ವೇಷ ಬದಲಾವಣೆ
ನಾವು ಅಳವಡಿಸಿಕೊಂಡಿರುವ ಪ್ರಜಾತಂತ್ರ ವ್ಯವಸ್ಥೆ ಕಾರ್ಯಗತಗೊಳ್ಳುತ್ತಿರುವ ರೀತಿಯಲ್ಲಿನ ಒಂದು ಕ್ರೂರ ವ್ಯಂಗ್ಯವನ್ನು ನಮ್ಮಿಂದ ಆಯ್ಕೆಗೊಂಡಿರುವ ಅಥವಾ ನಮ್ಮನ್ನು ಪ್ರತಿನಿಧಿಸುವರೆಂದೆನಿಸಿಕೊಳ್ಳುವವರ ನಿಷ್ಠೆ ಬದಲಾಯಿಸುವ ವರ್ತನೆಯಲ್ಲಿ ಕಾಣುತ್ತೇವೆ. ಪ್ರಜಾತಂತ್ರ ವ್ಯವಸ್ಥೆ ಇರುವ ಇತರ ರಾಷ್ಟ್ರಗಳಲ್ಲಿ ಜನಪ್ರತಿನಿಧಿಗಳು ನಮ್ಮ ಭಾರತದಲ್ಲಿನ ಪ್ರತಿನಿಧಿಗಳಂತೆ ವರ್ತಿಸುತ್ತಾರೋ ಇಲ್ಲವೋ ತಿಳಿಯದು; ಆದರೆ ಒಂದೊಮ್ಮೆ ಹೀಗೆ ಅವರು ನಡೆದುಕೊಂಡರೆ ಅಲ್ಲಿನ ಜನತೆಯ ಪ್ರತಿಕ್ರಿಯೆ ಹೇಗಿರುತ್ತದೆ? ಯಾಕೆ ಈ ಮಾತೆಂದರೆ ರಾಜ್ಯದಲ್ಲಿನ ಮಾಜಿ ಸಚಿವ ಪ್ರೊ. ಮುಮ್ತಾಜ್ ಆಲೀಖಾನ್ ಅವರು ಇದೀಗ ಕಾಂಗ್ರೆಸ್ಸಿಗರರಾಗಿದ್ದಾರೆ. ಸಚಿವರಾಗಿದ್ದಾಗ ಈ ಮಹನೀಯರು ಭಾಜಪದಲ್ಲಿದ್ದರು; ಅನಂತರ ಅದರ ಉಸಾಬರಿ ಬೇಡವೆಂದು ಕೆಜೆಪಿಗೆ ದಾಟಿದರು. ಈಗ ಅಲ್ಲಿಂದ ಜಿಗಿದು ಕಾಂಗ್ರೆಸ್ ಅಂಗಳಕ್ಕಿಳಿದಿದ್ದಾರೆ. ಅವರಿಗೆ ಈ ಸ್ವಾತಂತ್ರ್ಯ ಇಲ್ಲವೇ ಎನ್ನುವುದು ಪ್ರಶ್ನೆಯಲ್ಲ. ಕಾಂಗ್ರೆಸ್ಸಿಗರಾಗಿ ರೂಪ ಪರಿವರ್ತನೆಗೊಂಡುದಕ್ಕೆ ಅವರು ಕೊಡುವ ಕಾರಣ: ಪ್ರಧಾನಿ ಹುದ್ದೆಗೆ ಮೋದಿಯನ್ನು (ಭಾಜಪ) ಘೋಷಿಸಿದ್ದು, ಇದಕ್ಕೆ ಕೆಜೆಪಿಯ ಯಡಿಯೂರಪ್ಪನವರು ಒತ್ತಾಸೆ ನೀಡಿದ್ದು ಪ್ರೊ. ಅವರು ಪಕ್ಷಾಂತರಕ್ಕೆ ಆತುಗೊಳ್ಳುವುದೆಂದರೆ ಆ ಪಕ್ಷದ ತತ್ವ ಮತ್ತು ಸಿದ್ಧಾಂತ ಹಾಗೂ ಆ ಪಕ್ಷದ ಕಾರ್ಯವಿಧಾನವನ್ನು ಒಪ್ಪಿಕೊಂಡಂತೆ ತಾನೆ. ಬೆಳಗಾಗುವುದರೊಳಗೇ ಈ ಪಕ್ಷ ನಿಷ್ಠೆ ಬದಲಾಗುವುದೆಂದರೆ, ಅದು ವ್ಯಕ್ತಿಯ ದೌರ್ಬಲ್ಯವನ್ನಷ್ಟೇ ಹೊರಹಾಕುತ್ತದೆ. ಭಾಜಪ/ಕೆಜೆಪಿಗೂ ಮತ್ತು ಕಾಂಗ್ರೆಸ್ಗೂ ಏನೂ ಹೋಲಿಕೆ ಇಲ್ಲ- ತಾತ್ವಿಕ ನೆಲೆಯಲ್ಲಿ. ರಾಜಕೀಯ ನಡವಳಿಕೆಯಲ್ಲಿ ಎಲ್ಲರೂ ಒಂದೆ, ಎಂದೇ ಪ್ರೊ. ಮುಮ್ತಾಜ್ ಆಲಿಯವರು ಕಾಂಗ್ರೆಸ್ ವೇಷ ಧರಿಸಿದ್ದಿರಬಹುದು.
