ಜಲಸಂಪನ್ಮೂಲ ಹೆಚ್ಚಿಸುವ ಕೆಲಸಗಳಾಗಲಿ
ಅನೇಕ ಪ್ರಕೃತಿ ಸಂಪನ್ಮೂಲಗಳು ಸದ್ಭಳಕೆಯಾಗದೆ ವ್ಯರ್ಥವಾಗುತ್ತಿವೆ. ಇವುಗಳಲ್ಲಿ ಜಲಸಂಪನ್ಮೂಲವು ಪ್ರಮುಖವಾದದ್ದು. ಡ್ಯಾಮ್ ಮತ್ತು ಕೆರೆಗಳಲ್ಲಿ ಹೂತುಕೊಂಡ ಮಣ್ಣು, ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗದೆ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಈ ನೀರಿನ ಪ್ರಯೋಜನ ಪಡೆದುಕೊಳ್ಳಲು ರಾಜ್ಯದಲ್ಲಿನ ಎಲ್ಲಾ ಡ್ಯಾಮ್ ಮತ್ತು ಕೆರೆಗಳಲ್ಲಿನ ಹೂಳು-ಮಣ್ಣು ಎತ್ತಿಸಬೇಕು. ಮತ್ತು ಮರಳು ಮಣ್ಣನ್ನು ಬೇರ್ಪಡಿಸಿ ಫಲವತ್ತಾದ ಮಣ್ಣನ್ನು ಕೃಷಿಗೂ ಮತ್ತು ಮರಳನ್ನು ನಿರ್ಮಾಣ ಕಾರ್ಯಕ್ಕೂ ಉಪಯೋಗಿಸಬಹುದು. ಡ್ಯಾಮ್ ಕೆಳಗೆ ಹರಿಯುವ ನದಿಗಳಲ್ಲಿ ಅಲ್ಲಲ್ಲಿ ಚೆಕ್ ಡ್ಯಾಮ್ಗಳ ನಿರ್ಮಾಣಗಳಾಗಿ ವ್ಯರ್ಥವಾಗುವ ನೀರನ್ನು ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ಹರಿಸಬೇಕು. ಪಶ್ಚಿಮ ಘಟ್ಟದ ನದಿಗಳು ಸಮುದ್ರ ಸೇರುತ್ತಿರುವುದನ್ನು ಪೂರ್ವೋತ್ತರ ಮುಖವಾಗಿ ತಿರುಗಿಸಿ ಅವಶ್ಯವಿದ್ದಾಗ ಹಾಲಿ ಡ್ಯಾಮ್ಗಳಿಗೂ ನೀರು ತುಂಬಿಸಿ ಮತ್ತು ಮಿನಿ ಡ್ಯಾಮ್ಗಳ ನಿರ್ಮಾಣ ಮಾಡಿ ನೀರಾವರಿ, ವಿದ್ಯುತ್ ಮತ್ತು ಕುಡಿಯುವ ನೀರಿಗೆ ಪ್ರಯೋಜನ ಪಡೆದು ಕರ್ನಾಟಕವನ್ನು ನೀರಿನ ಸಮಸ್ಯೆ ಇಲ್ಲದ ರಾಜ್ಯ ಮಾಡಬಹುದು ಮುಖ್ಯಮಂತ್ರಿಗಳು ಈ ಯೋಜನೆಗಳಿಗೆ ಆದ್ಯತೆ ನೀಡುವ ಅವಶ್ಯಕತೆಯಿದೆ.
