ಕಾಲ್ಪನಿಕ ವೇತನ ಬಡ್ತಿ: ಒಂದು ಸಲಹೆ
ಮಾನ್ಯ ಶಿಕ್ಷಣ ಸಚಿವರೆ,
ಅನುದಾನ ಸಂಹಿತೆ ಬಂದಾಗಿನಿಂದ ಸರ್ಕಾರ ಶಾಲಾ-ಕಾಲೇಜುಗಳನ್ನು ನಿಯಮಾನುಸಾರ ಅನುದಾನಕ್ಕೊಳಪಡಿಸಿ ಸಿಬ್ಬಂದಿಗೆ ವೇತನ ಭರಿಸುತ್ತಾ ಬಂದಿರುವುದು ಸರಿಯಷ್ಟೆ. ಈ ಹಿಂದೆ ವೇತನ ಬಿಡುಗಡೆ ಮಾಡುವಾಗ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದ ದಿನದಿಂದಲೇ ವೇತನ, ರಜಾ ಹಾಗೂ ನಿವೃತ್ತಿ ವೇತನ ಸೌಲಭ್ಯಗಳನ್ನು ನಿಗದಿ ಮಾಡುತ್ತಾ ಬಂದಿರುತ್ತದೆ. ಆದರೆ 1992ರ ನಂತರದಿಂದ ಸಿಬ್ಬಂದಿಗೆ ಸರ್ಕಾರ ಅನುದಾನಕ್ಕೊಳಪಡಿಸುವ ದಿನಾಂಕದಿಂದ ಮಾತ್ರ ವೇತನ ನಿಗದಿ ಮಾಡುತ್ತಿದೆ.ಈಗಾಗಲೇ ತುಂಬಾ ಸಿಬ್ಬಂದಿಗಳು ನೇಮಕಾತಿ ದಿನಾಂಕದಿಂದ ಎಲ್ಲ ಸೌಲಭ್ಯ ಪಡೆದಿದ್ದು, ಉಳಿದವರಿಗೆ ಆ ಅವಕಾಶವಿಲ್ಲ.ಸರ್ಕಾರಿ ನೌಕರರು ಕೆಲಸಕ್ಕೆ ಸೇರಿದ ದಿನಾಂಕದಿಂದಲೇ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಸರ್ಕಾರ ಅನುಮೋದನೆ ನೀಡುವಾಗ ಷರತ್ತುಗಳಿಗೆ ಅನುಗುಣವಾಗಿ ವೇತನ ನಿಗದಿಪಡಿಸುವುದು ಅತ್ಯವಶ್ಯಕವಾಗಿದೆ. ಈ ಹಿಂದೆ ಅನುದಾನಕ್ಕೆ ಒಳಪಟ್ಟ ಸಿಬ್ಬಂದಿಗೆ ಅವರು ನೇಮಕ ಹೊಂದಿ ಅನುದಾನಕ್ಕೆ ಒಳಪಟ್ಟ ಅವಧಿಯನ್ನು ವೇತನ ನಿಗದಿ, ರಜಾ ಮತ್ತು ನಿವೃತ್ತಿ ವೇತನಕ್ಕೆ ಪರಿಗಣಿಸತಕ್ಕದ್ದು ಎಂದು ಹಾಗೂ ಬಾಕಿ ವೇತನಕ್ಕೆ ಅರ್ಹರಲ್ಲವೆಂದು ಷರತ್ತು ವಿಧಿಸಿರುತ್ತಾರೆ.ಉಚ್ಚ ನ್ಯಾಯಾಲಯದ ಆದೇಶದಂತೆ ಇಂತಹ ಸಿಬ್ಬಂದಿಯ ನೇಮಕಾತಿ ದಿನಾಂಕದಿಂದ ಅನುದಾನಕ್ಕೆ ಒಳಪಟ್ಟ ದಿನಾಂಕದವರೆಗಿನ ಅನುದಾನರಹಿತ ಸೇವೆಯನ್ನು ಪರಿಗಣಿಸಿ ಬಾಕಿ ವೇತನ ನೀಡದೇ ಕೇವಲ ವೇತನ ನಿಗದಿ, ರಜಾ ಮತ್ತು ನಿವೃತ್ತಿ ವೇತನ ಸೌಲಭ್ಯಕ್ಕೆ ಮಾತ್ರ ಪರಿಗಣಿಸುವುದು ಸೂಕ್ತವಾಗಿರುತ್ತದೆ. ಸರ್ವೋಚ್ಚ ನ್ಯಾಯಾಲಯವು ಸಹ ಉಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಿರುವುದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗದಂತೆ ಒಂದು ಮಹತ್ತರವಾದ ತೀರ್ಮಾನ ಕೈಗೊಂಡು ಸುಮಾರು 20 ವರ್ಷಗಳಿಂದಲೂ ಇದ್ದ ಸಮಸ್ಯೆಗೆ ಪರಿಹಾರ ನೀಡುವುದು ಅತ್ಯವಶ್ಯಕವಾಗಿರುತ್ತದೆ. ನೂರಾರು