ಬಿಜೆಪಿಯ ಭಾರಿ ಪರಾಭವ
ಇನ್ನು ಕೆಲವೇ ವಾರಗಳಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯಬೇಕಾಗಿರುವ ಹಿನ್ನೆಲೆಯಲ್ಲಿ, ಸೋಮವಾರ ಪ್ರಕಟವಾದ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವನ್ನು ಕಾಂಗ್ರೆಸ್ಸಿನ ದೊಡ್ಡ ವಿಜಯ ಅಥವಾ ಬಿಜೆಪಿಯ ಭಾರಿ ಪರಾಭವವೆಂದು ಬಣ್ಣಿಸುವುದು ತೀರ ಸಹಜವಾದ ಪ್ರತಿಕ್ರಿಯೆ.
ಇತ್ತೀಚಿನ ತಿಂಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಕಂಡುಬಂದ ತಿಸ್ರಗಳು, ಒಂದಲ್ಲ ಒಂದು ರೀತಿಯಲ್ಲಿ ಮಳೆಯಂತೆ ಸುರಿದು ಬಿದ್ದ ಭ್ರಷ್ಟಾಚಾರದ ಆರೋಪಗಳು ಹಾಗೂ ಮೇಲ್ಮಟ್ಟದ ನಾಯಕರ ನಡುವಣ ಜಗಳದಲ್ಲಿ ನೈತಿಕವಾಗಿ ಸ್ಥೈರ್ಯವನ್ನೇ ಕಳೆದುಕೊಂಡಿದ್ದ ಕಾರ್ಯಕರ್ತರು ಬಿಜೆಪಿಯ ಸೋಲನ್ನು ನಿರೀಕ್ಷಿಸಿದ್ದರು.
ಹಲವು ಮಾಧ್ಯಮಗಳಲ್ಲಿ ಪ್ರಕಟವಾದ ಸಮೀಕ್ಷೆಗಳೂ ರಾಜ್ಯವನ್ನು ಆಳುತ್ತಿರುವ ಬಿಜೆಪಿಯ ಪರವಾಗಿ ಬಂದಿರಲಿಲ್ಲ. ಒಟ್ಟಾರೆ ಲೆಕ್ಕದಲ್ಲಿ ಬಿಜೆಪಿ- ಜೆಡಿಎಸ್ಗಳೆರಡೂ ಗಳಿಸಿದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್ ವಿಜೃಂಭಿಸಿದೆ. ಇಂತಹ ಫಲಿತಾಂಶವನ್ನು ಬಹುಮಂದಿ ನಿರೀಕ್ಷಿಸಿರಲಿಲ್ಲ.
ಮಂಗಳೂರು- ಉಡುಪಿ- ಪುತ್ತೂರುಗಳಂತಹ ಬಿಜೆಪಿಯ ಭದ್ರ ಕೋಟೆಗಳೂ ಈಗ ಉರುಳಿ ಹೋಗಿವೆ. ಕಳೆದ ಎರಡು ಚುನಾವಣೆಗಳಲ್ಲಿ ಬಳ್ಳಾರಿ ಜಿಲ್ಲೆಯ ಸ್ಥಾನಗಳು ಬಿಜೆಪಿಗೆ ಬೋನಸ್ ರೂಪದಲ್ಲಿ ಸಿಕ್ಕಿತ್ತು. ಈಗ ಅಲ್ಲಿ ಶೂನ್ಯ ಫಲಿತಾಂಶ.
ಮೇಲ್ನೋಟಕ್ಕೇ ಗೋಚರವಾಗುವಂತೆ, ಒಂದು ಕಡೆ ಯಡಿಯೂರಪ್ಪ ಅವರ ಗದಾಪ್ರಹಾರ ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಮಗ್ಗುಲನ್ನು ಮುರಿದಿದ್ದರೆ, ಬಳ್ಳಾರಿ- ರಾಯಚೂರು- ಕೊಪ್ಪಳ ಸೀಮೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಆಳುವ ಪಕ್ಷಕ್ಕೆ ಚೇತರಿಸಿಕೊಳ್ಳಲು ಕಷ್ಟವಾಗುವಂತಹ ಹೊಡೆತವನ್ನೇ ನೀಡಿದ್ದಾರೆ.
