ವರ್ಣರಂಜಿತ ರಾಜಕಾರಣಿ ಲಾಲೂ ಆಟ ಮುಗಿಯಿತೇ ?
ಸೋಮವಾರ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ ಯಾದವ್ ಅವರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದಾಗ ಅನೇಕರು ಮನಸ್ಸಿನಲ್ಲೇ ಉದ್ಗರಿಸಿದ್ದು ಮುಗೀತೇ ಅವರ ಆಟ?
ಹದಿನೇಳು ವರ್ಷಗಳ ಹಿಂದೆ, ಬಿಹಾರದಲ್ಲಿ ದನದ ಮೇವನ್ನು ಕೊಂಡು ಹಸುಗಳಿಗೆ ಹಂಚುವ ಯೋಜನೆ ಒಂದು ಭಾರಿ ಹಗರಣದ ಸ್ವರೂಪವನ್ನು ಪಡೆದು, ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಡಾ॥ ಜಗನ್ನಾಥ ಮಿಶ್ರ, ಮಾಜಿ ಜನತಾ ಪರಿವಾರದ ಮುಖ್ಯಮಂತ್ರಿ ಲಾಲೂ ಪ್ರಸಾದ ಯಾದವ್ ಅವರ ಮೇಲೆ ದಾಖಲಾದ ಕ್ರಿಮಿನಲ್ ಪ್ರಕರಣಗಳಲ್ಲಿ ಸೋಮವಾರ ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಬ್ಬ ಮಾಜಿ ಮಂತ್ರಿ, ನಾಲ್ವರು ಐಎಎಸ್ ಅಧಿಕಾರಿಗಳನ್ನು ರಾಂಚಿ ನ್ಯಾಯಾಲಯ ಅಪರಾಧಿಗಳೆಂದು ಸಾರಿ ದೇಶದಲ್ಲೇ ಇತಿಹಾಸವನ್ನು ಸೃಷ್ಟಿಸಿದೆ. ಸಂಸದರು ಕ್ರಿಮಿನಲ್ ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಅಧಿಕ ಅವಧಿಯ ಜೈಲು ಶಿಕ್ಷೆಗೆ ಒಳಗಾದರೆ, ತೀರ್ಪು ಪ್ರಕಟವಾದ ಕ್ಷಣದಿಂದಲೇ ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆನ್ನುವ ಸುಪ್ರೀಮ್ ಕೋರ್ಟಿನ ಆಗಸ್ಟ್ ತಿಂಗಳಲ್ಲಿ ಹೊರಬಿದ್ದ, ಆದೇಶದ ಅನಂತರದ ಅದರ ಅನ್ವಯವಾಗಬಹುದಾದ ಮೊದಲ ಪ್ರಕರಣ ಇದು. ಲಾಲೂ ಪ್ರಸಾದ ಯಾದವ್ ಅವರ ಅಪರಾಧಕ್ಕೆ ಮೂರು ವರ್ಷಗಳಿಗಿಂತ ಕಡಿಮೆ ಶಿಕ್ಷೆಯನ್ನು ವಿಧಿಸುವಂತಿಲ್ಲ. ಅದು ಕಾಯಿದೆಯಲ್ಲೇ ಅಡಕವಾಗಿದೆ. ಹೀಗಾಗಿ ಲಾಲೂ ಪ್ರಸಾದ ಯಾದವ್ ಆ ಕಾಯಿದೆಯ ಪ್ರಹಾರಕ್ಕೆ ಒಳಗಾಗುವ ಮೊಟ್ಟಮೊದಲ ರಾಜಕಾರಣಿ.
ಲಾಲೂ ಪ್ರಸಾದ ಯಾದವ್ ದೇಶದ ರಾಜಕೀಯದಲ್ಲಿ ಶೋಷಿತ ಜನಸಮುದಾಯಗಳ ಪ್ರಮುಖ ಹೋರಾಟಗಾರರೆಂದು ಪ್ರಚಾರ ಪಡೆದಿದ್ದು ನಿಜ. ಆ ದಿಕ್ಕಿನಲ್ಲಿ ಅವರ ಸಾಧನೆ ಬಲು ದೊಡ್ಡದು. ಅದೇ ರೀತಿ ರೈಲ್ವೆ ಮಂತ್ರಿಯಾಗಿದ್ದಾಗ ವಿಸ್ಮಯಗೊಳಿಸುವ ರೀತಿಯಲ್ಲಿ ಪವಾಡಸದೃಶ ಎನ್ನಬಹುದಾದ ಬಜೆಟ್ಗಳನ್ನು ಮಂಡಿಸಿದ್ದೂ ನಿಜ. ಒಂದು ಹಂತದಲ್ಲಿ ಅವರು ಜನತಾದಳದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು.
