ಸಂಪಾದಕೀಯ

ಮಾಟವೆ, ಮನೋವ್ಯಾಧಿಯೆ?

Published On :

ನನ್ನ ಬಂಧುವೊಬ್ಬರು (ಪುರುಷ, 35 ವರ್ಷ ವಯಸ್ಸು) ಉಗ್ರವಾಗಿ ವರ್ತಿಸುತ್ತಿದ್ದಾರೆಂದು ಉಡುಪಿ- ಮಂಗಳೂರು ಸುತ್ತಮುತ್ತಲಿನ ಅನೇಕ ಕಡೆ ಜಾತಕ ತೋರಿಸಿ ಮತ್ತು ದೇವಿ ಉಪಾಸಕರ ಬಳಿ ಕವಡೆ ಹಾಕಿಸಿ ಕೇಳಿದಾಗ ಅದು ಮದ್ದು ಹಾಕಿದ್ದೆಂದೂ ಮತ್ತು ನೀರಿನಲ್ಲಿ ಬಿದ್ದು ತೀರಿ ಹೋದವರ ಬ್ರಹ್ಮರಾಕ್ಷಸನ ಉಪಟಳವೆಂದದೂ ಮತ್ತು ಗ್ರಹಗತಿಯ ಕೇಡು ಹಾಗೂ ಪೂರ್ವಜರ ಪಾಪದ ಫಲಗಳೂ ಸೇರಿಕೊಂಡು ಆ ಬಂಧುವಿಗೆ ಕಂಟಕಗಳು ಉಂಟಾಗುತ್ತಿವೆಯೆಂದೂ ತಿಳಿದು ಬಂತು. ಪರಿಹಾರವಾಗಿ ಹೇಳಲಾದ ಎಲ್ಲ ಆಚರಣೆಗಳನ್ನು ಮನೆಯವರು ಪೂರೈಸಿದರು. ಉಡುಪಿ ಬಳಿ ಹೋಗಿ ವಾಂತಿ ಮಾಡಿಸಿ ಮದ್ದು ತೆಗೆಸಿದರು. ಗೋಕರ್ಣಕ್ಕೆ ಕರೆದುಕೊಂಡು ಹೋಗಿ ಅಮಾವಾಸ್ಯೆ ಸೇರಿ ಮೂರು ದಿನ ಇದ್ದು ಬ್ರಹ್ಮರಾಕ್ಷಸನಿಗೆ ಮುಕ್ತಿ ಕೊಡಿಸಿದರು. ಗ್ರಹಗತಿ ಮತ್ತು ಪೂರ್ವಜರ ಪಾಪಗಳಿಗೆ ಎಲ್ಲ ಹೋಮ ಹವನ ಪೂಜೆ ಇತ್ಯಾದಿ ಮಾಡಿದರು. ನಾನಾ ದೇವರಿಗೆ ಹರಕೆ ಕೂಡ ಹೊತ್ತರು. ಮದ್ದು, ಬ್ರಹ್ಮರಾಕ್ಷಸ, ಗ್ರಹಗತಿ, ಪೂರ್ವಜರ ಪಾಪ, ಎಲ್ಲವೂ ಕ್ಲಿಯರ್ ಆದವು ಎಂದು ದೇವಿ ಉಪಾಸಕರು ಕವಡೆ ಹಾಕಿ ನೋಡಿ ಹೇಳಿದರು. ಆದರೆ ಆ ಬಂಧುವು ದಿನೇ ದಿನೇ ಇನ್ನಷ್ಟು ಡಲ್ ಆಗುತ್ತಾ ಹೋದರು. ಇದ್ದ ನೌಕರಿಯನ್ನೂ ಬಿಟ್ಟು ಮನೆಯಲ್ಲೇ ಕೂತು ಬಿಟ್ಟರು. ಹೀಗೇ ಮತ್ತೆರಡು ವರ್ಷ ಕಳೆಯುವಷ್ಟರಲ್ಲಿ ಅವರಿಗೆ ಯಾವ ವಿಷಯದಲ್ಲೂ ಆಸಕ್ತಿಯಿಲ್ಲದಿರುವುದು ಮತ್ತು ತನ್ನ ಮನೆಯವರ ಮೇಲೆಯೇ ದ್ವೇಷ, ಭಯ, ಅನುಮಾನ ಜಾಸ್ತಿಯಾಗುತ್ತ ಹೋಯಿತು. ಕೊನೆಗೆ ಅವರಿಗೆ ಮೈಸೂರಿನಲ್ಲಿ ಒಬ್ಬ ಮಾನಸಿಕ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಯಿತು. ಆರು ತಿಂಗಳು ಮಾತ್ರೆ ಸೇವಿಸಿದ ಬಳಿಕ ಅವರೀಗ ಎಷ್ಟೋ ವಾಸಿ. ದಿನಾ ಮಾತ್ರೆ ತೆಗುಕೊಳ್ಳುತ್ತಿದ್ದಾರೆ. ಮಾಟ, ಮದ್ದು, ಬ್ರಹ್ಮರಾಕ್ಷಸ ಇತ್ಯಾದಿ ನಂಬಿ ಎರಡು ವರ್ಷ ವೇಸ್ಟ್ ಮಾಡಿ ತಪ್ಪು ಮಾಡಿದೆವು ಎಂದು ಅವರ ಮನೆಯವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಕಳೆದ ವಾರ ನನ್ನ ಸ್ನೇಹಿತರೊಬ್ಬರು ತನ್ನ ಪತ್ನಿಗೆ (ಆಕೆಗೆ 50 ವರ್ಷ ವಯಸ್ಸು) ಸಿಟ್ಟು, ಅನುಮಾನ, ದೈಹಿಕ ವ್ಯಾಧಿ ಇತ್ಯಾದಿ ಇದೆಯೆಂದು ಉಡುಪಿ ಬಳಿ ಎರಡು ಮೂರು ಕಡೆ ಜಾತಕ ತೋರಿ, ಕವಡೆ ಹಾಕಿಸಿ, ಕೇಳಿದಾಗ, "ಮದ್ದು ಹಾಕಿದ್ದಾರೆ, ಬ್ರಹ್ಮರಾಕ್ಷಸ" ಇತ್ಯಾದಿ ಡಿಟೋ ಹೇಳಿದ್ದಾರೆ. ಅವರೂ ಈಗ ವಾಂತಿ ಮಾಡಿಸುವುದು, ಹೋಮ, ಗೋಕರ್ಣ ಇತ್ಯಾದಿ ಪ್ರೋಗ್ರಾಂ ಹಾಕುತ್ತಿದ್ದಾರೆ. ಅವರಿಗೆ ನನ್ನ ಬಂಧುವಿನ ಕಥೆ ಹೇಳಿ, ಮನೋವೈದ್ಯರಲ್ಲಿಗೆ ಪತ್ನಿಯನ್ನು ತೋರಿಸುವಂತೆ ನಾನು ಎಷ್ಟು ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಜಾತಕ ನೋಡಿದ ಜ್ಯೋತಿಷಿಗಳು ಮತ್ತು ಕವಡೆ ಹಾಕಿದ ದೇವಿ ಉಪಾಸಕರು ಆತನನ್ನು ಅಷ್ಟೊಂದು ನಂಬಿಸಿ ಬಿಟ್ಟಿದ್ದಾರೆ. ಆದ್ದರಿಂದ, ಇವೆಲ್ಲವನ್ನೂ ಅರಿತಿರುವ ವಿದ್ವಾಂಸರು ಈ ಬಗ್ಗೆ ವಿವರವಾಗಿ ಸ್ಪಷ್ಟೀಕರಣ ನೀಡಿದರೆ ಈ ರೀತಿಯ ಎಷ್ಟೋ ಮನೋರೋಗಿಗಳಿಗೆ ಉಪಕಾರವಾಗುತ್ತದೆ. ಉಡುಪಿ-ಮಂಗಳೂರು ಜಿಲ್ಲೆಗಳಲ್ಲಿ ಎಲ್ಲಿ ಕೇಳಿದರೂ ಸರ್ಪಶಾಪ, ಮಾಟ, ಮದ್ದು, ದೆವ್ವ, ಬ್ರಹ್ಮರಾಕ್ಷಸ, ಪೂರ್ವಜರ ಪಾಪ ಎಂದು ಇವನ್ನೇ ಹೇಳುತ್ತಾರೆ. ಆದರೆ ಇವುಗಳಿಗೆ ಪರಿಹಾರ ಕೈಗೊಂಡರೂ ಯಾವ ಪ್ರಯೋಜನವೂ ಇಲ್ಲದ್ದನ್ನೇ ಎಲ್ಲ ಕಡೆಗೂ ಕೇಳುತ್ತಿದ್ದೇವೆ. ಆದ್ದರಿಂದ ಈ ದೋಷಗಳೆಲ್ಲ ಎಷ್ಟರಮಟ್ಟಿಗೆ ನಿಜ ಎಂಬುದನ್ನು ಧರ್ಮಶಾಸ್ತ್ರ ಬಲ್ಲವರು ತಿಳಿಸಿ ಮನೋರೋಗಿಗಳ ಕುಟುಂಬಗಳನ್ನು ಉದ್ಧಾರ ಮಾಡಬೇಕಾಗಿ ವಿನಂತಿ.
-ಎಂ.ಎನ್. ಸುಧೀಂದ್ರ, ಬೆಂಗಳೂರು.

