ಸಂಪುಟದಲ್ಲಿರಲಿ ಯವಕರಿಗೆ ಪ್ರಾತಿನಿಧ್ಯ
ರಾಜ್ಯದಲ್ಲಿ ಸರಳ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಸಂದರ್ಭದಲ್ಲಿ ರಾಜ್ಯದ ಜನ ಜಾತಿ ಬೇಧವಿಲ್ಲದೆ ಸಂಭ್ರಮಿಸಿದ್ದಾರೆ. ಸುಮಾರು ಎಂಟು ವರ್ಷಗಳ ಬಳಿಕ ರಾಜ್ಯದ ಜನ ತಮಗೊಂದು ಸುಭದ್ರ ಸರ್ಕಾರ ಅನಿವಾರ್ಯ ಎಂಬ ಸತ್ಯವನ್ನು ಕಂಡುಕೊಂಡ ಪರಿಣಾಮ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ನೀಡಿ ತಮ್ಮ ಆಶೋತ್ತರಗಳ ಈಡೇರಿಕೆಗಾಗಿ ಚಾತಕ ಪಕ್ಷಿಯಂತೆ ಕಾದಿರುವುದಂತು ಸತ್ಯ.
ಜನರ ಭಾವನೆಗಳಿಗೆ ಈಗಾಗಲೆ ಸ್ಪಂದಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ರೀತಿಯ ಮಂತ್ರಿಮಂಡಲ ರಚನೆ ಮಾಡುತ್ತಾರೆಂದು ಎಲ್ಲರಿಗೂ ಕುತೂಹಲವಿದೆ. ಎಲ್ಲಾ ವರ್ಗಗಳನ್ನು ಸುಪ್ರೀತಗೊಳಿಸುವ ಜೊತೆಗೆ ಜಿಲ್ಲಾವಾರು ಪ್ರಾತಿನಿಧ್ಯ ಹಾಗೂ ಹಿರಿ ಕಿರಿ ತಲೆಗಳನ್ನು ಗಣನೆಗೆ ತೆಗೆದುಕೊಂಡು ಸಂಪುಟ ರಚಿಸುವ ಕಸರತ್ತಿನಲ್ಲಿ ತೊಡಗಿರುವ ಮುಖ್ಯಮಂತ್ರಿಗಳು ರಾಜ್ಯದ ಹಿತ ಮುಖ್ಯವಾಗಿಟ್ಟುಕೊಂಡರೆ ಮಾತ್ರ ಅವರ ಆಡಳಿತವನ್ನು ಜನ ಮೆಚ್ಚಿಯಾರು.
ಅನೇಕ ಮಾಜಿ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಗಣಿ ಮಾಫಿಯ, ರಿಯಲ್ ಎಸ್ಟೇಟ್ ಲಾಬಿಗಳಿಗೆ ಇಂತಹ ನಾಯಕರುಗಳ ಅಗತ್ಯವಿದೆ. ಅವರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಮೇಲೆ ಒತ್ತಡ ಹಾಕಲು ಶುರುಮಾಡಿವೆ. ಕಳಂಕಿತರಿಗೆ ಯಾವ ಮಂತ್ರಿ ಸ್ಥಾನ ನೀಡಬಾರದಲ್ಲದೆ, ಈಗಾಗಲೆ ಮಂತ್ರಿ ಹುದ್ದೆ ಅನುಭವಿಸಿರುವ ನಾಯಕರನ್ನು ತುಸು ಪಕ್ಕಕ್ಕೆ ಸರಿಸುವ ಅಗತ್ಯವಿದೆ. ಮಂತ್ರಿಮಂಡಲಕ್ಕೆ ಅನುಭವಿಗಳ ಅಗತ್ಯವಿದೆ ನಿಜ. ಆದರೆ ಕೂತರೆ ನಿಂತುಕೊಳ್ಳಲಾರದ ನಾಯಕರುಗಳಿಗೆ ಮಣೆ ಹಾಕದೆ ದಕ್ಷತೆಯಿರುವ, ಜನತೆಯ ಆಶೋತ್ತರಗಳನ್ನ ಅರ್ಥ ಮಾಡಿಕೊಂಡು ಸಾಮಾಜಿಕ ನ್ಯಾಯದಡಿ ಕಾರ್ಯನಿರ್ವಹಿಸುವ ಶಾಸಕರುಗಳನ್ನ ಮಂತ್ರಿಯಾಗಿ ಮಾಡಿದರೆ ನಿಜಕ್ಕೂ ಜನರ ಪ್ರಯತ್ನ ಸಾರ್ಥಕವಾದೀತು.
ಜನರ ಸೇವೆ ಮಾಡಲು ಅಧಿಕಾರವೆ ಬೇಕಂತೇನಿಲ್ಲ. ಜನ ತಮ್ಮ ಸೇವೆ ಮಾಡಲೆಂದೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಮಂತ್ರಿ ಸ್ಥಾನ ಸಿಗಲಿ- ಸಿಗದಿರಲಿ ಈ ನಾಯಕರುಗಳಿಗೆ ಜನರ ಸೇವೆ ಮಾಡುವ ಗುಣಗಳಿರಬೇಕು. ಹಣ ಮಾಡುವ ದಂಧೆಗೆ ಇಳಿಯುವ ಶಾಸಕರುಗಳಿಗೆ ಮುಖ್ಯಮಂತ್ರಿಗಳು ಕಡಿವಾಣ ಹಾಕುವ ಅಗತ್ಯವಿದೆಯಲ್ಲದೆ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಿದಾಗ ಮಾತ್ರ ಜನತೆಗೆ ಚೊಕ್ಕ ಆಡಳಿತ ನೀಡಲು ಸಾಧ್ಯ.
ಸಂಪುಟಕ್ಕೆ ಹಿರಿಯ ತಲೆಗಳಿಗಿಂತ ಹೊಸಬರಿಗೆ ಹಾಗೂ ಉತ್ಸಾಹಶೀಲರಿಗೆ ಅವಕಾಶ ಮಾಡಿಕೊಟ್ಟಲ್ಲಿ ರಾಜ್ಯದ ಜನಕ್ಕೆ ಏನಾದರೂ ಒಳ್ಳೆಯದಾದೀತು. ಪ್ರತಿ ಬಾರಿ ಮಂತ್ರಿಮಂಡಲದಲ್ಲಿ ಈ ಹಳೆ ತಲೆಗಳನ್ನು ನೋಡಿ ನೋಡಿ ಜನತೆಗೆ ಸಾಕಾಗಿದೆ. ಸಂಪುಟದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡುವ ಅಗತ್ಯವಿದೆ.
ಕ್ರಿಮಿನಲ್ ಹಿನ್ನಲೆಯಿರುವವರಿಗೆ ಯಾವುದೆ ರೀತಿಯ ಮಾನ್ಯತೆ ಕೂಡುವುದು ಬೇಡ. ಜಾತಿಗನುಗುಣವಾಗಿ ಪ್ರಾಶಸ್ತ್ಯ ನೀಡುವುದನ್ನು ಬಿಟ್ಟು ದಕ್ಷತೆಗೆ ಹಾಗೂ ಸೇವಾ ಮನೋಭಾವವಿರುವ ನಾಯಕರುಗಳಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಹೊಸ ಶಕೆ ಆರಂಭಿಸಲಿ.
-ಸಿ.ಪಿ.ಮೂರ್ತಿ ಪತ್ರಕರ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

