೀಯ ಜನಸಂಘ, ಅನಂತರ ಭಾರತೀಯ ಜನತಾ ಪಾರ್ಟಿಗಳಲ್ಲಿ ಎಲ್ಲ ಹಂತಗಳಲ್ಲೂ ಕೆಲಸ ಮಾಡಿ ಸದ್ಯದಲ್ಲಿ ಸಂಘ ಪರಿವಾರದ ಅತ್ಯಂತ ಹಿರಿಯ ತಲೆಯಾಳಿನ ಸ್ವರೂಪದಲ್ಲಿರುವ ಲಾಲ್ ಕೃಷ್ಣ ಆಡ್ವಾಣಿ ಅವರು ಯಾವ ಮುನ್ಸೂಚನೆಯೂ ಇಲ್ಲದೇ ಪಕ್ಷದ ಎಲ್ಲ ಸಮಿತಿಗಳಿಗೂ ರಾಜಿನಾಮೆ ಪತ್ರವನ್ನು ಪ್ರಕಟಿಸಿ, ಇಡೀ ಪಕ್ಷವನ್ನು ಗಂಭೀರ ಮೌನದಲ್ಲಿ ಮುಳುಗಿಸಿದ್ದಾರೆ.
ಆಡ್ವಾಣಿ ಅವರಿಗೆ ಇಷ್ಟವಿರಲಿ, ಇಲ್ಲದೇ ಇರಲಿ, ನರೇಂದ್ರ ಮೋದಿ ಅವರನ್ನೇ ಪಕ್ಷದ ಲೋಕಸಭೆ ಚುನಾವಣೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದೇಶ ರವಾನೆಯಾಗಿದ್ದು ಆಡ್ವಾಣಿ ಮನಸ್ಸನ್ನು ತೀವ್ರವಾಗಿ ಕೆಡಿಸಿರಬೇಕು. ಅವರ ಪತ್ರಕ್ಕೆ ಅದೇ ಕಾರಣವಿರಬಹುದು.
ನಿಜ. ಆಡ್ವಾಣಿ ಅವರು ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವಕ್ಕೆ ರಾಜಿನಾಮೆ ನೀಡಿಲ್ಲ. ಅವರು ತಮ್ಮ ಪತ್ರದಲ್ಲೇ ಸ್ಪಷ್ಟವಾಗಿ ಹೇಳಿರುವಂತೆ ರಾಜಿನಾಮೆ ನೀಡಿರುವುದು ಪಕ್ಷದ ಸಮಿತಿಗಳಿಗೆ. ಸಂಸದೀಯ ಮಂಡಳಿ, ಚುನಾವಣೆ ಸಮಿತಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯತ್ವಕ್ಕೆ.
ಅಂದರೆ ಈಗಲೂ ಅವರು ಪಕ್ಷದ ಸದಸ್ಯರಾಗಿ, ಪಕ್ಷದ ಪರವಾಗಿ ಲೋಕಸಭೆಯ ಸದಸ್ಯರಾಗಿ ಮುಂದುವರಿದಿದ್ದಾರೆ. ಮುಂದೇನು ಮಾಡುತ್ತಾರೋ ಗೊತ್ತಿಲ್ಲ. ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಅವರು ಆಡ್ವಾಣಿಯವರ ರಾಜಿನಾಮೆಯನ್ನು ಈಗಂತೂ ಒಪ್ಪುವುದೇ ಇಲ್ಲ. ಅದು ಆಡ್ವಾಣಿ ಅವರಿಗೂ ಗೊತ್ತು.
