ಚಂದ್ರಶೇಖರ ತಿವಾರಿಯವರು ವಾರಾಣಸಿಯಲ್ಲಿ ಸಂಸ್ಕೃತ ಕಲಿಯುತ್ತಿದ್ದಾಗ ಅಸಹಕಾರ ಆಂದೋಲನ ಪ್ರಾರಂಭವಾಗಿತ್ತು. ರಸ್ತೆಯಲ್ಲಿ ಮೆರವಣಿಗೆ ನಡೆಯುತ್ತಿತ್ತು. ಚಂದ್ರಶೇಖರ್ ಹೋರಾಟಗಾರರೊಟ್ಟಿಗೆ ಸೇರಿ ಜೈಕಾರ ಕೂಗುತ್ತಾ ನಡೆಯುತ್ತಿದ್ದ. ತ್ರಿವರ್ಣಧ್ವಜ ಹಿಡಿದು ಮಂಚೂಣಿಯಲ್ಲಿ ಹೋಗುತ್ತಿದ್ದ ಒಬ್ಬ ಹಿರಿಯ ಹೋರಾಟಗಾರರನ್ನು ನಿಲ್ಲಿಸಿ ಪೊಲೀಸಿನವನೊಬ್ಬ ಹಿಗ್ಗಾಮುಗ್ಗ ಹೊಡೆಯುತ್ತಿರುವುದನ್ನು ಸಹಿಸಲಾಗದೆ ಬಾಲಕ ಚಂದ್ರಶೇಖರ ಅಲ್ಲೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಪೊಲೀಸಿನ ಹಣೆಗೆ ತಾಗುವಂತೆ ಬೀಸಿ ಒಗೆದ. ಅವನನ್ನು ಹಿಡಿದು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತು. ನ್ಯಾಯಾಧೀಶರು ಅವನ ಹೆಸರೇನೆಂದು ಕೇಳಿದಾಗ ಅದಕ್ಕೆ ಆತ 'ಆಜಾದ್' (ಸ್ವತಂತ್ರ) ಎಂದು ಉತ್ತರಿಸಿದ. ಅಂದಿನಿಂದ ಆತನನ್ನು ಚಂದ್ರಶೇಖರ ಆಜಾದ್ ಎಂದೇ ಎಲ್ಲರೂ ಕರೆಯಲಾರಂಭಿಸಿದರು. ಅವನು ನೀಡಿದ ದಿಟ್ಟ ಉತ್ತರದಿಂದಾಗಿ ಹೋರಾಟಗಾರರ ಕಣ್ಮಣಿಯಾಗಿಬಿಟ್ಟ. ರಾಮಪ್ರಸಾದ್ ಬಿಸ್ಮಿಲ್ಲರ ಕ್ರಾಂತಿಕಾರಿ ಪಕ್ಷ ಸೇರಿ ದೇಶಕ್ಕಾಗಿ ಹೋರಾಡುವ ಪಣತೊಟ್ಟ. ಅನ್ಯಾಯವನ್ನು ಕಂಡರೆ ಅಲ್ಲಿಯೇ ಖಂಡಿಸುವ ಅವನ ಮನೋಭಾವ ಎಲ್ಲರ ಮೆಚ್ಚುಗೆ ಗಳಿಸಿತು. ಒಮ್ಮೆ ಪಠಾಣನೊಬ್ಬ ಸಾಲದ ವಿಷಯವಾಗಿ ಅಮಾನವೀಯವಾಗಿ ನಡೆದುಕೊಂಡದ್ದನ್ನು ನೋಡಿ ಅವನನ್ನು ಚೆನ್ನಾಗಿ ತದುಕಿದ. ಇನ್ನೊಮ್ಮೆ ಲಾಹೋರಿನಲ್ಲಿ ಲಾಲಾ ಲಜಪತರಾಯ್ ಅವರು ಸೈಮನ್ ಕಮೀಷನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಸ್ಯಾಂಡರ್ಸ್ ಎಂಬ ಆಂಗ್ಲ ಅಧಿಕಾರಿ ಲಜಪತರಾಯನಿಗೆ ಮಾರಣಾಂತಿಕವಾಗಿ ಹೊಡೆದ. ಕೆರಳಿದ ಆಜಾದ್ ಕೇಂದ್ರ ಕಚೇರಿಯಿಂದ ಹೊರಬರುತ್ತಿದ್ದ ಸ್ಯಾಂಡರ್ಸ್‌ನನ್ನು ಗುಂಡಿಟ್ಟು ಕೊಂದು ತನ್ನ ಸೇಡು ತೀರಿಸಿಕೊಂಡ. ಒಂದು ಬಾರಿ ತಮ್ಮ ಚಳುವಳಿಗೆ ಹಣದ ಅವಶ್ಯಕತೆ ಇದ್ದುದರಿಂದ ಕ್ರಾಂತಿಕಾರರು ಒಬ್ಬ ಶ್ರೀಮಂತ ಮಹಿಳೆಯ ಮನೆಗೆ ನುಗ್ಗಿ ಅಲ್ಲಿದ್ದ ಹಣ ದೋಚಿದರು. ಅಲ್ಲಿಯೇ ಇದ್ದ ಆಕೆಯ ಮಗಳನ್ನು ಕ್ರಾಂತಿಕಾರಿಯೊಬ್ಬ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದುದನ್ನು ನೋಡಿ ಆಜಾದ್‌ನಿಗೆ ತಡೆಯಲಾಗಲಿಲ್ಲ. ತನ್ನ ಸಂಗಾತಿಯ ತಪ್ಪಿಗೆ ತಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ನಿರ್ಧರಿಸಿ, ತಾನು ಕೊಳ್ಳೆ ಹೊಡೆದ ಎಲ್ಲ ಹಣವನ್ನೂ ಆ ಶ್ರೀಮಂತ ಮಹಿಳೆಗೆ ಹಿಂದಿರುಗಿಸಿ, ತಮ್ಮನ್ನು ಕ್ಷಮಿಸಲು ಕೇಳಿಕೊಂಡ. ಆಗ ಆ ಮಹಿಳೆಗೆ ಆಜಾದ್‌ನ ಆ ಕಾರ್ಯದ ಬಗ್ಗೆ ಮೆಚ್ಚುಗೆಯಾಯಿತು. ಅವನ ಪ್ರಾಮಾಣಿಕತೆ, ಮಹಿಳೆಯರಿಗೆ ನೀಡುವ ಗೌರವವನ್ನು ನೋಡಿ ಮನತುಂಬಿ ಬಂತು. ಆಜಾದ್ ನನ್ನು ಮನಸಾರೆ ಹರಸಿ, ಅವನಿಗೆ ಯಾವಾಗಲಾದರೂ ಹಣದ ಅವಶ್ಯಕತೆ ಇದ್ದರೆ ಬಂದು ತೆಗೆದುಕೊಂಡು ಹೋಗಬಹುದೆಂದೂ, ತನ್ಮೂಲಕ ತಾನೂ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸೇವೆ ಮಾಡಿದಂತಾಗುವುದೆಂದೂ ತಿಳಿಸಿದಳು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