- ದಾನಿನೇತ ರುದ್ರಾನಾಯಕ್, ಬೆಂಗಳೂರು
ನಿವೃತ್ತಿ ವಯಸ್ಸು ಇಳಿಕೆ
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಗಳಿಗೆ ಏರಿಸಿದ್ದು ಹಿಂದಿನ ಸರ್ಕಾರ. ಅದು ತನ್ನ ಮೊದಲ ಬಜೆಟ್ನಲ್ಲಿಯೇ ಮಾಡಿದ ಘನ ಕಾರ್ಯಗಳಲ್ಲಿ ಇದೂ ಒಂದು. ಇದರಿಂದ ಯುವಜನತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಹೆಚ್ಚುತ್ತಿರುವ ನಿರುದ್ಯೋಗ, ಏರುತ್ತಿರುವ ವಯಸ್ಸು, ಇವುಗಳಿಂದ ಕಂಗಾಲಾಗಿರುವ ನಿರುದ್ಯೋಗಿ ವಿದ್ಯಾವಂತರು ಪರದಾಡುವಂತಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58 ಮತ್ತು ವಿದ್ಯಾವಂತರ ರಾಜ್ಯ ಕೇರಳದಲ್ಲಿ ನಿವೃತ್ತಿ ವಯಸ್ಸು ಈಗಲೂ 58 ವರ್ಷಗಳು. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸಿ, ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳು ಅಥವಾ 33 ವರ್ಷಗಳ ಸೇವೆಗೆ ಸೀಮಿತಗೊಳಿಸಬೇಕೆಂದು ಆದೇಶ ಹೊರಡಿಸಿ ಅನುಕೂಲ ಮಾಡಿಕೊಡಬೇಕೆಂದು ಕೋರಿಕೆ.
- ಕೆ.ಎಸ್. ರಮೇಶ್, ಮೈಸೂರು
ಸರ್ಕಾರಿ ಬಸ್ ಸೇವೆ ಒದಗಿಸಿ
ಶ್ರೇಷ್ಠ ಕವಿ ಮಾಸ್ತಿಯ ತವರು ತಾಲ್ಲೂಕು ಕೇಂದ್ರವಾದ ಮಾಲೂರು ತಾಲ್ಲೂಕಿನ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹಾಗೂ ವೆಂಕಟರಮಣ ದೇವಸ್ಥಾನ ಇರುವ ಚಿಕ್ಕತಿರುಪತಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೇ ವಿವಿಧ ಮೂಲೆಗಳಿಂದ ದಿನಂಪ್ರತಿ ಬರುವ ಪ್ರಯಾಣಿಕರು ಪರದಾಡುವಂತಾಗಿದೆ. ಕರ್ನಾಟಕ ರಾಜ್ಯ ಸಾರಿಗೆ ನಿಗಮದಿಂದ ಲಕ್ಕೂರು-ಚಿಕ್ಕತಿರುಪತಿ-ಆನೇಕಲ್ ಮಾರ್ಗವಾಗಿ ಸಂಚರಿಸುವ ಏಕೈಕ ಬಸ್ ಮಾತ್ರ ಸರ್ಕಾರಿ ಬಸ್ ಆಗಿದೆ. ಇದೇ ಬಸ್ ದಿನಪೂರ್ತಿ 2-3 ಬಾರಿ ಸರಿಯಾದ ಸಮಯವಿಲ್ಲದೇ ಸಂಚರಿಸುತ್ತದೆ. ಆದರೆ ಮಾಲೂರಿನ ಜನದಟ್ಟಣೆ ಇರುವ ಈ ರಸ್ತೆಯಲ್ಲಿ ಅನೇಕ ಪ್ರಯಾಣಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಇದೇ ಬಸ್ನಲ್ಲಿ ಸಂಚರಿಸುವುದರಿಂದ ಪ್ರತಿನಿತ್ಯ ಪ್ರಯಾಣಿಕರು ಬಾಗಿಲುಗಳಲ್ಲಿ ನಿಂತು ಅನೇಕ ಅವಘಡಗಳಿಗೆ ಕಾರಣ ಆಗಿದೆ. ಇದರ ಪ್ರಯೋಜನವನ್ನು ಖಾಸಗಿ ಮಿನಿಬಸ್ ಮಾಲೀಕರು ಪಡೆಯುತ್ತಿದ್ದಾರೆ. ಸಾರಿಗೆ ಸಚಿವರು ಮಿನಿಬಸ್ಗಳ ಹಾವಳಿ ತಪ್ಪಿಸಿ ಸರ್ಕಾರಿ ಬಸ್ ಸೇವೆ ಒದಗಿಸಬೇಕು.
- ಲಕ್ಕೂರು ಎಂ. ನಾಗರಾಜ್, ಮಾಲೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

