ತುಳು ಭಾಷೆಯ ಮೇಲೆಯೂ ನಡೆದಿದೆ ದಾಳಿ
ಸೆಪ್ಟೆಂಬರ್ 14 ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಪೊರೇಷನ್ ಬ್ಯಾಂಕ್ ಮತ್ತು ಮಂಗಳೂರು ಆಕಾಶವಾಣಿ ವತಿಯಿಂದ, 'ವಿಜ್ರಂಭಣೆಯ ಹಿಂದಿ ದಿನಾಚರಣೆ' ಆಚರಿಸುವ ಬಗ್ಗೆ ಪತ್ರಿಕಾ ಪ್ರಕಟಣೆ ಕೊಡಲಾಗಿದೆ. ಇದಕ್ಕಾಗಿ ಲಕ್ಷಾಂತರ ರುಪಾಯಿ ತೆರಿಗೆದಾರರ ಹಣ ವೆಚ್ಚವಾಗಲಿದೆ. ಕರ್ನಾಟಕ ಮೂಲದ ಬ್ಯಾಂಕುಗಳದ್ದು ಯಾವಾಗಲೂ ಹೆಚ್ಚು ನಿಷ್ಠೆಯ ಮನೋವೃತ್ತಿ. ಹಿಂದಿ ದಿನಾಚರಣೆಯ ವಿಷಯದಲ್ಲಿ ಉತ್ತರ ಭಾರತೀಯ ಬ್ಯಾಂಕುಗಳಿಗಿಂತ ಹೆಚ್ಚಾಗಿ ಕರ್ನಾಟಕದ ಬ್ಯಾಂಕುಗಳೇ ಆತ್ಯುತ್ಸಾಹ ತೋರಿಸುವುದು. ಕನ್ನಡದ ವಿಷಯ ಬಿಡಿ, ತುಳುನಾಡಿನಲ್ಲಿ ತುಳು ಭಾಷೆಯ ಸ್ಥಿತಿ ಅದಕ್ಕಿಂತ ಶೋಚನೀಯ. ಯಾಕೆಂದರೆ ಮುಂಬೈ ತುಳುವರೇ ಹಿಂದಿಯನ್ನು ತುಳುವಿಗಿಂತ ಹೆಚ್ಚಾಗಿ ಪೋಷಿಸುತ್ತಿರುವುದಲ್ಲದೆ ಅವರು ಊರಿಗೆ ಬಂದಾಗ ಹಿಂದಿ-ಇಂಗ್ಲಿಷ್ ಮಾತನಾಡುತ್ತಾ ಆ ಭಾಷೆ ಬಾರದ ಊರಿನವರು ಎರಡನೆಯ ದರ್ಜೆಯ ನಾಗರಿಕರೋ ಎಂಬಂತೆ ಕೀಳಾಗಿ ಕಾಣುತ್ತಾರೆ. ಕೆಲವು ದಿನಗಳ ಹಿಂದೆ ಒಂದು ಹಿಂದಿ ಟಿವಿ ಚಾನೆಲ್ಲಿನಲ್ಲಿ ಫರ್ಹಾ ಖಾನ್ ತನ್ನ ಗಂಡನ ಮನೆಯವರ ತುಳು ಮಾತೃ ಭಾಷೆಯನ್ನೇ ಬಹಿರಂಗ ಕಾರ್ಯಕ್ರಮದಲ್ಲಿ 'ಎಂಡು-ಗುಂಡು' ಭಾಷೆಯೆಂದು ಹೇಳಿ ಅವಮಾನಿಸಿದರೂ ತುಳುವರ ಸ್ವಾಭಿಮಾನ ಸಿಡಿದೇಳದಿರುವುದು ವಿಷಾದಕರ. ಇಡೀ ಭಾರತ ನೋಡುವ ಒಂದು ಜನಪ್ರಿಯ ಹಿಂದಿ ಕಾರ್ಯಕ್ರಮದಲ್ಲಿ ತುಳುವಿಗೆ ಒಂದು ಭಾಷೆಗೆ ಇಷ್ಟು ದೊಡ್ಡ ಅವಮಾನ. ಹಿಂದಿವಾಲಾಗಳ ಇಂಥ ಸಾಂಸ್ಕೃತಿಕ ಅತ್ಯಾಚಾರವನ್ನು ನಾವು ಎಷ್ಟು ಸಮಯ ಸಹಿಸಿಕೊಳ್ಳಬೇಕು? ತುಳು ಸಂಘಟನೆಗಳು ಇಂಥ ಕೇಂದ್ರ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ಮಾತನಾಡುತ್ತಿಲ್ಲವೇಕೆ?
