ಹಂಬಲ ಹಪಾಹಪಿಗಳ ಅರ್ಥ?!
ನಾವು, ಜನತೆ, ಆಯ್ದುಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಪ್ರತಿನಿಧಿಸುತ್ತಿದ್ದೇವೆಂದು ಹೇಳಿಕೊಳ್ಳುವ ಕೆಲವಷ್ಟು ಮಂದಿ ಆಢ್ಯರಾಗಿದ್ದಾರೆ. ಈ ವ್ಯವಸ್ಥೆಯ ಕೊಡುಗೆ ಇದು ಎನ್ನುವುದಕ್ಕಿಂತ ಈ ವ್ಯವಸ್ಥೆಯನ್ನು ಆಢ್ಯತನಕ್ಕೆ ಬಳಸಿಕೊಂಡಿದ್ದಾರೆ ಈ ಮಂದಿ ಎಂದರೆ ತಪ್ಪಾಗುವುದಿಲ್ಲ. ಆದಾಗ್ಯೂ ಈ ಅಲ್ಪಮಂದಿ (ಕ್ಲೀಷೆ ಇಲ್ಲ!) ತಾವು ಜನತೆಯ "ಸೇವಕರು" ಎಂದೇ ಹೇಳಿಕೊಂಡು ತಿರುಗಾಡುತ್ತಾರೆ. ಸ್ವತಃ ಹಣ ಹೂಡಿ, ಗಳಿಸಿ ಶ್ರೀಮಂತರಾದವರಿಗಿಂತ ಈ ಮಂದಿ ಸರ್ಕಾರದ ಖರ್ಚಿನಲ್ಲಿ, ಎಂದರೆ ಸಾರ್ವಜನಿಕರ ಹಣದಲ್ಲಿ, ಹೆಚ್ಚಿನ ಭದ್ರತೆ, ಸೌಕರ್ಯ-ಸೌಲಭ್ಯಗಳನ್ನು ಅನುಭೋಗಿಸುತ್ತಾರೆ. ಈ ಕೆಲವು ಸಂಗತಿಗಳನ್ನು ಗಮನಿಸೋಣ: ಮುಖ್ಯಮಂತ್ರಿಗೆ 22 ಲಕ್ಷ ರೂಪಾಯಿಗಳ ಕಾರು ಅಗತ್ಯವಾದರೆ, ಇತರ ಮಂತ್ರಿಗಳಿಗೆ 15 ಲಕ್ಷ ರೂಪಾಯಿಗಳ ಕಾರು ಸಾಕು! ಈ ಮುಂಚೆ ಇವರಿಗಿದ್ದ ಕಾರುಗಳು ಉಪಯೋಗಿಸಲು ಯೋಗ್ಯವಲ್ಲ ಎಂದೇನೂ ಅಲ್ಲ. ಹೊಸ ಮಂತ್ರಿಮಂಡಲ. ಆದ್ದರಿಂದ ಎಲ್ಲವೂ ಹೊಸತಾಗಬೇಕು. ಜನಸೇವೆ ಮಾಡಲೆಂದು ಬಂದ ಇವರ ವಾಸದ ಬಂಗಲೆಗಳು? ಹೊಸ ಬಣ್ಣ ಕಾಣಬೇಕು; ವಾಸ್ತು ವಿನ್ಯಾಸಕ್ಕನುಗುಣವಾಗಿ ದುರಸ್ತಿಯಾಗಬೇಕು; ಪೀಠೋಪಕರಣಗಳು ನವನವೀನವಾಗಿರಬೇಕು. ವಾಹನ ನಿರ್ವಹಣೆ, ವೈದ್ಯಕೀಯ ವೆಚ್ಚಗಳಿಗೆಂದೇ ಇವರಿಗೆ ತಿಂಗಳಿಗೆ ತಲಾ ಹತ್ತಾರು ಸಾವಿರ ಮುಡಿಪು. ಒಮ್ಮೆ ಶಾಸಕ ಎಂದೆನಿಸಿಕೊಂಡರೆ ಸಾಕು ಆತ ನಿವೃತ್ತಿ ವೇತನ, ವೈದ್ಯಕೀಯ ಭತ್ಯೆಗಳಿಗೆ ಅರ್ಹತೆ ಹೊಂದಿ ಬಿಡುತ್ತಾನೆ. ಈ ಮೊತ್ತವೂ ಕಣ್ಣಿಗೆ ಕಾಣುವಂಥದೇ. ಮೂವತ್ತು ಮೂವತ್ತೈದು ವರ್ಷಗಳು ಸತತವಾಗಿ ದುಡಿದು ನಿವೃತ್ತಿ ಪಡೆದ ನೌಕರನಿಗೆ ಈ ಸುಖ ಇಲ್ಲ? ಕೇಂದ್ರದಲ್ಲಿನ ಮಂತ್ರಿಗಳಾಗುವವರು ಧರೆಗಿಳಿದು ಬಂದ ದೇವದೂತರೇ!
- ಸಾಮಗ ದತ್ತಾತ್ರಿ
ನೌಕರರಿಗಿಲ್ಲವೇ ಖಾಸಗಿ ಜೀವನ?
