ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ಕಡ್ಡಾಯಗೊಳಿಸಿ
ಬೆಂಗಳೂರಿನ ಮಧ್ಯಭಾಗದಲ್ಲಿರುವ ಎ.ಟಿ.ಎಂ. ಕೌಂಟರಿನಲ್ಲಿ ಓರ್ವ ಒಂಟಿ ಮಹಿಳೆಯ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯು, ಯಾವುದೇ ಭದ್ರತಾ ಸಿಬ್ಬಂದಿಗಳಿಲ್ಲದ ಎ.ಟಿ.ಎಂ.ಗಳಿಗೆ ಹೋಗುವ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕರಾಳಮುಖವಾಗಿದೆ. ಈಚೆಗೆ ಬೆಂಗಳೂರಿನ ಸುತ್ತಮುತ್ತಲೂ ಈ ರೀತಿ ಎ.ಟಿ.ಎಂ. ಗಳಲ್ಲಿ ಡಕಾಯತಿ ಹಾಗೂ ಎ.ಟಿ.ಎಂ. ಮಷೀನುಗಳನ್ನೇ ಎತ್ತಿಕೊಂಡುಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇವೆಲ್ಲದಕ್ಕೂ ಬಹುಮುಖ್ಯ ಕಾರಣವೆಂದರೆ, ಬ್ಯಾಂಕುಗಳು, ಆ ಎ.ಟಿ.ಎಂ.ಗಳಿಗೆ ಯಾವುದೇ ರೀತಿಯ ಭದ್ರತಾ ಸಿಬ್ಬಂದಿಯನ್ನು ನೇಮಿಸದೇ ಇರುವುದು. ಈ ರೀತಿಯ ಪ್ರಕರಣಗಳಲ್ಲಿ ಉಂಟಾಗುವ ಹಣದ ನಷ್ಟವನ್ನು ವಿಮಾ ಕಂಪನಿಗಳು ಭರಿಸುವುದರಿಂದ, ಅವುಗಳ ಬಗ್ಗೆ ಸಂಬಂಧಪಟ್ಟ ಬ್ಯಾಂಕುಗಳಾಗಲಿ ಅಥವಾ ರಿಸರ್ವ್ ಬ್ಯಾಂಕ್ ಆಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಸಾರ್ವಜನಿಕರ ಸುರಕ್ಷತೆಯ ಬಗ್ಗೆಯಂತೂ ಅವು ಅಸಡ್ಡೆ ತೋರಿಸುತ್ತಿವೆ.
ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಕೆಲವು ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಈಗ ಚಾಲ್ತಿಯಲ್ಲಿರುವ ಎಲ್ಲಾ ಎ.ಟಿ.ಎಂ. ಕೌಂಟರುಗಳಿಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ, ಅವುಗಳನ್ನು ಯಾವುದೇ ಮುಲಾಜಿಲ್ಲದೆ ಮುಚ್ಚುವುದಕ್ಕೆ ಆದೇಶಿಸಬೇಕು. ಹಾಗೆಯೇ, ನೂತನವಾಗಿ ಪ್ರಾರಂಭವಾಗುವ ಎ.ಟಿ.ಎಂ.ಗಳಿಗೂ ಭದ್ರತಾ ಸಿಬ್ಬಂದಿಯಿಲ್ಲದೆ ಪರವಾನಗಿಯನ್ನು ನೀಡಬಾರದು. ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸಾರ್ವಜನಿಕರಿಗೆ ಇನ್ನು ಮುಂದಾದರೂ ರಕ್ಷಣೆ ಸಿಗುವುದರಲ್ಲಿ ಸಂದೇಹವಿಲ್ಲ.
-ಬಿ.ಎಸ್. ಮನೋಹರ್, ಬೆಂಗಳೂರು
ನಾಸ್ತಿಕರು ತಮ್ಮ ಅಜ್ಞಾನ ಹೇರದಿರಲಿ