ಆಡ್ವಾಣಿ ಅವರ ರಾಜಿನಾಮೆ ಪತ್ರದಲ್ಲಿ ಬಿಜೆಪಿಯಲ್ಲಿ ಆದರ್ಶಗಳು ಉಳಿದಿಲ್ಲ. ಬಹುತೇಕ ನಾಯಕರಿಗೆ ತಮ್ಮ ಸ್ವಂತ- ಗುರಿ ಉದ್ದೇಶಗಳೇ ಮುಖ್ಯವಾಗಿರುವುದರಿಂದ ತಾವು ಕಠಿಣ ನಿರ್ಧಾರವನ್ನು ಪ್ರಕಟಿಸಿರುವುದಾಗಿ ಹೇಳಿದ್ದರೂ, ವಾಸ್ತವದಲ್ಲಿ ನರೇಂದ್ರ ಮೋದಿ ಅವರನ್ನು ಚುನಾವಣೆ ಪ್ರಚಾರ ರಥದ ಸಾರಥಿಯನ್ನಾಗಿ ಮಾಡಿದ್ದೇ ಕಾರಣ ಎನ್ನುವುದು ಆಡ್ವಾಣಿಯವರ ಇತ್ತೀಚಿನ ವರ್ತನೆ ಹಾಗೂ ಕೆಲವು ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಭಾರತೀಯ ಜನತಾ ಪಾರ್ಟಿ, ಇಂತಹ ಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಹಲವು ಪ್ರಮುಖ ಸದಸ್ಯರು ನಾಯಕರ ವರ್ತನೆಯ ವಿರುದ್ಧ ಬಂಡಾಯವೆದ್ದು ಹೊರಗೆ ಹೋಗಿದ್ದುಂಟು. ಪ್ರೊಫೆಸರ್ ಬಲರಾಜ ಮಧೋಕ್, ಪಂಡಿತ್ ಮೌಳಿಚಂದ್ರ ಶರ್ಮಾ, ಡಾ ಸುಬ್ರಹ್ಮಣ್ಯನ್ ಸ್ವಾಮಿ, ಈಚಿನ ದಿನಗಳಲ್ಲಿ ಉಮಾ ಭಾರತಿ, ಕಲ್ಯಾಣ ಸಿಂಗ್ ಹಾಗೂ ಇತರ ಕೆಲವು ಹೆಸರುಗಳನ್ನು ಹೇಳಬಹುದು. ಅವರಲ್ಲಿ ಇಬ್ಬರು ಪಕ್ಷಕ್ಕೆ ಹಿಂತಿರುಗಿದ್ದಾರೆ, ಮತ್ತೊಬ್ಬರು ಪಕ್ಷದ ಜತೆ ಇದ್ದಾರೆ.
ಆದರೆ ಈಗಿನ ಪ್ರಕರಣದಲ್ಲಿ ಪಕ್ಷದ ಅಗ್ರಗಣ್ಯ ನೇತಾರರೆನಿಸಿಕೊಂಡವರೇ, ಮುನಿಸಿಕೊಂಡು, ಪಕ್ಷದಲ್ಲಿ ಬಿಕ್ಕಟ್ಟು ಉಂಟು ಮಾಡುವ ರೀತಿಯಲ್ಲಿ ವರ್ತಿಸಿರುವುದು ಗಮನಾರ್ಹ ಹಾಗೂ ಸಾಮಯಿಕ. ಭಾನುವಾರ ಗೋವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾವೇಶದಲ್ಲಿ ಅಂಗೀಕೃತವಾದ ರಾಜಕೀಯ ನಿರ್ಣಯದಲ್ಲಿ ದೇಶದಲ್ಲಿ ಕಾಂಗ್ರೆಸ್ಸಿಗೆ ಇರುವ ಪರ್ಯಾಯ ಪಕ್ಷವೆಂದರೆ ಬಿಜೆಪಿ ಒಂದೇ ಎನ್ನುವ ಮಾತು ಅಡಕವಾಗಿದೆ. ಅದನ್ನು ಸಂಪೂರ್ಣವಾಗಿ ನಿಜವೆಂದು ಬಿಜೆಪಿಯ ಕಾರ್ಯಕರ್ತರು ಹಾಗೂ ಪಕ್ಷದ ಬೆಂಬಲಿಗರು ತಿಳಿದುಕೊಂಡಿರಲೂಬಹುದು.