ಲಾಲೂ ದೊಡ್ಡ ರೀತಿಯಲ್ಲಿ ಪ್ರಚಾರ ಪಡೆದಿದ್ದು ಸಮಸ್ಟಿ ಪುರದಲ್ಲಿ ಲಾಲ್ ಕೃಷ್ಣ ಆಡ್ವಾಣಿ ಅವರ ರಥಯಾತ್ರೆಯನ್ನು ತಡೆದು, ಅವರನ್ನು ಬಂಧಿಸಿದಾಗ. ತಮ್ಮ ಮಾತಿಗೆ, ಆಟಕ್ಕೆ ಎದುರೇ ಇಲ್ಲದ ರೀತಿಯಲ್ಲಿ ವರ್ತಿಸಿದ ರಾಜಕಾರಣಿ.
ಬಿಹಾರದ ದನದ ಮೇವಿನ ಹಗರಣ ಆರಂಭವಾಗಿದ್ದು ಲಾಲೂ ಪ್ರಸಾದ ಯಾದವ್ ಮುಖ್ಯಮಂತ್ರಿಯಾಗುವುದಕ್ಕೆ ಮುಂಚೆಯೇ. ಆಗಿನ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಜಗನ್ನಾಥ ಮಿಶ್ರ. ಲಾಲೂ ಅವರ ಮೇಲಿನ ಆರೋಪಗಳು ಪ್ರಕಟವಾಗಿದ್ದು 1997ರ ಸುಮಾರಿನಲ್ಲಿ. ಲಾಲೂ ಹಾಗೂ ಜಗನ್ನಾಥ ಮಿಶ್ರ ವಿರುದ್ಧ ಇರುವುದು ಇದೊಂದೇ ಕೇಸಲ್ಲ. ಇನ್ನೂ ನಾಲ್ಕು ಕೇಸುಗಳಿವೆ. ಈಗ ಲಾಲೂ ವಿರುದ್ಧ ತೀರ್ಪು ನೀಡಿರುವ ನ್ಯಾಯಾಲಯ ಜಾರ್ಖಂಡ್ದ ರಾಜಧಾನಿಯಾದ ರಾಂಚಿಯಲ್ಲಿದೆ. ಅಪರಾಧ ನಡೆದಾಗ ಅದು ಬಿಹಾರದ ಒಂದು ಭಾಗವೇ.
ಸಿಬಿಐನ ಇತಿಹಾಸದಲ್ಲೇ ಬಿಹಾರದಲ್ಲಿನ ದನದ ಮೇವಿನ ಹಗರಣದ ತನಿಖೆಗೆ ಚಿರಸ್ಥಾಯಿಯಾದ ಸ್ಥಾನ ಸಿಗುವುದು ಖಚಿತ. ಮುಖ್ಯಮಂತ್ರಿಯ ಸ್ಥಾನದಲ್ಲಿದ್ದವರು, ಮಂತ್ರಿಗಳು, ಹಿರಿಯ ಅಧಿಕಾರಿಗಳ ಜತೆ ಸೇರಿ, ಖಜಾನೆಯಿಂದ ಹಣ ಪಡೆದು (ಪ್ರಸ್ತುತ ಪ್ರಕರಣದಲ್ಲಿ 37 ಕೋಟಿ ರೂಪಾಯಿಗೂ ಹೆಚ್ಚು) ಅದಕ್ಕೆ ಸರಿಹೊಂದಿಕೊಳ್ಳುವಂತೆ ಮೋಸದ ದಾಖಲೆಗಳನ್ನು ಸೃಷ್ಟಿಸಿದ ಅಪರಾಧಗಳ ತನಿಖೆ ಅದು.
ಈಗ ನಿವೃತ್ತರಾಗಿ, ರಾಜಕೀಯ ಪ್ರವೇಶಿಸಿ, ಪಶ್ಚಿಮ ಬಂಗಾಳದಲ್ಲಿ ಸಚಿವರಾಗಿರುವ, ಐ.ಪಿ.ಎಸ್. ಅಧಿಕಾರಿ ಯು.ಎನ್.ಬಿಸ್ವಾಸ್ ಅವರು ವರ್ಷಗಟ್ಟಲೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕಷ್ಟ ಪಟ್ಟು ಸಂಗ್ರಹಿಸಿದ್ದ ದಾಖಲೆ, ಸಾಕ್ಷ್ಯವನ್ನು ನ್ಯಾಯಾಲಯ ಪುರಸ್ಕರಿಸಿದ್ದು ಸಾಮಾನ್ಯವಾದ ವಿಷಯವಲ್ಲ.
ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯದ ಸೋಮವಾರದ ತೀರ್ಪಿಗೂ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಲಭ್ಯವಾಗಲಿದೆ. ತೀರ್ಪಿನ ಪರಿಣಾಮ ಲಾಲೂ ಪ್ರಸಾದ ಯಾದವ್ ಅವರ ರಾಜಕೀಯ ಭವಿಷ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು, ಮುಂದಿನ ಬಿಹಾರದ ರಾಜಕೀಯದಲ್ಲಿ ಕಾಂಗ್ರೆಸ್ - ನಿತೀಶ್ ಕುಮಾರ್ ಹೊಂದಾಣಿಕೆಯಾಗಬಹುದೇ ಎನ್ನುವ ಪ್ರಶ್ನೆ ಒಂದು ಕಡೆಯಾದರೆ, ಇತ್ತೀಚಿನವರೆಗೂ ಲಾಲೂ ಪ್ರಸಾದ ಯಾದವ್ರ ರಾಷ್ಟ್ರೀಯ ಜನತಾದಳದ ನೆರವನ್ನು ಲೋಕಸಭೆಯಲ್ಲಿ ಪಡೆದಿದ್ದ ಕಾಂಗ್ರೆಸ್, ಮುಂದೆ ಯಾವ ನಿಲುವನ್ನು ತಾಳಬಹುದು ಎನ್ನುವ ಪ್ರಶ್ನೆ ನಿಗೂಢ, ರಾಷ್ಟ್ರೀಯ ಜನತಾದಳ ಒಂದು ಪಕ್ಷವಾಗಿ ಉಳಿದೀತೇ?
ಭ್ರಷ್ಟಾಚಾರ ಕೇವಲ ಬಿಹಾರದ ಪ್ರಶ್ನೆ ಅಲ್ಲ. ದೇಶದ ಉದ್ದಗಲಕ್ಕೂ ಹರ್ಯಾಣದಿಂದ ಹಿಡಿದು ಕರ್ನಾಟಕ - ಕೇರಳ - ತಮಿಳುನಾಡಿನವರೆಗಿನ ಹಲವಾರು ರಾಜ್ಯಗಳ ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯ ಅವ್ಯವಹಾರದಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಮಂತ್ರಿಗಳ ಮೇಲೇ ಆರೋಪಗಳಿವೆ. ಅಲ್ಲಲ್ಲಿ ತನಿಖೆಯೂ ನಡೆಯುತ್ತಿದೆ. ಕೇಂದ್ರದಲ್ಲೇ ಬ್ರಹ್ಮಾಂಡ ಸ್ವರೂಪದ ಅವ್ಯವಹಾರದ ಆರೋಪಗಳು ತನಿಖೆಯ ಹಂತದಲ್ಲಿವೆ. 2-ಜಿ ಟೆಲಿಕಾಮ್ ಹಗರಣದಲ್ಲಿ ಮಾಜಿ ಮಂತ್ರಿ ಜೈಲಿಗೂ ಹೋಗಿದ್ದರು. ಕಾಯಿದೆಯ ಚಕ್ರಗಳು ಉರುಳುತ್ತಲೇ ಇರುತ್ತವೆ. ಸ್ವಲ್ಪ ನಿಧಾನವಾಗಬಹುದು. ಆದರೆ ಉರುಳುವ ಚಕ್ರ ನಿಲ್ಲುವುದಿಲ್ಲ ಎನ್ನುವ ಮಾತಿದೆ. ಸೋಮವಾರದ ರಾಂಚಿ ನ್ಯಾಯಾಲಯದ ತೀರ್ಪು ಆ ಮಾತನ್ನು ಪುಷ್ಟೀಕರಿಸುವಂತಿದೆ. ಇದು ದೇಶದ ಸಾರ್ವಜನಿಕ ಜೀವನದ ಶುದ್ಧತೆಯ ದೃಷ್ಟಿಯಿಂದ ಜನಸಮುದಾಗಳ ಸ್ವಾಗತಕ್ಕೆ ಅರ್ಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

