ವಾಹನ ದಟ್ಟಣೆ ನಿಯಂತ್ರಣಕ್ಕೊಂದು ಸಲಹೆ
ದಿನೇ ದಿನೇ ಅಗಾಧವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಳ, ಹದಗೆಟ್ಟ ರಸ್ತೆಗಳು, ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು-ಇವೆಲ್ಲವೂ ವಾಹನ ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ವಿವಿಧ ಅಪರಾಧಗಳಿಂದಾಗಿ ಜನಜೀವನವನ್ನು ದುಸ್ತರಗೊಳಿಸುತ್ತಿದೆ. ಆಟೋಗಳ ಬಗ್ಗೆ ಹೇಳುವುದಾದರೆ, ಬೆರಳೆಣಿಕೆಯಷ್ಟು ಆಟೋ ಚಾಲಕರನ್ನು ಹೊರತುಪಡಿಸಿದರೆ, ಉಳಿದ ಅಟೋ ಚಾಲಕರ ದುರ್ವತನೆಯನ್ನು ಅನುಭವಿಸಿರದ ಪ್ರಯಾಣಿಕನಿಲ್ಲ. ಬೃಹತ್ತಾಗಿ ಬೆಳೆದಿರುವ ನಗರದ ಚಿಕ್ಕದಾದ ಒಳರಸ್ತೆಗಳಲ್ಲಿ ಬಸ್ಗಳು ಹೋಗಲಾರವು, ಆಟೋಗಳು ಹೋಗಲು ಬಹುತೇಕ ಚಾಲಕರ ತಕರಾರು. ಇದಕ್ಕೆ ಪರಿಹಾರವೆಂದರೆ, ಬಿಎಂಟಿಸಿಯು (ತಾನೇ ಅಥವಾ ಖಾಸಗೀಕರಿಸಿ) ಮಿನಿ ಬಸ್ಗಳನ್ನು ಓಡಿಸುವುದು, ಹಾಗೂ ಸರ್ಕಾರಿ ಅಟೋಗಳನ್ನು ಹೊರತರುವುದು. ಇದರಿಂದ, ರಸ್ತೆಗಳ ಮೇಲೆ ಓಡಾಡುವ ವಾಹನಗಳ ದಟ್ಟಣೆಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಒಟ್ಟಾರೆ ಹಲವಾರು ಕಾರಣಗಳಿಗಾಗಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಅವಶ್ಯಕ.
- ಕೆ.ಟಿ.ಕಣ್ಣನ್, ಬೆಂಗಳೂರು
ಬಸ್ ನಿಲ್ದಾಣ ನಿರ್ಮಿಸಿ
ಭದ್ರಾವತಿ ತಾಲೂಕಿನಲ್ಲಿ ಹೊಳೆಹೊನ್ನೂರು ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾಗಿದ್ದು ಈಗ ಪಟ್ಟಣ ಪಂಚಾಯ್ತಿಯಾಗಿ ಪರಿವರ್ತನೆ ಹೊಂದಿದೆ. ಶಿವಮೊಗ್ಗ ನಗರದಿಂದ ಚಿತ್ರದುರ್ಗದ ಕಡೆ 13 ಕಿ.ಮಿ. ದೂರದಲ್ಲಿದೆ. ಹೊಳೆಹೊನ್ನೂರು ಸರ್ಕಾರಿ ಹಾಗೂ ಖಾಸಗಿ ಬಸ್ಗಳಿಗೆ ದೊಡ್ಡ ಪ್ರಯಾಣಿಕರ ನಿಲ್ದಾಣ ಕೇಂದ್ರವಾಗಿದೆ. ವಿಪರ್ಯಾಸವೆಂದರೆ, ಇಲ್ಲಿಯವರೆಗೂ ಯಾವುದೇ ಸಾರ್ವಜನಿಕ ಬಸ್ಸು ನಿಲ್ದಾಣ ಇಲ್ಲಿ ನಿರ್ಮಾಣವಾಗದಿರುವುದು. ಹೊಳೆಹೊನ್ನೂರು ತಾಲೂಕು ಕೇಂದ್ರವನ್ನಾಗಿ ಮಾಡಲು