ಚುನಾವಣಾ ಸಮೀಕ್ಷೆಗಳೇಕೆ ಬೇಕು?
'ಚುನಾವಣಾ ಸಮೀಕ್ಷೆ ಫಲಿತಾಂಶ, ಜನರ ಮೇಲೆ ಪ್ರಭಾವ ಸಾಧ್ಯವೇ?' ಸಂಪಾದಕೀಯ, ಚುನಾವಣಾ ಆಯೋಗದ ಸತ್ಯ-ಸಮೀಕ್ಷೆಗಳು ಮತದಾರನ ಮನಸ್ಥಿತಿಯನ್ನು ತಿಳಿಯಲು ಪ್ರಯತ್ನಪಡುತ್ತವೆಯೇ ಹೊರತು ಅವು ಯಾವುದೇ ನಿಖರ ಉತ್ತರ ಹೇಳಲಾರವು. ಕಾರಣ, ಮತದಾರನ ಮನವನ್ನು ತಿಳಿಯುವುದು ಅಸಾಧ್ಯ. ಅದರಲ್ಲೂ ಸುಶಿಕ್ಷಿತರ ವಿಷಯದಲ್ಲಿ ಈ ಕೆಲಸ ಜಟಿಲವಾಗುತ್ತಾ ಸಾಗುತ್ತದೆ. Educated are more hypocrates ಎಂಬ ಮಾತನ್ನು ಯಾವತ್ತೂ ಅಲ್ಲಗಳೆಯುವಂತಿಲ್ಲ. ಹೀಗಿರುವಾಗ ಸಮೀಕ್ಷೆ ಏನನ್ನು ಸಾಧಿಸಲು ಸಾಧ್ಯ? ಅತಿ ಕಡಿಮೆ ಪ್ರಮಾಣದ ಸ್ಯಾಂಪಲ್ ಸೈಜ್, ಸಮೀಕ್ಷಕರ ಗಂಭೀರತೆ ಹಾಗೂ ಎಲ್ಲಕ್ಕೂ ಹೆಚ್ಚಾಗಿ ದಿಕ್ಕು ತಪ್ಪಿಸುವ ಮತದಾರನ ಗುಣ ಇವೆಲ್ಲವುಗಳು ಪ್ರಮುಖವಾಗಿರುವಾಗ, ಅಂಕಿ-ಸಂಖ್ಯೆಗಳು ಸತ್ಯಾಂಶದಿಂದ ಭಿನ್ನವಾಗಿರುತ್ತವೆ. ಹೆಚ್ಚುತ್ತಿರುವ ಚುನಾವಣಾ ಸಮೀಕ್ಷಾ ಸಂಸ್ಥೆಗಳೆಲ್ಲವೂ ತಮ್ಮ ಲೆಕ್ಕಾಚಾರವೇ ಸತ್ಯಾಂಶವನ್ನು ಸಾರುತ್ತವೆ ಎಂದು ಬೀಗುವುದನ್ನು ಬಿಟ್ಟರೆ ಅವುಗಳಿಂದ ಇನ್ನಾವ ಪುರುಷಾರ್ಥ ಸಾಧನೆಯಾಗಲಿಕ್ಕಿಲ್ಲ. ಅಷ್ಟಕ್ಕೂ ಚುನಾವಣಾಪೂರ್ವ ಸಮೀಕ್ಷೆಯಂತೂ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸುವುದರಲ್ಲಿ ಸಂಶಯವಿಲ್ಲ. ಇನ್ನು ಚುನಾವಣೆ ಮುಗಿದ ಮೇಲಿನ ಸಮೀಕ್ಷೆಯಂತೂ ಸಮೀಕ್ಷಕರ ಊಹಾಶಕ್ತಿಯನ್ನವಲಂಬಿಸಿ ಪರಿಣಾಮ ಬೀರುತ್ತವೆ. ಹೀಗಿರುವಾಗ, ಚುನಾವಣಾ ಆಯೋಗ ಇಂತಹ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಿಷೇಧಿಸುವುದೇ ಒಳಿತು.