ಆಡ್ವಾಣಿ ಅವರ ಸೋಮವಾರದ ವರ್ತನೆಯ ಪರಿಣಾಮ ತನ್ನ ಅಂತಿಮ ಘಟ್ಟದಲ್ಲಿ ಬಿಜೆಪಿಯ ರಾಷ್ಟ್ರೀಯ ಶಕ್ತಿಯನ್ನು ಕುಗ್ಗಿಸಿ, ಕಾಂಗ್ರೆಸ್ಸಿಗೆ ಅದು ಪರ್ಯಾಯ ಪಕ್ಷವಾಗದೇ ಉತ್ತರಾಧಿಕಾರಿಯಾಗಲು ಪ್ರಯತ್ನಿಸುತ್ತಿರುವ ಪಕ್ಷವಾಗಿ ಪರಿವರ್ತನೆಯಾಗಲೂಬಹುದು. ಈಗ ಆಡ್ವಾಣಿ ಅವರಿಗೇನು ಬೇಕು? ಅವರ ರಾಜಿನಾಮೆ ಪತ್ರವನ್ನೇ ನೋಡಿದರೆ, ಪಕ್ಷದಲ್ಲಿ ಬಹುತೇಕವಾಗಿ ಮಾಯವಾಗಿರುವ ಆದರ್ಶಗಳ ಮರು ಪ್ರತಿಷ್ಠಾಪನೆ ಎನ್ನುವ ಸರಳ ಉತ್ತರ ಸಹಜ. ಆದರೆ ವಾಸ್ತವದಲ್ಲಿ ಆಡ್ವಾಣಿ ಅವರ ಕೋಪವಿರುವುದು ನರೇಂದ್ರ ಮೋದಿ ಅವರ ಯಜಮಾನಿಕೆಗೆ ಪಕ್ಷದ ಚುನಾವಣೆ ಪ್ರಚಾರ ರಥದ ಸಾರಥ್ಯ ಸಿಕ್ಕಿರುವುದು ಹಾಗೂ ಅದು ಸಿಕ್ಕಿದ ರೀತಿ.
ಪಕ್ಷದಲ್ಲಿ ಈಗ ಇಲ್ಲದ ಆದರ್ಶಗಳನ್ನು ಮತ್ತೆ ಪ್ರತಿಷ್ಠಾಪಿಸುವುದಕ್ಕೆ ಸಮಯ ಬೇಕು. ಅದೂ ಕಷ್ಟ. ಆದರೆ ಮೋದಿ ಅವರ ಬೆಳವಣಿಗೆಗೆ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವುದು ಸಾಧ್ಯ. ಅವರನ್ನು ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವುದಂತೂ ಅಸಾಧ್ಯ. ಅದನ್ನು ಆಡ್ವಾಣಿಯವರೂ ಕೇಳಿಲ್ಲ.
ಇನ್ನು ಮುಂದಿನ ರಾಜಕೀಯವನ್ನು, ಅದರ ದಿಕ್ಕು ದೆಸೆಗಳನ್ನು ಊಹಿಸುವುದು ಅಲ್ಪಾವಧಿಯ ದೃಷ್ಟಿಯಿಂದ ಊಹಿಸಬಹುದಷ್ಟೇ. ದೀರ್ಘಾವಧಿಯಲ್ಲಿ ಏನಾಗಬಹುದೆಂದು ಊಹಿಸುವುದು ಕಷ್ಟ.
ಸದ್ಯಕ್ಕೆ ಭಾರತೀಯ ಜನತಾ ಪಾರ್ಟಿಯಲ್ಲಿ ಏನಾಗಬಹುದೆನ್ನುವುದಕ್ಕಿಂತ ಹೆಚ್ಚಾಗಿ, ರಾಷ್ಟ್ರೀಯ ಜನತಾಂತ್ರಿಕ ಕೂಟದ ಅಳಿವು- ಉಳಿವಿನ ಪ್ರಶ್ನೆ ಅನೇಕರಿಗೆ ಮುಖ್ಯವಾಗಲೂಬಹುದು.
ಆಡ್ವಾಣಿ ಅವರೇನೂ ಆತುರದಲ್ಲಿ ತಮ್ಮ ಕ್ರಮವನ್ನು ಪ್ರಕಟಿಸಿಲ್ಲ. ಬಿಜೆಪಿಯ ಉತ್ಸಾಹಕ್ಕೆ ಸದ್ಯದಲ್ಲಿ ತಣ್ಣೀರು ಸಿಂಪಡಿಸಿರುವಂತೆ ಆಗಿದೆ. ನರೇಂದ್ರ ಮೋದಿಯವರ ಔನ್ನತ್ಯಕ್ಕಿಂತ ಆಡ್ವಾಣಿಯವರ ಪತ್ರದ ಪರಿಣಾಮವೇ ಮುಖ್ಯ ಎನ್ನುವುದು ನಿಜ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

