ಕೊಡು ತಾಯೆ ವರವ ಕುಡುಕನಲ್ಲದ ಗಂಡನ!
ಹೀಗೆಂದು ಎಲ್ಲಾ ಹೆಣ್ಣು ಮಕ್ಕಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದರೆ... ನಮ್ಮ ದೇವರು ಜನರಿಗೆ ಕಡಿಮೆ ದರದಲ್ಲಿ ಮದ್ಯ ಪೂರೈಸಿ ಅಮಲೇರಿಸುವ ಘೋಷಣೆ ಮಾಡಿದೆ. ಇವರಿಗೆ 'ಕುಡಿತದ ಕೆಡುಕು'ಗಳ ಅರಿವಿಲ್ಲವೇ?
ಕುಡಿತ ಬೇಡ... ಕುಡಿತದಿಂದ ಸರ್ವನಾಶ... ಎಂಬ ಘೋಷಣೆಗಳೊಂದಿಗೆ ಮಹಾತ್ಮ ಗಾಂಧಿಯ ಫೋಟೋ ಬಳಸಿ ಬೃಹತ್ ಕಟೌಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಿ ಜಾಹೀರಾತು ನೀಡುವ ಸರ್ಕಾರ ಈಗ ಕುಡಿತವನ್ನು ಪ್ರೋತ್ಸಾಹಿಸುತ್ತಿರುವುದು ವಿಪರ್ಯಾಸ!
ಕೇಜಿಗೊಂದು ರುಪಾಯಿಯ ದರದಲ್ಲಿ ಅಕ್ಕಿ ನೀಡುವ ದಯಾಳು... ಈಗ ಕಡಿಮೆ ದರದಲ್ಲಿ ಮದ್ಯ ನೀಡಲು ಕಾರಣವೇನು? ಕಡಿಮೆ ದರದಲ್ಲಿ ಔಷಧಿ ಸರಬರಾಜು ಮಾಡುವ ನಿರ್ಧಾರ ತೆಗೆದುಕೊಳ್ಳುವ ಬದಲು ವಿಷ (ಮದ್ಯ) ಸರಬರಾಜು ಮಾಡಲು ನಿರ್ಧರಿಸಿರುವುದು ಸರಿಯಲ್ಲ.
ರಾಜ್ಯದಲ್ಲಿ ಅತಿ ಹೆಚ್ಚು ಅನಾಹುತ... ಅಪರಾಧ...ನಡೆಯುತ್ತಿರುವುದಕ್ಕೆ ಮೂಲ ಕಾರಣ ಈ ಮದ್ಯಪಾನ. ಮದ್ಯದ ಅಮಲಿನಲ್ಲಿ ನಡೆಯುವ ಅಪರಾಧ... ಕ್ರೌರ್ಯ... ಅನಾಹುತ... ಅಪಘಾತ ಅಷ್ಟಿಷ್ಟಲ್ಲ. ಹೀಗಿದ್ದೂ... ನಮ್ಮ ಸರ್ಕಾರ ಕುಡುಕರಿಗೆ ಪ್ರೋತ್ಸಾಹ ನೀಡಿದರೆ ಇದರಿಂದಾಗುವ ಕೆಡುಕಿಗೆ ಜವಾಬ್ದಾರರಾರು? ಇದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವುದಿಲ್ಲವೇ?
ಈ ಸರ್ಕಾರದ ನಿರ್ಧಾರದಿಂದ ಕುಡುಕರು ಸಂತಸಪಡಬಹುದು. ಆದರೆ ಆ ಕುಡುಕರ ಸಂಸಾರದ ಗತಿಯೇನು? ಸರ್ಕಾರ ಯೋಚಿಸಿದೆಯೇ?
ಬರಿಗೈಯಲ್ಲೇ ಕೋಟೆ ಕೊತ್ತಲಗಳನ್ನು ಏರಬಲ್ಲ ಸಾಹಸಿ ಜ್ಯೋತಿರಾಜ್ (ಕೋತಿರಾಮ) ಸಂದರ್ಶನವೊಂದರಲ್ಲಿ ಹೇಳುತ್ತಿದ್ದುದು ಹೀಗೆ "ಹೀಗೆ... ನಮ್ಮ ಜನ ತುಂಬಾ ಗಟ್ಟಿ ಇದ್ರು... ಸಾರ್... ಈ ಬ್ರಿಟಿಷರು ನಮ್ಮ ಜನಕ್ಕೆ ಧೂಮಪಾನ, ಮದ್ಯಪಾನ, ಗುಟ್ಕಾ ಇತ್ಯಾದಿಗಳನ್ನು ಪರಿಚಯಿಸಿದ್ದೇ ಇವರನ್ನು ದುರ್ಬಲಗೊಳಿಸುವುದಕ್ಕೆ... ಧೂಮಪಾನ ಮಾಡಿ... ಮದ್ಯಪಾನ ಮಾಡಿ... ಗುಟ್ಕಾ ಅಗಿದು ನಮ್ಮ ಜನ ದುರ್ಬಲರಾಗ್ತಾ ಬಂದ್ರು... ಇವೆಲ್ಲಾ ಬ್ರಿಟಿಷರ ದುರಾಲೋಚನೆಯ ಫಲ."
ಇದು ನಿಜ. ನಮ್ಮಲ್ಲಿ ಬ್ರಿಟಿಷರ ಅನುಯಾಯಿಗಳು ಇನ್ನೂ ಇದ್ದಾರೆ. ಇದರಿಂದ ಇಂತಹ ಯೋಚನೆ/ಯೋಜನೆಗಳು ಮೂಡುತ್ತಿವೆ.
ಎಲ್ಲರಿಗೂ ಸಾಮಾಜಿಕ ನ್ಯಾಯ... ಸಮಾನತೆ... ಸಮಬಾಳು, ಸಮಪಾಲು... ಎನ್ನುವ ಮುಖ್ಯಮಂತ್ರಿಗಳು... ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬೇಡ.
ಕುಡಿದು ಮೋರಿಯಲ್ಲಿ ಒದ್ದಾಡುವವರನ್ನು ನೋಡಿ... ಎಲ್ಲರೂ ಹಾಗೆಯೇ ಕುಡಿದು ತೂರಾಡಬೇಕೆಂದು ಬಯಸುವುದು ಸಮಾನತೆಯೇ... ಸಾಮಾಜಿಕ ನ್ಯಾಯವೇ... ಸರ್ವರಿಗೂ ಸಮಬಾಳು...ಸಮಪಾಲು ಎಂದರೆ ಇದೇನಾ? ಖಂಡಿತಾ ಅಲ್ಲ...
ಜನರನ್ನು ದುರ್ಬಲಗೊಳಿಸಬೇಡಿ. ಬಡಜನರ ಸಂಸಾರವನ್ನು ಹಾಳು ಮಾಡಬೇಡಿ. ಕಡಿಮೆ ದರದಲ್ಲಿ ಮದ್ಯ ಕೊಡುವ ಬದಲು... ಮದ್ದು ನೀಡಿ... ಮನೆಹಾಳು ಮಾಡುವ ಬದಲು ನೊಂದವರಿಗೆ ಚಿಕಿತ್ಸೆ ನೀಡಿ. ಗಾಯದ ಮೇಲೆ ಬರೆಯೆಳೆಯುವ ಬದಲು ಗಾಯಕ್ಕೆ ಮದ್ದು ನೀಡಿ...ಪ್ಲೀಸ್...!
- ಪಿ.ಜೆ. ರಾಘವೇಂದ್ರ,
ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

