ಸಂಪಾದಕೀಯ

ಕಲ್ಲಿದ್ದಲ ಗಣಿ: ವಿಚಿತ್ರ ತಿರುವು

Published On :

ಆದಿತ್ಯ ಬಿರ್ಲಾ ಔದ್ಯಮಿಕ ಸಾಮ್ರಾಜ್ಯದ ಅಧಿಪತಿ ಕುಮಾರ ಮಂಗಳಂ ಬಿರ್ಲಾ ಹಾಗೂ ಕಲ್ಲಿದ್ದಲು ಮಂತ್ರಾಲಯದ ಮಾಜಿ ಕಾರ್ಯದರ್ಶಿ ಪಿ.ಸಿ. ಪಾರಖ್ ಅವರಿಬ್ಬರ ಹೆಸರು ಕಾಣಿಸಿಕೊಂಡಿರುವ ಸಿಬಿಐನ ಮೊದಲ ಮಾಹಿತಿಯ ವರದಿಗೆ ಪ್ರಕಟವಾಗಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ, ಈ ಹಗರಣ ವಿಚಿತ್ರ ತಿರುವುಗಳನ್ನು ಪಡೆಯುವ ಸಂಭವ ಕಂಡು ಬಂದಿದೆ.
ಕಲ್ಲಿದ್ದಲ ಗಣಿಗಳ ಹಗರಣದ ಅನೇಕ ಪ್ರಕರಣಗಳು ನಡೆದಾಗ ಪ್ರಧಾನಿಯೇ ಆ ಮಂತ್ರಾಲಯದ ಉಸ್ತುವಾರಿಯನ್ನು ಹೊತ್ತಿದ್ದು ನಿಜ. ಅದರ ಪ್ರಸ್ತಾಪ ಬೇಕಾದಷ್ಟು ಬಾರಿ ಆಗಿದೆ. ಆದರೆ ಪ್ರಧಾನಿ ಮನಮೋಹನ ಸಿಂಗ್ ಅವರೇ ಪ್ರಸ್ತುತ ಗಣಿಗಾರಿಕೆ ಹಕ್ಕಿನ ನೀಡಿಕೆಗೆ ಆದೇಶ ನೀಡಿದ್ದು ಎನ್ನುವ ವ್ಯಾಖ್ಯಾನ ಆಗಿನ ಕಾರ್ಯದರ್ಶಿ, ಪಿ.ಸಿ. ಪಾರಖ್ ಅವರದ್ದು.  ಪಾರಖ್ ಈ ಮಾತನ್ನು ವ್ಯಂಗ್ಯವಾಗಿ ಅಥವಾ ಪ್ರಾಸಂಗಿಕವಾಗಿ ಹೇಳಿದ್ದಲ್ಲ. ಪ್ರಧಾನಿಯ ಆದೇಶಕ್ಕೆ ತಮ್ಮ ಶಿಫಾರ್ಸೇ ಕಾರಣ ಎನ್ನುವುದನ್ನು ಹೇಳಿದ್ದಾರೆ. ಆ ಆದೇಶದಿಂದ ಸರ್ಕಾರ ತಪ್ಪುಮಾಡಿಲ್ಲ, ನಿಯಮದಂತೆಯೇ ಗಣಿಗಾರಿಕೆ ಹಕ್ಕನ್ನು ನೀಡಲಾಗಿರುವುದರಿಂದ ಪಿತೂರಿಯ ಪ್ರಶ್ನೆಯೇ ಇಲ್ಲ ಎಂದು ಪಾರದರ್ಶಕವಾದ ರೀತಿಯಲ್ಲೇ ಹೇಳಿದ್ದಾರೆ.
ಆ ಗಣಿಗಾರಿಕೆಯ ಗುತ್ತಿಗೆಗೆ ಸರ್ಕಾರಿ ಉದ್ಯಮವಾದ ನೈವೇಲಿ ಲಿಗ್ನೈಟ್ ಸಂಸ್ಥೆ ಅರ್ಜಿ ಸಲ್ಲಿಸಿದ್ದು ಬಿರ್ಲಾ ಸ್ವಾಮ್ಯದ ಹಿಂಡಾಲ್‌ಕೋ (ಹಿಂದೂಸ್ಥಾನ್ ಅಲ್ಯೂಮಿನಿಯಂ ಕಂಪೆನಿ) ಅರ್ಜಿ ಸಲ್ಲಿಸಿದ ಅನಂತರ. ಈ ವಿಚಾರದಲ್ಲಿ ಕುಮಾರ ಮಂಗಳಂ ಬಿರ್ಲಾ ಅವರು ಇಲಾಖೆ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದು ನಿಜ. ಎರಡೂ ಸಂಸ್ಥೆಗಳ ಅಗತ್ಯಗಳ ಪೂರೈಕೆಗೆ ಸಂಯುಕ್ತ ವಲಯದ ಸಂಸ್ಥೆಯೊಂದನ್ನು ರಚಿಸಿಕೊಳ್ಳಲು ಕಾರ್ಯದರ್ಶಿ ಪಾರಖ್ ಮಾಡಿದ ಸಲಹೆ ಪ್ರಧಾನಿಗೂ ಸರಿ ಎನಿಸಿತು. ಆದೇಶವೂ ಹೊರಬಿತ್ತು. ಆ ಗಣಿಗಳಿರುವುದು ಒಡಿಶಾದಲ್ಲಿ. ಇದೆಲ್ಲ ನಡೆದಿದ್ದು 2005ರಲ್ಲಿ.
ಸಿಬಿಐ ಪ್ರಕಾರ ಈ ವ್ಯವಹಾರದಲ್ಲಿ ಪಿತೂರಿ ಇದ್ದರೆ, ಅದರಲ್ಲಿ ಕುಮಾರ ಮಂಗಳಂ ಬಿರ್ಲಾ, ಪಿ.ಸಿ. ಪಾರಖ್ ಹಾಗೂ ಪ್ರಧಾನಿ ಮನಮೋಹನ ಸಿಂಗ್ ಅವರು ಮೂವರೂ ಪಾಲುದಾರರಾಗಬೇಕು - ಸಿಬಿಐ ಪ್ರಧಾನಿಯನ್ನು ಬಿಟ್ಟು ಇನ್ನಿಬ್ಬರನ್ನು ಮಾತ್ರ ಮೊದಲ ಮಾಹಿತಿ ವರದಿಯಲ್ಲಿ ನಮೂದಿಸಿದ್ದೇಕೆ ಎನ್ನುವುದು ಪಾರಖ್ ಪ್ರಶ್ನೆ.
ನ್ಯಾಯವಾದ ಹಾಗೂ ಕಾಯಿದೆ ಸಮ್ಮತ ಆದೇಶಕ್ಕೂ ತಪ್ಪು ಆದೇಶಕ್ಕೂ ಇರುವ ವ್ಯತ್ಯಾಸವನ್ನು ಸಿಬಿಐ ಅರ್ಥ ಮಾಡಿಕೊಂಡಿಲ್ಲ ಎನ್ನುವ ವಾದವೂ ಈಗ ಮಂಡನೆಯಾಗಿದೆ.  ಬುಧವಾರದ ಕೆಲವು ಪತ್ರಿಕೆಗಳಲ್ಲೂ ಇದೇ ಅರ್ಥ ಬರುವ ರೀತಿಯ ಅಗ್ರಲೇಖನಗಳೂ ಪ್ರಕಟವಾಗಿವೆ. ವಾಣಿಜ್ಯೋದ್ಯಮಿಗಳ ಪ್ರಾತಿನಿಧಿಕ ಸಂಘಟನೆಗಳು ಸಿಬಿಐನ ಕ್ರಮವನ್ನು ಸಾಕಷ್ಟು ಉಗ್ರವಾಗಿಯೇ ಖಂಡಿಸಿವೆ.
ಆದರೆ ಭಾರತೀಯ ಜನತಾ ಪಾರ್ಟಿ ಹಾಗೂ ವಾಮಪಂಥೀಯ ರಾಜಕಾರಣಿಗಳು ಈ ವ್ಯವಹಾರದಲ್ಲಿ ಮಂತ್ರಾಲಯದ ಮಾಜಿ ಕಾರ್ಯದರ್ಶಿ ಪಾರಖ್ ಅವರನ್ನು ಸಿಕ್ಕಿಸಲು ಯಾರೋ ಮಾಡಿದ ತಂತ್ರ ಇದು ಎಂದಿದ್ದಾರೆ. ಕಾಂಗ್ರೆಸ್ ತನಿಖೆ ಆರಂಭವಾಗಿರುವುದರಿಂದ ಯಾವುದೇ ರೀತಿಯ ಅಭಿಪ್ರಾಯ ಪ್ರಕಟಿಸಿಲ್ಲ.
ಭವಿಷ್ಯದ ದಿನಗಳಲ್ಲಿ ಸಿಬಿಐ ತನ್ನ ಪಿತೂರಿಯ ಆರೋಪವನ್ನು ಯಾವ ರೀತಿ ಸಮರ್ಥಿಸಿಕೊಳ್ಳುತ್ತದೆ ಎನ್ನುವುದು ಕುತೂಹಲಕಾರಿ. ಸಿಬಿಐ ವರದಿಯಲ್ಲಿ ಸದ್ಯಕ್ಕೆ "ಆರೋಪಿ" ಪದದ ಬಳಕೆಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.