-ಸಾಮಗ ದತ್ತಾತ್ರಿ , ಬೆಂಗಳೂರು
ನಾಡಹಬ್ಬದ ವಿಡಂಬನೆ ಬೇಡ
ಇನ್ನೇನು ಕೆಲವೇ ದಿನಗಳಲ್ಲಿ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ಸಿಗಲಿದೆ. ಕರ್ನಾಟಕದ ಸಂಸ್ಕೃತಿ, ಪರಂಪರೆ ಈ ಉತ್ಸವದಲ್ಲಿ ಅಡಕವಾಗಿರುವುದರಿಂದಲೇ ಅದನ್ನು ನಾಡಹಬ್ಬವೆಂದು ಕರೆಯಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಣುವಂಥ ಕೆಲವು ಘಟನೆಗಳು ನಾಡಹಬ್ಬದ ವಿಡಂಬನೆಯಾಗಿವೆ. ಯುವ ದಸರಾ ಹೆಸರಿನಲ್ಲಿ ಹಿಂದಿ ಮನರಂಜನೆಗೆ ಒತ್ತು ಕೊಡುವುದು. ಅದಕ್ಕಾಗಿ ಹಿಂದಿ ಕಲಾವಿದರನ್ನು ಕೇಳಿದಷ್ಟು ಸಂಭಾವನೆ ಕೊಟ್ಟು ಕರೆತರುವುದು. ನಾಡಹಬ್ಬಗಳಲ್ಲಿ ಹಿಂದಿಯನ್ನು ಮೆರೆಸುವುದು. ಮೈಸೂರು ದಸರಾಗೆ ದೂರದ ಊರಿನಿಂದ ಬರುವ ಜಾನಪದ ಕಲಾವಿದರು, ನೃತ್ಯ ತಂಡದವರಿಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸದೇ ಅವರನ್ನು ಅವಮಾನಿಸಲಾಗುತ್ತಿದೆ. ಕನ್ನಡಿಗರ ತೆರಿಗೆ ಹಣದಿಂದ ಆಚರಿಸಲಾಗುವ ಮೈಸೂರು ದಸರಾ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು, ಕನ್ನಡಿಗರ ಕಲೆ, ಸಾಹಿತ್ಯ, ಪ್ರತಿಭೆಯನ್ನು, ಕರ್ನಾಟಕದ ವೈಭವವನ್ನು ಹೊರಜಗತ್ತಿಗೆ ಪ್ರದರ್ಶಿಸುವ ವೇದಿಕೆ ಆಗಬೇಕೇ ಹೊರತು ಪರಭಾಷೆ ಮನರಂಜನೆಗೆ ನೆಲೆ ದಕ್ಕಿಸಿಕೊಡುವ ವೇದಿಕೆ ಆಗಬಾರದು. ಸರ್ಕಾರ ಇನ್ನಾದರೂ ಇಂಥ ಲೋಪಗಳನ್ನು ತಡೆಗಟ್ಟಿ ನಾಡಹಬ್ಬದ ಅರ್ಥಪೂರ್ಣ ಆಚರಣೆ ಮಾಡಬೇಕು.
-ಮಹೇಶ್. ರುದ್ರಗೌಡರ, ವಿಜಾಪುರ
ಇಂಥ ಚಿತ್ರಗಳೇಕೆ ಬೇಕು?
ಉಮೇಶ್ರೆಡ್ಡಿ, ವೀರಪ್ಪನ್, ದಂಡು ಪಾಳ್ಯ ಹಾಗೂ ಭೀಮಾತೀರದ ಘಟನೆಗಳ ಹಿನ್ನೆಲೆಯಲ್ಲಿ ಕೆಲ ಚಿತ್ರಗಳು ತೆರೆಗೆ ಬಂದಿವೆ. ಇಂತಹ ಚಿತ್ರಗಳಿಂದ ಸಮಾಜ ಏನು ನಿರೀಕ್ಷಿಸಬಹುದು? ಇಡೀ ಚಿತ್ರದಲ್ಲಿ ಕ್ರೌರ್ಯ, ಕಾಮುಕತೆ, ಸಮಾಜ ವಿರೋಧಿ ಚಟುವಟಿಕೆಗಳನ್ನು ವೈಭವೀಕರಿಸಿ, ಅದಕ್ಕೊಂದಿಷ್ಟು ಮಸಾಲೆ ಎಂಬಂತೆ ತೀರ ಅಶ್ಲೀಲ ದೃಶ್ಯಗಳನ್ನು ಸೇರಿಸಿ ಕೊನೆಗೆ ಏನೋ ಒಂದಿಷ್ಟು ನೀತಿ ಬೋಧಿಸಿದರೆ ನಿಜಕ್ಕೂ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆಯೇ? ಇತ್ತೀಚಿನ ಕೆಲ ನೈಜ ಘಟನೆಗಳಲ್ಲಿ, ಕೊಲೆ, ಸುಲಿಗೆ ಮತ್ತು ಅತ್ಯಾಚಾರಕ್ಕೆ ನಮಗೆ ಇಂತಹ ಚಿತ್ರಗಳು ಪ್ರೇರಣೆ ನೀಡಿದವು ಎಂದು ಸ್ವತಃ ಆರೋಪಿಗಳು ಹೇಳಬೇಕಾದರೆ ಇಂತಹ ಚಿತ್ರಗಳಿಗೆ ಸೆನ್ಸಾರ್ ಮಂಡಳಿಯಾಗಲೀ, ಸರ್ಕಾರವಾಗಲೀ ನಿಷೇಧ ಏಕೆ ಹೇರುತ್ತಿಲ್ಲ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ.
-ಶ್ರವಣಕುಮಾರ್ ರಾಯ್ಕರ್, ಗಂಗಾವತಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