ಕೋಟಿ ಆಯವ್ಯಯ ಬರುತ್ತದೆಂಬ ಊಹಾಪೋಹಗಳನ್ನು ನಂಬದೆ ಮೇಲೆ ತಿಳಿಸಿದ ಸಿಬ್ಬಂದಿಗಳ ಮಾಹಿತಿಯನ್ನು ತರಿಸಿಕೊಂಡು, ಈ ಬಗ್ಗೆ ಇಲಾಖಾ ಅಧಿಕಾರಿಗಳು, ವಿಧಾನಪರಿಷತ್ ಸದಸ್ಯರು ಮತ್ತು ಪ್ರಮುಖ ಸಂಘದ ಪದಾಧಿಕಾರಿಗಳು ಕೂಡಲೇ ಸಭೆ ಕರೆದು ಖಾಸಗಿ ಅನುದಾನಿತ ಶಾಲಾ -ಕಾಲೇಜು ನೌಕರರಿಗೆ ಅನುಕೂಲವಾಗುವಂತೆ ಒಂದು ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
-ಎಂ.ಪಿ. ಕರಿಬಸಪ್ಪ, ಅಧ್ಯಕ್ಷ, ಅ.ಕ.ಖಾಸಗಿ ಅನುದಾನಿತ ಪ.ಪೂ. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಮಹಾಸಂಘ, ಬೆಂಗಳೂರು
ಯೋಚಿಸಿ ಹೆಜ್ಜೆಯಿಡಿ
ಆಚರಣೆಗಳ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ಮೋಸಗಾರರನ್ನು ಮಟ್ಟಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುವುದಾದರೆ ಹಿಂದು ಸಂಘಟಣೆಗಳು ಕೂಡ ಮೂಢನಂಬಿಕೆ ಹೋಗಲಾಡಿಸಲು ಸರ್ಕಾರಕ್ಕೆ ನೆರವಾಗುತ್ತವೆ. ಆದರೆ ಸರ್ಕಾರವು ಯಾವುದು ಮೂಢನಂಬಿಕೆ, ಯಾವುದು ಧಾರ್ಮಿಕ ನಂಬಿಕೆ ಆಚರಣೆ ಎನ್ನುವ ವ್ಯತ್ಯಾಸವನ್ನು ಸರಿಯಾಗಿ ಅರಿತು ನಿರ್ಧಾರ ಮಾಡದೆ ಕೇವಲ ತಾನು ರಚಿಸಿದ ಸಮಿತಿಯಲ್ಲಿರುವ ಕೆಲವು ಹಿಂದು ವಿರೋಧಿ ವಿಚಾರವಾದಿಗಳು ಹೇಳಿದ್ದನ್ನೇ ಕಾನೂನು ಮಾಡಲು ನಿರ್ಧರಿಸಿದರೆ ಅದರಿಂದ ಅಪಾಯ ಕಟ್ಟಿಟ್ಟಬುತ್ತಿ. ಸರ್ಕಾರಿ ಕಚೇರಿಗಳಲ್ಲಿ ಇರುವ ಕೆಲ ಅಧಿಕಾರಿಗಳು ಹಾಗೂ ಕೆಲ ಸಚಿವರು ಭ್ರಷ್ಟರಿದ್ದಾರೆ, ಹಾಗೆಯೇ ಸಮಾಜದಲ್ಲಿರುವ ಎಲ್ಲ ಜಾತಿ ಧರ್ಮಗಳಲ್ಲಿ ಮೂಢನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡ ಮೋಸಗಾರರಿದ್ದಾರೆ. ಅವರನ್ನು ಗುರುತಿಸಿ ಮಟ್ಟಹಾಕುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಆದರೆ ಸಂಪೂರ್ಣವಾಗಿ ಧಾರ್ಮಿಕ ನಂಬಿಕೆಗಳನ್ನೇ ನಿಷೇಧಿಸುವುದು ಸರಿಯಲ್ಲ. ವೈಜ್ಞಾನಿಕ ಹಿನ್ನಲೆ ಇರುವ ಆಚರಣೆ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ ನಿಷೇಧಿಸುವ ಅಗತ್ಯವಿಲ್ಲ.
-ನೀಲಕಂಠ ಕಂದಗಲ್
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