- ರವಿ. ಬಿ. ಶೇಣವ
ಒಕ್ಕೂಟ ವ್ಯವಸ್ಥೆಯಲ್ಲಿ ಸಮಾನ ಉಪಚಾರವೆಲ್ಲಿ?
ವ್ಯವಸಾಯದಿಂದ ಬರುವ ಆದಾಯವನ್ನು ಹೊರತು ಪಡಿಸಿ ಭಾರತೀಯ ಪ್ರಜೆಗಳು ಹೊಂದುವ ಎಲ್ಲಾ ಆದಾಯದ ಮೇಲೆ ವಿಧಿಸುವ ತೆರಿಗೆ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೋಗಬೇಕು. ಕಾರಣ ಆದಾಯ ತೆರಿಗೆ ಕೇಂದ್ರದ ಪಟ್ಟಿಯಲ್ಲಿದೆ. ಆದರೆ ಕೇಂದ್ರದ ಆದಾಯ ತೆರಿಗೆ ಅಂತರ್ಜಾಲ ತಾಣದಲ್ಲಿ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಮಾತ್ರ ನೋಡಸಿಗುತ್ತದೆ. ಆದಾಯ ತೆರಿಗೆ ಅರ್ಜಿಯ ನಮೂನೆ ಹಾಗೂ ಆದಾಯ ತೆರಿಗೆ ಕುರಿತು ಬೇಕಾದ ಎಲ್ಲಾ ಮಾಹಿತಿ ಕೇವಲ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತ್ರ ಲಭ್ಯ. ತೆರಿಗೆ ಕಟ್ಟಿಸಿಕೊಳ್ಳಲಿಕ್ಕೆ ಮಾತ್ರ ಹಿಂದಿಯೇತರರ ಆದಾಯ ಬೇಕು, ಆದರೆ ಅವರವರ ನುಡಿಯಲ್ಲೇ ಮಾಹಿತಿ ನೀಡಿ ಅನುಕೂಲವಾಗಿಸುವ ಕೆಲಸ ಕೇಂದ್ರ ಸರ್ಕಾರ ಮಾಡಬೇಡವೆ? ಒಕ್ಕೂಟ ವ್ಯವಸ್ಥೆ ಅಂದರೆ ಎಲ್ಲರಿಗೂ ಸಮಾನ ಉಪಚಾರ ಇರಬಾರದೇ? ಹಿಂದಿಯೇತರರ ಮೇಲೆ ಹಿಂದಿ ಹೇರುವ ಹುಳುಕಿನ ಭಾಷಾನೀತಿ ರೂಪಿಸಿರುವ ಭಾರತ ಸರ್ಕಾರ, ತನ್ನ ಕಚೇರಿಗಳಲ್ಲಿ ಪ್ರತಿ ವರ್ಷ ಹಿಂದಿ ದಿವಸ್ -ಸಪ್ತಾಹ ಕಾರ್ಯಕ್ರಮಗಳನ್ನು ನಡೆಸುತ್ತದೆ. ವಿಪರ್ಯಾಸವೆಂದರೆ, ಹಿಂದಿಯೇತರರ ಮೇಲೆ ಹಿಂದಿ ಹೇರಲು ನಡೆಯುತ್ತಿರುವ ಇಂಥ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿರುವುದು ಕೇಂದ್ರಕ್ಕೆ ಸಂದಾಯವಾಗುತ್ತಿರುವ ಹಿಂದಿಯೇತರರ ತೆರಿಗೆಯೇ! ನಮ್ಮ ತೆರಿಗೆ ಪಡೆದು ನಮಗೆ ನಮ್ಮನ್ನೇ ಎರಡನೇ ದರ್ಜೆ ನಾಗರೀಕರಂತೆ ನಡೆಸಿಕೊಳ್ಳುತ್ತಿರುವ ಈ ಕಟ್ಟುಪಾಡು ಬದಲಾಗಲಿ. ಕೇಂದ್ರ ಸರ್ಕಾರ ತನ್ನ ಪ್ರತಿ ನಡೆಯಲ್ಲೂ ತೋರುವ ಹಿಂದಿ ಮೇಲಿನ ಪ್ರೀತಿ ಇತರ ಎಲ್ಲ ಭಾಷೆಗಳಿಗೂ ಸಿಗುವಂಥ ವ್ಯವಸ್ಥೆ ರೂಪುಗೊಳ್ಳಲಿ.
-ಅನ್ನದಾನೇಶ.ಶಿ.ಸಂಕದಾಳ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

