ಸಂಪಾದಕೀಯ

ಎಟಿಎಂ ರಕ್ಷಣೆ ಹೇಗೆ?

Published On :

ಬೆಂಗಳೂರಿನಲ್ಲಿ ಮಂಗಳವಾರ, ಎಟಿಎಂನಿಂದ ಹಣ ತೆಗೆಯುತ್ತಿದ್ದ ಗೃಹಿಣಿಯ ಮೇಲೆ ನಡೆದ ಅಮಾನುಷವಾಗಿ ಮಚ್ಚಿನಿಂದ ಆಘಾತ ಮಾಡಿದ ಪ್ರಕರಣದ ಸುದ್ದಿ ರಾಷ್ಟ್ರೀಯ ಟ.ವಿ. ವಾಹಿನಿಗಳಲ್ಲಿ ಪ್ರಸಾರವಾಗಿ, ಎಟಿಎಂಗಳಲ್ಲಿ ಗ್ರಾಹಕರಿಗೆ ಸೂಕ್ತ ರಕ್ಷಣೆ ನೀಡಲೇಬೇಕಾದ ಅಗತ್ಯ ಈಗ ಎಲ್ಲ ಆಡಳಿತಗಾರರಿಗೂ ಗೊತ್ತಾಗಿದೆ.
ಆದರೆ ಮೂಲೆ- ಮೂಲೆಗಳಲ್ಲಿ ತಾವೇ ತಾವಾಗಿ, ಜಾಗ ಸಿಕ್ಕಿದ ಕಡೆಗಳಲ್ಲೆಲ್ಲ ಹಬ್ಬಿಕೊಂಡಿರುವ 'ಏಕಾಂಗಿ' ಎಟಿಎಂಗಳಲ್ಲಿ ರಕ್ಷಣೆಯನ್ನು ಒದಗಿಸುವುದಾದರೂ ಹೇಗೆ? ಆಘಾತದ ಅನಂತರದ ವಾತಾವರಣ ತಿಳಿಯಾದ ಮೇಲೆ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಶೀಲಿಸಬಹುದು.
ಸದ್ಯದಲ್ಲಿ ಎಟಿಎಂಗಳನ್ನು ಸ್ಥಾಪಿಸುವ ಬ್ಯಾಂಕ್‌ಗಳೇ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕು ಎನ್ನುವುದೇ ಸರ್ವಾನುಮತದ ಮಾತು. ಇನ್ನು ಮೂರು ದಿನಗಳಲ್ಲಿ ಈ ವ್ಯವಸ್ಥೆ ಸಿದ್ಧವಾಗಬೇಕು ಎಂದು ಬ್ಯಾಂಕ್‌ಗಳಿಗೆ ಆದೇಶವೇನೋ ಹೋಗಿದೆ. ಅದಕ್ಕೆ ಬೇಕಾದ ಸುಶಿಕ್ಷಿತ, ವಿಶ್ವಾಸಾರ್ಹ ರಕ್ಷಕರ ದಳಗಳನ್ನು ಎಲ್ಲಿಂದ ತರುವುದು? ತಂದರೂ ಆ ವ್ಯವಸ್ಥೆ ಈ ಹೊಣೆಯ ಭಾರವನ್ನು ಹೊರಬಲ್ಲದೇ?
ರಕ್ಷಣೆ ಕೊಡಲಿಕ್ಕೆ ಆಗದಿದ್ದರೆ ಅಂತಹ ಎಟಿಎಂಗಳನ್ನು ಮುಚ್ಚಿ ಎಂದು ಹೇಳುವುದು ಸುಲಭ. ಆದರೆ ಒಮ್ಮೆ ಒದಗಿಸಿದ ಸೌಲಭ್ಯವನ್ನು ಹಿಂದಕ್ಕೆ ಪಡೆಯುವುದು ಸುಲಭವಲ್ಲ. ಇದು ಎಲ್ಲ ವರ್ಗಗಳ ಗ್ರಾಹಕರಿಗೂ ಸಿಗಬೇಕಾದ ರಕ್ಷಣೆಯ ಮಾತು. ಅದು ಸರ್ಕಾರದ ಹೊಣೆ ಕೂಡಾ.
ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಜನರಿಗೆ ಎಲ್ಲ ಬಗೆಯ ಸನ್ನಿವೇಶಗಳಲ್ಲೂ ನೆರವು- ರಕ್ಷಣೆಯನ್ನು ಒದಗಿಸಬಲ್ಲ ಪೊಲೀಸ್ ವ್ಯವಸ್ಥೆಯನ್ನು ರೂಪಿಸುವ ದಿಕ್ಕಿನಲ್ಲಿ ಚಿಂತನೆ ನಡೆಯಬೇಕು. ಕಾಯಿದೆ ಪಾಲನೆ ವ್ಯವಸ್ಥೆಯ ದಕ್ಷತೆ, ಕರ್ತವ್ಯ ಬದ್ಧತೆ ಹಾಗೂ ಶಕ್ತಿ ಹೆಚ್ಚಿದಂತೆ ಎಟಿಎಂಗಳಲ್ಲೂ ರಕ್ಷಣೆ ಸಿಕ್ಕೇ ಸಿಗುತ್ತದೆ. ಹಾಗೆಂದ ಮಾತ್ರಕ್ಕೇ ಎಟಿಎಂಗಳ ಬಳಿ ವಿಶೇಷ ಗಮನ ಅಗತ್ಯವಿಲ್ಲ ಎಂದೇನೂ ಅಲ್ಲ. ಆದರೆ ಅದನ್ನು ಬ್ಯಾಂಕ್‌ಗಳಿಗೇ ಬಿಡುವುದು ಸರಿಯಲ್ಲ. ಆ ಹೊಣೆ ಇಡೀ ಸಮಾಜದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.