ಅಂಕಪಟ್ಟಿ ಒದಗಿಸುವ ಅರ್ಹತೆಯೂ ಇಲ್ಲವೇ?

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸಿ, ಅರ್ಧ ವರ್ಷ ಕಳೆದಿದೆ. (ಏಪ್ರಿಲ್ 2013). 10ನೇ ತರಗತಿ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿಗಳು ಇನ್ನೂ ಬಂದಿಲ್ಲ. ಮುಂದಿನ ವಿದ್ಯಾಭ್ಯಾಸದ ಚಟುವಟಿಕೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರು ಅಂಕಪಟ್ಟಿ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ. ಪರೀಕ್ಷೆ-ಫಲಿತಾಂಶ-ಅಂಕಪಟ್ಟಿ ವಿತರಣೆ ಈ ಮೂರು ಕೆಲಸದ ನಡುವಿನ ಅಂತರ ಅರ್ಧ ವರ್ಷಗಳೇ...! 10ನೇ ತರಗತಿಗೆ ಪರೀಕ್ಷೆ ನಡೆಸುವ ಉದ್ದೇಶಕ್ಕಾಗಿಯೇ ಒಂದು ಪರೀಕ್ಷಾ ಮಂಡಳಿ...! ಇದಕ್ಕೊಬ್ಬರು ಪ್ರೌಢಶಿಕ್ಷಣ ಖಾತೆಯ ಸಚಿವರು...!!   ಮಾನ್ಯ ಕಿಮ್ಮನೆ ರತ್ನಾಕರರೇ... ನೀವೇಕೆ ಸುಮ್ಮನೆ?
-ರಮೇಶ್, ಹಾಸನ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.