'ರಾತ್ರಿ 8.30ಕ್ಕೆ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ' (ಕ.ಪ್ರ. 3/9) ವರದಿ ಓದಿ ಎಂಥವರಿಂದ ಆಳಿಸಿಕೊಳ್ಳುತ್ತಿದ್ದೇವೆಂದು ತಿಳಿದು ಬೇಸರವಾಯಿತು. ಅಧಿಕಾರದಲ್ಲಿರುವವರು, ತಾವು ಏನು ಮಾಡಿದರೂ ನಡೆಯುತ್ತದೆ ಅಥವಾ ಜನರು ಅದನ್ನು ಸಹಿಸಿಕೊಂಡಿಬೇಕೆಂದು ಕೊಂಡಿದ್ದಾರೋ? ಅದಲ್ಲದಿದ್ದರೆ, ಖಾಸಗಿ ಕಾರ್ಯಕ್ರಮಕ್ಕೆಂದು ಬಳ್ಳಾರಿಗೆ ಭೇಟಿ ಕೊಟ್ಟ ನಮ್ಮ ಆರೋಗ್ಯ ಸಚಿವ ಯು.ಟಿ. ಖಾದರ್, ರಾತ್ರಿ ಅದೂ ಭಾನುವಾರ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ 'ಪ್ರಗತಿ ಪರಿಶೀಲನಾ' ಸಭೆ ಕರೆಯುತ್ತಿದ್ದರೇ? ಬಹುಶಃ ಹೀಗೂ ಇರಬಹುದೇನೋ. ಹೇಗೂ ಬಂದಾಗಿದೆ. ಹಗಲೆಲ್ಲ ಖಾಸಗಿ ಕೆಲಸವೂ ಮುಗಿದಿದೆ, ಈ ಖಾಸಗಿಯನ್ನು ಅಫೀಶಿಯಲ್ ಆಗಿ ಮಾರ್ಪಡಿಸಿದರೆ ಬಂದು ಹೋಗುವ ಹಾಗೂ ಇತರೆ ಖರ್ಚುಗಳನ್ನು ಭರಿಸುವಂತೆ ಮಾಡಲು ಇದೊಂದು ದಾರಿ ಅಂತ ಮನಗಂಡಿರಬೇಕು ನಮ್ಮ ಮಾನ್ಯ ಮಂತ್ರಿಗಳು. ನೆಪಕ್ಕೆ ಕೆಲವರನ್ನು ಒತ್ತಾಯದಿಂದ ಕರೆಯಿಸಿ, ತನ್ನ ಇಲಾಖೆಗೆ ಏನೋ ಮಹದುಪಕಾರ ಮಾಡುತ್ತಿದ್ದೇವೆಂದು ಬೀಗುವುದಕ್ಕೆ ಆಸ್ಪದವಾಯಿತಲ್ಲ ಅಂತ ಅಂದುಕೊಂಡಿರಲೂ ಸಾಕು. ಅಷ್ಟೇ ಅಲ್ಲ ಒಂದಿಷ್ಟು ಪುಕ್ಕಟ್ಟೆ ಪಬ್ಲಿಸಿಟಿಯೂ ಸಿಕ್ಕಂತಾಗುತ್ತದಲ್ಲವೇ? ಮಂತ್ರಿವರ್ಯರ ಈ ಉದಾತ್ತ ಧೋರಣೆ ಬಡ ನೌಕರರಿಗೆ ಏನು ಫಜೀತಿ ತಂದೊಡ್ಡಿರಬಹುದೆಂಬುದನ್ನು ಊಹಿಸಿದರೂ ಅಸಹ್ಯವೆನಿಸುತ್ತದೆ. ಮಂತ್ರಿಗಳಿಗೆ ಖಾಸಗಿ ಜೀವನ ಬೇಕು; ಸಾಮಾನ್ಯ ನೌಕರನಿಗಿಲ್ಲವೇ? ಅವರಿಗೂ ಅವರ ಕುಟುಂಬ, ಸಮಾಜ, ಖಾಸಗಿ ಜೀವನ ಎಂಬುದಿಲ್ಲವೇ? ಈ ಒಂದು ಸಾಮಾನ್ಯ ಜ್ಞಾನವೂ ಮಂತ್ರಿಯಾದವರಿಗೆ ಇಲ್ಲದೇ ಹೋಯಿತೆ. ಅಥವಾ ಇದನ್ನು ಅಧಿಕಾರದ ದರ್ಪ ಅನ್ನೋಣವೇ? ಅಷ್ಟಕ್ಕೂ ಈ ರೀತಿ ನಡೆಸುವ ಸಭೆ, ಪರಿಶೀಲನಾ ಸಭೆಯಾಗಲು ಸಾಧ್ಯವೇ? ಪೂರ್ವ ಮಾಹಿತಿ ಇಲ್ಲದೆ, ತಯಾರಿ-ರಹಿತ ಹಾಜರಾಗುವ ಅಧಿಕಾರಿಗಳಿಂದ ಏನನ್ನು ಅಪೇಕ್ಷಿಸಬಹುದು. ತಾನೊಬ್ಬ ದಕ್ಷ, ನಿಷ್ಠ, ಕರ್ತವ್ಯಪರ ಮಂತ್ರಿ ಅಂತ ತೋರಿಸಲು ಹೋಗಿ ಯಡವಟ್ಟು ಮಾಡಿಕೊಳ್ಳಬಹುದೆಂಬ ಕಲ್ಪನೆಯೂ ಬಾರದೆ ಹೋಯಿತಲ್ಲ.
- ಶಂಕರನಾರಾಯಣ ಭಟ್, ಹೊನ್ನಾವರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