ಬಿಜೆಪಿಯ ಸಂಘಟನೆ ಬಲವಾಗಿರುವ, ಶಕ್ತಿಶಾಲಿ, ಪ್ರಭಾವಿಶಾಲಿ ಮಂತ್ರಿಗಳಿರುವ ಜಿಲ್ಲೆಗಳಲ್ಲೂ ಬಿಜೆಪಿ ದಯನೀಯವಾಗಿ ಸೋತಿದೆ.
ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಬಿಜೆಪಿ ಭಾರಿ ಹೊಡೆತವನ್ನೇ ಅನುಭವಿಸಿದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಬಿಜೆಪಿಗೆ ಸಾಕಷ್ಟು ಸಮಯ ಬೇಕು. ಅದಕ್ಕಾಗಿ ಶ್ರಮಿಸುವ ನಾಯಕರು- ಕಾರ್ಯಕರ್ತರ ಪಡೆಗಳೂ ಬೇಕು.
ಇತ್ತೀಚಿನ ರಾಜಕೀಯ ವಿಶ್ಲೇಷಣೆಗಳಲ್ಲಿ, ಬಹುಮಟ್ಟಿಗೆ ಕಂಡು ಬಂದ ಚಿತ್ರ ಎಂದರೆ ಕಾಂಗ್ರೆಸ್ ಅಥವಾ ಬಿಜೆಪಿಗಳು ಮೊದಲೆರಡು ಸ್ಥಾನಗಳಲ್ಲಿ ನಿಂತರೆ ಜಾತ್ಯತೀತ ಜನತಾದಳ ತನ್ನ ಸಾಂಪ್ರದಾಯಿಕ ಶಕ್ತಿ ನೆಲೆಗಳಿಗೇ ಸೀಮಿತವಾಗಿ ಎಲ್ಲೋ ಮೂರನೆಯ ಸ್ಥಾನದಲ್ಲಿರಬಹುದೆನ್ನುವಂತಹ ಚಿತ್ರವೇ.
ಆದರೆ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಯ ಫಲಿತಾಂಶವನ್ನು ಸ್ಥೂಲವಾಗಿ ಪರಿಶೀಲಿಸಿದರೂ, ಜಾತ್ಯತೀತ ಜನತಾ ದಳ ತನ್ನ ಶಕ್ತಿಯ ನೆಲೆಗಳನ್ನು ಉಳಿಸಿಕೊಳ್ಳುವುದರ ಜತೆಯಲ್ಲೇ ಬಿಜೆಪಿಯ ಭದ್ರ ಕೋಟೆಗಳಲ್ಲೂ ತನ್ನ ಕೈಯಾಡಿಸಿದೆ. ಆದರೆ ರಾಮನಗರದ ಸೋಲು ಅದನ್ನು ಕಾಡಿದೆ.
ಅಂತಿಮ ಹಂತದ ಚಿತ್ರದಲ್ಲಿ ಕಾಂಗ್ರೆಸ್ ನಂತರ ಜಾತ್ಯತೀತ ಜನತಾದಳ, ಭಾರತೀಯ ಜನತಾ ಪಾರ್ಟಿಗಳು ಎರಡನೇ ಸ್ಥಾನಕ್ಕೆ ತೀವ್ರವಾದ ಸ್ಪರ್ಧೆಯಲ್ಲಿ ನಿರತವಾದಂತೆ ಕಂಡು ಬರುತ್ತಿದೆ. ಈ ಎರಡೂ ಪಕ್ಷಗಳೂ ಗಳಿಸಿರುವ ಮತಗಳ ಸಂಖ್ಯೆ ಹೆಚ್ಚು ಕಡಿಮೆ ಸರಿಸಮ.
ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಾರ್ಟಿ, ಪಕ್ಷದ ನಾಯಕರು ಹೇಳಿಕೊಂಡಂತೆ ಬಿಜೆಪಿಯನ್ನು ಧೂಳೀಪಟ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗದೇ ಹೋದರೂ, ಅಲ್ಪ ಸಮಯದಲ್ಲಿನ ಅವರ ಸಾಧನೆಯನ್ನು ಒಪ್ಪಿಕೊಳ್ಳಲೇಬೇಕು. ಹೈದರಾಬಾದ್ ಕರ್ನಾಟಕ ಸೀಮೆಯಲ್ಲಿ ಜಾತ್ಯತೀತ ಜನತಾದಳದ ಸಾಧನೆ ಕಡಿಮೆ ಏನೂ ಅಲ್ಲ. ಈ ಲೆಕ್ಕಾಚಾರವನ್ನು ಹಿಡಿದರೆ, ಈ ಚುನಾವಣೆಯಲ್ಲಿ ನಿಜವಾಗಲೂ ಸೋತಿದ್ದು, ತನ್ನ ಶಕ್ತಿಯನ್ನು ಕಳೆದುಕೊಂಡಿದ್ದು ಬಿಜೆಪಿ ಮಾತ್ರ. ಕಾಂಗ್ರೆಸ್ ದೊಡ್ಡ ರೀತಿಯಲ್ಲೇ ಗೆದ್ದಿದೆ. ಜಾತ್ಯತೀತ ಜನತಾದಳ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ.
ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಾರ್ಟಿಗೆ ನಿರೀಕ್ಷಿಸಿದಷ್ಟು ಯಶಸ್ಸು ಸಿಕ್ಕಿಲ್ಲ. ಆದರೂ ಅದನ್ನು ನಿರುಪಯುಕ್ತ ಪಕ್ಷವೆಂದು ಭಾವಿಸುವಂತಿಲ್ಲ. ಶ್ರೀರಾಮುಲು ಅವರ ಬಿಎಸ್ಸಾರ್ ಕಾಂಗ್ರೆಸ್ ಗೆದ್ದ ಸ್ಥಾನಗಳಿಗಿಂತ ಹೆಚ್ಚಾಗಿ ಅನೇಕ ಕಡೆಗಳಲ್ಲಿ ಕಾಂಗ್ರೆಸ್- ಬಿಜೆಪಿಗಳನ್ನು ಸೋಲಿಸಿದ್ದು ನಿಜ.
ಕೆಲವು ಜಿಲ್ಲೆಗಳಲ್ಲಿ ಪಕ್ಷೇತರರು ದೊಡ್ಡ ಸಂಖ್ಯೆಯಲ್ಲೇ ಗೆದ್ದಿದ್ದಾರೆ. ನಿಸ್ಸಂದೇಹವಾಗಿ ಇದರಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಸ್ಥಳೀಯ ಪ್ರಭಾವಿಗಳೂ ಇದ್ದಾರೆ.
ಈ ಪಕ್ಷೇತರರೇ, ಈಗಾಗಲೇ ಆರಂಭವಾಗಿರಬಹುದಾದ ನಾಳಿನ ಅಧಿಕಾರದ ಹಂಚಿಕೆಯ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರಧಾರಿಗಳಾಗುವುದು ಖಚಿತ.
ನಿಜ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವನ್ನೇ ಗಮನದಲ್ಲಿಟ್ಟುಕೊಂಡು ನಾಳಿನ ರಾಜಕೀಯದ ಚಿತ್ರವನ್ನು ಬಿಡಿಸುವುದು ಸಂಪೂರ್ಣವಾಗಿ ಸರಿ ಎನಿಸುವುದಿಲ್ಲ. ಆದರೆ ರಾಜ್ಯದ ಮತದಾರರಲ್ಲಿ ಸುಮಾರು ಮೂರರಲ್ಲಿ ಒಂದು ಪಾಲಿನ ಮತದಾರರು ಪ್ರಕಟಿತ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ.
ಈ ಚುನಾವಣೆ ಕಲಿಸಿರುವ ಪಾಠಗಳು ಬೇಕಾದಷ್ಟಿರಬಹುದು. ಅದರ ಚರ್ಚೆಗೆ ಇನ್ನು ಸಮಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

