ಅಂತಾರಾಷ್ಟ್ರೀಯ ಛಾಂಪಿಯನ್ ಇಂಡಿಯಾದ ಸಾಧನೆ
ಮೂವತ್ತು ವರ್ಷಗಳ ಹಿಂದೆ, 1983ರಲ್ಲಿ ಕ್ರಿಕೆಟ್ ವಿಶ್ವದಲ್ಲಿ ದೊಡ್ಡ ಹೆಸರು ಮಾಡಿ, ಛಾಂಪಿಯನ್ ಕಿರೀಟ ಪಡೆದ ಭಾರತದ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಛಾಂಪಿಯನ್ಸ್ ಪ್ರಶಸ್ತಿಯನ್ನು ಗೆದ್ದು, ಮೊದಲ ವಿಜಯದ ಮೂವತ್ತನೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದು ನಿಜವಾದ ಅರ್ಥದಲ್ಲಿ ಐತಿಹಾಸಿಕ ವಿಕ್ರಮವೇ. ನಿಜ. ಭಾನುವಾರದ ಭಾರತ- ಇಂಗ್ಲೆಂಡ್ ನಡುವಣ ಫೈನಲ್ ಪಂದ್ಯ ನಡೆದ ವಾತಾವರಣ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡದ ಯುವಕರ ಮನೋಧರ್ಮವನ್ನು ಪರೀಕ್ಷಿಸುವಂತೆಯೇ ಇತ್ತು. ಮಳೆಯ ಹಾವಳಿ, ಮೂರು ನಾಲ್ಕು ಬಾರಿ ಆಟ ಮಳೆ ಕಾರಣದಿಂದ ನಿಂತು, ಮತ್ತೆ ಆರಂಭವಾಗಿದ್ದು ಐವತ್ತು ಓವರ್ಗಳ ಪಂದ್ಯ ಇಪ್ಪತ್ತು ಓವರ್ಗಳ ಪಂದ್ಯವಾಗಿ ಪರಿವರ್ತನೆಯಾಗಿದ್ದು ಒಂದು ಕಡೆ, ಈಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಪ್ರಪಂಚವನ್ನೇ ತಲ್ಲಣಿಸುವ ರೀತಿಯಲ್ಲಿ ಪ್ರಚಾರ ಪಡೆದ ಹಗರಣಗಳು, ಕ್ರಿಕೆಟ್ ಆಡಳಿತ ಮಂಡಳಿಯಲ್ಲೇ ಬಿರುಕು ಬಿಟ್ಟಿದ್ದು, ಸದ್ಯದ ತಾತ್ಕಾಲಿಕ ಆಡಳಿತ ವ್ಯವಸ್ಥೆ ಇನ್ನೊಂದು ಕಡೆ, ಆಟಗಾರರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಇಂತಹ ಸನ್ನಿವೇಶದಲ್ಲೂ ಕೂಡಿ ಆಡುವ ಮನೋಧರ್ಮವನ್ನು ಪ್ರದರ್ಶಿಸಿದ ಭಾರತದ ಆಟಗಾರರು ಇಡೀ ಛಾಂಪಿಯನ್ಸ್ ಟೂರ್ನಿಯಲ್ಲಿ ಒಂದು ಪಂದ್ಯದಲ್ಲೂ ಸೋಲದೇ ಅಜೇಯರಾಗಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದು ಅಸಾಧಾರಣವಾದ ಸಾಧನೆ. ತಂಡದ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಎಷ್ಟು ಬಾರಿ ಶಭಾಷ್ ಹೇಳಿದರೂ ಸಾಲದು. ಅವರು ನಾಯಕರಾಗಿರುವುದಕ್ಕೇ ಆ ಗೌರವ. ಉಳಿದಂತೆ ಧೋನಿ ಸೇರಿದಂತೆ ಎಲ್ಲ ಆಟಗಾರರೂ ಏಕ ರೀತಿಯಲ್ಲಿ, ಸರಿಸಮಾನರಾಗಿ ಕೀರ್ತಿಯನ್ನು ಹಂಚಿಕೊಳ್ಳಬೇಕು. ಯಾವ ಬ್ಯಾಟ್ಸ್ಮನ್ ಎಷ್ಟು ರನ್ ಮಾಡಿದರು, ಯಾವ ಬೌಲರ್ ಎಷ್ಟು ವಿಕೆಟ್ಗಳನ್ನು ಗಳಿಸಿದರು, ಅತಿ ಹೆಚ್ಚಿನ ಸಂಖ್ಯೆಯ ಕ್ಯಾಚ್ಗಳನ್ನು ಹಿಡಿದವರು ಯಾರು ಎನ್ನುವುದೆಲ್ಲ ದಾಖಲೆಯ ಪುಸ್ತಕಗಳಲ್ಲಿ ಅಗತ್ಯವಾಗಿ ಸೇರಲೇಬೇಕು. ಸೇರಿಕೊಳ್ಳುತ್ತಿವೆ. ಆದರೆ ಯಾವ ಸಂದರ್ಭದಲ್ಲೂ ಸಂಯಮ ಹಾಗೂ ಧೈರ್ಯವನ್ನು ಕಳೆದುಕೊಳ್ಳದೇ, ಏಕತೆಯನ್ನು ಪ್ರದರ್ಶಿಸಿದ ಆಟಗಾರರ ವರ್ತನೆ ದಾಖಲೆಗಳ ಪುಸ್ತಕವನ್ನು ಸೇರುವುದಿಲ್ಲ. ಅದಕ್ಕೆ ಇರುವ ಜಾಗ ಸಾರ್ವಜನಿಕ ವೇದಿಕೆಗಳೇ. ಕ್ರಿಕೆಟ್ ಜಗತ್ತಿನಲ್ಲಿ ಭಾರತಕ್ಕೆ ದೊಡ್ಡ ಹೆಸರಿದೆ. ಇದುವರೆಗೆ ವಿದೇಶಗಳ ಅಭಿಮಾನಿಗಳು ಅದಕ್ಕೆ ಕೊಡುತ್ತಿದ್ದ ಕಾರಣ ಭಾರತದಲ್ಲಿ ಕ್ರಿಕೆಟ್ಗೆ ಜನ ಸ್ಪಂದಿಸುವ ರೀತಿಯಲ್ಲಿ, ಅದರ ಮೇಲೆ ಹಣವನ್ನು ಸುರಿಯುವ ಬಗೆಯಲ್ಲಿದೆ. ದುಡ್ಡಿದ್ದವರಿಗೇ ಗೌರವ ಸಿಗುವುದು ಸಹಜ ಎಂದು ಆಡಿಕೊಳ್ಳುತ್ತಿದ್ದರು. ಈಗ ಅಂತಹ ಮಾತಿಗೆ ಅವಕಾಶವಿಲ್ಲ. ಭಾರತೀಯ ಆಟಗಾರರ ತಂಡ ತನಗೆ ಸಿಗುತ್ತಿರುವ ಗೌರವ- ಆದರ- ಪ್ರತಿಷ್ಠೆಗೆ ನಿಜವಾಗಿಯೂ ಅರ್ಹ. ಮುಂದಿನ ದಿನಗಳಲ್ಲಿ ಅವರೆಲ್ಲ ಅದಕ್ಕೆ ತಕ್ಕಂತೆ ವರ್ತಿಸಿ ಜನರ ವಿಶ್ವಾಸವನ್ನು ಗಳಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