-ಶಂಕರನಾರಾಯಣಭಟ್
ಪಟಾಕಿಗಳ ಮೇಲೆ ದೇವರ ಚಿತ್ರ ಬೇಡ
ದೀಪಾವಳಿ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿಗಳ ಭರಾಟೆ ಸರ್ವೇಸಾಮಾನ್ಯ. ಈ ಪಟಾಕಿಗಳ ಶಬ್ದ ಮತ್ತು ಬೆಳಕಿನ ಗುಂಗಿನಲ್ಲಿ ನಾವು ಒಂದು ವಿಷಯವನ್ನು ಗಮನಿಸುವುದೇ ಇಲ್ಲ. ಅದೇನೆಂದರೆ ಕೆಲವು ಪಟಾಕಿಗಳ ಮೇಲ್ಮೈ ಹೊದಿಕೆಗೆ ಲಕ್ಷ್ಮೀ, ಗಣಪತಿ ಮುಂತಾದ ದೇವ-ದೇವತೆಯರ ಚಿತ್ರವಿರುವ ಕಾಗದವನ್ನು ಸುತ್ತಿರುವುದು. ಹೌದು, ಈ ರೀತಿ ದೇವರ ಚಿತ್ರವಿರುವ ಕಾಗದ ಸುತ್ತಿ ಲಕ್ಷ್ಮೀ ಪಟಾಕಿ, ಗಣೇಶ ಪಟಾಕಿ ಮುಂತಾದ ಹೆಸರಿನಲ್ಲಿ ಪಟಾಕಿಗಳನ್ನು ಸ್ಫೋಟಿಸುತ್ತಾ ದೇವರ ಭಾವಚಿತ್ರವಿರುವ ಕಾಗದವನ್ನು ಸುಡುತ್ತೇವೆ. ಮರುದಿನ ಕಸದ ರೂಪದಲ್ಲಿರುವ ಉಳಿದ ಕಾಗದವನ್ನು ತುಳಿಯುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ದೇವ-ದೇವತೆಯರ ಚಿತ್ರಗಳಿರುವ ಕಾಗದವನ್ನು ಪಟಾಕಿಗಳಿಗೆ ಸುತ್ತದಂತೆ ಸರ್ಕಾರವು ಸುಡುಮದ್ದು ತಯಾರಿಕಾ ಕಾರ್ಖಾನೆಗಳಿಗೆ ಆದೇಶಿಸಲಿ ಮತ್ತು ಪಾಲಿಸದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಸಾಮಾನ್ಯ ಜನರಾದ ನಾವೂ ಕೂಡ ಇಂತಹ ಪಟಾಕಿಗಳನ್ನು ಕೊಳ್ಳದಿರೋಣ.
-ರಾಮಕೃಷ್ಣ ಜೋಷಿ, ಉಡುಪಿ
ಗೌರವಧನ ಹೆಚ್ಚಿಸಿ
ಕರ್ನಾಟಕದಲ್ಲಿ ಸುಮಾರು 200ಕ್ಕೂ ಹೆಚ್ಚು ಕೊಳಚೆ ಪ್ರದೇಶ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಈ ಗ್ರಂಥಾಲಯಗಳಲ್ಲಿ ಗೌರವಧನ ಆಧಾರದಲ್ಲಿ ನೇಮಕವಾದ ಮೇಲ್ವಿಚಾರಕರಿಗೆ ಸರ್ಕಾರ ಗೌರವ ಧನವನ್ನು ಹೆಚ್ಚಿಸದೇ, ಕೇವಲ ಗ್ರಾಮ ಪಂಚಾಯತಿ ಮೇಲ್ವಿಚಾರಕರಿಗೆ ಮಾತ್ರ ಗೌರವ ಧನವನ್ನು ಏಪ್ರಿಲ್ 2013ರಂದು ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಮೇಲ್ವಿಚಾರಕರಂತೆಯೇ ಕೊಳಚೆ ಪ್ರದೇಶ ಗ್ರಂಥಾಲಯದ ಮೇಲ್ವಿಚಾರಕರು ಸಹ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ತುಂಬಾ ಕಡಿಮೆ ಗೌರವ ಧನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಜೊತೆಗೆ ಸ್ವಚ್ಛತೆ ಭತ್ಯೆಯನ್ನೂ ಸಹ ನೀಡುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಗೌರವ ಧನವನ್ನು ಹೆಚ್ಚಿಸಬೇಕೆಂದು ಈ ಮೂಲಕ ಮೇಲ್ವಿಚಾರಕರ ಪರವಾಗಿ ಕೇಳಿಕೊಳ್ಳುತ್ತೇನೆ.
-ಹೆಚ್. ಹನುಮಂತರಾಯ, ಹಿರಿಯೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