ಬೇಡಿಕೆಯಿದ್ದು, ಅನೇಕ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಇಲಾಖೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಹೊಂದಿದೆ. ಇಲ್ಲಿಗೆ ನಿತ್ಯ ವಿದ್ಯಾರ್ಥಿಗಳು, ಬಡ ಕೂಲಿಕಾರರು, ಮಹಿಳೆಯರು ಹಾಗೂ ಸುತ್ತಮುತ್ತಲ ನಾಗರಿಕರು ಸಂಚರಿಸುತ್ತಾರೆ. ಈ ಎಲ್ಲಾ ಪ್ರಯಾಣಿಕರು ಬಸ್ ನಿಲ್ದಾಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಶೌಚಾಲಯವುಳ್ಳ, ಕೂರಲು ಆಸನವಿರುವ ಸಾರ್ವಜನಿಕ ಬಸ್ ನಿಲ್ದಾಣವು ಅತ್ಯಗತ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಈ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಾರೆಂದು ಆಶಿಸೋಣವೆ?
- ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಅಟ್ರಾಸಿಟಿ ಸವಲತ್ತು ಹಿಂತೆಗೆದುಕೊಳ್ಳಲಿ
ದಿ.7.5.2013ರ ಕ.ಪ್ರ.ದಲ್ಲಿ "ಜಾತಿ ನಿಂದನೆ ದೂರು, ಕಣ್ಣೀರಿಟ್ಟ ಜಿ.ಪಂ. ಸದಸ್ಯೆ" ಎಂಬ ವರದಿಯಲ್ಲಿ ಸುಳ್ಯದ ಮರ್ಕಂಜದಲ್ಲಿ ಮತಯಾಚನೆಗೆ ಹೋದ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಈ ವರದಿಗೆ ಸಂಬಂಧಿಸಿದ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ. ನಿಜಕ್ಕೂ ಈ ಸಂಗತಿ ಖೇದಕರ. ಏಕೆಂದರೆ ನಾನೂ ಒಬ್ಬ ಹಿಂದುಳಿದ ವರ್ಗದವನಾಗಿದ್ದು ಈ ಜಾತಿ ನಿಂದನೆ ಕಾಯ್ದೆ ಬಹುತೇಕ ಬಾರಿ ದುರ್ಬಳಕೆ ಆಗುತ್ತಿದೆ ಎನ್ನುವುದನ್ನು ಬಲ್ಲೆ. ಅಂದರೆ ಬೇರೆ ಯಾರೋ ಮೂರನೇ ವ್ಯಕ್ತಿಯ ಪ್ರೇರಣೆ ಅಥವಾ ಮೂರನೇ ವ್ಯಕ್ತಿಯ ಅನುಕೂಲಕ್ಕಾಗಿ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಸಹ ಇಂತಹ ಜಾತಿ ನಿಂದನೆಯ ಕೇಸುಗಳನ್ನು ಮಾಡುತ್ತಿರುವುದು ಖೇದಕರ. ಇದು ಹಳ್ಳಿಯಿಂದ ದೆಹಲಿಯವರೆಗೂ ದುರ್ಬಳಕೆ ಆಗುತ್ತಿದೆ. ಜಾತಿ ನಿಂದನೆ (ಅಟ್ರಾಸಿಟಿ)ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ನಮ್ಮ ಸಂಸತ್ತು ಯೋಚಿಸಲಿ.
- ಅಂದಪ್ಪ ಬಸಪ್ಪ ಬಿನ್ನಾಳ, ಮುಂಡರಗಿ (ಗದಗ ಜಿಲ್ಲೆ)
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

