ಶಿಕ್ಷಣ ಕ್ಷೇತ್ರದ ಸುಲಿಗೆ ಇಲಾಖೆಯ ದೀರ್ಘ ನಿದ್ದೆ
ಇದು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಸೇರಿಸುವ ಸಮಯ. ಪಾಲಕ ಪೋಷಕರಿಗೆ ನಿಜಕ್ಕೂ ಅತ್ಯಂತ ಸಂಕಟದ ಕಾಲ. ಪ್ರತಿಷ್ಠಿತ ಸಂಸ್ಥೆಗಳಲ್ಲಿ "ಕಾಣಿಕೆ" ಶುಲ್ಕಕ್ಕೆ ಇತಿ-ಮಿತಿಯೇ ಇಲ್ಲ. ಆದರೆ ಈ ಪಿಡುಗು ಅಲ್ಲಿ ಆರಂಭವಾಗಿ ಈ ವೇಳೆಗೆ ಮುಗಿದೇ ಹೋಗಿರುವಂತಿದೆ.
ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪಾಲಕ- ಪೋಷಕರು ಮಧ್ಯಮ ವರ್ಗದ ಮೇಲಿನ ಗೆರೆಯನ್ನು ದಾಟದೇ ಇದ್ದರೆ, ಅವರಿಗೆ ಮಕ್ಕಳ ಶುಲ್ಕ, ಬಸ್ ದರ, ಪುಸ್ತಕ ಹಾಗೂ ಇತರ ಪರಿಕರಗಳ ವೆಚ್ಚವನ್ನು ಪೂರೈಸುವುದು ಅಸಾಧ್ಯವೇ. ಈಗಿನ ಕಾಯಿದೆಯಂತೆ ರಿಯಾಯಿತಿ - ವಿನಾಯಿತಿ ಇದ್ದರೂ, ಅದನ್ನು ಪಡೆಯುವುದು ಕಷ್ಟ.
ಇತರ ಸಂಸ್ಥೆಗಳಲ್ಲಿ, ಅಂದರೆ ಪ್ರಧಾನವಾಗಿ ಸರ್ಕಾರದ ನೆರವು ಪಡೆಯುವ ಖಾಸಗಿ ಶಾಲೆಗಳಲ್ಲಿ ಸಾಮಾನ್ಯರಿಗೂ ಪ್ರವೇಶದ ಹಕ್ಕಿರಬೇಕು ಹಾಗೂ ಅಲ್ಲಿನ ವೆಚ್ಚ, ಸಾಮಾನ್ಯರಿಗೆ ಎಟುಕುವ ಮಟ್ಟದಲ್ಲೇ ಇರಬೇಕು. ಅದು ನಿಯಮ.
ಈಗಂತೂ, ಸುಪ್ರೀಮ್ ಕೋರ್ಟಿನ ಹಲವಾರು ತೀರ್ಪುಗಳ ಪರಿಣಾಮವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಶಿಕ್ಷಣದ ಹಕ್ಕಿನ ಕಾಯಿದೆಯಂತೆ, ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳಲ್ಲೂ, ಒಂದಂಶವನ್ನು ಸಾಮಾನ್ಯ ಜನವರ್ಗಗಳ ಮೂಲಕ ಮಕ್ಕಳಿಗೆ ಮೀಸಲಾಗಿಡಬೇಕು.
ಈ ಕಾಯಿದೆಯ ವಿಧಿ-ನಿಯಮಗಳು ಆಚರಣೆಯಲ್ಲಿ ಬಂದಾಗ ಒಂದು ರೀತಿಯಲ್ಲಿ ಅದರದ್ದೇ ಆದ ದೊಡ್ಡ ರಗಳೆಯ ಪ್ರಪಂಚವೇ ಸೃಷ್ಟಿಯಾಗಿದೆ. ಸಾಮಾನ್ಯ ಶಾಲೆಗಳಲ್ಲೂ ಈಗ ಡೊನೇಷನ್ ಹಾವಳಿಯನ್ನು ತಡೆಯುವುದರಲ್ಲಿ ಸರ್ಕಾರ ವಿಫಲವಾಗಿರುವುದು ಒಂದು ದುರಂತವೇ.
