ಸಂಯಮಪಾಲನೆ ಅಗತ್ಯ
ಮಾರ್ಚ್ 23 ರಂದು ಮೈಸೂರಿನ ಬಳಿಯ ಹೆಗ್ಗಡದೇವನ ಕೋಟೆಯ ಪ್ರದೇಶದಲ್ಲಿ, ಚುನಾವಣೆ ಪ್ರಚಾರ ಸಂಬಂಧದ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರನ್ನು ಕುರಿತು 'ನರಹಂತಕ' ಎನ್ನುವ ಪದವನ್ನು ಬಳಸಿದ್ದಕ್ಕೆ ಕೇಂದ್ರ ಚುನಾವಣೆ ಆಯೋಗ ತನ್ನ ಅಸಮಾಧಾನವನ್ನು ಸೂಚಿಸಿ, ವಾಗ್ದಂಡನೆಯನ್ನು ಜಾರಿಗೊಳಿಸಿರುವುದು ನಿಜಕ್ಕೂ ಒಂದು ಗಂಭೀರವಾದ ವಿಚಾರವೇ.
2002ರ ಗೋಧ್ರಾ ಹಿಂಸಾಚಾರದ ನಂತರ ಅನೇಕ ಸಂಘಟನೆಗಳು, ವ್ಯಕ್ತಿಗಳು, ಮೋದಿಯನ್ನು ನರಹಂತಕ ಎನ್ನುವ ಪದಗಳನ್ನು ಬಳಸಿರುವುದು ನಿಜ. ಅಂತಹ ಪದಗಳ ಬಳಕೆಯನ್ನು ನ್ಯಾಯಾಲಯಗಳಲ್ಲೂ ಬಳಸಲಾಗಿತ್ತು. ಆ ವಿಚಾರದಲ್ಲಿ ವಾದ-ವಿವಾದ ನಡೆದಿದೆ. ಅಂತಹ ಪದಗಳನ್ನು ಸಮರ್ಥಿಸಿಕೊಳ್ಳುವಂತಹ ಸಾಕ್ಷ್ಯ - ಆಧಾರ ಹಿಂಸಾಚಾರದ ಪ್ರಕರಣಗಳ ವಿಚಾರಣೆಯ ಅನಂತರ ಪ್ರಕಟವಾದ ನ್ಯಾಯಾಲಯಗಳ ತೀರ್ಪುಗಳಲ್ಲಿ ಕಂಡುಬಂದಿಲ್ಲ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಚುನಾವಣೆ ಸಮಯದಲ್ಲಿ ಇನ್ನೊಂದು ರಾಜ್ಯದ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಅವರನ್ನು "ನರಹಂತಕ" ಎಂದು ಹಿಯಾಳಿಸಿ, ಕೀಳಾಗಿ ಚಿತ್ರಿಸಿರುವುದು ಚುನಾವಣೆ ಆಯೋಗ ಜಾರಿಗೊಳಿಸಿರುವ ಆಚಾರ ಸಂಹಿತೆಗೆ ವಿರುದ್ಧವಾದದ್ದು ಎಂದು ಕೇಂದ್ರ ಆಯೋಗದ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಆಯೋಗ, ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ವಿವರಣೆಯನ್ನು ಕೇಳಿತ್ತು. ತಮ್ಮ ವಿವರಣೆಯಲ್ಲಿ ಅವರು 2002ರ ಗುಜರಾತ್ನ ಹಿಂಸಾಚಾರದಲ್ಲಿ ಸುಮಾರು 2000 ಮಂದಿ ಸತ್ತ ಪ್ರಕರಣಗಳನ್ನು ತಡೆಗಟ್ಟುವುದರಲ್ಲಿ ಸರ್ಕಾರ ವಿಫಲವಾಗಿತ್ತು. ಅದಕ್ಕೆ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಹೊಣೆಗಾರರು ಎಂದಷ್ಟೇ ಹೇಳಿದ್ದೆ ಎಂದು ಪ್ರತಿಪಾದಿಸಲಾಗಿತ್ತು ಎಂದು ತಿಳಿಸಿದ್ದರು. ಈ ವಿವರಣೆಯನ್ನು ಆಯೋಗ ಒಪ್ಪಲಿಲ್ಲ, ಅದರಂತೆ ವಾಗ್ದಂಡನೆಯನ್ನೂ ಮಾಡಲಾಗಿದೆ.
ನಿಜ. ನಮ್ಮ ಜನತಾಂತ್ರಿಕ ವ್ಯವಸ್ಥೆಯಲ್ಲಿ ಚುನಾವಣೆಯ ನಿರ್ವಹಣೆಯ ವಿಚಾರಗಳಿಗೆ ಸಂಬಂಧಿಸಿದಂತೆ, ಚುನಾವಣೆ ಆಯೋಗದ ತೀರ್ಪೇ ಅಂತಿಮ. ಆ ತೀರ್ಪನ್ನು ಸಂಬಂಧಪಟ್ಟವರು ಒಪ್ಪಲಿ, ಬಿಡಲಿ, ಅದನ್ನು ಮಾನ್ಯ ಮಾಡಲೇಬೇಕು, ಮಾಡದಿದ್ದರೆ?
ಆ ಪ್ರಶ್ನೆಗೆ ಚುನಾವಣೆ ಆಯೋಗದ ಅದೇಶದಲ್ಲೇ ಮತ್ತೆ ಸಿದ್ದರಾಮಯ್ಯ ಅವರು ಹೀಗೇ ವರ್ತಿಸಿದರೆ ಆಯೋಗದ ರಚನೆಯ ಕಾಯಿದೆಯ ವಿಧಿ-ನಿಯಮಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಈಗಿನ ಕಾಯಿದೆಯಂತೆ, ಚುನಾವಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ಆಯೋಗದ ತೀರ್ಪನ್ನು ಸುಪ್ರೀಮ್ ಕೋರ್ಟಿನಲ್ಲೂ ಪ್ರಶ್ನಿಸುವಂತಿಲ್ಲ. ಇದೆಲ್ಲವೂ ಸ್ವತಃ ವಕೀಲರಾದ ಸಿದ್ದರಾಮಯ್ಯ ಅವರಿಗೂ ಗೊತ್ತು. ಅವರ ಕಾನೂನು ಸಲಹೆಗಾರರಿಗೂ ಗೊತ್ತು. ಚುನಾವಣೆಯ ಖಡಾಖಡಿ ಹೋರಾಟದಲ್ಲಿ ರಾಜಿಯ ಮಾತೇ ಇಲ್ಲ. ಇದನ್ನು ಗಮನಿಸಿ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆಯೋಗದ ದೃಷ್ಟಿಯಲ್ಲಿ ಅಪರಾಧವೆಂದು ಭಾವಿಸಬಹುದಾದ ಯಾವುದೇ ಕ್ರಿಯೆಯಿಂದಲೂ ದೂರವಾಗಿರಬೇಕು.
ಈಗಂತೂ ರಾಜ್ಯದಲ್ಲಿ ಕಾಂಗ್ರೆಸ್ - ಬಿಜೆಪಿಗಳ ನಡುವಣ ಸಂಬಂಧ ತೀರ ಕೆಟ್ಟದ್ದಾಗಿರುವುದರಿಂದ ಎರಡೂ ಪಕ್ಷಗಳ ನಾಯಕರು ಸಂಯಮವನ್ನು ಕಳೆದುಕೊಳ್ಳುವ ಪ್ರಲೋಭನೆಯಿಂದ ದೂರವಾಗಿರಬೇಕು. ಇದು ಚುನಾವಣೆ. ಆಟವಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