ಶ್ರದ್ಧೆ ಯಾವುದು-ಅಂಧ ಶ್ರದ್ಧೆ ಯಾವುದು ಇದನ್ನು ನಿರ್ಧರಿಸಬೇಕಾದವನು ಒಬ್ಬ ಶ್ರದ್ಧಾವಂತ. ಧರ್ಮನಿಷ್ಠ ಆಸ್ತಿಕನೇ ವಿನಾ ನಾಸ್ತಿಕನಲ್ಲಾ. ನಾಸ್ತಿಕನಿಗೆ ಆಸ್ತಿಕರ ಎಲ್ಲ ಆಚರಣೆಗಳು ವ್ಯರ್ಥವಾಗಿ ಕಾಣುತ್ತವೆ. ಇಂಥ ಅಪಚಾರವಾದಿಗಳಿಗೆ ಹಿಂದೂಧರ್ಮವನ್ನು ದ್ವೇಷಿಸಲು, ಅದನ್ನು ಮುಗಿಸಲು, ಕುತಂತ್ರ. ಅದಕ್ಕೆಂದು ವಿಜ್ಞಾನದ ಲೇಪ ಬೇಕು. ಅಷ್ಟೇ. ಪೋರ್ಚುಗೀಸರ ಕಾಲದಲ್ಲಿ ಹಿಂದೂಗಳು ಯಾವ ಧಾರ್ಮಿಕ ಆಚರಣೆಗಳನ್ನು ಮಾಡುವಂತಿರಲಿಲ್ಲ. ಶವದಹನ, ಶ್ರಾದ್ಧ ಕಾರ್ಯ, ಪೂಜೆ, ಗಂಟೆ, ಶಂಖ ಎಲ್ಲದ್ದಕ್ಕೂ ನಿರ್ಬಂಧವಿದ್ದರೆ, ಮೊಗಲರ ಕಾಲದಲ್ಲಿ ತೀರ್ಥಯಾತ್ರೆ, ತೀರ್ಥಸ್ನಾನ, ಜಪ, ಜಾತ್ರೆ, ಉತ್ಸವ ಯಾವುದಕ್ಕೂ ಸ್ವಾತಂತ್ರ್ಯವಿರದೇ ನಿರ್ಬಂಧವಿತ್ತು. ನಾವು ಮೊಗಲಾಡಳಿತದಲ್ಲಿದ್ದೇವೆಯೇ? ಅಥವಾ ಪಾಕಿಸ್ತಾನದಲ್ಲಿದ್ದೇವೆಯೇ? ಕೇವಲ ಹಿಂದೂ ಆಚರಣೆಗಳನ್ನು ದೃಷ್ಟಿಯಲ್ಲಿಟ್ಟೇ ಮಸೂದೆ ತಯಾರಾದಂತಿದೆ. ಮು.ಮಂ. ಸಿದ್ರಾಮಯ್ಯ ಸುದ್ದಿ ಜೀವಿಯಾಗಲೆತ್ನಿಸುತ್ತಿದ್ದಾರೆಂದು ಕಾಣುತ್ತಿದೆ. ಮಾಟ, ಪ್ರಾಣಿಬಲಿ, ನರಬಲಿ ನಿಷೇಧಕ್ಕೆ ಕಾನೂನು ಈಗಾಗಲೇ ಇರುವಾಗ ಇನ್ನೊಂದು ಮಸೂದೆ ಯಾತಕ್ಕೆ? ಈ ಮಸೂದೆ ಪಾಸಾಗಬಾರದು. ಇದು ಹಿಂದೂಗಳನ್ನು ಹಿಂಸಿಸುವವರಿಗೊಂದು ವರದಾನವಾದೀತು? ಹಾಗಾಗ ಬಾರದು. ಇದಕ್ಕೆ ನಾವು ವಿರೋಧಿಸುವೆವು.
-ಪವಿತ್ರಾ ಪೈ, ಚಿಕ್ಕಮಗಳೂರು
ಸ್ಪಷ್ಟೀಕರಣ
ದಿನಾಂಕ 20-11-13ರ ಕನ್ನಡಪ್ರಭ ಪತ್ರಿಕೆಯ 11ನೇ ಪುಟದಲ್ಲಿ "ಮಠಾಧೀಶರ ಅಡ್ಡದಾರಿಗೆಳೆದ ಪಲ್ಲಕ್ಕಿ" ಶೀರ್ಷಿಕೆಯಡಿಯಲ್ಲಿ ಪ್ರಕಟವಾದ "ದೇವರಪೂಜೆಗೆ ಪೂಜಾರಿ ಏಕೆ? ಹುಡುಗ-ಹುಡುಗಿ ಒಪ್ಪಿ ಆಗುವ ಮದುವೆಗೆ, ಅವರಿಗೆ ಹುಟ್ಟುವ ಮಗುವಿಗೆ ಹೆಸರಿಡಲು ಮೂರನೆಯವರನ್ನೇಕೆ ಕೇಳುತ್ತೀರಿ?" ಎಂದು ಚಿತ್ರದುರ್ಗ ಬಸವಕೇಂದ್ರದ 'ಬಸವ ಮುರುಘೇಂದ್ರ ಸ್ವಾಮೀಜಿ' ಹೇಳಿದರು ಎಂದು ಪ್ರಕಟವಾಗಿದೆ. ಆದರೆ ಈ ವರದಿಗೂ ಶ್ರೀಮಠಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಆ ಹೆಸರಿನ ಸ್ವಾಮೀಜಿ ಶ್ರೀಮಠದಲ್ಲಿ ಇರುವುದಿಲ್ಲ. ಇದು ಶ್ರೀಮಠ ಹಾಗೂ ಡಾ. ಶಿವಮೂರ್ತಿ ಮುರುಘಾ ಶರಣರ ಬಗ್ಗೆ ಭಕ್ತರಲ್ಲಿ ತಪ್ಪು ಭಾವನೆಯನ್ನು ಮೂಡಿಸುವ ಕೃತ್ಯವಾಗಿದ್ದು, ಸ್ವಾಮೀಜಿಯವರು ಇಂತಹ ಯಾವುದೇ ಸಭೆಯಲ್ಲಿ ಭಾಗವಹಿಸಿರುವುದಿಲ್ಲ ಮತ್ತು ಅವರ ಪರವಾಗಿ ಪ್ರತಿನಿಧಿಸಲು ಯಾರನ್ನೂ ಕಳುಹಿಸಿರುವುದಿಲ್ಲ ಹಾಗೂ ಇದು ಸ್ವಾಮೀಜಿಯವರ ಅಭಿಪ್ರಾಯವೂ ಆಗಿರುವುದಿಲ್ಲ ಎಂದು ಶ್ರೀಮಠವು ಸ್ಪಷ್ಟನೆ ನೀಡಿದೆ.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