ಹಿಂದೆಲ್ಲ ಈ ವಿಚಾರದಲ್ಲಿ ವಿಧಾನ ಮಂಡಲದಲ್ಲಿ, ಅದರಲ್ಲೂ ವಿಧಾನ ಪರಿಷತ್ತಿನಲ್ಲಿ ತೀವ್ರ ಸ್ವರೂಪದ ವಿಪುಲವಾದ ಚರ್ಚೆ ನಡೆಯುತ್ತಿತ್ತು. ಗಂಟೆಗಟ್ಟಲೆ ಚರ್ಚೆ, ಅದಕ್ಕೆ ಮಂತ್ರಿಗಳಿಂದ ಸೂಕ್ತ ರೀತಿಯ ಉತ್ತರ ಹಾಗೂ ಲೋಪ-ದೋಷಗಳನ್ನು ಸರಿಪಡಿಸುವ ಭರವಸೆ ಹಾಗೂ ತಪ್ಪಿತಸ್ಥ ಸುಲಿಗೆ ಕೋರರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ವೀರಾವೇಶದ ಮಾತೂ ಕೇಳಿ ಬರುತ್ತಿತ್ತು. ಈಗಲೂ ಅಷ್ಟೇ. ಶಿಕ್ಷಣ ಇಲಾಖೆಯ ಆಡಳಿತಗಾರರು, ಸರ್ಕಾರದ ನೀತಿಗೆ ಅನುಗುಣವಾಗಿ ಸೂಚನಾ ಪತ್ರಗಳನ್ನು ಶಾಲೆಗಳಿಗೆ ರವಾನಿಸಿದರೆ ತಮ್ಮ ಕೆಲಸ ಮುಗಿಯಿತೆಂದು ತಿಳಿದುಕೊಂಡಿರುವಂತಿದೆ. ಎಲ್ಲಾದರೂ, ಯಾರಿಗಾದರೂ ಅನ್ಯಾಯವಾಗಿದ್ದರೆ, ಇಲಾಖೆಗೆ ದೂರನ್ನು ಕೊಟ್ಟರೆ, ಅದನ್ನು ಪರಿಶೀಲಿಸಲಾಗುವುದು ಎಂದಷ್ಟೇ ಹೇಳಿ ಕರ್ತವ್ಯ ಪಾಲನೆ ಆಯಿತೆಂದು ಸುಮ್ಮನಾಗಿರುವಂತಿದೆ. ನಿಜಕ್ಕೂ ಇದು ತೀರ ಅಸಹನೀಯ ಸ್ಥಿತಿ. ಶಿಕ್ಷಣ ಇಲಾಖೆ ನೊಂದವರಿಂದ ದೂರು ಬರಲೆಂದು ಕಾಯುವುದರ ಜತೆಯಲ್ಲೇ ಸರ್ಕಾರದ ಸೂಚನೆಗಳು ಎಷ್ಟರಮಟ್ಟಿಗೆ ಜಾರಿಗೆ ಬಂದಿವೆ ಎನ್ನುವುದರ ಪರಿಶೀಲನೆಗೆ, ನೀತಿಯ ಜಾರಿಯ ತಂಡಗಳನ್ನಾದರೂ ರಚಿಸಬಾರದೇನು?
ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಶಾಲೆಗೂ, ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಜನಸಾಮಾನ್ಯ ವರ್ಗವನ್ನು ನಡೆಸಿಕೊಂಡಿರುವ ರೀತಿ-ನೀತಿ ತೀರ ಅತೃಪ್ತಿಕರ. ಅದನ್ನು ಈಗ ಸುಧಾರಿಸದೇ ಹೋದರೆ, ವಿದ್ಯಾರ್ಥಿಗಳಿಗೆ ದ್ರೋಹ ಬಗೆದಂತೆಯೇ ಆಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

